ಬಾಗಲಕೋಟೆ: ಕುವೆಂಪು ಅವರ ವೈಚಾರಿಕತೆ ಮತ್ತು ನಿದರ್ಶನಗಳನ್ನು ಮೈಗೂಡಿಸೊಕೊಂಡರೆ ಮಾತ್ರ ನವೋದಯ ಸಾಹಿತ್ಯ ಬೆಳೆಯಲು ಸಾಧ್ಯ. ಕನ್ನಡಕ್ಕಾಗಿ ದುಡಿದ ರಾಷ್ಟ್ರಕವಿ ವಿಚಾರಗಳನ್ನು ಪ್ರತಿಯೊಬ್ಬರಲ್ಲಿ ಶಾಶ್ವತಗೊಳಿಸುವ ಕೆಲಸ ಮಾಡಬೇಕಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಡಾ. ಬಿ.ವಿ ವಸಂತಕುಮಾರ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಾಹಾವಿದ್ಯಾಲಯದ ಸಭಾಭವನದಲ್ಲಿ ಗುರುವಾರ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳ್ಳಿ, ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೀಳಗಿ, ಗುಳೆದಗುಡ್ಡ ತಾಲ್ಲೂಕು ಸಾಹಿತ್ಯ ಪರಿಷತ್ತುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಸಾಹಿತ್ಯಾಧ್ಯಯನ ಕಮ್ಮಟ ಕಾರ್ಯಕ್ರಮವನ್ನು ಸಸಿಗೆ ನೀರೆರಿಯುವುದರ ಮೂಲಕ ಉದ್ಘಾಟಿಸಿ ಮತ್ತು ಡಾ. ಗುರುಪಾದ ಮರಿಗುದ್ದಿ ವಿರಚಿತ ಮಂಗರಸ ಕವಿ ಸೂಪಶಾಸ್ತ್ರ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಪ್ರಾದ್ಯಾಪಕರಲ್ಲಿ ಕುವೆಂಪು ಚಿಗುರೊಡೆದರೆ ಸಾಹಿತ್ಯಾಧ್ಯಯನ ಕುಮ್ಮಟ ಯಶಸ್ವಿಯಾಗುತ್ತದೆ. ಕುವೆಂಪು ಪ್ರತಿಷ್ಟಾನ ಸಜ್ಜನಿಕೆಯ, ಸಾಂಸ್ಕೃತಿಕ ಕೇಂದ್ರವಾಗಿದ್ದು ರಾಷ್ಟ್ರಕವಿಯನ್ನು ಶಾಶ್ವತಗೊಳಿಸುವ ಕೆಲಸ ಮಾಡುತ್ತಿದೆ ಎಂದರು.
ಪಂಪ, ಬಸವಣ್ಣ, ಕುಮಾರವ್ಯಾಸ, ಕನಕದಾಸರಂತ ಕವಿಗಳು ಕನ್ನಡ ಸಾಹಿತ್ಯದ ಬೇರುಗಳಿದ್ದಂತೆ ಅವರ ಸಾಲಿನಲ್ಲಿ ಕುವೆಂಪು ಕೂಡ ಒಬ್ಬರು. ಅವರ ವಿಚಾರಗಳನ್ನು ಉಳಿಸಿಕೊಂಡರೆ ಮಾತ್ರ ನವೋದಯ ಶಾಸ್ತ್ರಪ್ರಜ್ಞೆ ಬೆಳೆಯಲು ಸಾಧ್ಯ. ಕುವೆಂಪುರವರ ದಾರ್ಶನಿಕತೆ, ವೈಚಾರಿಕತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಅವುಗಳನ್ನು ಅಧ್ಯಯನ ಮಾಡಿ ಅರ್ಥೈಸಿಕೊಳ್ಳಬೇಕಿದೆ. ಮೂಡ ನಂಬಿಕೆ ಮತ್ತು ನಾಸ್ತಿಕತೆಯ ಬೆನ್ನು ಬೀಳದೆ ಚೈತನ್ಯದ ಚಿಲುಮೆಯಾಗಿ, ಶಿವ ಪ್ರಜ್ಞೆಯ ಮೂಲಕ ತಮ್ಮ ಪುಸ್ತಕಗಳಿಂದ ಜಗತ್ತಿನ ಜಡ್ಡು ತೊಳೆಯುವ ಕೆಲಸ ಮಾಡಿದ್ದಾರೆ ಎಂದರು.
ವೇದಿಕೆಯಲ್ಲಿ ಅಧ್ಯಕ್ಷತೆ ಸ್ಥಾನ ವಹಿಸಿದ ಬಿವಿವಿ ಸಂಘದ ವೈದ್ಯಕೀಯ ಆಡಳಿತ ಅಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಅವರು ಮಾತನಾಡಿ ವರಕವಿ ದರಾ ಬೇಂದ್ರೆ ಅವರು ಹೇಳಿದ ಯುಗದ ಕವಿಗೆ, ಜಗದ ಕವಿಗೆ, ಶ್ರೀರಾಮಾಯಣ ದರ್ಶನಂದಿಂದಲೇ ಕೈ ಮುಗಿದ ಕವಿಗೆ ಮನಿಯದವರಾರು ಎಂಬ ಮಾತಿನಂತೆಯೇ ಕುವೆಂಪು ಇವತ್ತಿಗೂ ಕೂಡ ಪ್ರಸ್ತುತವಾಗಿ ಉಳಿದಿದ್ದಾರೆ. ಸರಕಾರ ಮತ್ತು ಕುವೆಂಪು ಪ್ರತಿಷ್ಠಾನವು ಅತ್ಯಂತ ಯಶಸ್ವಿಯಾಗಿ ಕೆವೆಂಪು ಉಳಿವಿಗೆ ಕಾರ್ಯನಿರ್ವಹಿಸುತ್ತಿವೆ. ಕವಿಮನೆ ಬೇಟಿಗೆ ಇರುವ ಟಿಕೆಟ್ ಕೂಡ ಸಂಗ್ರಹಣೆಗೆ ಯೋಗ್ಯವಾಗಿರುವುದು ಒಂದು ವಿಶೇಷ. ಪ್ರತಿಷ್ಟಾನದ ವತಿಯಿಂದ ಕುವೆಂಪು ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಡಿ. 29ರಂದು ಬೇರೆ ಬೇರೆ ಭಾಷೆಗಳಲ್ಲಿ ಸಾಧನೆಗೈದ ಸಾಧಕರಿಗೆ ಐದು ಲಕ್ಷ ರೂ. ಮೌಲ್ಯದ ವಿಶ್ವಮಾನವ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ಹೆಮ್ಮಯ ಸಂಗತಿಯಾಗಿದೆ ಎಂದರು.
ಕುವೆಂಪು ಅವರು ಚಿಕ್ಕಂದಿನಿಂದಲೇ ಸ್ವಾಭಿಮಾನ ಮೈಗೂಡಿಸಿಕೊಂಡು ಬಂದವರು. ನಾಲ್ವಡಿ ಕೃಷ್ಣರಾಜ ವಡೆಯರ ಪುತ್ರನಿಗೆ ಮನೆ ಪಾಠ ಹೇಳಲು ಅರಮನೆಗೆ ಹೋಗುವುದನ್ನು ತಿರಸ್ಕರಿಸಿ ಅದಕ್ಕೊಂದು ನಿದರ್ಶರಾಗಿದ್ದರು. ನಿರಂಕುಶ ಪ್ರಭುತ್ವನ್ನು ವಿರೋಧಿಸುವ, ಹಾಸ್ಯಪ್ರಜ್ಞೆ ಮತ್ತು ತಾಯಿಮಮತೆಯ ಸ್ವರೂಪವಾಗಿದ್ದ ಕುವೆಂಪು ಅವರು ಜೀವಂತವಿರುವಾಗಲೇ ದಂತಕಥೆಯಾಗಿದ್ದರು ಎಂದರು.
ಕುಪ್ಪಳ್ಳಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ ಪ್ರಕಾಶ ಅವರುಬಮಾತನಾಡಿ ಕುವೆಂಪು ಸಾಹಿತ್ಯವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಗುರಿ ಇಟ್ಟಿಕೊಂಡು 30 ವರ್ಷಗಳಿಂದ ಪ್ರತಿಷ್ಟಾನ ಕಾರ್ಯನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳಲ್ಲಿ ಕುವೆಂಪು ಅವರನ್ನು ನಿರ್ಮಿಸುವ ಕೆಲಸವನ್ನು ಮಾಡುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. ಕುವೆಂಪು ನೆನಪಿಗಾಗಿ ಹಲವಾರು ಸ್ಮಾರಕಗಳು, ಕಟ್ಟಡಗಳ ಜೊತೆಗೆ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು ಕವಿಗಳ ಮನೆಗೆ ಪ್ರತಿವರ್ಷ ಒಂದು ಲಕ್ಷಕ್ಕೂ ಹೆಚ್ಚು ಜನ ಬೇಟಿ ನೀಡುತ್ತಿರುವುದು ಸಂತಸದ ಸಂಗತಿ ಎಂದರು.
ಕುವೆಂಪು ಸಾಹಿತ್ಯಾಧ್ಯಾಯನ ಕಮ್ಮಟದ ಭಾಗವಾಗಿ ಕುವೆಂಪು ಆಂಗ್ಲ ಕವಿತೆಗಳಲ್ಲಿ ಸಾಮಾಜಿಕತೆ ವಿಷಯದ ಕುರಿತು ಇಂಗ್ಲಿಷ್ ಪ್ರಾದ್ಯಾಪಕಿ ಡಾ.ಕವಿತಾ ಕುಸಗಲ್ ಉಪನ್ಯಾಸ ನೀಡಿದರೆ, ಸಾಹಿತಿ ಡಾ. ಗುರುಪಾದ ಕುಸಗಲ್ ಅವರು ವಿದ್ಯಾರ್ಥಿ ಸಮೂಹಕ್ಕೆ ಕುವೆಂಪು ಕರೆ, ಡಾ. ಸಜಾನಂದ ಕೆಂಗಲಗುತ್ತಿ ಮತ್ತು ಡಾ. ವೀಣಾ ಕಲ್ಮಠ ಅವರು ಕುವೆಂಪು ನಿವೇದನೆ ಕುರಿತು, ಕ.ಸಾ.ಅ ಅಧ್ಯಕ್ಷ ಡಾ. ಬಿ.ವಿ ವಸಂತಕುಮಾರ ಅವರು ಕುವೆಂಪು ಕಾವ್ಯದಲ್ಲಿ ಭಾರತೀಯತೆ ಎಂಬ ವಿಷಯದ ಮೇಲೆ ಮತ್ತು ಅಧ್ಯಾಪಕ ಡಾ. ವಿಜಯಶ್ರೀ ಇಟ್ಟಣ್ಣವರ ಅವರು ಕುವೆಂಪು ಕತೆಗಳಲ್ಲಿ ವೈಚಾರಿಕತೆ ಎಂಬ ವಿಷಯಗಳ ಮೇಲೆ ಉಪನ್ಯಾಸ ಮಂಡಿಸಿದರು.
ಕುವೆಂಪು ಸಾಹಿತ್ಯಾಧ್ಯಯನ ಕಮ್ಮಟ ಸಂಚಾಲಕ ಡಾ.ಗುರುಪ್ರಸಾದ ಮರಿಗುದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕುಪ್ಪಳ್ಳಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಖಜಾಂಚಿ ದೇವಂಗಿ ಮನುದೇವ, ಪ್ರಾಚಾರ್ಯ ಡಾ. ವಿ.ಎಸ್ ಕಟಗಿಹಳ್ಳಿಮಠ, ಬಾಗಲಕೋಟೆ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹಾಗೂ ಬಿ.ಎಚ್.ಆರ್.ಡಿ ನಿರ್ದೇಶಕ ಎಸ್.ಆರ್ ಮನಹಳ್ಳಿ ಸೇರಿದಂತೆ ಪ್ರಾಚಾರ್ಯರರು, ಪ್ರಾದ್ಯಾಪಕರು ಉಪಸ್ಥಿತರಿದ್ದರು.