ಗದಗ ನವೆಂಬರ್ ೧೭: ಪ್ರಸಕ್ತ ದಿನಮಾನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಮಾನಸಿಕ ಹಾಗೂ ದೈಹಿಕ ದೌರ್ಜನ್ಯಗಳನ್ನು ತಡೆಯಲು ಕಾನೂನುಗಳ ಅರಿವಿನ ಜತೆಗೆ, ಸಮಾಜದಲ್ಲಿರುವ ಪ್ರತಿಯೊಬ್ಬರ ಮನಸ್ಥಿತಿಗಳು ಬದಲಾವಣೆಯಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಅವರು ನುಡಿದರು.
ಅವರು ಗುರುವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಎಡಿಆರ್ ಕಟ್ಟಡದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ೨ ದಿನಗಳ ಕಾಲ ಆಯೋಜಿಸಲಾಗಿರುವ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯ ಅನುಷ್ಠಾನ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಋಗ್ವೇದ, ಯಜುರ್ವೇದ ಕಾಲಗಳಿಂದಲೂ ಮಹಿಳೆಯರಿಗಾಗಿ ವಿಶೇಷ ಗೌರವ, ಪೂಜನೀಯ ಸ್ಥಾನವಿದೆ. ವರ್ಷಗಳು ಕಳೆದಂತೆ ಮಹಿಳೆ ದೌರ್ಜನ್ಯಕ್ಕೊಳಗಾಗುತ್ತಾ ಬಂದಿದ್ದಾಳೆ. ಸ್ವಾತಂತ್ರಾö್ಯ ನಂತರ ಮಹಿಳೆಯರ ಹಕ್ಕು ಕಾಪಾಡುವ ನಿಟ್ಟಿನಲ್ಲಿ ಹಾಗೂ ಸಮಾನತೆಗಾಗಿ ಅನೇಕ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆ ಎಲ್ಲಾ ಕಾನೂನುಗಳ ಅರಿವು ಹೊಂದುವುದರಿಂದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಈ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಅವರು ಮಾತನಾಡಿ, ಸ್ವಾತಂತ್ರ ಬಂದು ೭೫ ವರ್ಷಗಳಾದರೂ ಇನ್ನೂ ಸಹ ಅನೇಕ ಮಹಿಳೆಯರು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಮಹಿಳೆಯರ ಹಕ್ಕು, ಅವರ ರಕ್ಷಣೆಗಾಗಿ ಇರುವ ಕಾನೂನುಗಳು ಅವರಿಗೆ ಸಂಪೂರ್ಣವಾಗಿ ತಿಳಿದಾಗ ಮಹಿಳೆಯರ ದೌರ್ಜನ್ಯ ನಿಲ್ಲುತ್ತದೆ. ಮಹಿಳೆಯರ ರಕ್ಷಣೆಗೆ ಸಂಬಂಧಪಟ್ಟ ಕಾಯ್ದೆಗಳನ್ನು ಅನುಷ್ಟಾನಗೊಳಿಸುವ ಅಧಿಕಾರಿಗಳು, ಇಲಾಖೆಯ ಸಿಬ್ಬಂದಿಗಳು ಕಾಯ್ದೆಗಳ ಬಗ್ಗೆ ಆಳವಾದ ಜ್ಞಾನ ಹೊಂದಬೇಕು. ಅಂದಾಗ ಕಾಯ್ದೆಗಳ ಉದ್ದೇಶ ಯಶಸ್ವಿಯಾಗಲು ಸಾದ್ಯ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಂ.ಎ. ಮೌಲ್ವಿ ಅವರು ಮಾತನಾಡಿ, ಇತಿಹಾಸದಲ್ಲಿ ಮಹಿಳೆ ಅನೇಕ ದೌರ್ಜನ್ಯಗಳಿಗೆ ಒಳಗಾಗಿದ್ದಾಳೆ, ಅವಳ ಹಕ್ಕನ್ನೂ ಸಹ ಕಿತ್ತುಕೊಳ್ಳಲಾಗಿತ್ತು. ಮಹಿಳೆ-ಪುರುಷ ಎಂಬ ತಾರತಮ್ಯವಿತ್ತು. ಸ್ವಾತಂತ್ರಾö್ಯ ನಂತರ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ, ವಿವಿಧ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದರೂ ಕಾನೂನು ಅರಿವಿನ ಕೊರತೆಯಿಂದ ಇಂದೂ ಸಹ ಹಲವೆಡೆ ದೌರ್ಜನ್ಯಕ್ಕೊಳಗಾಗುತ್ತಿರುವುದು ದುರಾದೃಷ್ಟಕರ. ತಾರತಮ್ಯ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್, ಮಹಿಳಾ ಇಲಾಖೆ ಸೇರಿದಂತೆ ಸಂಘ-ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಪರಶುರಾಮ ಶಟ್ಟೆಪ್ಪನವರ ಮಾತನಾಡಿ, ಪ್ರತಿಯೊಬ್ಬರೂ ಮಹಿಳೆಯರ ರಕ್ಷಣೆಗಿರುವ ಕಾನೂನುಗಳನ್ನು ತಿಳಿದಾಗ ಮಹಿಳಾ ದೌರ್ಜನ್ಯಗಳಂತಹ ಘಟನಾವಳಿಗಳನ್ನು ತಡೆಗಟ್ಟಲು ಸಾಧ್ಯ ಎಂದರು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವಕೀಲರು ಹಾಗೂ ಬಾಲ ನ್ಯಾಯ ಮಂಡಳಿಯ ಸದಸ್ಯರಾದ ಜಿ.ಸಿ. ರೇಶ್ಮಿ, ಪ್ಯಾನಲ್ ವಕೀಲರಾದ ಶ್ರೀಮತಿ ಶೋಭಾ ಉಮಚಗಿ, ಮಕ್ಕಳ ರಕ್ಷಣಾಧಿಕಾರಿ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಎಚ್.ಎಸ್. ಜೋಗೇರ ಉಪಸ್ಥಿತರಿದ್ದರು. ಎಸ್.ಎನ್. ಪತ್ತಾರ ಪ್ರಾರ್ಥಿಸಿದರು. ಮಹಿಳಾ ಇಲಾಖೆಯ ಅಧೀಕ್ಷಕರಾದ ಸುನಿತಾ ನಾಡಗೇರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
Gadi Kannadiga > State > ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಾನೂನಿನ ಅರಿವು ಹಾಗೂ ಮನಸ್ಥಿತಿ ಬದಲಾವಣೆ ಅಗತ್ಯ :ಜಿಲ್ಲಾ ನ್ಯಾ. ಬಸವರಾಜ
ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಾನೂನಿನ ಅರಿವು ಹಾಗೂ ಮನಸ್ಥಿತಿ ಬದಲಾವಣೆ ಅಗತ್ಯ :ಜಿಲ್ಲಾ ನ್ಯಾ. ಬಸವರಾಜ
Suresh17/11/2022
posted on
