This is the title of the web page
This is the title of the web page

Please assign a menu to the primary menu location under menu

State

ಜನಸಂಖ್ಯೆ ಸ್ಥಿರತೆಗೆ ಕುಟುಂಬ ಕಲ್ಯಾಣ ಯೋಜನೆ ಅಳವಡಿಸಿಕೊಳ್ಳಿ: ಡಾ.ಲಿಂಗರಾಜು


ಕೊಪ್ಪಳ ಜುಲೈ ೧೫ : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ನಗರ ಆರೋಗ್ಯ ಕೇಂದ್ರ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಜುಲೈ ೧೫ರಂದು ನಗರ ಆರೋಗ್ಯ ಕೇಂದ್ರದ ಆವರಣದಲ್ಲಿ ತಾಲೂಕು ಮಟ್ಟದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಜಾಗೃತಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಲಿಂಗರಾಜು ಟಿ ಅವರು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವದಲ್ಲಿ ಜನಸಂಖ್ಯೆಯು ಅತೀ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಕಾರಣ ಅಜ್ಞಾನ, ಮೂಢನಂಬಿಕೆ, ಅನಕ್ಷರತೆ, ಬಾಲ್ಯವಿವಾಹ, ಜನಿಸುವ ಮಕ್ಕಳ ಮಧ್ಯೆ ಅಂತರವಿಲ್ಲದಿರುವುದು,
ಗಂಡುಮಗುಬೆಕೇಂಬ ಹಂಬಲವು ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಜನಸಂಖ್ಯೆ ಸ್ಪೋಟದಿಂದಾಗಿ ದೇಶದ ಅಭಿವೃದ್ಧಿಯಿ ಕುಂಠಿತಗೊಳ್ಳುತ್ತಿದೆ ಎಂದರು. ಕುಟುಂಬದಲ್ಲಿ ಸಂತೋಷ ಸಮೃದ್ಧಿ ಜೀವನ ನಡೆಸಲು ಕುಟುಂಬ ಯೋಜನೆಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಸರ್ಕಾರ ನಿಗದಿಪಡಿಸಿದ ವಯಸ್ಸಿಗೆ ಪಾಲಕರು ಮದುವೆ ಮಾಡಬೇಕು. ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿಸುಲು ಅವರಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಹೆಣ್ಣು ಮಕ್ಕಳನ್ನು ರಕ್ಷಿಸಬೇಕು. ಜನಸಂಖ್ಯೆ ಸ್ಥಿರತೆಗಾಗಿ ಜಾಗೃತಿ ಅತ್ಯವಶ್ಯಕವಾಗಿದ್ದು, ತಾತ್ಕಾಲಿಕ ಕುಟುಂಬ ಕಲ್ಯಾಣ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ರವೀಂದ್ರನಾಥ್ ಎಂ.ಹೆಚ್ ಅವರು ಮಾತನಾಡಿ, ಪ್ರತಿ ವರ್ಷ ಜುಲೈ ೧೧ರಂದು ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮ ಆಚರಿಸಲಾಗುತ್ತದೆ. ಇದರ ಉದ್ದೇಶ ಸಾರ್ವಜನಿಕರಿಗೆ ಜನಸಂಖ್ಯೆ ಸ್ಥಿರತೆ ಬಗ್ಗೆ ಅರಿವು ಮೂಡಿಸುವುದಾಗಿದೆ. ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಎಂಬ ಗಾದೆ ಮಾತನ್ನು ಎಲ್ಲರೂ ಪಾಲಿಸಬೇಕು. ಅರ್ಹ ದಂಪತಿಯು ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ ೦೩ ವರ್ಷ ಅಂತರ ಕಾಪಾಡಲು ಕುಟುಂಬ ಕಲ್ಯಾಣ ಕಾರ್ಯಕ್ರಮದ ತಾತ್ಕಾಲಿಕ ಹೊಸ ಹೊಸ ವಿಧಾನಗಳನ್ನು ಬಳಸಬೇಕು. ಮಕ್ಕಳು ಸಾಕು ಎಂದಮೇಲೆ ಉದರ ದರ್ಶಕ ಶಸ್ತ್ರಚಿಕಿತ್ಸೆಗೊಳಗಾಗಬೇಕು. ಇದರಿಂದ ತಾಯಿ ಮಗು ಇಬ್ಬರೂ ಸುರಕ್ಷಿತವಾಗಿರಬಹುದು. ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡು, ಸಂತೋಷ ಮತ್ತು ಸಮೃದ್ದಿ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತೇವೆಂದು ಪ್ರತಿಜ್ಞೆಯನ್ನು ಈ ವೇಳೆ ಮಾಡೋಣ ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದು ಹೇಳಿದರು.
ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ರಾಮಾಂಜನೇಯ ಅವರು ಪ್ರಾಸ್ತಾವಿಕ ಮಾತನಾಡಿ, ಪ್ರಪಂಚದಲ್ಲಿ ಜನಸಂಖ್ಯೆ ಸ್ಪೋಟದಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಪ್ರಪಂಚದಲ್ಲಿಯೇ ಭಾರತ ಮೊದಲನೇ ಸ್ಥಾನ ಪಡೆದುಕೊಂಡಿದೆ. ಇದನ್ನು ನಿಯಂತ್ರಿಸಬೇಕಾದರೆ ಪ್ರತಿಯೊಬ್ಬರೂ ಕುಟುಂಬ ಕಲ್ಯಾಣ ಯೋಜನೆಯ ತಾತ್ಕಾಲಿಕ ಮತ್ತು ಶಾಶ್ವತ ವಿಧಾನಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಬಾಲ್ಯವಿವಾಹ ತಡೆಗಟ್ಟುವುದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು, ಮೂಢನಂಬಿಕೆಗಳಿಂದ ಹೊರಬರುವುದು, ಈ ನಿಯಮಗಳನ್ನು ಪಾಲಿಸಬೇಕು. ಎಲ್ಲಾ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸುರಕ್ಷಾಧಿಕಾರಿಗಳು ತಮ್ಮ ಕಾರ್ಯಕ್ಷೇತ್ರಗಳಲ್ಲಿ ಜನಸಂಖ್ಯೆ ನಿಯಂತ್ರಣದ ಸೂತ್ರದ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಪ್ರಕಾಶ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳಾದ ಡಾ.ಶಶಿಧರ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ನಂದಕುಮಾರ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ.ವೆಂಕಟೇಶ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳಾದ ಡಾ.ರಮೇಶ, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಗೀತಾ, ಡಾ.ಮಹೇಶ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ ವ್ಹಿ.ಪಿ., ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಗಂಗಮ್ಮ, ಹಿ.ಆ.ಪ್ರಾ.ಸುರಕ್ಷಾಧಿಕಾರಿಗಳಾದ ವಂದನಾ ಸೇರಿದಂತೆ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು, ಕಿಮ್ಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿವಿಧ ಕಚೇರಿಗಳ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗರ್ಭೀಣಿಯರು, ಬಾಣಂತಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Leave a Reply