ಬೆಳಗಾವಿ : ಜಾಗತಿಕ ಸಾಹಿತ್ಯವನ್ನು ಅಧ್ಯಯನ ಮಾಡುವಾಗ ವಚನಗಳ ಅಭಿವ್ಯಕ್ತಿ ಕ್ರಮವನ್ನು ಗಮನಿಸಿದರೆ ಲೋಕವಿಸ್ಮಯವೆನಿಸುತ್ತದೆ. ೧೨ನೇ ಶತಮಾನದಲ್ಲಿ ಕೆಳವರ್ಗದ ಅನಕ್ಷರಸ್ಥ ವಚನಕಾರ್ತಿಯರು ಅಡುಗೆ ಮನೆಯಿಂದ ಅನುಭವಮಂಟಪದವರೆಗೆ ಬಂದು ತಮ್ಮ ಅನುಭಾವಕ್ಕೆ ಅಭಿವ್ಯಕ್ತಿ ನೀಡುವ ಮೂಲಕ ವಚನ ಸೃಷ್ಟಿಗೆ ಕಾರಣರಾದರು. ಈ ವಚನಗಳು ಸ್ತ್ರೀ ಚರಿತ್ರೆಯನ್ನು ಕಟ್ಟಿಕೊಡುವ ಇತಿಹಾಸದ ಸಾಮಗ್ರಿಗಳಾಗಿವೆ ಎಂದು ಡಾ. ಮೈತ್ರೇಯಣಿ ಗದಿಗೆಪ್ಪಗೌಡರ ಹೇಳಿದರು.
ಅವರು ಬೆಳಗಾವಿ ಕಾರಂಜಿಮಠದಲ್ಲಿ ಶ್ರಾವಣಮಾಸದ ನಿಮಿತ್ಯ ನಡೆದ ಎರಡನೆಯ ಶ್ರಾವಣ ಸೋಮವಾರದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕೆಳವರ್ಗದ ವಚನಕಾರ್ತಿಯರ ವಚನಗಳಲ್ಲಿ ಮೂಡಿ ಬಂದ ಬಂಡಾಯಪ್ರಜ್ಞೆ ನಿಜಕ್ಕೂ ರೋಮಾಂಚನಕಾರಿಯಾದುದು. ಇದೇ ಕಾರಣಕ್ಕೆ ಆಧುನಿಕ ಕಾಲಘಟ್ಟದಲ್ಲಿಯೂ ಅವರ ವಚನಗಳು ಹೆಚ್ಚು ಪ್ರಸ್ತುತವಾಗಿವೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ ಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಆಶೀರ್ವಚನ ನೀಡಿ- ಶ್ರಾವಣ ಮಾಸದ ಪರ್ಯಂತ ನಡೆಯುವ ಧಾರ್ಮಿಕ ಆಚರಣೆಗಳ ಮಹತ್ವವನ್ನು ತಿಳಿಸಿದರು. ಧರ್ಮಮಾರ್ಗದಲ್ಲಿ ನಡೆದರೆ ಲೋಕಕ್ಷೇಮವಾಗುವುದು ಎಂದು ಹೇಳಿದರು.
ಯ. ರು. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಸುರೇಶ ಯಾದವ ಫೌಂಡಶನ್ ಅಧ್ಯಕ್ಷರಾದ ಶ್ರೀ ಸುರೇಶ ಯಾದವ ದಂಪತಿಗಳನ್ನು ಪೂಜ್ಯ ಶ್ರೀಗಳು ಸನ್ಮಾನಿಸಿದರು. ಸಿದ್ಧನಗೌಡ ಚೋಬಾರಿ ಅವರು ಸ್ವಾಗತ ಮಾಡಿದರು. ಎ.ಕೆ. ಪಾಟೀಲ ನಿರೂಪಿಸಿದರು, ವಿ.ಕೆ. ಪಾಟೀಲ ವಂದನಾರ್ಪಣೆ ಮಾಡಿದರು. ಕಾರಂಜಿಮಠದ ಸಂಗೀತ ಶಾಲೆಯ ಮಕ್ಕಳು ಮತ್ತು ಮಾತೃಮಂಡಳಿ ತಾಯಂದಿರು ಸಂಗೀತಸೇವೆ ಸಲ್ಲಿಸಿದರು.
Gadi Kannadiga > Local News > ಕೆಳವರ್ಗದ ಶರಣೆಯರ ಅಭಿವ್ಯಕ್ತಿ ಅನುಸಂಧಾನ ಲೋಕವಿಸ್ಮಯ: ಮೈತ್ರೇಯಣಿ ಗದಿಗೆಪ್ಪಗೌಡರ
ಕೆಳವರ್ಗದ ಶರಣೆಯರ ಅಭಿವ್ಯಕ್ತಿ ಅನುಸಂಧಾನ ಲೋಕವಿಸ್ಮಯ: ಮೈತ್ರೇಯಣಿ ಗದಿಗೆಪ್ಪಗೌಡರ
Suresh29/08/2023
posted on
