ಲಕ್ಷ್ಮೇಶ್ವರ ನ.೧೯: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಶನಿವಾರ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಹುಲ್ಲೂರ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಆಯೋಜಿಸಿದ ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ತಾವೆಲ್ಲ ಸದುಪಯೋಗ ಪಡಿಸಿಕೊಳ್ಳಬೇಕು. ಹುಲ್ಲೂರು ಗ್ರಾಮದ ಜನರು ತುಂಬಾ ಉತ್ಸುಕತೆಯಿಂದ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲು ಸಹಕಾರ ನೀಡಿದ್ದು ಈ ಕಾರ್ಯಕ್ರಮದ ಮೂಲಕ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಪ್ರಯತ್ನಿಸಲಾಗುವದು ಎಂದರು. ಕಂದಾಯ ವಿಷಯಗಳ ಸಮಸ್ಯೆಗಳ ಪರಿಹಾರ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದ್ದು ಗ್ರಾಮದ ಸಾರ್ವಜನಿಕರು ತಾಳ್ಮೆಯಿಂದ ತಮ್ಮ ಅಹವಾಲುಗಳನ್ನು ನೀಡಿ ಸೂಕ್ತ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ಈ ಕಾರ್ಯಕ್ರಮದಲ್ಲಿ ವೈಯಕ್ತಿಕ ಅಥವಾ ಸಾಮೂಹಿಕ ಅಹವಾಲುಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ತಿಳಿಸಿದರು.
ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಕೆಲಸಗಳಿಗಾಗಿ ಕಚೇರಿಗೆ ಪದೇ ಪದೇ ಅಳೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾರ್ವಜನಿಕರ ಸೌಲಭ್ಯಗಳನ್ನು ಹಾಗೂ ದಾಖಲೆಗಳನ್ನು ನಿಮ್ಮ ಗ್ರಾಮಕ್ಕೆ ಬಂದು ಸರಳವಾಗಿ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಇದರ ಸದುಪಯೋಗವನ್ನು ಹುಲ್ಲೂರು ಹಾಗೂ ಸುತ್ತಲಿನ ಗ್ರಾಮಗಳ ಸಾರ್ವಜನಿಕರು ಪಡೆಯಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ ಮಾತನಾಡಿ, ಗ್ರಾಮ ಪಂಚಾಯತಿ ಹಂತದಲ್ಲಿ ಹಲವಾರು ಅಹವಾಲುಗಳನ್ನು ಸಲ್ಲಿಸಲಾಗಿದ್ದು, ಇವುಗಳನ್ನು ಈಡೇರಿಸಲು ನರೆಗಾದಡಿ ಕ್ರಮ ಕೈಗೊಳ್ಳಲಾಗುವದು. ಆರೋಗ್ಯ ಇಲಾಖೆ ಉಪಕೇಂದ್ರ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಸಾಮೂಹಿಕ ಶೌಚಾಲಯ ಬೇಡಿಕೆ ಇದ್ದು ಇದಕ್ಕಾಗಿ ಈ ಕುರಿತು ಚರ್ಚಿಸಲಾಗಿದ್ದು ಸಾರ್ವಜನಿಕರು ಅಧಿಕಾರಿಗಳ ಮೇಲೆ ಇಟ್ಟಿರುವ ನಂಬಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು.
ಉಪವಿಭಾಗಾಧಿಕಾರಿ ಅನ್ನಪೂರ್ಣ ಪ್ರಾಸ್ತಾವಿಕ ಮಾತನಾಡಿ, ಸಾರ್ವಜನಿಕರನ್ನು ಕಚೇರಿಗೆ ವಿನಾಕಾರಣ ಅಳೆದಾಡಿದುವುದನ್ನು ತಪ್ಪಿಸುವುದು. ಕಂದಾಯ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಪಹಣಿ ತಿದ್ದುಪಡಿ, ಪಿಂಚಣಿ ಆದೇಶ ಸೇರಿದಂತೆ ಇತರೆ ಸೌಲಭ್ಯಗಳನ್ನು ಸ್ಥಳದಲ್ಲಿಯೇ ವಿತರಿಸುವದು ಕಾರ್ಯಕ್ರಮದ ಆಶಯವಾಗಿದೆ. ಸದರಿ ಕಾರ್ಯಕ್ರಮದಲ್ಲಿ ವೈಯಕ್ತಿಕ, ಸಮುದಾಯಿಕ ಸೌಲಭ್ಯಗಳ ಕುರಿತು ಅಹವಾಲು ಸಲ್ಲಿಸಿದ್ದಲ್ಲಿ ಆದ್ಯತೇ ಮೇರೆಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಗುವದು. ಸರ್ಕಾರದ ಹಂತದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳಿಗೆ ಅಗತ್ಯದ ಪ್ರಸ್ತಾವನೆ ಸಲ್ಲಿಸಲಾಗುವದು ಎಂದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯಿಂದ ಮಾಸಾಶನ ಆದೇಶ ಪ್ರತಿ, ಅಭಾ ಮತ್ತು ಯು.ಡಿ.ಆಯ್.ಆಡಿ ಕಾರ್ಡ, ವ್ಹೀಲ್ ಚೇರಗಳನ್ನು, ಗ್ರಾಮ ಪಂಚಾಯತಿ ವತಿಯಿಂದ ಗ್ರಂಥಾಲಯಕ್ಕೆ ಪುಸ್ತಕ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ೧೦೧ ಸಸಿಗಳನ್ನು ಶಾಸಕರಾದ ರಾಮಣ್ಣ ಲಮಾಣಿ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಹಾಗೂ ಜಿ.ಪಂ. ಸಿ.ಇ.ಓ ಡಾ.ಸುಶೀಲಾ ಬಿ ಅವರುಗಳು ವಿತರಿಸಿದರು. ಇದಕ್ಕೂ ಮುನ್ನ ಶಾಲಾ ಆವರಣದಲ್ಲಿ ಕಿಚನ್ ಗಾರ್ಡನ, ನೂತನವಾಗಿ ನಿರ್ಮಿಸಲಾದ ಶೌಚಾಲಯ ಉದ್ಘಾಟಿಸಿ ಶಾಲೆಗೆ ಹೊಸದಾಗಿ ಮಂಜೂರಾದ ಭೋಜನಾಲಯ ಹಾಗೂ ಅಡುಗೆ ಕೋಣೆಗಳ ನಿರ್ಮಾಣ ಕಾಮಗಾರಿಗಳಿಗೆ, ಆರೋಗ್ಯ ಇಲಾಖೆ ತಪಾಸಣೆ ಶಿಬಿರ ಹಾಗೂ ವಿವಿಧ ಇಲಾಖೆಗಳ ಮಳಿಗೆಗಳಿಗೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು.
ಕಾರ್ಯ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಸ್ಥಿತಿ ಹುಲ್ಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಣ್ಣ ಬಸಾಪುರ, ಉಪಾಧ್ಯಕ್ಷೆ ಮರಿಯವ್ವ ಹರಿಜನ ಸೇರಿದಂತೆ ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಜಂಟಿ ಕೃಷಿ ನಿರ್ದೇಶಕ ಜಿಯವುಲ್ಲಾ ಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮೆಹಬೂಬ್ ತುಂಬರಮಟ್ಟಿ, ಭೂದಾಖಲೆಗಳ ಉಪನಿರ್ದಶಕ ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಆಹಾರ ಇಲಾಖೆ ಉಪನಿರ್ದೇಶಕ ಗಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಎಂ ಮುಂದಿನಮನಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು. ಇದೇ ವೇಳೆ ರಾಷ್ಟ್ರೀಯ ಐಕ್ಯತಾ ಸಪ್ತಾಹ ಅಂಗವಾಗಿ ಹಾಗೂ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಮಾರಿ ಪವಿತ್ರಾ ಪಾಟೀಲ ಹಾಗೂ ಸಂಗಡಿಗರು ನಾಡಗೀತೆಯನ್ನು, ಕುಮಾರಿ ಮಹಾದೇವಿ ಸಾಸಲವಾಡ ಹಾಗೂ ಸಂಗಡಿಗರು ರೈತಗಿತೆಯನ್ನು, ಕುಮಾರಿ ಮಹಾಲಕ್ಷಿ÷್ಮ ಕನಕಣ್ಣವರ ಹಾಗೂ ಸಂಗಡಿಗರು ಪ್ರಾರ್ಥಸಿದರು. ಶಿಕ್ಷಕರಾದ ಸಿದ್ದು ಹಲಸೂರು ಹಾಗೂ ವಾಸುದೇವ ಮಡ್ಲಿ ಅವರು ನಿರೂಪಿಸಿ ನಿರ್ವಹಿಸಿದರು. ಈಶ್ವರ ಮೆಡ್ಲೇರಿ ಪ್ರಾರ್ಥಿಸಿದರು.