ಬೆಳಗಾವಿ : ನಿರ್ಮಾಣ ಹಂತದಲ್ಲಿರುವ ಕಟ್ಟಡದ ಪಕ್ಕದ ಮನೆಯ ಮಣ್ಣಿನ ಗೋಡೆ ಕುಸಿದ ಪರಿಣಾಮ ಕಟ್ಟಡ ಕಾರ್ಮಿಕ ಓರ್ವ ಸಾವನ್ನಪ್ಪಿದ್ದು ಇನ್ನೊಬ್ಬ ಕಾರ್ಮಿಕನಿಗೆ ಗಾಯವಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಮಾರುತಿ ಗಲ್ಲಿಯ ಮಾರುತಿ ಮಂದಿರದ ಹಿಂಭಾಗದಲ್ಲಿ ಬೃಂದಾವನ ಹೋಟೆಲ್ ಬಳಿ ಒಂದು ದೊಡ್ಡ ಕಟ್ಟವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಕಟ್ಟಡದ ಪಕ್ಕದ ಮನೆಯ ಗೋಡೆ ಕುಸಿದ ಹಿನ್ನೆಲೆ ಮಣ್ಣಿನ ಅವಶೇಷದಡಿ ಸಿಲುಕಿ ಓರ್ವ ಕಟ್ಟಡ ಕಾರ್ಮಿಕ ಸಾವನ್ನಪ್ಪಿದ್ದಾನೆ.
ಇನ್ನೊಬ್ಬ ಕಾರ್ಮಿಕನಿಗೆ ಗಾಯವಾಗಿದ್ದು, ಆತನಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಖಡೇಬಜಾರ್ ಎಸಿಪಿ ಚಂದ್ರಪ್ಪ, ಸಿಪಿಐ ನಿಂಬಾಳ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್ಡಿಆರ್ಎಫ್ ತಂಡದವರು ದೌಡಾಯಿಸಿ ಕಾರ್ಯಾಚರಣೆ ನಡೆಸಿದ್ದು, ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.
ಕೀರ್ತಿಲಾಲ್ ಎಂಬುವವರು ಇಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬೈಲಹೊಂಗಲದ ಮಹಾದೇವಪ್ಪ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಇನ್ನು ಈ ಘಟನೆಗೆ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿದ ನಗರಸೇವಕ ಜಯತೀರ್ಥ ಸವದತ್ತಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೇಸ್ಮೆಂಟ್ ಮಾಡಿ ಕಟ್ಟಡ ಕಟ್ಟುವುದು ತಪ್ಪು. ಯಾಕೆಂದರೆ ಪಕ್ಕದಲ್ಲಿ ಮಣ್ಣಿನ, ಕಲ್ಲಿನ ಗೋಡೆಯ ಮನೆಗಳಿರುತ್ತವೆ ಎಂಬುದನ್ನು ನೋಡಬೇಕಿತ್ತು. ನಾನೊಬ್ಬ ಪಾಲಿಕೆ ಸದಸ್ಯನಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಾಗ ಎಲ್ಲವನ್ನು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸುತ್ತೇನೆ.
ಅವೈಜ್ಞಾನಿಕವಾಗಿ ಯಾರೂ ಕಟ್ಟಡ ಕಟ್ಟಬಾರದು. ಶಾಸಕರು ಕೂಡ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಶವವನ್ನು ಮೃತರ ಮನೆಗೆ ಕಳಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇವೆ ಎಂದರು.ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.