ಗದಗ ಫೆ.೧: ಮುಂಬರುವ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ೧೮ ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಜಿಲ್ಲಾಡಳಿತ ಭವನದಲ್ಲಿ ವಿಧ್ಯುನ್ಮಾನ ಮತ ಯಂತ್ರದ ಬಳಕೆಯ ಕುರಿತು ಪ್ರಾತ್ಯಕ್ಷಿಕೆ ಕೇಂದ್ರ ತೆರೆಯಲಾಗಿದೆ.
ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ವೈಶಾಲಿ.ಎಂ.ಎಲ್. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾ ಪಂಚಾಯತ ಸಿ.ಇ.ಓ ಡಾ.ಸುಶೀಲಾ ಬಿ ಅವರು ವಿಧ್ಯುನ್ಮಾನ ಮತಯಂತ್ರ ಪ್ರಾತ್ಯಕ್ಷಿಕೆ ಕೇಂದ್ರವನ್ನು ವೀಕ್ಷಿಸಿದರು.
ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಅವರು ವಿಧ್ಯುನ್ಮಾನ ಮತಯಂತ್ರದ ಮೂಲಕ ಮತದಾನ ಮಾಡುವ ಪ್ರಕ್ರಿಯೆಯನ್ನು ನೆರೆದ ಜನರಿಗೆ ವಿವರಿಸಿದರು. ಸಾರ್ವಜನಿಕರು ಆಸಕ್ತಿಯಿಂದ ವಿಧ್ಯುನ್ಮಾನ ಮತಯಂತ್ರದ ಬಳಕೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ತಮ್ಮ ಮತ ಚಲಾಯಿಸಿ ತಾವು ಹಾಕಿದ ಮತ ಸರಿಯಾಗಿ ನಮೂದಾಗಿರುವ ಕುರಿತು ಖಚಿತ ಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯಿತು. ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ರೈತರು, ವಿಕಲಚೇತನರು, ವಿಧ್ಯಾರ್ಥಿಗಳು, ಮಹಿಳೆಯರು ಹಾಗೂ ಯುವ ಮತದಾರರು ಪ್ರಾತ್ಯಕ್ಷಿಕೆಯ ಅನುಭವವನ್ನು ಪಡೆದರು
ಜಿಲ್ಲೆಯ ೯೦ ಗುರುತಿಸಲಾದ ಸೆಕ್ಟೆರ ಅಧಿಕಾರಿಗಳ ಮೂಲಕ ಒಟ್ಟು ೪೫ ತಂಡಗಳನ್ನು ರಚಿಸಿ ಸಂಚಾರಿ ವಿಧ್ಯುನ್ಮಾನ ಮತಯಂತ್ರಗಳ ಮೂಲಕ ಜಿಲ್ಲೆಯ ವಿವಿಧ ಕಾಲೇಜು, ಮತಗಟ್ಟೆ, ಗ್ರಾಮ ಹಾಗೂ ಶಹರಗಳಲ್ಲಿ ಪ್ರಾತ್ಯಕ್ಷಿಕೆ ನೀಡುವ ಮೂಲಕ ಮತದಾರರಿಗೆ ವಿಧ್ಯುನ್ಮಾನ ಮತ ಯಂತ್ರದ ಮೂಲಕ ಮತದಾನ ಪ್ರಕ್ರಿಯೆ ಕುರಿತು ಜನೇವರಿ ೨೭ ರಿಂದ ಜಾಗೃತಿ ಮೂಡಿಸಲಾಗುತ್ತಿದೆ.
Gadi Kannadiga > State > ಜಿಲ್ಲಾಡಳಿತದಲ್ಲಿ ವಿಧ್ಯುನ್ಮಾನ ಮತಯಂತ್ರದ ಪ್ರಾತ್ಯಕ್ಷಿಕೆ