ಬೆಳಗಾವಿ: ಬೆಂಗಳೂರಿನಲ್ಲಿ ನಡೆದ ಚಂದ್ರು ಎಂಬ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ್ ಜ್ಞಾನೇಂದ್ರ ಅವರು ಆರ್ ಎಸ್ ಎಸ್ ಏಜೆಂಟರಂತೆ ಹೇಳಿಕೆ ನೀಡಿದ್ದು ರಾಜ್ಯದಲ್ಲಿ ಅಶಾಂತಿ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದಾರೆ ಕೂಡಲೇ ಅವರು ರಾಜಿನಾಮೆ ನೀಡಬೇಕೆಂದು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಳರ ಆಗ್ರಹಿಸಿದರು.
ಶನಿವಾರ ನಗರದ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ನಡೆದ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವರು ಕರ್ತವ್ಯ ಮರೆತವರಂತೆ ವರ್ತಿಸಿದ್ದು ಆರ್ ಎಸ್ ಎಸ್ ಏಜೆಂಟ್ ತರಹ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇದರಿಂದ ಸಮಾಜದಲ್ಲಿ ಕೋಮು ಸೌಹಾರ್ದತೆಗೆ ದಕ್ಕೆ ತರುವ ಕೆಲಸ ಮಾಡಿದ ಅರಗ ಜ್ಞಾನೇಂದ್ರ ಅವರಿಂದ ಸಿಎಂ ಭಸವರಾಜ ಬೊಮ್ಮಾಯಿ ಅವರು ಕೂಡಲೇ ರಾಜಿನಾಮೇ ಪಡೆಯಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಉದ್ಯೋಗ ಸಮಸ್ಯೆ ಸಾಕಷ್ಟು ಇದೆ. ಅದನ್ನು ಬಗೆ ಹರಿಸುವ ಬದಲು ಸಮಾಜ ಸ್ವಾಸ್ಥ್ಯ ಹದಗೆಡಿಸುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲಾ ಭಾಷೆ ಬಿಟ್ಟು ಹಿಂದಿ ಹೇರಿಕೆ ಮಾಡುವುದು ಖಂಡನೀಯ. ಭಾರತದ ಶಕ್ತಿಯನ್ನು ಕುಗ್ಗಿಸಲು ಕೇಂದ್ರ ಸರಕಾರ ಹೊರಟಿದೆ. ದೇಶದಲ್ಲಿ 60 ಪ್ರತಿಶತ ಜನ ಸರಿಯಾಗಿ ಹಿಂದಿ ಮಾತನಾಡಲು ಬರುವುದಿಲ್ಲ. ವಿವಿಧ ಕಡೆಗಳಲ್ಲಿ ನಾನಾ ಭಾಷೆ ಮಾತನಾಡುತ್ತಾರೆ. ಇದು ಭಾರತದ ಸಂಸ್ಕೃತಿ ಎಂದುಕುಟುಕಿದರು.
ಸುದ್ದಿಗೋಷ್ಟಿಯ ಬಳಿಕ ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿದಂತೆ ಎಲ್ಲ ಕಾಂಗ್ರೆಸ್ ಮುಖಂಡರು ಸೇರಿ ಗೃಹ ಸಚಿವ ಅರಗ ಜ್ಞಾನೇಂದ್ರ ಮತ್ತು ಬಿಜೆಪಿ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ನಗರ ಜಿಲ್ಲಾಧ್ಯಕ್ಷ ರಾಜು ಸೇಠಿ, ಕಾಂಗ್ರೆಸ್ ಮುಖಂಡ ಸುನೀಲ ಹನುಮಣ್ಣವರ, ಜಗದೀಶ ಸಾವಂತ, ಬಸವರಾಜ ಶಿಗಾವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.