ಸುವರ್ಣಸೌಧ,ಬೆಳಗಾವಿಡಿ.೨೯; ೨೦೨೨-೨೩ ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತಿನ ೮೦೦೧.೧೩ ಕೋಟಿ ರೂ.ಗಳ ಬೇಡಿಕೆಗಳ ಪ್ರಸ್ತಾವನೆಗೆ ವಿಧಾನಸಭೆಯಲ್ಲಿ ಇಂದು ಅನುಮೋದನೆ ದೊರೆಯಿತು.ಇದು ಪ್ರಸಕ್ತ ಸಾಲಿನ ಆಯವ್ಯಯ ಗಾತ್ರದ ಶೇ.೮.೩೮ ರಷ್ಟಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸಭೆಯ ಕಲಾಪದಲ್ಲಿ ಇಂದು ಅವರು ಪ್ರಸ್ತಾವ ಮಂಡಿಸಿ, ಸದನದ ಅನುಮೋದನೆ ಕೋರಿ ಮಾತನಾಡಿದರು, ಪ್ರಸಕ್ತ ಸಾಲಿನ ಸುಮಾರು ೨ ಲಕ್ಷ ೭೧ ಸಾವಿರ ಕೋಟಿ ರೂ.ಗಳ ಬಜೆಟ್ ಗಾತ್ರದ ಶೇ.೮.೩೮ ರಷ್ಟಿರುವ ಎರಡನೇ ಕಂತಿನ ಪೂರಕ ಅಂದಾಜುಗಳ ಬೇಡಿಕೆಗಳ ಪ್ರಸ್ತಾವದಲ್ಲಿ ಸುಮಾರು ೧೩೯೬ ಕೋಟಿ ರೂ.ಗಳನ್ನು ರಾಜ್ಯ ವಿಪತ್ತು ನಿರ್ವಹಣೆಗೆ ,ಸುಮಾರು ೭೮೦ ಕೋಟಿ ರೂ.ಕೇಂದ್ರದ ಪಾಲು,ವಿದ್ಯುತ್ ವಲಯಕ್ಕೆ ೫೦೦ ಕೋಟಿ ರೂ.,ಜಲಧಾರೆಗೆ ೨೦೦ ಕೋಟಿ ರೂ. ದೀನ್‌ದಯಾಳ ಉಪಾಧ್ಯಾಯ ಸೌಹಾರ್ದ ಹಾಸ್ಟೇಲುಗಳ ಸ್ಥಾಪನೆಗೆ ೨೦೦ ಕೋಟಿ ರೂ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ೨೦೦ ಕೋಟಿ ರೂ.ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ೩೦೦ ಕೋಟಿ ರೂ.ವೆಚ್ಚವೂ ಸೇರಿ ಒಟ್ಟು ೮೦೦೧ ಕೋಟಿ ರೂ.ಗಳ ಪೂರಕ ಅಂದಾಜಿನ ವಿವಿಧ ಬಾಬತ್ತುಗಳನ್ನು ವಿವರಿಸಿದರು.
ಕೇಂದ್ರ ಸರ್ಕಾರದಿಂದ ೧೦೫೫೦ ಕೋಟಿ ರೂ. ಜಿಎಸ್‌ಟಿ ಪಾಲು ಬಿಡುಗಡೆಯಾಗಿದೆ.೩೩೯೯ ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಉದ್ದೇಶಿಸಲಾಗಿದ್ದು ೧೭೦೦ ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ರಾಜ್ಯವು ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ.ತೆರಿಗೆ ಸಂಗ್ರಹ ಸಾಮರ್ಥ್ಯವೂ ಹೆಚ್ಚಳವಾಗಿದೆ.ವಾಣಿಜ್ಯ ತೆರಿಗೆ ಮೂಲಕ ೭೯೦೧೦ ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿಗಳು ಸದನಕ್ಕೆ ವಿವರಿಸಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಕೃಷ್ಣ ಭೈರೇಗೌಡ ಅವರು ಪೂರಕ ಅಂದಾಜುಗಳ ಪ್ರಸ್ತಾವದ ಮೇಲೆ ಮಾತನಾಡಿದರು.
Gadi Kannadiga > Local News > ೮೦೦೧ ಕೋಟಿ ರೂ.ಗಳ ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳ ಪ್ರಸ್ತಾವನೆಗೆ ವಿಧಾನಸಭೆಯಲ್ಲಿ ಅನುಮೋದನೆ
೮೦೦೧ ಕೋಟಿ ರೂ.ಗಳ ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳ ಪ್ರಸ್ತಾವನೆಗೆ ವಿಧಾನಸಭೆಯಲ್ಲಿ ಅನುಮೋದನೆ
Suresh29/12/2022
posted on
