This is the title of the web page
This is the title of the web page

Please assign a menu to the primary menu location under menu

State

ಡಿ. 10ರಂದು ಖರ್ಗೆಯವರಿಗೆ ಅದ್ದೂರಿ ಅಭಿನಂದನಾ ಸಮಾರಂಭ


ಕಲಬುರಗಿ,ನ.: ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಮಲ್ಲಿಕಾರ್ಜುನ್ ಖರ್ಗೆಯವರಿಗೆ ಡಿಸೆಂಬರ್ 10ರಂದು ನಗರಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಅವರಿಗೆ ಅದ್ದೂರಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳುವ ಮೂಲಕ ಹಾರ್ದಿಕವಾಗಿ ಸ್ವಾಗತಿಸಲಾಗುವುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಹೇಳಿದರು.
ನಗರದ ಭಾವಸಾರ ಕ್ಷತ್ರೀಯ ಸಮಾಜ ಕಲ್ಯಾಣ ಮಂಟಪದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾತ್ಕಾಲಿಕ ಕಾರ್ಯಕ್ರಮದ ಪ್ರಕಾರ ಡಾ. ಮಲ್ಲಿಕಾರ್ಜುನ್ ಖರ್ಗೆಯವರು ಡಿಸೆಂಬರ್ 10ರಂದು ಬೆಳಿಗ್ಗೆ 11 ಗಂಟೆಗೆ ನಗರಕ್ಕೆ ವಿಮಾನದ ಮೂಲಕ ಆಗಮಿಸುವರು. ಅವರಿಗೆ ನಗರದಲ್ಲಿ ಬೃಹತ್ ಮೆರವಣಿಗೆಯ ಮೂಲಕ ನೂತನ ವಿದ್ಯಾಲಯದ ಮೈದಾನಕ್ಕೆ ಕರೆದುಕೊಂಡು ಹೋಗಿ ಮಧ್ಯಾಹ್ನ 1 ಗಂಟೆಗೆ ಬೃಹತ್ ಸಮಾರಂಭದಲ್ಲಿ ಅವರಿಗೆ ಅಭಿನಂದಿಸಲಾಗುವುದು ಎಂದರು.
ಡಾ. ಮಲ್ಲಿಕಾರ್ಜುನ್ ಖರ್ಗೆಯವರು 138 ವರ್ಷಗಳ ಸುದೀರ್ಘ ಅವಧಿಯ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರು ಮಣ್ಣಿನ ಮಗನಾಗಿದ್ದಾರೆ. ಸರ್ವ ಸಮುದಾಯಕ್ಕೆ ನಾಯಕರಾಗಿದ್ದಾರೆ. 9 ಬಾರಿ ಶಾಸಕರಾಗಿ, ಎರಡು ಬಾರಿ ಲೋಕಸಭಾ ಸದಸ್ಯರಾಗಿ, ರಾಜ್ಯಸಭಾ ಸದಸ್ಯರಾಗಿ, ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಸುಮಾರು 55 ವರ್ಷಗಳ ಸುದೀರ್ಘ ಅವಧಿಯವರೆಗೆ ಸೇವೆ ಸಲ್ಲಿಸಿ, ಈಗ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಅದಕ್ಕಾಗಿ ಸಂತೋಷದಿಂದ ಅವರಿಗೆ ಭವ್ಯ ಮತ್ತು ಅದ್ದೂರಿಯಿಂದ ಸನ್ಮಾನಿಸುವ ಕುರಿತು ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲಾ ಘಟಕದ ಪದಾಧಿಕಾರಿಗಳು ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಅಭಿನಂದನಾ ಸಮಾರಂಭದಲ್ಲಿ ಎಐಸಿಸಿಐ ಕಾರ್ಯದರ್ಶಿ, ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್, ಕೆಪಿಸಿಸಿಐ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆ.ಎಚ್. ಮುನಿಯಪ್ಪ, ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೆ.ಎಚ್. ಪಾಟೀಲ್ ಸೇರಿದಂತೆ ಅನೇಕ ನಾಯಕರು ಪಾಲ್ಗೊಳ್ಳುವರು ಎಂದು ಅವರು ಹೇಳಿದರು.
ಅಂದಿನ ಸಮಾರಂಭದಲ್ಲಿ ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ್, ಬಳ್ಳಾರಿ ಹಾಗೂ ವಿಜಯನಗರ ಸೇರಿ ಏಳು ಜಿಲ್ಲೆಗಳ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸುವರು. ಪಕ್ಷಾತೀತವಾಗಿ ಸಾರ್ವಜನಿಕರು ಪಾಲ್ಗೊಳ್ಳುವುದರಿಂದ ಸುಮಾರು ಮೂರು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಅಭಿನಂದನಾ ಸಮಾರಂಭವನ್ನು ಯಶಸ್ವಿಗೊಳಿಸಲು ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸುವ ಮೂಲಕ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ ಅವರು, ಕಲ್ಯಾಣ ಕರ್ನಾಟಕದ ಎಲ್ಲರೂ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿನ ಬಿಜೆಪಿ ಸರ್ಕಾರವು ಸುಳ್ಳನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದೆ. ರಾಜ್ಯದಲ್ಲಿ ಇರುವುದು ಶೇಕಡಾ 40 ಪರ್ಸೆಂಟೇಜ್ ಸರ್ಕಾರವಾಗಿದೆ ಎಂದು ದೂರಿದ ಅವರು, ಇದರಿಂದಾಗಿ ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಎದ್ದಿದೆ. ಚುನಾವಣೆಯಲ್ಲಿ ಸೋಲುವ ಭಯದಿಂದ ಮತದಾರರ ಪಟ್ಟಿಯಿಂದ ಮತದಾರರನ್ನು ತೆಗೆದುಹಾಕಿಸಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಧರ್ ಬಾಬು, ಶಾಸಕರಾದ ಕನೀಜ್ ಫಾತಿಮಾ, ಡಾ. ಅಜಯಸಿಂಗ್, ಅರವಿಂದಕುಮಾರ್ ಅರಳಿ, ಮಾಜಿ ಶಾಸಕರಾದ ಡಾ. ಶರಣಪ್ರಕಾಶ್ ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್, ಅಲ್ಲಮಪ್ರಭು ಪಾಟೀಲ್, ಎನ್.ಎಸ್. ಭೋಸರಾಜು, ಅಲ್ಲಂ ವೀರಭದ್ರಪ್ಪ, ಜಗದೇವ್ ಗುತ್ತೇದಾರ್ ಕಾಳಗಿ, ನೀಲಕಂಠರಾವ್ ಮೂಲಗೆ, ವಿಜಯಕುಮಾರ್ ಜಿ. ರಾಮಕೃಷ್ಣ, ಮಾಲಾ ಬಿ. ನಾರಾಯಣರಾವ್ ಮುಂತಾದವರು ಉಪಸ್ಥಿತರಿದ್ದರು.


Gadi Kannadiga

Leave a Reply