This is the title of the web page
This is the title of the web page

Please assign a menu to the primary menu location under menu

Local News

೨೦೨೨-೨೩ ನೇ ಸಾಲಿನ ಮೊದಲನೇ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆ ಬೆಳಗಾವಿ-ಸಾಂಬ್ರಾ ರಸ್ತೆ ಅಗಲೀಕರಣ ಯೋಜನೆಗೆ ಶೀಘ್ರ ಮಂಜೂರಾತಿ: ಸಚಿವ ಗೋವಿಂದ ಕಾರಜೋಳ


ಬೆಳಗಾವಿ, ಜು.೧೯: ರಾಯಚೂರು-ಬಾಚಿ ರಸ್ತೆಯಲ್ಲಿ ಬರುವ ಬೆಳಗಾವಿ-ಸಾಂಬ್ರಾ ನಡುವೆ ಆರು ಪಥ ಅಥವಾ ನಾಲ್ಕು ಪಥ ನಿರ್ಮಾಣಕ್ಕೆ ಸಂಬಂಧಿಸಿದ ಯೋಜನೆಯನ್ನು ಪ್ರತ್ಯೇಕವಾಗಿ ಚರ್ಚಿಸಿ ತಕ್ಷಣವೇ ಮಂಜೂರು ಮಾಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ತಿಳಿಸಿದರು.
ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ (ಜು.೧೯) ನಡೆದ ೨೦೨೨-೨೩ ನೇ ಸಾಲಿನ ಮೊದಲನೇ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಆದಷ್ಟು ಬೇಗನೇ ಮಂಜೂರಾತಿ ಪಡೆದುಕೊಳ್ಳಲಾಗುವುದು ಎಂದರು.
ಆರು ಪಥ ರಸ್ತೆಗೆ ೧೧೨ ಕೋಟಿ ರೂಪಾಯಿ ಹಾಗೂ ಚತುಷ್ಪಥ ನಿರ್ಮಾಣಕ್ಕೆ ೮೪ ಕೋಟಿ ರೂಪಾಯಿ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು. ನರೇಗಾ ಯೋಜನೆಯಡಿ ಶಾಲಾ ಕಂಪೌಂಡ್, ನೆಲಹಾಸು ಸೇರಿದಂತೆ ಮಾರ್ಗಸೂಚಿಯ ಪ್ರಕಾರ ಏನೆಲ್ಲ ಸಾಧ್ಯವೋ ಅಂತಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಅರಣ್ಯ ಇಲಾಖೆ ಕೂಡ ನರೇಗಾ ಯೋಜನೆಯಡಿ ಇನ್ನಷ್ಟು ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು. ಎಲ್ಲ ಶಾಲೆಗಳ ಆವರಣದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಬೇಕು ಎಂದರು. ಗ್ರಾಮ ನಕಾಶೆಯಲ್ಲಿ ಕಾಲುದಾರಿ ಅಥವಾ ಬಂಡಿದಾರಿ ಇದ್ದರೆ ಅಲ್ಲಿ ರಸ್ತೆ ನಿರ್ಮಿಸಲು ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಾಮಾನ್ಯ ಕಾಯಿಲೆಗಳ ಔಷಧಿ ಸಾಮಗ್ರಿಗಳು ಹಾಗೂ ಹಾವು, ನಾಯಿ ಕಡಿತದ ಚಿಕಿತ್ಸೆಗೆ ಅಗತ್ಯ ಚುಚ್ಚುಮದ್ದುಗಳ ದಾಸ್ತಾನು ಇಟ್ಟುಕೊಳ್ಳುವುದರ ಜತೆಗೆ ಎಲ್ಲ ತಾಲ್ಲೂಕುಗಳಿಗೆ ಸರಬರಾಜು ಮಾಡಬೇಕು ಎಂದು ಸಚಿವ ಕಾರಜೋಳ ತಿಳಿಸಿದರು.
ಬಿಮ್ಸ್ ಗೆ ಎಲ್ಲ ಸೌಲಭ್ಯ :
ಬಿಮ್ಸ್ ಇಡೀ ದೇಶದಲ್ಲಿ ೧೨ನೇ ಉತ್ತಮ ವೈದ್ಯಕೀಯ ಕಾಲೇಜು ಆಗಿ ಹೊರಹೊಮ್ಮಿದೆ. ಇದು ನಾವು ಹೆಮ್ಮೆ ಪಡುವ ವಿಷಯವಾಗಿದೆ. ಆದ್ದರಿಂದ ಆ ಸಂಸ್ಥೆಗೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಎಲ್ಲ ಮೂಲಸೌಕರ್ಯ ಮತ್ತು ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಹೇಳಿದರು.
ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳು ಮತ್ತು ನಿರ್ವಹಣೆ ಕುರಿತು ಚರ್ಚಿಸಲು ಪ್ರತ್ಯೇಕ ಸಭೆ ನಡೆಸಲಾಗುವುದು ಎಂದರು.
ಗೊಬ್ಬರ ನೀಡದ ಸೊಸೈಟಿ-ಅಂಗಡಿಕಾರರ ವಿರುದ್ಧ ಕ್ರಮಕ್ಕೆ ಸೂಚನೆ:
ಜಿಲ್ಲೆಯಲ್ಲಿ ಗೊಬ್ಬರ ಕೊರತೆ ಇದ್ದರೆ ಈ ಬಗ್ಗೆ ಮಾಹಿತಿಯನ್ನು ಒದಗಿಸಬೇಕು. ಕೇಂದ್ರ ಸರಕಾರದ ಜತೆ ಚರ್ಚಿಸಿ ಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗೊಬ್ಬರ ದಾಸ್ತಾನು ಇದ್ದಾಗ್ಯೂ ಬೇರೆ ವಸ್ತುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಕೆಲವು ಕಡೆಗಳಲ್ಲಿ ಗೊಬ್ಬರ ದಾಸ್ತಾನು ಇಲ್ಲ ಎಂದು ಹೇಳುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸಚಿವ ಕಾರಜೋಳ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸರಕಾರಿ ಸಾಲ-ಸೌಲಭ್ಯ ಒದಗಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ಅರ್ಜಿಗಳು ಬಾಕಿ ಉಳಿಯದಂತೆ ಆಯಾ ಮತಕ್ಷೇತ್ರಗಳ ಶಾಸಕರನ್ನು ಭೇಟಿ ಮಾಡಿ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಅಧಿಕಾರಿಗಳು ತಮ್ಮ ಪ್ರವಾಸ ವೇಳೆ ಕಡ್ಡಾಯವಾಗಿ ಆಯಾ ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ಯೋಜನೆಗಳ ಹಾಗೂ ಫಲಾನುಭವಿಗಳ ಪಟ್ಟಿಯ ಕುರಿತು ಚರ್ಚಿಸಬೇಕು. ವಸತಿ ಯೋಜನೆಗಳ ವಂತಿಕೆ ಬಾಕಿ ಇರುವವರ ಮಾಹಿತಿಯನ್ನು ಶಾಸಕರಿಗೆ ಒದಗಿಸಬೇಕು ಎಂದು ತಿಳಿಸಿದರು. ಸರಕಾರದ ಯೋಜನೆಗಳ ತ್ವರಿತ ಮತ್ತು ಸಮರ್ಪಕ ಅನುಷ್ಠಾನ ದೃಷ್ಟಿಯಿಂದ ಎಲ್ಲ ಇಲಾಖೆಯ ಅಧಿಕಾರಿಗಳು ತಾಲ್ಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಕೂಡ ಭಾಗವಹಿಸಬೇಕು ಎಂದು ಸಚಿವ ಕಾರಜೋಳ ಸೂಚನೆ ನೀಡಿದರು.
ಔಷಧ ದಾಸ್ತಾನು ಇಟ್ಟುಕೊಳ್ಳಬೇಕು:
ನೆಗಡಿ, ಕೆಮ್ಮು ಸೇರಿದಂತೆ ಕೆಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಅಗತ್ಯವಿರುವ ಔಷಧಿ ಸಾಮಗ್ರಿಗಳನ್ನು ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಸಚಿವ ಉಮೇಶ್ ಕತ್ತಿ ತಿಳಿಸಿದರು.
ವೈದ್ಯರ ನಿಯೋಜನೆ ರದ್ದುಪಡಿಸಲು ಆಗ್ರಹ:
ವೈದ್ಯಕೀಯ ಇಲಾಖೆಯಲ್ಲಿ ನಿಯೋಜನೆ ಮೇಲೆ ಬೇರೆ ಕಡೆ ಇರುವ ವೈದ್ಯರನ್ನು ಮೂಲ ಸ್ಥಳಕ್ಕೆ ನಿಯೋಜಿಸಬೇಕು. ಆದರೆ ಇದುವರೆಗೆ ಬೈಲಹೊಂಗಲ ತಾಲ್ಲೂಕು ಆಸ್ಪತ್ರೆಗೆ ನಿಯೋಜಿಸಿರುವುದಿಲ್ಲ ಎಂದು ಶಾಸಕ ಮಹಾಂತೇಶ ಕೌಜಲಗಿ ಅಸಮಾಧಾನ ವ್ಯಕ್ತಪಡಿಸಿದರು.
ಐದು ತಿಂಗಳಿನಿಂದ ಸರ್ಜನ್ ಇಲ್ಲಸಿರುವುದರಿಂದ ಜನರ ಗತಿ ಏನು ಎಂದು ಪ್ರಶ್ನಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವ ಕಾರಜೋಳ ಅವರು, ತಕ್ಷಣವೇ ವೈದ್ಯರನ್ನು ನಿಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ನಮ್ಮ ಹೊಲ-ನಮ್ಮ ರಸ್ತೆ ಯೋಜನೆಯಡಿ ರಸ್ತೆ ಅಗಲವನ್ನು ಇನ್ನಷ್ಟು ಹೆಚ್ಚಿಸಬೇಕು ಮಾಡಬೇಕು. ಮಳೆಗಾಲದಲ್ಲಿ ಜನರು ಹಾಗೂ ಜಾನುವಾರುಗಳ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.
ಸದ್ಯಕ್ಕೆ ಜಿಪಂ/ತಾಪಂ ಅಸ್ತಿತ್ವದಲ್ಲಿ ಇಲ್ಲ. ಇಂತಹ ಸಂದರ್ಭದಲ್ಲಿ ಟಾಸ್ಕ್ ಫೋರ್ಸ್ ವತಿಯಿಂದ ಕ್ರಿಯಾಯೋಜನೆ ಮಾಡುವಾಗ ಸಂಬಂಧಿಸಿದ ವಿಧಾನಪರಿಷತ್ ಸದಸ್ಯರ ಗಮನಕ್ಕೆ ತರಬೇಕು ಎಂದು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಒತ್ತಾಯಿಸಿದರು. ಮಳೆಗಾಲ ಮುಗಿದ ಬಳಿಕ ಟಾಸ್ಕ್ ಫೋರ್ಸ್ ಸಮಿತಿ ಸಭೆ ಕರೆದು ಶಾಸಕರು ಹಾಗೂ ಪರಿಷತ್ ಸದಸ್ಯರ ಗಮನಕ್ಕೆ ತಂದು ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ಜಿಒಂ ಸಿಇಓ ದರ್ಶನ್ ತಿಳಿಸಿದರು.
ಗ್ರಾಮ ನಕಾಶೆಯಲ್ಲಿ ಕಾಲುದಾರಿ ಅಥವಾ ಬಂಡಿದಾರಿ ಇದ್ದರೆ ಅಲ್ಲಿ ರಸ್ತೆ ನಿರ್ಮಿಸಲು ಅವಕಾಶ ಕಲ್ಪಿಸುವ ಅಗತ್ಯವಿದೆ ಎಂದು ವಿಧಾನಸಭೆಯ ಉಪ ಸಭಾಧ್ಯಕ್ಷರಾದ ವಿಶ್ವನಾಥ್ ಮಾಮನಿ ಅವರು ಹೇಳಿದರು.
ಹಂದಿ ಸಾಗಾಣಿಕೆ ಘಟಕಗಳಲ್ಲಿ ಕಂಪೌಂಡ್ ನಿರ್ಮಿಸುವ ಮೂಲಕ ಅವುಗಳು ಹೊರಗೆ ಬರದಂತೆ ತಡೆಯಬಹುದು ಎಂದು ಸಲಹೆ ನೀಡಿದರು. ವೈದ್ಯರ ಕೊರತೆ, ರಸ್ತೆಗಳ ನಿರ್ಮಾಣ, ಕೆರೆ ಅಭಿವೃದ್ಧಿ, ನರೇಗಾ ಯೋಜನೆಯ ಅನುಷ್ಠಾನ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾತನಾಡಿದ ಶಾಸಕ ಮಹಾಂತೇಶ ದೊಡ್ಡಗೌಡ್ರ ಅವರು, ಜನರ ಅನುಕೂಲತೆ ದೃಷ್ಟಿಯಿಂದ ಈ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಬೇಕು ಎಂದು ಮನವಿ ಮಾಡಿಕೊಂಡರು. ಪ್ರತಿ ಗ್ರಾಮಕ್ಕೆ ನೀರು ಒದಗಿಸಲು ಸರಕಾರ ನಿಗದಿಪಡಿಸಿದ ಲೆಕ್ಕಾಚಾರ ಪ್ರಕಾರ ಪೂರೈಸಬೇಕು. ಈ ನಿಟ್ಟಿನಲ್ಲಿ ಅಕ್ಕಪಕ್ಕದ ಗ್ರಾಮಸ್ಥರು ಪರಸ್ಪರ ಸಹಕಾರ ನೀಡಬೇಕು ಎಂದರು.;
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ ತಮ್ಮ ಕ್ಷೇತ್ರದ ವ್ಯಾಪ್ತಿಯ ಶಾಲೆಗಳ ಕಟ್ಟಡಗಳು ಅಡುಗೆ ಕೋಣೆಗಳು ಶಿಥಿಲಗೊಂಡಿದ್ದು, ಇವುಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರನ್ನು ಒತ್ತಾಯಿಸಿದರು. ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ದುರಸ್ತಿ ಕ್ರಿಯಾಯೋಜನೆಯಡಿ ಇಂತಹ ಶಾಲೆಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಸಿಇಓ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ನಾಯಿ ಹಾಗೂ ಹಂದಿಗಳ ಕಾಟ ಜಾಸ್ತಿಯಾಗಿದೆ. ಆದ್ದರಿಂದ ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಸ ವಿಲೇವಾರಿಗೆ ಜಾಗೆ ಒದಗಿಸಲು ಮನವಿ:
ಹಿರೇಬಾಗೇವಾಡಿಯಲ್ಲಿ ಕಸ ವಿಲೇವಾರಿಗೆ ಜಾಗೆ ಇಲ್ಲದಂತಾಗಿದೆ. ಇದಕ್ಕಾಗಿ ಎರಡು ಎಕರೆ ಜಾಗೆಯನ್ನು ಒದಗಿಸಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಸಚಿವರಿಗೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸಚಿವ ಕಾರಜೋಳ ಅವರು ವಿಶ್ವವಿದ್ಯಾಲಯ ಸಮೀಪ ಹೊರತುಪಡಿಸಿ ಬೇರೆ ಕಡೆ ಸೂಕ್ತ ಜಾಗೆಯನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಹಲಗಾ-ಬಸ್ತವಾಡ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಜಲಜೀವನ ಮಿಷನ್ ಯೋಜನೆಯಡಿ ಈ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ ಟೆಂಡರ್ ಕರೆಯುತ್ತಿಲ್ಲ ಎಂದು ಸಚಿವರ ಗಮನಸೆಳೆದರು. ಈ ಗ್ರಾಮಗಳ ಪ್ರತಿ ಮನೆಗಳಿಗೆ ನಳ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ರಾಮದುರ್ಗದಲ್ಲಿ ಲಸಿಕೆಯಿಂದ ಮೂರು ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಲಸಿಕೆ ಗುಣಮಟ್ಟ ಸರಿಯಾಗಿತ್ತು ಅಂತ ವರದಿ ಬಂದಿದ್ದು, ಹಾಗಿದ್ದರೆ ಮಕ್ಕಳ ಸಾವು ಏಕೆ ಸಂಭವಿಸಿತು ಎಂದು ಶಾಸಕ ಮಹಾದೇವಪ್ಪ ಯಾದವಾಡ ಪ್ರಶ್ನಿಸಿದರು.
ಮಕ್ಕಳಿಗೆ ಜ್ವರ ಇದ್ದ ಸಂದರ್ಭದಲ್ಲಿ ಲಸಿಕೆ ನೀಡಿರುವುದು ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ಡಿಎ??? ಉತ್ತರಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆ ಆಧಾರಿತ ವೈದ್ಯ, ನರ್ಸ್ ಹಾಗೂ ಫಾರ್ಮಸಿಸ್ಟ್ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.
ರಾಮದುರ್ಗ ಕ್ಷೇತ್ರದ ಏಳೆಂಟು ಗ್ರಾಮಗಳು ಜಲಜೀವನ ಮಿಷನ್ ಯೋಜನೆಯಿಂದ ಹೊರಗುಳಿದಿದ್ದು, ಇವುಗಳನ್ನು ಕೂಡ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ನರೇಗಾದಲ್ಲಿ ಕಾಲುದಾರಿ ಕಾಮಗಾರಿ:
ಅರಣ್ಯದಲ್ಲಿ ಕಾಲುದಾರಿ ಮಾಡುವ ಕಾಮಗಾರಿಯನ್ನು ಕೂಡ ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಭೆಗೆ ತಿಳಿಸಿದರು.
ಪಿಎಂಜಿಎಸ್ ವೈ ರಸ್ತೆಗಳು ಐದು ವರ್ಷಗಳ ಕಾಲ ನಿರ್ವಹಣೆ ಮಾಡಬೇಕಿರುವುದರಿಂದ ಪ್ರತಿ ರಸ್ತೆಯಲ್ಲೂ ಕಾಮಗಾರಿ ಮತ್ತು ನಿರ್ವಹಣೆ ಕುರಿತು ಸಮರ್ಪಕ ಮಾಹಿತಿಫಲಕ ಅಳವಡಿಸಬೇಕು. ಸರಿಯಾಗಿ ನಿರ್ವಹಣೆ ಮಾಡದ ಗುತ್ತಿಗೆದಾರರಿಗೆ ನೋಟಿಸ್ ನೀಡಬೇಕು ಮತ್ತು ಮುಂದಿನ ದಿನಗಳಲ್ಲಿ ಟೆಂಡರ್ ಹಾಕದಂತೆ ಅನರ್ಹಗೊಳಿಸಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಯಾರೇ ಮುಂದಾದರೂ ೨೪ ಗಂಟೆಗಳಲ್ಲಿ ಆದೇಶ ನೀಡಲಾಗುವುದು ಎಂದರು. ಜಿಲ್ಲಾ ಪಂಚಾಯತ ಸಿಇಓ ದರ್ಶನ್ ಅವರು ಸಭೆಯನ್ನು ನಿರ್ವಹಿಸಿದರು.
ಶಾಸಕ ದುರ್ಯೋಧನ ಐಹೊಳೆ, ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಉಪಸ್ಥಿತರಿದ್ದರು.
ಎಲ್ಲ ಉಪ ವಿಭಾಗಾಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು, ತಹಶೀಲ್ದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಸಭೆ ಆರಂಭಗೊಳ್ಳುವ ಪೂರ್ವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಗಳನ್ನು ಹಾಗೂ ಸರಕಾರಿ ಸೌಲಭ್ಯಗಳನ್ನು ವಿತರಿಸಿದರು


Gadi Kannadiga

Leave a Reply