This is the title of the web page
This is the title of the web page

Please assign a menu to the primary menu location under menu

State

ಜನರ ತೆರಿಗೆಯಿಂದ  ಶಿಕ್ಷಣ ಸಂಸ್ಥೆಗಳನ್ನು ನಡೆಸಿ ; ಅಜಯ್ ಕಾಮತ್


ಕೊಪ್ಪಳ ; ರಾಜ್ಯದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಜನರ ತೆರಿಗೆಯಿಂದ ನಡೆಸಬೇಕು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ರಾಜ್ಯ ಕಾರ್ಯದರ್ಶಿ ಅಜಿತ್ ಕಾಮತ್ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕರ್ನಾಟಕದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಕುಂದು ಕೊರತೆಗಳನ್ನು ನಿವಾರಿಸಲು ಕರ್ನಾಟಕ ರಾಜ್ಯ ಸರ್ಕಾರವು ಕಾರ್ಪೊರೇಟ್ ಕಂಪನಿಗಳಿಗೆ ಮನವಿ ಮಾಡಿರುವುದು ಮತ್ತು ಕೆಲವರು ಇದಕ್ಕೆ ಪ್ರತಿಕ್ರಿಯಿಸಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಬೆಳವಣಿಗೆಯನ್ನು ರಾಜ್ಯದ ಶಿಕ್ಷಣ ಪ್ರೇಮಿ ಜನತೆಯು ಕಳವಳದಿಂದ ಗಮನಿಸುತ್ತಿದ್ದಾರೆ.
ಖ್ಯಾತ ಉದ್ಯಮಪತಿಯೊಬ್ಬರ ಮುಂದೆ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಮಂಡಿಸಿರುವಂತೆ, ಉನ್ನತ ಶಿಕ್ಷಣ ಕ್ಷೇತ್ರಕ್ಕೆ 3,256 ಕೋಟಿ, ಸರ್ಕಾರಿ ಪದವಿ ಕಾಲೇಜುಗಳಿಗೆ 1,997 ಕೋಟಿ, ಸರ್ಕಾರಿ ಪಾಲಿಟೆಕ್ನಿಕ್‌ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳಿಗೆ 852 ಕೋಟಿ, ಕೌಶಲಾಭಿವೃದ್ಧಿ ಪ್ರಯೋಗಾಲಯಗಳಿಗೆ 386 ಕೋಟಿ, ಯೂನಿವರ್ಸಿಟಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿಗೆ 14 ಕೋಟಿ ಮತ್ತು ಡಾ.ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ 6 ಕೋಟಿ ನೆರವಿನ ಬೇಡಿಕೆಯನ್ನು ಇಟ್ಟಿದ್ದಾರೆ.
ಒಂದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಶಿಕ್ಷಣವನ್ನು ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಜನರಿಂದ ಹೇರಳವಾಗಿ ಸಂಗ್ರಹಿಸಲ್ಪಡುವ ತೆರಿಗೆ ದುಡ್ಡನ್ನು ಆದ್ಯತೆಯ ಮೇರೆಗೆ ಶಿಕ್ಷಣಕ್ಕೆ ವಿನಿಯೋಗಿಸಬೇಕು. ಶಾಲಾ ಕಟ್ಟಡ, ಶಿಕ್ಷಕರು ಸೇರಿದಂತೆ ಇತ್ಯಾದಿ ಮೂಲಸೌಕರ್ಯಗಳ ಪೂರೈಕೆ ಸಂಪೂರ್ಣವಾಗಿ ಸರ್ಕಾರದ ಜವಾಬ್ದಾರಿಯೇ ಆಗಿರಬೇಕು. ಕಾರ್ಪೊರೇಟ್ ಕಂಪನಿಗಳು ಸಹಾಯ ಒದಗಿಸುವರು ಎಂಬ ಪರದೆಯ ಹಿಂದೆ ಸರ್ಕಾರವು ಚಾಕಚಕ್ಯತೆಯಿಂದ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಇರಾದೆ ಇರಬಹುದೇ ಎಂಬುದು ವಿದ್ಯಾರ್ಥಿ ಸಮುದಾಯವನ್ನು ಕಾಡುತ್ತಿರುವ ಪ್ರಶ್ನೆ. ಇಂದು ಖಾಸಗಿ ಕಂಪನಿಗಳು ಹೇರಳವಾಗಿ ಆರ್ಥಿಕ ನೆರವು ನೀಡಬಹುದು. ಆದರೆ ಕ್ರಮೇಣ ಈ ನೆರವಿನ ಹೆಸರಲ್ಲಿ ಅವರ ಹಕ್ಕು ಸ್ಥಾಪನೆಯಾಗಿ, ಸರ್ಕಾರಿ ಶಾಲಾ ಕಾಲೇಜುಗಳು ಖಾಸಗಿಯವರ ಪಾಲಾಗಬಹುದು ಎಂಬುದು ಶಿಕ್ಷಣಪ್ರೇಮಿ ಜನರ ಆತಂಕವಾಗಿದೆ.
ಈ ಹಿನ್ನೆಲೆಯಲ್ಲಿ, ರಾಜ್ಯದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಕೊರತೆಗಳನ್ನು ನಿವಾರಿಸಲು ಸರ್ಕಾರವು ಜನರ ತೆರಿಗೆಯ ದುಡ್ಡನ್ನು ಸದ್ವಿನಿಯೋಗಗೊಳಿಸಬೇಕು. ಮತ್ತು ಶಿಕ್ಷಣದ ಕುರಿತಾದ ಯಾವುದೇ ನಿರ್ಧಾರಕ್ಕೂ ಮುನ್ನ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಮತ್ತು ಶಿಕ್ಷಣತಜ್ಞರು ಸೇರಿದಂತೆ ಜನಾಭಿಪ್ರಾಯ ಪಡೆಯುವ ಪ್ರಜಾತಾಂತ್ರಿಕ ಪ್ರಕ್ರಿಯೆಯನ್ನು ಖಾತ್ರಿಪಡಿಸಬೇಕೆಂದು ಎಐಡಿಎಸ್ಓ ರಾಜ್ಯ ಸಮಿತಿಯು ಸರ್ಕಾರವನ್ನು ಆಗ್ರಹಿಸುತ್ತದೆ.

Leave a Reply