ಕೊಪ್ಪಳ, ನವೆಂಬರ್ ೧೯ : ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಶೋಷಣೆ ತಡೆಗೆ ಸಮಾಜದಲ್ಲಿ ಜಾಗೃತಿ ಅವಶ್ಯಕವಾಗಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್ ಅವರು ಹೇಳಿದರು.
“ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ತಡೆ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀಗವಿಸಿದ್ದೇಶ್ವರ ಬಾಲಕಿಯರ ವಸತಿ ನಿಲಯದಲ್ಲಿ ಶುಕ್ರವಾರದಂದು ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಾಣಕ್ಕಾಗಿ, ಮಕ್ಕಳ ಮೇಲೆ ನಡೆಯುವ ಎಲ್ಲಾ ರೀತಿಯ ದೌರ್ಜನ್ಯ ಮತ್ತು ಶೋಷಣೆಯನ್ನು ಕೊನೆಗಾಣಿಸಲು ಜಾಗೃತಿಯ ಅವಶ್ಯಕತೆಯಿದ್ದು, ಮುಖ್ಯವಾಗಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯನ್ನು ತಡೆಗಟ್ಟಲು ವಿಶ್ವ ಸಂಸ್ಥೆಯು ನವೆಂಬರ್ ೧೮ ಅನ್ನು “ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ತಡೆ ದಿನವನ್ನಾಗಿ” ಘೋಷಿಸಿದೆ. ಈ ದಿನದಂದು ವಿಶ್ವದಾದ್ಯಂತ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಗಳು ಹೀನ ಕೃತ್ಯಗಳಾಗಿದ್ದು, ಈ ರೀತಿಯ ಅಪರಾಧಿಕ ಕೃತ್ಯಗಳನ್ನು ತಡೆಗಟ್ಟಲು ಭಾರತ ಸರಕಾರವು “ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-೨೦೧೨” ನ್ನು ಜಾರಿಗೆ ತಂದಿದ್ದು, ಈ ಕಾಯ್ದೆಯಡಿಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಕನಿಷ್ಠ ೧೦ ವರ್ಷದಿಂದ ಅಜೀವ ಕಾರಾವಾಸ ಮತ್ತು ರೂ. ೧೦ ಲಕ್ಷ ರೂಪಾಯಿದಂಡವನ್ನು ವಿಧಿಸಬಹುದಾಗಿದೆ. ಅಲ್ಲದೇ ಮಕ್ಕಳಿಗೆ ಸನ್ನೆಯ ಮೂಲಕ, ಭಾಷೆ, ಅಂಗಿಕ ಅಭಿನಯದ ಮೂಲಕವು ಲೈಂಗಿಕ ಕಿರುಕುಳ ನೀಡುವುದನ್ನು ನಿಷೇಧಿಸಿದ್ದು, ಒಂದು ವೇಳೆ ಯಾರಾದರು ಈ ರೀತಿಯ ಕೃತ್ಯವನ್ನು ಎಸಗಿದ್ದಲ್ಲಿ ಕನಿಷ್ಠ ೦೩ ವರ್ಷದಿಂದ ೦೫ ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ ಎಂದು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೋಬೇಷನ್ ಆಫೀಸರ್ ಶಿವಲೀಲಾ ವನ್ನೂರು ಅವರು ಮಾತನಾಡಿ, ಯಾವುದೇ ಮಗುವಿನ ದೇಹವು ಆ ಮಗುವಿನ ಹಕ್ಕಾಗಿದ್ದು, ತಂದೆ-ತಾಯಿ ಮತ್ತು ತುರ್ತು ಸಂದರ್ಭದಲ್ಲಿ ವೈದ್ಯಾಧಿಕಾರಿಗಳು, ಚಿಕಿತ್ಸೆಯ ದೃಷ್ಠಿಯಿಂದ ಪಾಲಕರ ಸಮಕ್ಷಮದಲ್ಲಿ ಮಾತ್ರ ಮಗುವಿನ ವೈಯಕ್ತಿಕ ಭಾಗಗಳನ್ನು ಸ್ಪರ್ಶಿಸಬಹುದೆ ಹೊರತು ಇನ್ನಾರು ಸ್ಪರ್ಶಿಸುವಂತಿಲ್ಲ. ಮಗುವಿನ ವೈಯಕ್ತಿಕ ಭಾಗಗಳನ್ನು ಸ್ಪರ್ಶಿಸುವುದು ಸಹ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-೨೦೧೨ರಡಿಯಲ್ಲಿ ಅಪರಾಧವಾಗಿದ್ದು, ಇದನ್ನು ಅಸುರಕ್ಷಿತ ಸ್ಪರ್ಶವೆಂದು ಗುರುತಿಸಲಾಗಿದೆ. ಈ ರೀತಿಯ ಕೃತ್ಯಕ್ಕೆ ೫ ವರ್ಷಗಳಿಂದ ೦೭ ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಈ ಕುರಿತು ಎಲ್ಲರೂ ತಮ್ಮ ಮನೆ, ಸಮುದಾಯಗಳಲ್ಲಿ ಜಾಗೃತಿಯನ್ನು ಮೂಡಿಸಿ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಡಾ. ಸುಮಲತಾ, ರವಿಕುಮಾ ಪವಾರ, ರವಿ ಬಡಿಗೇರ, ಕಾನೂನು ಸೇವೆಗಳ ಪ್ರಾಧಿಕಾರದ ಉಮೇಶ, ಶ್ರೀಗವಿಸಿದ್ದೇಶ್ವರ ಬಾಲಕಿಯರ ವಸತಿ ನಿಲಯದ ವಾರ್ಡನರಾದ ಶ್ರೀದೇವಿ, ಸರೋಜಾ ಮತ್ತು ವಸತಿ ನಿಲಯದ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Gadi Kannadiga > State > ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ತಡೆಗೆ ಜಾಗೃತಿ ಅವಶ್ಯಕ : ನ್ಯಾ. ದೇವೇಂದ್ರ ಪಂಡಿತ್