This is the title of the web page
This is the title of the web page

Please assign a menu to the primary menu location under menu

Local News

ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಮಾರ್ಗದರ್ಶನ ಅಗತ್ಯ : ಚಿತ್ರನಟ ಚರಣರಾಜ


ಬೆಳಗಾವಿ.ಜ.೧೮: ವಿದ್ಯಾರ್ಥಿಗಳ ಉತ್ತಮ ಜೀವನ ಮತ್ತು ಉತ್ತಮ ನಾಗರಿಕರಾಗಬೇಕಾದರೆ ಅವರಿಗೆ ಶಿಕ್ಷಕರ ಮಾರ್ಗದರ್ಶನ ಅಗತ್ಯವಾಗಿದೆ ಎಂದು ಕನ್ನಡದ ಖ್ಯಾತ ಚಲನಚಿತ್ರ ನಟ ಚರಣರಾಜ ಅವರು ಅಭಿಪ್ರಾಯಪಟ್ಟರು.
ಮಂಗಳವಾರ ಸಾಯಂಕಾಲ ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಯ ಡಿ.ವಾಯ್.ಚೌಗುಲೆ ಭರತೇಶ ಪ್ರೌಢಶಾಲೆಯ ವಜ್ರಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆತರೆ ಅವರು ಉತ್ತಮ ನಾಗರಿಕರಾಗಬಲ್ಲರು. ವಿದ್ಯೆ ಕಲಿಸಿದ ಶಿಕ್ಷಕರನ್ನು ಸದಾ ನೆನಪಿಸಿಕೊಳ್ಳಬೇಕು. ಜೀವನದಲ್ಲಿ ಯಾವುದು ಕೆಟ್ಟದ್ದಾಗಿದೆ ಯಾವುದು ಒಳ್ಳೆಯದು , ಸಮಾಜದಲ್ಲಿ ಹೇಗೆ ವರ್ತಿಸಬೇಕು ಯಾವ ರೀತಿ ವ್ಯವಹರಿಸಬೇಕು ಎಂಬುದನ್ನು ಶಿಕ್ಷಕರು ಹೇಳಿ ಕೊಡುತ್ತಾರೆ. ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯವಾಗಿದೆ ಎಂದು ಅವರು ಹೇಳಿದರು.
ನಾನು ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪೂರೈಸಿದ್ದು, ಈ ಶಾಲೆಯ ಶಿಕ್ಷಕರನ್ನು ಮತ್ತು ನನ್ನ ಸಹಪಾಠಿಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ . ಇದೀಗ ಈ ಶಿಕ್ಷಣ ಸಂಸ್ಥೆಯು ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಈ ಸಂಸ್ಥೆಯ ಬೆಳವಣಿಗೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಭರತೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಜಿನದತ್ತ ದೇಸಾಯಿ ಅವರು ಮಾತನಾಡಿ, ಭರತೇಶ ಸಂಸ್ಥೆಯ ಡಿ.ವಾಯ್. ಚೌಗುಲೆ ಭರತೇಶ ಪ್ರೌಢಶಾಲೆಯು ಹೆಮ್ಮೆಯ ಶಾಲೆಯಾಗಿದೆ. ಈ ಶಾಲೆಯಲ್ಲಿ ಇಂದಿನವರೆಗೆ ಸುಮಾರು ೭ ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಅವರಲ್ಲಿ ಕೆಲವರು ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಕೆಲವರು ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ರೀತಿ ಭರತೇಶ ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಲ್ಲಿ ತಮ್ಮದೇ ಆದ ಸೇವೆಯನ್ನು ನೀಡುತ್ತಿದ್ದು, ಈ ವಿದ್ಯಾರ್ಥಿಗಳ ಸೇವಾ ಮನೋಭಾವ ಸಂಸ್ಥೆಗೆ ಹೆಮ್ಮೆ ತರುವಂತಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು ಮತ್ತು ದಾನಿಗಳಾದ ವೃಷಭ ದೊಡ್ಡಣ್ಣವರ, ಸುರೇಂದ್ರ ಕೊಡಚವಾಡ ಹಾಗೂ ಸಂಸ್ಥೆಗೆ ಅನುಪಮ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರಾದ ಗೋಪಾಲ ಜಿನಗೌಡ ಮತ್ತು ಪುಷ್ಪದಂತ ದೊಡ್ಡಣ್ಣವರ ಇವರನ್ನು ಸತ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ೧೯೬೨ ರಿಂದಿಚೆಗೆ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಎಲ್ಲಾ ಸಿಬ್ಬಂದಿಯವರಿಗೆ ಸೇವೆಯನ್ನು ಸ್ಮರಿಸಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದ ವೇದಿಕೆ ಮೇಲೆ ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜೀವ ದೊಡ್ಡಣ್ಣವರ, ಕಾರ್ಯದರ್ಶಿ ಶ್ರೀಪಾಲ ಖೆಮಲಾಪುರೆ, ಖಜಾಂಚಿ ಭೂಷಣ ಮಿರ್ಜಿ, ಸಹ ಕಾರ್ಯದರ್ಶಿ ಪ್ರಕಾಶ ಉಪಾಧ್ಯೆ, ಆಡಳಿತ ಮಂಡಳಿಯ ಸದಸ್ಯರಾದ ವಿನೋದ ದೊಡ್ಡಣ್ಣವರ, ಭರತ ಪಾಟೀಲ. ದೇವೇಂದ್ರ ದೇಸಾಯಿ, ಶರದ ಪಾಟೀಲ, ಅಶೋಕ ದಾನವಾಡೆ, ಹೀರಾಚಂದ ಕಲಮನಿ, ಡಾ, ಸಾವಿತ್ರಿ ದೊಡ್ಡಣ್ಣವರ ವಸಂತ ಕೊಡಚವಾಡ ಸೇರದಂತೆ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕರಾದ ಎಸ್.ಎನ್.ಅಕ್ಕಿ ಅತಿಥಿಗಳನ್ನು ಸ್ವಾಗತಿಸಿದರು. ವಿಜಯ ಹಣ್ಣೀಕೇರಿ ಕಾರ್ಯಕ್ರಮ ನಿರೂಪಿಸಿದರು. ಸಂಜಯ ಬಿರ್ಜೆ ವಂದಿಸಿದರು. ಕಾರ್ಯಕ್ರಮದಲ್ಲಿ ಸಾವಿರಾರು ಮಾಜಿ ವಿದ್ಯಾರ್ಥಿಗಳು ಆಡಳಿತ ಮಂಡಳಿ ಮತ್ತು ಪಾಲಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಕಾರ್ಯಕ್ರಮ ಸಮಾರೋಪಗೊಂಡಿತು.


Gadi Kannadiga

Leave a Reply