This is the title of the web page
This is the title of the web page

Please assign a menu to the primary menu location under menu

State

೫ ಕೆಜಿ ಆಹಾರಧಾನ್ಯದ ಬದಲಿಗೆ ಪ್ರತಿ ಕೆಜಿಗೆ ೩೪ ರಂತೆ ೧೭೦ ರೂ.ಹಣ ಬ್ಯಾಂಕ್ ಖಾತೆಗೆ ಅನ್ನಭಾಗ್ಯ ಯೋಜನೆ ಅನುಷ್ಠಾನ: ನಗದು ವರ್ಗಾವಣೆಗೆ ಅಗತ್ಯ ಸಿದ್ಧತೆ


ಕೊಪ್ಪಳ ಜುಲೈ ೧೨ : ರಾಜ್ಯ ಸರ್ಕಾರದ ಮಹತ್ವದ ‘ಅನ್ನಭಾಗ್ಯ’ ಯೋಜನೆಯಡಿ ೦೫ ಕೆಜಿ ಅಕ್ಕಿ ಜತೆಗೆ ಉಳಿದ ೦೫ ಕೆಜಿ ಅಕ್ಕಿಗೆ ಪ್ರತಿ ಕೆಜಿಗೆ ೩೪ ರೂ.ನಂತೆ ದರ ನಿಗದಿಪಡಿಸಿದಂತೆ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯನಿಗೆ ತಲಾ ೧೭೦ ರೂ. ಹಣವನ್ನು ಡಿಬಿಟಿ ಮೂಲಕ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ಪಾವತಿಗೆ ರಾಜ್ಯ ಸರ್ಕಾರವು ಈಗಾಗಲೇ ಚಾಲನೆ ನೀಡಿದ್ದು, ಇದಕ್ಕಾಗಿ ಕೊಪ್ಪಳ ಜಿಲ್ಲೆಯಲ್ಲಿ ಸಹ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆ ಜಾರಿ ಮಾಡಿ ರಾಜ್ಯದಲ್ಲಿರುವ ಅಂತ್ಯೋದಯ ಅನ್ನಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿಗಳ (ಪಿಎಚ್‌ಎಚ್) ಪ್ರತಿ ಫಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ ಐದು ಕೆಜಿ ಆಹಾರಧಾನ್ಯಯೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ ಐದು ಕೆಜಿ ಆಹಾರ ಧಾನ್ಯ ಸೇರಿಸಿ ಪ್ರತಿ ಮಾಹೆ ಪ್ರತಿ ಫಲಾನುಭವಿಗೆ ಹತ್ತು ಕೆಜಿ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲು ಸರ್ಕಾರವು ನಿರ್ಧರಿಸಿದಂತೆ ಕ್ರಮ ವಹಿಸಲಾಗುತ್ತಿದೆ ಎಂದು ಆಹಾರ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.
ಈ ಉದ್ದೇಶಕ್ಕಾಗಿ ಅಗತ್ಯವಿರುವ ಆಹಾರಧಾನ್ಯವನ್ನು ಮುಕ್ತ ಮಾರುಕಟ್ಟೆಯಿಂದ ಖರೀಧಿಸಲು ಮುಕ್ತ ಟೆಂಡರ್‌ನ್ನು ಕರೆಯಲು ತೀರ್ಮಾನಿಸಲಾಗಿದೆ. ಈ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಬಿಡ್‌ದಾರರು ಆಹಾರಧಾನ್ಯವನ್ನು ಸರಬರಾಜು ಮಾಡುವರೆಗೆ ಅಂತ್ಯೋದಯ ಅನ್ನಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ೦೫ ಕೆ.ಜಿ ಆಹಾರಧಾನ್ಯದ ಬದಲಾಗಿ ಪ್ರತಿ ಕೆಜಿಗೆ ೩೪ ರೂ ದಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್‌ಖಾತೆಗೆ ಡಿಬಿಟಿ ಮೂಲಕ ಹಣವನ್ನು ವರ್ಗಾಯಿಸಲು ಆದೇಶಿಸಲಾಗಿದೆ.
ಜಿಲ್ಲೆಗೆ ೧೮೨೭.೩೩ ಲಕ್ಷ ರೂ. ಬಿಡುಗಡೆ: ಜಿಲ್ಲೆಯಲ್ಲಿರುವ ಅಂತ್ಯೋದಯ ಅನ್ನಭಾಗ್ಯ ಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಪಿಎಚ್‌ಎಚ್) ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ೦೫ ಕೆಜಿ ಆಹಾರಧಾನ್ಯದ ಬದಲಿಗೆ ಕೆಜಿಗೆ ೩೪ ರೂ.ದಂತೆ ಪಡಿತರ ಚೀಟಿಯಲ್ಲಿರುವ ಕುಟುಂಬ ಮುಖ್ಯಸ್ಥರ ಬ್ಯಾಂಕ್‌ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಪಾವತಿಸಲು ರಾಜ್ಯ ಸರ್ಕಾರವು ಜಿಲ್ಲೆಗೆ ಬರೋಬ್ಬರಿ ೧೮೨೭.೩೩ ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಈ ತಿಂಗಳೊಳಗೆ ಪಡಿತರ ಚೀಟಿದಾರರ ಮುಖ್ಯಸ್ಥರು ಹೊಂದಿರುವ ಬ್ಯಾಂಕ್‌ಖ್ಯಾತೆಗೆ ಈ ಹಣವು ವರ್ಗಾವಣೆಯಾಗಲಿದೆ.
೩.೫೬ ಲಕ್ಷ ಪಡಿತರ ಚೀಟಿಗಳು: ಜಿಲ್ಲೆಯಲ್ಲಿಒಟ್ಟು ೨,೯೧,೭೧೯ ಆದ್ಯತಾ ಪಡಿತರ ಚೀಟಿಗಳು (ಬಿಪಿಎಲ್) ಇದ್ದು ಒಟ್ಟು ೧೦,೩೮,೩೬೧ ಮಂದಿ ಫಲಾನುಭವಿಗಳಿದ್ದಾರೆ. ಅಂತ್ಯೋದಯ ಅನ್ನಯೋಜನೆ (ಎಎವೈ) ಪಡಿತರ ಚೀಟಿಗಳು ಜಿಲ್ಲೆಯಲ್ಲಿ ೩೭,೫೭೩ ಇದ್ದು ೧,೫೦,೪೯೭ ಮಂದಿ ಫಲಾನುಭವಿಗಳಿದ್ದಾರೆ. ಎಪಿಎಲ್ ಕಾರ್ಡ್ದಾರರು ಜಿಲ್ಲೆಯಲ್ಲಿ ೨೭,೨೮೩ ಇದ್ದು ೮೭,೦೬೬ ಮಂದಿ ಫಲಾನುಭವಿಗಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೩,೫೬,೫೭೫ ಪಡಿತರ ಚೀಟಿದಾರರು ಹಾಗೂ ೧೨,೭೫,೯೨೪ ಮಂದಿ ಪಡಿತರ ಚೀಟಿದಾರರಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ಒಟ್ಟು ೩,೨೯,೨೯೨ ಪಡಿತರ ಚೀಟಿಗಳಿದ್ದು, ೧೧,೮೮,೮೫೮ ಮಂದಿ ಫಲಾನುಭವಿಗಳಿದ್ದಾರೆ. ಆ ಪೈಕಿ ಎಎವೈ ೩೭,೫೭೩ ಆದ್ಯತಾ ಪಡಿತರ ಚೀಟಿ (ಪಿಎಚ್‌ಎಚ್) ಒಟ್ಟು ೨,೯೧,೭೧೯ ಕಾರ್ಡ್ಗಳಿವೆ. ಎಪಿಎಲ್ ಒಟ್ಟು ೨೭,೨೮೩ ಇವೆ. ಜಿಲ್ಲಾದ್ಯಂತ ಒಟ್ಟು ೨೦,೫೬೦ ಪಡಿತರ ಚೀಟಿದಾರರಿಗೆ ಬ್ಯಾಂಕ್ ಖಾತೆ ಇಲ್ಲ. ಈಗಾಗಲೇ ಬ್ಯಾಂಕ್‌ಖಾತೆ ಇಲ್ಲದ ಹಾಗೂ ಆಧಾರ್ ಲಿಂಕ್ ಆಗದ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿ ಬ್ಯಾಂಕ್‌ಖಾತೆ ಮಾಡಿಸುವಂತೆ ಆದೇಶಿಸಲಾಗಿದೆ
ಆಧಾರ್ ಲಿಂಕ್ ಆಗಿಲ್ಲ: ಜಿಲ್ಲೆಯಲ್ಲಿ ಒಟ್ಟು ೪ ತಾಲೂಕುಗಳಲ್ಲಿ ೨೬,೯೪೨ ಮಂದಿ ಪಡಿತರ ಚೀಟಿದಾರರಿಗೆ ಬ್ಯಾಂಕ್ ಖಾತೆಗಳು ಇಲ್ಲ. ಕೆಲವರು ಬ್ಯಾಂಕ್ ಖಾತೆ ಮಾಡಿಸಿಕೊಂಡಿದ್ದರೂ ಆಧಾರ್ ಲಿಂಕ್ ಆಗದ ಕಾರಣ ಡಿಬಿಟಿ ಮೂಲಕ ನೇರ ನಗದು ವರ್ಗಾವಣೆ ಸಾಧ್ಯವಿಲ್ಲ ಎಂಬುದು ಆಹಾರ ಇಲಾಖೆ ಅಧಿಕಾರಿಗಳ ಪರಿಶೀಲನೆ ವೇಳೆ ಕಂಡು ಬಂದಿದೆ. ಬ್ಯಾಂಕ್ ಖಾತೆ ಇಲ್ಲದವರು ಹಾಗೂ ಬ್ಯಾಂಕ್ ಖಾತೆ ಇದ್ದರೂ ಆಧಾರ್ ಲಿಂಕ್ ಆಗದ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿರುವ ಆಹಾರ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಬ್ಯಾಂಕ್‌ಖಾತೆ ಮಾಡಿಸುವಂತೆ ಸ್ಥಳೀಯ ಅಧಿಕಾರಿಗಳ ಹಾಗೂ ನ್ಯಾಯ ಬೆಲೆ ಅಂಗಡಿಗಳ ಮೂಲಕ ಫಲಾನುಭವಿಗಳಿಗೆ ಸೂಚಿಸಲಾಗಿದೆ.
ಸಾರ್ವಜನಿಕರಿಗೆ ಸೂಚನೆ: ಆಧಾರ್ ಲಿಂಕ್ ಆಗದೇ ಇರುವ ಸಕ್ರೀಯ ಬ್ಯಾಂಕ್‌ಖಾತೆ ಇಲ್ಲದೇ ಇರುವ ಮತ್ತು ಬ್ಯಾಂಕ್ ಇ-ಕೆವೈಸಿ ಆಗದೇ ಇರುವ ಅಂತ್ಯೋದಯ ಅನ್ನಭಾಗ್ಯ ಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಪಿಎಚ್‌ಎಚ್) ಫಲಾನುಭವಿಗಳು ಜುಲೈ೨೦ರೊಳಗಾಗಿ ಸರಿಪಡಿಸಿಕೊಳ್ಳಲು ಆಹಾರ ಇಲಾಖೆಯ ಉಪ ನಿರ್ದೇಶಕರು ಸೂಚಿಸಿದ್ದಾರೆ.
ಎಎವೈ ಅಂತ್ಯೋದಯ ಅನ್ನಭಾಗ್ಯ ಯೋಜನೆಯಡಿ ಕಡುಬಡವರೆಂದು ಹೇಳಿ ಸರ್ಕಾರ ಈಗಾಗಲೇ ೨೧ ಕೆಜಿ ಅಕ್ಕಿಯನ್ನು ಮತ್ತು ೧೪ ಕೆಜಿ ಜೋಳವನ್ನು ಉಚಿತವಾಗಿ ನೀಡುತ್ತಿದೆ. ಮೂರಕ್ಕಿಂತ ಹೆಚ್ಚು ಮಂದಿ ಇದ್ದರೆ ಮಾತ್ರ ಒಬ್ಬರಿಗೆ ೧೭೦ ರೂ. ಹಣ ಸಿಗುತ್ತದೆ. ೩ ಕ್ಕಿಂತ ಎಷ್ಟೇ ಮಂದಿ ಇದ್ದರೂ ಪ್ರತಿಯೊಬ್ಬರಿಗೂ ೧೭೦ ರೂ. ನಗದು ಸೌಲಭ್ಯ ಸಿಗುತ್ತದೆ ಎಂದು ಜಿಲ್ಲೆಯಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


Leave a Reply