ಬೆಳಗಾವಿ: ಮಟಕಾ ಪ್ರಕರಣ ದಾಖಲಿಸುವುದಾಗಿ ಹೆದರಿಸಿ ಲಂಚ ಪಡೆಯುತ್ತಿದ್ದ ಇಬ್ಬರು ಕಾನಸ್ಟೆಬಲ್ ಗಳು ಇಂದು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಖಾನಾಪೂರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ನಡೆದಿದೆ.
ಸಿದ್ಧು ಮೊಕಾಶಿ ಮತ್ತು ವಿಠ್ಠಲ ಚಿಪ್ಪಲಕಟ್ಟಿ ಎನ್ನು ಪೊಲೀಸ ಪೆದೆಗಳು ರೂ. 15,000 ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದರು.
ಕಳೆದ ಶುಕ್ರವಾರ ಕೆಲಸಕ್ಕೆಂದು ಖಾನಾಪೂರಕ್ಕೆ ಹೋಗಿದ್ದ ಬೆಳಗಾವಿಯ ಪರಶುರಾಮ ಗಾಡಿವಡ್ಡರ ಮೇಲೆ ಮಟಕಾ ಪ್ರಕರಣ ದಾಖಲಿಸುವುದಾಗಿ ಇಬ್ಬರೂ ಕಾನಸ್ಟೆಬಲ್ ಗಳು ಹೆದರಿಸಿದ್ದರು. ಪ್ರಕರಣ ದಾಖಲಿಸದೆ ಇರಲು ರೂ.50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ರೂ.15,000 ಕ್ಕೆ ವ್ಯವಹಾರ ಕುದುರಿಸಿದ್ದರು.
ಲಂಚ ಕೇಳಿದ್ದಕ್ಕೆ ಸಂಬಂಧಪಟ್ಟಂತೆ ಪರಶುರಾಮ ಗಾಡಿವಡ್ಡರ ಸೋಮವಾರ ಎಸಿಬಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿ ಕಾರ್ಯಾಚರಣೆ ನಡೆಸಿರುವ ಎಸಿಬಿ ಅಧಿಕಾರಿಗಳು, ಲಂಚ ಪಡೆಯುವಾಗ ದಾಳಿ ನಡೆಸಿ ಇಬ್ಬರೂ ಕಾನಸ್ಟೆಬಲ್ ಗಳನ್ನು ಇಂದು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.