This is the title of the web page
This is the title of the web page

Please assign a menu to the primary menu location under menu

State

ಸಚಿವ ಆನಂದ್ ಸಿಂಗ್, ಮಗ, ಸಂಬಂದಿಕರಿಂದ ಸಂಡೂರಿನ ಕುಮಾರಸ್ವಾಮಿ ದೇಗುಲಕ್ಕೆ ಸೇರಿದ 180 ಎಕರೆ ಇನಾಮ ಜಮೀನು ಕಬಳಿಕೆ ಆರೋಪ


ಹೊಸಪೇಟೆ:(ವಿಜಯನಗರ): ಸಂಡೂರಿನ ಎಮ್ಮಿಹಟ್ಟಿ ಗ್ರಾಮದಲ್ಲಿ ಕುಮಾರಸ್ವಾಮಿ ದೇವಾಲಯಕ್ಕೆ ಸೇರಿದ 180 ಎಕರೆ ಇನಾಮ ಜಮೀನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಮಗ ಸಿದ್ಧಾರ್ಥ್ ಸಿಂಗ್ ಠಾಕೂರ್, ಬಾಮೈದ ಧರ್ಮೇಂದ್ರ ಸಿಂಗ್, ಮಾವ ಅಬ್ದುಲ್ ರಹೀಮ್ ಮತ್ತು ಇತರೆ ಎಂಟು ಜನರ ಹೆಸರಲ್ಲಿ ಸಚಿವರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂಬ ಗಂಭೀರ ಸ್ವರೂಪದ ಆರೋಪ ಕೇಳಿ ಬಂದಿದೆ.
ನಗರಸಭೆ ಪಕ್ಷೇತರ ಸದಸ್ಯ ಅಬ್ದುಲ್ ಖದೀರ್, ಕರ್ನಾಟಕ ರಕ್ಷಣಾ ವೇದಿಕೆ ಪ್ರಜಾಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್.ಕುಮಾರಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಪಾದಸ್ವಾಮಿ,ಡಿ. ಪೋಲಪ್ಪ, ಧರ್ಮ ನಾಯ್ಕ್, ವಿ. ಚಿದಾನಂದಪ್ಪ, ಖಾಜಾ ಮೋಹಿನುದ್ದೀನ್ ಅವರು ನಗರದಲ್ಲಿ ಬಾನುವಾರ ಮಾ.19ರಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಇದು ನೇರಾನೇರ ಭೂ ಕಬಳಿಕೆ ಪ್ರಕರಣ. ಇದಕ್ಕೆ ನೆರವಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.180 ಎಕರೆಯಲ್ಲಿ 34.46 ಎಕರೆ ಖರಾಬು ಜಮೀನಿದೆ. ಖರಾಬು, ಹಳ್ಳದ ಜಮೀನು ಯಾವುದೇ ಕಾರಣಕ್ಕೂ ಯಾವುದೇ ವ್ಯಕ್ತಿಯ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ, ಕಾನೂನು ಮೀರಿ ಸಚಿವರ ಮಗ, ಸಂಬಂಧಿಕರು ಮತ್ತು ಸಚಿವರು ಇತರೆ ಎಂಟು ಜನರ ಹೆಸರಿನಲ್ಲಿ 2020-21ರಲ್ಲಿ ತಮ್ಮ ಹೆಸರಿಗೆ ಬೇನಾಮಿ ಆಸ್ತಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಜಮೀನು ಕೃಷಿಯೇತರ ಜಮೀನಾಗಿ ಕೂಡ ಪರಿವರ್ತಿಸಿಕೊಂಡಿದ್ದಾರೆ ಎಂದು ವಿವರಿಸಿದರು.
ಕುಮಾರಸ್ವಾಮಿ ದೇವಾಲಯದ ಹೆಸರಿನಲ್ಲಿ ಒಟ್ಟು 330 ಎಕರೆ ಇನಾಮ ಜಮೀನಿದೆ. ಈ ಪೈಕಿ 74 ಎಕರೆ ಜಮೀನು 1982ರಲ್ಲಿ ರಾಜರತ್ನಂ, ಶ್ರೀನಿವಾಸ್ ಸೇರಿದಂತೆ ಒಟ್ಟು ಆರು ಜನ ಸಹೋದರರಿಗೆ ಮಂಜೂರಾಗಿರುತ್ತದೆ. ಇನ್ನೂ ಹೆಚ್ಚಿನ ಜಮೀನು ಬೇಕೆಂದು ಇವರು ರಿಟ್ ಅರ್ಜಿ ಸಲ್ಲಿಸುತ್ತಾರೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು 1990ರಲ್ಲಿ ಹೈಕೋರ್ಟ್ ತಿಳಿಸುತ್ತದೆ. ಅನಂತರ ವಿಷಯ ನೆನೆಗುದಿಗೆ ಬೀಳುತ್ತದೆ. 2019ರಲ್ಲಿ ಅರಣ್ಯ ಸಚಿವರಾಗಿದ್ದ ಆನಂದ್ ಸಿಂಗ್ ಅವರು, ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗ ತಮ್ಮ ಪ್ರಭಾವ ಬಳಸಿಕೊಂಡು, ರಾಜರತ್ನಂ, ಶ್ರೀನಿವಾಸ್ ಹಾಗೂ ಸಹೋದರರ ಮೂಲಕ ಜಮೀನು ಮಾರಾಟಕ್ಕೆ ಅರ್ಜಿ ಹಾಕಿಸುತ್ತಾರೆ. ಅಂದಿನ ಸಂಡೂರು ತಹಶೀಲ್ದಾರ್ ರಶ್ಮಿ ಅವರು ತಪ್ಪು ವರದಿ ಕೊಟ್ಟು ಮಾರಾಟಕ್ಕೆ ಅವಕಾಶ ಕಲ್ಪಿಸುತ್ತಾರೆ. ಇದರ ವಿರುದ್ಧ ಬಳ್ಳಾರಿ ಜಿಲ್ಲಾಧಿಕಾರಿಗೆ ದೂರು ಕೊಟ್ಟ ನಂತರ ಅವರು ಅದನ್ನು ತಡೆಹಿಡಿದಿದ್ದರು ಎಂದು ತಿಳಿಸಿದರು.
ಚುನಾವಣೆ ಮುಗಿದ ನಂತರ ರಶ್ಮಿ ಅವರು ಪುನಃ ಸಂಡೂರು ತಹಶೀಲ್ದಾರ್ ಆಗಿ ನೇಮಕಗೊಳ್ಳುತ್ತಾರೆ. ಈ ಸಂಧರ್ಭದಲ್ಲಿ ಉಪ ನೋಂದಣಾಧಿಕಾರಿಯಾಗಿದ್ದ ಜಯಪದ್ಮಾ, ಪ್ರಭಾರ ಕಂದಾಯ ನಿರೀಕ್ಷಕ ಕುಮಾರ್ ನಾಯಕ ಮತ್ತು ಗ್ರಾಮ ಲೆಕ್ಕಾಧಿಕಾರಿ ವೀಣಾ ಅವರು ತಪ್ಪು ವರದಿ ಕೊಟ್ಟು ರಾಜರತ್ನಂ ಮತ್ತು ಶ್ರೀನಿವಾಸ್ ಅವರಿಗೆ ಕಂಪ್ಯೂಟರ್ ಪಹಣಿ ಮಾಡಿಸಿಕೊಳ್ಳಲು ನೆರವಾಗುತ್ತಾರೆ. ಅದನ್ನು ಆಧರಿಸಿ ಸಿದ್ಧಾರ್ಥ್ ಸಿಂಗ್, ಧರ್ಮೇಂದ್ರ ಸಿಂಗ್ ಸೇರಿದಂತೆ ಇತರೆ ಒಂಬತ್ತು ಜನರಿಗೆ ಒಟ್ಟಿಗೆ ನೋಂದಣಿ ಮಾಡಿಸಿಕೊಳ್ಳಲು ಅನುವು ಮಾಡಿಕೊಡುತ್ತಾರೆ. ಇದರ ವಿರುದ್ಧ ತಕರಾರು ಅರ್ಜಿ ಸಲ್ಲಿಸಿದರೂ ಅದನ್ನು ಪರಿಗಣಿಸದೆ ಪ್ರಭಾವಿಗಳಿಗೆ ಅನುಕೂಲ ಮಾಡಿಕೊಡುತ್ತಾರೆ ಎಂದು ಆರೋಪಿಸಿದರು.
ಹಾಲಿ ಜಾಗದಲ್ಲಿ ನೂರಾರು ಗಂಧದ ಮರಗಳಿವೆ. ಕೋಟ್ಯಂತರ ರೂಪಾಯಿ ಬೆಲೆಬಾಳುತ್ತವೆ, ಮರಗಳನ್ನು ತೆಗೆಯಲು ಪ್ರಯತ್ನಿಸಲಾಗಿತ್ತು ಆದರೆ ಈ ಕುರಿತು ಅರಣ್ಯ ಇಲಾಖೆಯವರಿಗೆ ದೂರು ಕೊಟ್ಟ ನಂತರ ಕೈಬಿಟ್ಟಿದ್ದರು. ನೂರಾರು ರೈತರು ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ಪಟ್ಟಾ ಕೊಡುತ್ತಿಲ್ಲ. ಸಚಿವರ ಒತ್ತಡಕ್ಕೆ ಮಣಿದು ಅವರ ಮಗ, ಸಂಬಂಧಿಕರ ಹೆಸರಿಗೆ ಮಾಡಿಕೊಟ್ಟಿದ್ದು ಸರಿಯೇ? ಸರ್ಕಾರ ಕೂಡಲೇ ಜಮೀನು ತನ್ನ ವಶಕ್ಕೆ ಪಡೆಯಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹೊಸಪೇಟೆ ನಗರದ ಸುತ್ತಮುತ್ತ ಕೂಡ ಸಾಕಷ್ಟು ಭೂ ಕಬಳಿಕೆ ನಡೆದಿದೆ. ಇಷ್ಟರಲ್ಲೇ ಅದರ ದಾಖಲೆಗಳನ್ನು ಸಹ ಬಿಡುಗಡೆಗೊಳಿಸಲಾಗುವುದು. ನ್ಯಾಯ ಸಿಗುವವರೆಗೂ ನಿರಂತರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಲೋಕಾಯುಕ್ತಕ್ಕೆ ದೂರು;-
“ಸರ್ಕಾರಕ್ಕೆ ಸೇರಿದ 180 ಎಕರೆ ಇನಾಮ ಜಮೀನು ಸಚಿವರ ಮಗ, ಸಂಬಂಧಿಕರ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಳ್ಳಲು ನೆರವಾದ ಅಂದಿನ ತಹಶೀಲ್ದಾರ್ ರಶ್ಮಿ, ಉಪನೋಂದಾಣಾಧಿಕಾರಿ ಜಯಪದ್ಮಾ, ಪ್ರಭಾರ ಕಂದಾಯ ನಿರೀಕ್ಷಕ ಕುಮಾರ್ ನಾಯಕ ಮತ್ತು ಗ್ರಾಮ ಲೆಕ್ಕಾಧಿಕಾರಿ ವೀಣಾ ವಿರುದ್ಧ ಲೋಕಾಯುಕ್ತಕ್ಕೆ ಮಾ.10ರಂದು ದೂರು ಸಲ್ಲಿಸಲಾಗಿದೆ. ಇನಾಮ ಜಮೀನು ಕೊಡಬೇಕಾದರೆ ಟ್ರಿಬ್ಯುನಲ್ ನಲ್ಲಿ ಅಂತಿಮವಾಗಬೇಕು. ಆದರೆ ಅದ್ಯಾವುದು ಆಗದೆ ರಾಜರತ್ನಂ, ಶ್ರೀನಿವಾಸ್ ಎಂಬುವರ ಹೆಸರಿಗೆ ಮಾಡಿಕೊಳ್ಳಲು ಮತ್ತು ಅವರು ಪ್ರಭಾವಿಗಳಿಗೆ ಮಾರಾಟ ಮಾಡಲು ನೆರವಾಗಿದ್ದು ಸರಿಯಲ್ಲ” ಎಂದು ನಗರಸಭೆ ಸದಸ್ಯ ಅಬ್ದುಲ್ ಖದೀರ್ ತಿಳಿಸಿದರು
ಯಾರ ಹೆಸರಿಗೆ ಎಷ್ಟು ಜಮೀನು ನೋಂದಣಿ;-
◆ಸಿದ್ಧಾರ್ಥ್ ಸಿಂಗ್ ಠಾಕೂರ್ 13 ಎಕರೆ
◆ಧರ್ಮೇಂದ್ರ ಸಿಂಗ್ 22.19 ಎಕರೆ
◆ಅಬ್ದುಲ್ ರಹೀಮ್ 22.75 ಎಕರೆ
◆ಸಿ.ಕುಮಾರಸ್ವಾಮಿ ಶೆಟ್ಟಿ 22.75 ಎಕರೆ
◆ಪಿ.ನಾಗರಾಜ್ 22.75 ಎಕರೆ
◆ಎನ್.ಶ್ರೀನಿವಾಸ್ 14.76 ಎಕರೆ
◆ಮೆಟಲ್ ಡಾ 16 ಎಕರೆ
◆ಪಿ. ಬಸವನಗೌಡ 16.96 ಎಕರೆ
◆ಎಂ. ಸುಧೀರ್ ಕುಮಾರ್ 13.45 ಎಕರೆ
◆ಸೂರ್ಯತೇಜ್ ವಿ.15.24 ಎಕರೆ
ಬೇಗ ವರದಿ ಕೊಡುವಂತೆ ತಿಳಿಸಿದ್ದಕ್ಕೆ ಡಿಸಿ ವರ್ಗಾವಣೆ ;-
ಸಚಿವರು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ ಪ್ರಕರಣದ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ. ನ್ಯಾಯ ಸಿಗುವವರೆಗೆ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುವುದು ಭೂ ಒತ್ತುವರಿಗೆ ಸಂಬಂಧಿಸಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಈ ಹಿಂದೆಯೇ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿತ್ತು ಅದರ ವರದಿ ಬೇಗ ಸಲ್ಲಿಸುವಂತೆ ಸೂಚಿಸಿದ್ದರಿಂದ ಹಿಂದಿನ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ.ಪಿ ಅವರನ್ನು ವಿಜಯನಗರ ಜಿಲ್ಲೆಯಿಂದ ಬೇರೆಡೆ ವರ್ಗಾವಣೆ ಮಾಡಲಾಯಿತು ಎಂದು ಅಬ್ದುಲ್ ಖದೀರ್ ಆರೋಪಿಸಿದರು

Leave a Reply