This is the title of the web page
This is the title of the web page

Please assign a menu to the primary menu location under menu

State

ಬಸವಾದಿ ಶರಣರು ಯಾರಿಗೂ ಉಪದೇಶ ಮಾಡಿಲ್ಲ-ಡಾ. ಸಿ.ಕೆ. ನಾವಲಗಿ


ಬೆಳಗಾವಿ; ಬಸವಾದಿ ಶರಣರು ಎಂದಿಗೂ ಯಾರಿಗೂ ಉಪದೇಶವನ್ನು ಮಾಡಲಿಲ್ಲ ಎಂದು ಹಿರಿಯ ಚಿಂತಕ ಜಾನಪದ ಸಾಹಿತಿ ಡಾ.ಸಿ.ಕೆ.ನಾವಲಗಿ ಹೇಳಿದರು.
ಅವರು ಬೆಳಗಾವಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ರಾಷ್ಟ್ರೀಯ ಬಸವ ಸೇನೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಅಮಾವಾಸ್ಯೆಯ ಮಾಸಿಕ ಸತ್ಸಂಗ ಕಾರ್ಯಕ್ರಮದಲ್ಲಿ ” ಜಾಗತಿಕ ಪ್ರತಿಭೆಯಾಗಿ ಬಸವಣ್ಣ ” ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಿದ್ದರು.
ಬಸವಾದಿ ಶರಣರು ಹೇಳಿದ್ದು ಆತ್ಮ ನಿರೀಕ್ಷೆ ಮಾಡಿಕೊಳ್ಳಲು ,ಆತ್ಮ ಶೋಧ ಮಾಡಿಕೊಳ್ಳಲು, ಮತ್ತು ಆತ್ಮ ವಿಮರ್ಶೆ ಮಾಡಿಕೊಳ್ಳಲು ಇದರ ಹೊರತಾಗಿ ಅವರೆಂದು ಉಪದೇಶವನ್ನು ಯಾರಿಗೂ ಮಾಡಲೇ ಇಲ್ಲ, ಯಾವುದೇ ಛಂದಸ್ಸಿನ ಬಂಧನವಿಲ್ಲದ, ಇತ್ತ ಗದ್ಯವೂ ಅಲ್ಲದ ಅತ್ತ ಪದ್ಯವೂ ಅಲ್ಲದ ಮುಕ್ತವಾದ ಭಾಷೆಯ ಸ್ವತಂತ್ರ ರಚನೆ, ಅತ್ಯಂತ ಸರಳವಾದ ಜನರಾಡುವ ಮಾತುಗಳಲ್ಲಿ ಬಿಡಿ ಬಿಡಿಯಾದ ರಚನೆ ವಚನಗಳದ್ದು, ಅವರಿಗೆ ತಿಳಿದಂತೆ ಬರೆದರು ಅವು ಕಾವ್ಯದ ರೂಪ ಕಳೆದವು ಅಂದು , ಇಂದು ಮತ್ತು ಮುಂದೆಯೂ ಸರ್ವ ಕಾಲಕ್ಕೂ ಪ್ರಸ್ತುತ ಎನಿಸಿಕೊಂಡವು , ಈ ರೀತಿಯ ವಚನಗಳ ರಚನೆ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ ಈ ವಚನಗಳ ಮೇಲೆ ಬೇರೆ ಯಾವ ಧರ್ಮದ ಗ್ರಂಥಗಳ ಪ್ರಭಾವವು ಇಲ್ಲ ಬೇರೆ ಯಾವ ಪ್ರವಾದಿಗಳ ಚಿಂತನೆಯ ಪ್ರಭಾವವೂ ಇಲ್ಲ ವಚನಗಳು ಶರಣರ ಸ್ವಯಾರ್ಜಿತ ರಚನೆ, ಸ್ವತಂತ್ರ ರಚನೆ , ಸ್ವತಂತ್ರ ಪ್ರತಿಭಾ ಶಕ್ತಿ ಇದ್ದುದ್ದರಿಂದ ಇಂತಹ ಉತ್ಕೃಷ್ಟ ವಚನಗಳ ರಚನೆ ಸಾಧ್ಯವಾಯಿತು, ವಚನಗಳ ಮೇಲೆ ಪ್ರಭಾವ ಇದ್ದರೆ ಅದು ಕೇವಲ ಜನಪದರ ಪ್ರಭಾವ ಇರಬಹುದು, ಹಳ್ಳಿಯ ಜನರ ನುಡಿಗಳ ಪ್ರಭಾವ ಇರಬಹುದು, ಹಳ್ಳಿಗರ ಗಾದೆ ಮಾತುಗಳ ಪ್ರಭಾವ ಇರಬಹುದು ಎಂದು ಡಾ.ನಾವಲಗಿ ನುಡಿದರು.
ಕ್ರಾಂತಿಕಾರಿ ಕವಿ ಒಬ್ಬ ಹೇಳಿದಂತೆ ಬಸವಣ್ಣನ ಮಾತೇ ಮಾತು, ಬಸವಣ್ಣನ ಬಿಂಕದ ಭಾಷೆಯೇ ಭಾಷೆ ಬಸವಣ್ಣನ ವಚನದ ಭಾಷೆ ಪ್ರಶ್ನೆ ಮಾಡಲಾಗಿದೆ ಅದು ಪ್ರಶ್ನಾತೀತ, ಬಸವಣ್ಣ ಪ್ರತಿ ವ್ಯಕ್ತಿಗೂ ಮನಮುಟ್ಟುವಂತೆ ಮಾತನಾಡುತ್ತಾನೆ ಅಂತಹ ಪ್ರತಿಭೆ ಬಸವಣ್ಣನಲ್ಲಿತ್ತು, ಅವನು ಒಬ್ಬ ಅಸಾಮಾನ್ಯ ಅನುಭಾವಿ, ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಹತ್ತು ಹಲವು ಯೋಜನೆಗಳನ್ನು ರೂಪಿಸಿದ ಬಸವಣ್ಣನಷ್ಟು ಆತ್ಮ ನಿರೀಕ್ಷೆ ಮಾಡಿಕೊಂಡ ಮತ್ತೊಬ್ಬ ಪ್ರವಾದಿ ಇಲ್ಲ, ಅದಕ್ಕಾಗಿ ಧರ್ಮಕ್ರಾಂತಿ ಮಾಡಿ ಮಾನವೀಯ ಮೌಲ್ಯಗಳ ಚಿಂತನೆಯನ್ನು ಎಲ್ಲೆಡೆ ಪಸರಿಸಿದ ಮತ್ತು ಬೀದಿಗಿಳಿದು ಅವನ್ನು ಜಾರಿಗೆ ತಂದ ಮಹಾನ್ ಪ್ರವಾದಿ, ಸ್ಥಾಪಿತ ವ್ಯವಸ್ಥೆಯ ವಿರುದ್ಧ ಬಂಡೆದ್ದ ಬಸವಣ್ಣನಿಂದಲೇ ಬಂಡಾಯದ ಪರಿಕಲ್ಪನೆ ಬಂತು, ಮಹಿಳೆಯರಿಗೆ ಲಿಂಗ ಸಮಾನತೆ ನೀಡುವ ಮೂಲಕ ಸಾಮಾಜಿಕ ನ್ಯಾಯ ನೀಡುವ ವಿಚಾರದಲ್ಲಿ ಬಸವಣ್ಣ ಬುದ್ಧನನ್ನು ಮೀರಿಸಿ ಬಿಡುತ್ತಾನೆ ಬುದ್ಧನಿಗೆ ಒಬ್ಬಳೇ ಒಬ್ಬ ಮಹಿಳಾ ಶಿಷ್ಯರು ಇರಲಿಲ್ಲ , ಆದರೂ ಇತಿಹಾಸದ ಸೃಷ್ಟಿಕರ್ತರಲ್ಲಿ ” ಒಬ್ಬ ಬುದ್ಧ – ಇನ್ನೊಬ್ಬ ಬಸವ “ಇವರೇ ಇತಿಹಾಸ ನಿರ್ಮಿಸಿದವರು ಎಂದು ಅವರು ಹೇಳಿದರು.
ಕಾಯಕ ಮತ್ತು ದಾಸೋಹ ಇವೆರಡು ಕ್ರಾಂತಿಕಾರಕ ಶಬ್ದಗಳು ಈ ಎರಡು ಶಬ್ದಗಳಿಗೆ ಸರಿಸಮನಾದ ಶಬ್ದಗಳೇ ಇಲ್ಲ ಎಂದು ಪ್ರತಿಪಾದಿಸಿದ ಡಾ.ನಾವಲಗಿ ಅವರು ಈ ಎರಡು ಶಬ್ದಗಳು ಆರ್ಥಿಕತೆಯ ಸುಧಾರಣೆಯ ಪರಿಕಲ್ಪನೆಯನ್ನು ನೀಡುತ್ತವೆ, ಅಹಂ ನಿರಶನ ತತ್ವವನ್ನು ಪ್ರತಿಪಾದಿಸಿದ್ದೆ ಅಲ್ಲದೆ ಸ್ವತಹ ತಮ್ಮ ನಿತ್ಯ ಜೀವನದಲ್ಲಿ ಅದನ್ನು ಅಳವಡಿಸಿಕೊಂಡು ಶರಣು ಶರಣಾರ್ಥಿ ಎಂದವರು ಜಗತ್ತು ಎಂದು ಕಂಡರಿಯದ ,ಕೇಳರಿಯದ ಮಹಾನ್ ಕ್ರಾಂತಿಗೆ ಮುಂದಾದವರು ಕೊನೆಗೆ ಕಲ್ಯಾಣದ ಕ್ರಾಂತಿಯಲ್ಲಿ ಶರಣರ ಕಗ್ಗೊಲೆ ,ಬಿಜ್ಜಳ ರಾಜನ ಕಗ್ಗೊಲೆ, ಇವುಗಳಿಂದ ಅಪಾರ ಮಾನಸಿಕ ಹಿಂಸೆ ಅನುಭವಿಸಿದ ಬಸವಣ್ಣ ಕೊನೆಗೆ ಅಂದಿದ್ದು “ಎಲೈ ಪಾಪಿಗಳಾ ಕೊಂದುಬಿಟ್ಟಿರಾ ನನ್ನ ಒಡೆಯನನ್ನು …ಕಲ್ಯಾಣ ಎಂದೆಂದಿಗೂ ಮಸಣವಾಗಲಿ…”
ಅಪ್ಪ ,ಅಣ್ಣ ,ತಂದೆ ,ತಾಯಿ, ಎಂದು ಎಲ್ಲರನ್ನೂ ಸಂಬೋಧಿಸುತ್ತಿದ್ದ ಬಸವಣ್ಣನ ಬಾಯಿಯಿಂದ ಇಂತಹ ಮಾತುಗಳು ಬರಬೇಕಾದರೆ ಆತ ಅನುಭವಿಸಿದ ಹಿಂಸೆ ಎಷ್ಟಿರಬಹುದು ಎಂದು ಕಲ್ಪನೆ ಮಾಡಿಕೊಳ್ಳಲಾಗದು, ಬಹುಶಃ ಅವೆ ಬಸಣ್ಣನ ಕೊನೆಯ ಮಾತುಗಳಿರಬಹುದು ಎಂದು ನಿಟ್ಟುಸಿರು ಬಿಟ್ಟರು ಡಾ.ಸಿ.ಕೆ.ನಾವಲಗಿ.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಮಹಾಸ್ವಾಮಿಗಳು ಆಶೀರ್ವಚನ ನೀಡಿ
ಶಿವಯೋಗದ ಮೂಲಕ ಅಪಾರ ಶಕ್ತಿಗಳಿಸಿದ್ದ ಬಸವಣ್ಣನವರು ನಾನೊಬ್ಬನೇ ಭಕ್ತ ಉಳಿದವರೆಲ್ಲ ಗುರುಜಂಗಮರು ಎಂದು ಉಳಿದೆಲ್ಲರನ್ನು ಮೇಲ್ಮಟ್ಟಕ್ಕೆ ಏರಿಸಿ ತಾವು ಮಾತ್ರ ಚಿಕ್ಕವರು ಎಂದು ಹೇಳಿದ್ದಲ್ಲದೆ ಅದರಂತೆ ನಡೆದುಕೊಂಡವರು ಅಂತಹ ಬಸವಣ್ಣನ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೆ ಆದರೆ ಖಂಡಿತವಾಗಿ ಪ್ರಗತಿ ಹೊಂದಲು ಸಾಧ್ಯ , ನಮಗೆ ಬಸವಣ್ಣನ ಅಗತ್ಯವಿದೆ ಬಸವಣ್ಣನಿಗೆ ನಮ್ಮ ಅಗತ್ಯವಿಲ್ಲ , ತಮ್ಮ ವಚನಗಳ ಮೂಲಕ ಅವರು ಇಂದಿಗೂ ಜೀವಂತವಾಗಿದ್ದಾರೆ , ಅಂದಿನ ಶರಣರ ಚಿಂತನೆಗಳು ವಚನಗಳ ರೂಪದಲ್ಲಿ ದಾಖಲಾದವು, ಅದೇ ಮಾದರಿಯಲ್ಲಿ ಇಂದಿನ ವಿಚಾರಗಳು ಮತ್ತು ಚಿಂತನೆಗಳು ಕೂಡ ದಾಖಲಾಗಬೇಕು ಆ ಕಾರ್ಯವನ್ನು ಲಿಂಗಾಯತ ಮಹಾಸಭೆ ಮಾಡಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಗತಿಕ ಲಿಂಗಾಯಿತ ಮಹಾಸಭೆಯ ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದ ಶ್ರೀ ಮುರಿಗೆಪ್ಪ ಬಾಳಿ ಮತ್ತು ಶ್ರೀಮತಿ ಸಂಗೀತಾ ಬಾಳಿ, ರಾಷ್ಟ್ರೀಯ ಬಸವ ಸೇನೆಯ ಜಿಲ್ಲಾಧ್ಯಕ್ಷ ಶಂಕರ್ ಗುಡುಸ್, ಪ್ರೊ ಎಂ ಆರ್ ಉಳ್ಳೆಗಡ್ಡಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಲಲಿತಾ ಪರ್ವತರಾವ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಅಶೋಕ್ ಮಳಗಲಿ ಸ್ವಾಗತಿಸಿದರು, ಶ್ರೀಮತಿ ಸುನಿತಾ ನಂದೆನ್ನವರ್ ಕಾರ್ಯಕ್ರಮ ನಿರೂಪಿಸಿದರು, ಮಹಾಂತೇಶ್ ತೋರಣಗಟ್ಟಿ ವಂದಿಸಿದರು, ಕಾರ್ಯಕ್ರಮದಲ್ಲಿ ಲಿಂಗಾಯಿತ ಮಹಾಸಭೆಯ ನಗರ ಘಟಕದ ಅಧ್ಯಕ್ಷ ಎಸ್.ಜಿ. ಸಿದ್ನಾಳ, ಮೋಹನ್ ಗುಂಡ್ಲೂರು ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಇತ್ತೀಚಿಗೆ ಅಗಲಿದ ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು.


Gadi Kannadiga

Leave a Reply