ಗದಗ ಡಿಸೆಂಬರ್ ೨೮: ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ಜನೆವರಿ ೬ ರಿಂದ ೮ ರವರೆಗೆ ನಡೆಯಲಿದೆ. ಸಮ್ಮೇಳನದ ಅಂಗವಾಗಿ ಕನ್ನಡದ ಜ್ಯೋತಿಯನ್ನು ಹೊತ್ತ ರಥವನ್ನು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಅದ್ದೂರಿ ಸ್ವಾಗತ ಕೋರಿದರು.
ಕನ್ನಡಿಗರ ಸ್ವಾಭಿಮಾನ ಮತ್ತು ಅಭಿಯಾನ ಸರ್ವಜನಾಂಗದ ಸಂಕೇತವಾಗಿರುವ ಕನ್ನಡಿಗರೆಲ್ಲರನ್ನೂ ಒಗ್ಗೂಡಿಸುವ ಕನ್ನಡ ರಥವು ರಾಜ್ಯಾದ್ಯಂತ ಸಂಚರಿಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕನ್ನಡ ರಥವು ಗದಗ ಜಿಲ್ಲೆಗೆ ಆಗಮಿಸಿದ ಹಿನ್ನೆಲೆಯಲ್ಲಿ ನಗರದ ತೋಂಟದಾರ್ಯ ಕಲ್ಯಾಣ ಮಂಟಪದ ಆವರಣದಿಂದ ವಿವಿಧ ಕಲಾಪ್ರಕಾರಗಳ ಕನ್ನಡಾಭಿಮಾನಿಗಳ ಸಮ್ಮುಖದಲ್ಲಿ ಮೆರವಣಿಗೆಗೆ ಅದ್ದೂರಿ ಚಾಲನೆ ದೊರೆಯಿತು.
ಕನ್ನಡ ರಥಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಶೀಲಾ ಬಿ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ,ಪಿ, ಉಪವಿಭಾಗಾಧಿಕಾರಿ ಅನ್ನಪೂರ್ಣ ಎಂ, ತಹಶೀಲ್ದಾರ ಕಿಶನ್ ಕಲಾಲ, ಡಿ.ವೈ.ಎಸ್.ಪಿ.ಶಿವಾನಂದ ಪಟ್ಟಣಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ, ಸೇರಿದಂತೆ ಅನೇಕ ಇಲಾಖಾಧಿಕಾರಿಗಳು ಪುಷ್ಪಾರ್ಚನೆ ನೆರವೇರಿಸಿದರು.
ನಗರಾಬಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಲ್ಲೇದ, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ಸಂಗಮೇಶ ದುಂದೂರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿವೇಕಾನಂದ ಗೌಡ ಪಾಟೀಲ, ಕಾಲೇಜು ಪ್ರಾಚಾರ್ಯ ಬಿ.ಡಿ.ಧಾರವಾಡಕರ, ಬಳಗಾನೂರ ಮಠದ ಶ್ರೀಗಳು, ಸಾಹಿತ್ಯ ಐ.ಕೆ. ಕಮ್ಮಾರ, ಬಸವರಾಜ ದಂಡಿನ ಸೇರಿದಂತೆ ಸಾಹಿತ್ಯ ಆಸಕ್ತರು, ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಮೆರುಗು ತಂದುಕೊಟ್ಟರು.
ಕನ್ನಡ ರಥ ಮೆರವಣಿಗೆಯು ತೋಂಟದಾರ್ಯ ಕಲ್ಯಾಣ ಮಂಟಪದ ಆವರಣದಿಂದ ಆರಂಭವಾಗಿ ಭೂಮರೆಡ್ಡಿ ವೃತ್ತ, ಹಳೆ ಡಿ.ಸಿ.ಆಫೀಸ್ ವೃತ್ತ, ಚೆನ್ನಮ್ಮ ವೃತ್ತ, ಮುಳಗುಂದ ನಾಕಾ ಮಾರ್ಗವಾಗಿ ಲಕ್ಷ್ಮೇಶ್ವರಕ್ಕೆ ಸಂಚರಿಸಿತು.