This is the title of the web page
This is the title of the web page

Please assign a menu to the primary menu location under menu

Local News

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ


ಬೆಳಗಾವಿ:ನವ ಪದವೀಧರ ಯುವಕ-ಯುವತಿಯರು ನವಭಾರತ, ಶ್ರೇಷ್ಠ ಹಾಗೂ ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಕೈಜೋಡಿಸಬೇಕು. ಭಾರತವನ್ನು ಸಾಧನೆ, ಸಮೃದ್ಧಿಯ ಉನ್ನತ ಶಿಖರದತ್ತ ಕೊಂಡೊಯ್ಯುವ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಬುಧವಾರ ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತದ ನವ್ಯೋದ್ಯಮವು ಜಗತ್ತಿನ ಆಕರ್ಷಕ ಕೇಂದ್ರವಾಗಿದೆ. ಹೊಸ ಶಿಕ್ಷಣ ನೀತಿಯು‌ ನವಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು, ನೈಸರ್ಗಿಕ ಸಂಪನ್ಮೂಲಗಳ ಬಳಸಿಕೊಂಡು ನಮ್ಮ ಕ್ರಿಯಾಶೀಲತೆಯ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯೋಣ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ-2022 ರ ಅನುಷ್ಠಾನ ದ ಜತೆಗೆ ಸಮಗ್ರ ಶಿಕ್ಷಣವನ್ನು ರಾಣಿ ಚೆನ್ನಮ್ಮ ವಿವಿ ನೀಡುತ್ತಿದೆ.
ರಾಜ್ಯದ ಅತೀ ದೊಡ್ಡ ವಿವಿಗಳಲ್ಲಿ ರಾಚವಿ ಕೂಡ ಒಂದು. ಕಡಿಮೆ ಅವಧಿಯಲ್ಲಿ ಉತ್ತಮ‌ ಶೈಕ್ಷಣಿಕ ಸಾಧನೆ ತೋರಿದ ಕುಲಪತಿ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ರಾಣಿ ಚೆನ್ನಮ್ಮ ಅವರ ತ್ಯಾಗ-ಬಲಿದಾನ ಹಾಗೂ ಶೌರ್ಯ-ಪರಾಕ್ರಮವನ್ನು ಸ್ಮರಿಸಿದ ಅವರು, ಯುವ ಸಮುದಾಯಕ್ಕೆ ರಾಣಿ ಚೆನ್ನಮ್ಮ ಪ್ರೇರಣೆಯಾಗಲಿ ಎಂದರು.

ಗೌರವ ಡಾಕ್ಟರೇಟ್ ಪಡೆದುಕೊಂಡ ಮಹನೀಯರನ್ನು ಅಭಿನಂದಿಸಿದ ಅವರು, ಸಮಾಜದೆಡೆಗಿನ ತಮ್ಮ ಕರ್ತವ್ಯವನ್ನು ಹೀಗೆ ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಮಾತೃಭಾಷೆಗೆ ಆದ್ಯತೆ ದೊರಕಬೇಕು. ದೇಶದ ಸಾಂಸ್ಕೃತಿಕ ವೈಭವವನ್ನು ಮರುಸ್ಥಾಪಿಸುವುದರ ಜತೆಗೆ ಹೊಸ ಶಿಕ್ಷಣ ನೀತಿ ಯಶಸ್ವಿಗೆ ತಾವೆಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ವಸುದೈವ ಕುಟುಂಬಕಂ, ಸರ್ವೇ ಜನಃ ಸುಖಿನೋ ಭವಂತು ಎಂಬ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ಈ ನಿಟ್ಟಿನಲ್ಲಿ ಸಾಗಬೇಕು.
ಕ್ರೀಡೆಗಳಲ್ಲಿ ಇತರೆ ದೇಶಗಳು ಹೆಚ್ವಿನ ಪದಕ‌ ಗೆದ್ದಾಗ ನಾವು ಕೂಡ ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ‌ ಮಾಡಬೇಕು ಎಂಬ ಆಶಯ‌ ನಮ್ಮೆಲ್ಲರದಾಗಿದೆ. ಈ ದಿಸೆಯಲ್ಲಿ ಯುವ ಸಮುದಾಯಕ್ಕೆ ಅಗತ್ಯ ಅವಕಾಶಗಳನ್ನು ಕಲ್ಪಿಸಬೇಕಿದೆ ಎಂದು ರಾಜ್ಯಪಾಲರು ಪ್ರತಿಪಾದಿಸಿದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಾಮಚಂದ್ರಗೌಡ ಅವರು, ಘಟಿಕೋತ್ಸವದಲ್ಲಿ ಮೂವರಿಗೆ ಗೌರವ ಡಾಕ್ಟರೇಟ್‌ ನೀಡುವುದರ ಜತೆಗೆ 48 ಪಿ.ಎಚ್.ಡಿ; 2434 ಸ್ನಾತಕೋತ್ತರ; 40,034 ಪದವಿ; 13 ಪಿಜಿ ಡಿಪ್ಲೋಮಾ ಹಾಗೂ 80 ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ ಎಂದರು.

ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್:

ಸಮಾಜ ಸೇವಾ ಕ್ಷೇತ್ರದ ಕೊಡುಗೆ ಪರಿಗಣಿಸಿ ನಗರಾಭಿವೃದ್ಧಿ ತಜ್ಞ ಹಾಗೂ ಸಮಾಜ ಸೇವಕರಾದ ವ್ಹಿ. ರವಿಚಂದರ್ ವೆಂಕಟರಾಮನ್ ಅವರಿಗೆ ‘ಡಾಕ್ಟರ್‌ಆಫ್ ಸೈನ್ಸ್’, ಚಲನಚಿತ್ರ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ನಟ ಹಾಗೂ ನಿರ್ದೇಶಕರಾದ ರಮೇಶ್ ಅರವಿಂದ ಅವರಿಗೆ ‘ಡಾಕ್ಟರ್‌ ಆಫ್ ಲೆಟರ್ಸ್’ ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ವಲಯದಲ್ಲಿಯ ಅಪಾರ ಸೇವೆ ಪರಿಗಣಿಸಿ ಬೀದರನ ಬಸವತತ್ವ ಪ್ರಚಾರಕಿ, ಕಾಯಕ ದಾಸೋಕ ಪ್ರಚಾರಕಿ ಮಾತಾ ಅಕ್ಕ ಅನ್ನಪೂರ್ಣಾ ತಾಯಿ ಅವರಿಗೆ ‘ಡಾಕ್ಟರ್‌ಆಫ್ ಲೆಟರ್ಸ್’ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿ ಗೌರವಿಸಲಾಯಿತು.

ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಆರ್ಟ್ಸ್, ಕಾಮರ್ಸ್, ಎಜ್ಯುಕೇಶನ್ ಮತ್ತು ಸೈನ್ಸ್ ವಿಭಾಗದ ಒಟ್ಟು 163 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ರ‍್ಯಾಂಕ್ ಸರ್ಟಿಫಿಕೇಟ್ ನೀಡಲಾಯಿತು.

ಸಂಸದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಶಿವಾನಂದ ಗೊರನಾಳೆ, ಕುಲಸಚಿವ ಪ್ರೊ.ಎಂ.ಹನುಮಂತಪ್ಪ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್.ಪಾಟೀಲ, ವಿವಿಯ ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಪಾಲಕರು ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು.


Gadi Kannadiga

Leave a Reply