This is the title of the web page
This is the title of the web page

Please assign a menu to the primary menu location under menu

State

ಪ್ರತಿಭೆ, ಸಾಮರ್ಥ್ಯ ತೋರುವಲ್ಲಿ ಮಹಿಳೆಯೂ ಸಶಕ್ತ: ನ್ಯಾ.ಬಿ.ಎಸ್ ರೇಖಾ


ಕೊಪ್ಪಳ ಮಾರ್ಚ್ ೨೦: ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ತಮ್ಮ ಪ್ರತಿಭೆ, ಸಾಮರ್ಥ್ಯ ತೋರಿಸಲು ಸಶಕ್ತರಾಗಿದ್ದಾರೆ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಬಿ.ಎಸ್ ರೇಖಾ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ ೨೦ರಂದು ಜಿಲ್ಲಾಡಳಿತ ಭವನದ ಆಡಿಟೋಲಿಯಮ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸ್ತ್ರೀಶಕ್ತಿ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬದ ನಿರ್ವಹಣೆ, ಕಚೇರಿ ಕಾರ್ಯ, ಆಡಳಿತ ಎಲ್ಲದರಲ್ಲೂ ಮಹಿಳೆ ಸಮರ್ಥಳಾಗಿದ್ದಾಳೆ. ಪ್ರಸ್ತುತ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಮಹಿಳೆಯರ ಅಭ್ಯುದಯಕ್ಕಾಗಿ ಹಲವು ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ. ಮಹಿಳೆಯರಿಗಾಗಿ ಹಲವಾರು ಕಾನೂನುಗಳಿವೆ. ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಅವಶ್ಯಕತೆಯಿದ್ದು, ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಬೇಕು. ಇಂಟರ್‌ನೆಟ್ ಬಳಕೆ ಕುರಿತಂತೆ ಮಕ್ಕಳ ಮೇಲೆ ತೀವ್ರ ನಿಗಾವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರು ಮಾತನಾಡಿ, ಮಹಿಳೆಯರು ಬಿಡುವಿನ ವೇಳೆ ಧಾರಾವಹಿಗಳನ್ನು ನೋಡುವ ಬದಲಿಗೆ ಯೋಗದಂತಹ ಆರೋಗ್ಯಕರ ಚಟುವಟಿಕೆಯಲ್ಲಿ ಸಕ್ರಿಯಾವಾಗಬೇಕು. ಮಕ್ಕಳಿಗೆ ಕವನಗಳು, ಕಾದಂಬರಿ ಹಾಗೂ ಇತರೆ ಉಪಯೋಗಕಾರಿ ಪುಸ್ತಕಗಳ ಬಗ್ಗೆ ಬೋಧನೆ ಮಾಡಬೇಕು. ಮಹಿಳಾ ದಿನಾಚರಣೆಯನ್ನು ಒಂದು ದಿನಕ್ಕೆ ಸಿಮೀತಗೊಳಿಸದೆ ಪ್ರತಿನಿತ್ಯ ಮಹಿಳಾ ದಿನಾಚರಣೆ ಆಚರಿಸುವಂತಾಗಬೇಕು ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಮಾತನಾಡಿ, ಮಹಿಳೆಯರು ತಾಯಿ, ಅಕ್ಕ, ತಂಗಿ, ಮಗಳು, ಮಡದಿಯಾಗಿ ಪುರುಷರ ಜೀವನದ ಪ್ರತಿ ಹಂತದಲ್ಲೂ ಮುಖ್ಯವಾದ ಪಾತ್ರ ವಹಿಸುತ್ತಾರೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದೆ ಇದ್ದು, ಯಾವುದೇ ಬಗೆಯ ಕೀಳರಿಮೆ ಬೇಡ. ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ವಿಚಾರಗಳನ್ನು ತಿಳಿಸಿ, ಅವರನ್ನು ಒಳ್ಳೆಯ ನಾಗರಿಕರನ್ನಾಗಿಸುವುದರ ಜೊತೆಗೆ ವ್ಯಕ್ತಿಗತವಾಗಿಯೂ ಬೆಳೆದು ದೇಶಕ್ಕೆ ಮಹತ್ತರ ಕೊಡುಗೆ ನೀಡಬೇಕು ಎಂದರು.
ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್ ಅವರು ಮಾತನಾಡಿ, ಮಹಿಳೆಯರಿಗೆ ಪ್ರತಿ ವಿಷಯದಲ್ಲೂ ಕಾನೂನು ನೆರವು ಪಡೆಯುವ ಅವಕಾಶವಿದೆ. ಮಹಿಳೆಯರು ತಮ್ಮ ಹಕ್ಕುಗಳು, ರಕ್ಷಣೆಯ ಕಾನೂನುಗಳ ಬಗ್ಗೆ ಅರಿತುಕೊಳ್ಳಬೇಕು. ಹೆಣ್ಣು ಮಕ್ಕಳನ್ನು ಬಾಲ್ಯ ವಿವಾಹಕ್ಕೆ ಒಳಪಡಿಸುವುದರಿಂದ ಅವರ ಬದುಕುವ ಹಕ್ಕನ್ನು ಕಿತ್ತುಕೊಂಡಂತಾಗುತ್ತದೆ. ಈ ಬಗ್ಗೆ ಜಾಗೃತಿ ಅತ್ಯವಶ್ಯಕವಾಗಿದ್ದು, ಎಲ್ಲಾ ಅಂಗನವಾಡಿ ಕೇಂದ್ರಗಳ ಮೂಲಕ ಅರಿವು ಮೂಡಿಸಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ತಡೆ, ಕಾನೂನು ಪರಿಹಾರಗಳ ಬಗ್ಗೆ ತಿಳುವಳಿಕೆ ಹಾಗೂ ಅಗತ್ಯ ಸಂದರ್ಭಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸಹಾಯವನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಹೇಳಿದರು.
ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ.ವಿ ಕಣವಿ ಅವರು ಮಾತನಾಡಿ, ರಾಮಾಯಣ, ಮಹಾಭಾರತದಿಂದ ಇಲ್ಲಿಯವರೆಗೆ ನಮ್ಮ ದೇಶದಲ್ಲಿ ಮಹಿಳೆಯರಿಗೆ ಗೌರವಯುತ ಸ್ಥಾನಮಾನವಿದೆ. ಮಹಿಳೆಯರನ್ನು ವಿದ್ಯಾವಂತರನ್ನಾಗಿ ಮಾಡುವುದರಿಂದ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಮಹಿಳೆಯರು ಸಂಸ್ಕೃತಿ ಹಾಗೂ ಸಂಸ್ಕಾರ ಕಲಿಸುತ್ತಾರೆ. ಇತ್ತೀಚೆಗೆ ಸರ್ದಾರ ವಲ್ಲಭಬಾಯ ಅಕಾಡೆಮಿಯಿಂದ ೫೦ಕ್ಕೂ ಅಧಿಕ ಮಹಿಳೆಯರು ಐಪಿಎಸ್ ಆಗಿ ಹೊರ ಹೊಮ್ಮಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು.
ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಪದ್ಮಾವತಿ ಜಿ., ಜಿಲ್ಲಾ ನಿರೂಪಣಾಧಿಕಾರಿಗಳಾದ ಗಂಗಪ್ಪ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳಾದ ಕೃಷ್ಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸಿಂಧು ಯಲಿಗಾರ ಹಾಗೂ ಜಯಶ್ರೀ ಆರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸನ್ಮಾನ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಉತ್ತಮ ಸೇವೆ ಸಲ್ಲಿಸಿದ ಕೊಪ್ಪಳ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸನ್ಮಾನಿಸಲಾಯಿತು.
ಗಮನ ಸೆಳೆದ ಆಹಾರ ಪದಾರ್ಥಗಳ ಪ್ರದರ್ಶನ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸ್ತ್ರೀಶಕ್ತಿ ಸಮಾವೇಶ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿವಿಧ ಅಂಗನವಾಡಿ ಕೇಂದ್ರಗಳಿಂದ ಆಹಾರ ಪದಾರ್ಥಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತು ಇದರಲ್ಲಿ ಕಾಮಕಸ್ತೂರಿ ಪಾನಕ, ಬೆವು ಬೆಲ್ಲ, ಮೆಂತೆ ಕಡಬು, ನವಣಿ ಉಂಡೆ, ಸಿರಿಧಾನ್ಯ ನವಣಿಯಿಂದ ತಯಾರಿಸಿದ ಖಾದ್ಯ, ನವಣಿ ಹೊಳಿಗೆ, ಕೋಸಂಬರಿ, ಗೋಧಿ ಕಡ್ಲೆ ಅಳ್ಳಿಟ್ಟು, ಹೆಸರು ಬೆಳೆ ಕೋಸಂಬರಿ, ಶೇಂಗಾ ಚಕ್ಕಿ ಸೇರಿದಂತೆ ವಿವಿಧ ಆಹರ ಪದಾರರ್ಥಗಳು ಎಲ್ಲರ ಗಮನ ಸೆಳೆದವು.


Leave a Reply