ಬೆಳಗಾವಿ:ಅಧಿಕಾರವಿದ್ದಲಿ ಆದರ್ಶವಿರುವದಿಲ್ಲ, ಆದರ್ಶವಿರುವಲ್ಲಿ ಅಧಿಕಾರ ಇರುವದಿಲ್ಲ ಎಂಬುದು ನಾಣ್ಣುಡಿ.ಆದರೆ ಕರ್ನಾಟಕದ ಸಾಂಸ್ಕೃತಿಕ ನಾಯಕ,ವಿಶ್ವಗುರು ಬಸವಣ್ಣನವರು ಈ ವಿಷಯದಲ್ಲಿ ಇದನ್ನು ಮೀರಿ ಆದರ್ಶದ ಅಧಿಕಾರ ವಹಿಸಿಕೊಂಡು,ಸರ್ವರಿಗೂ ಸಮಬಾಳು ಹಾಗೂ ಸಮಪಾಲು ಎಂಬ ಪರಿಕಲ್ಪನೆಯ ಕಾಯಕ ದಾಸೋಹ ತತ್ವ ಸಿದ್ದಾಂತಗಳ ಭದ್ರ ಅಡಿಪಾಯದ ಬದುಕನ್ನು ಹೇಗೆ ಬದುಕಬೇಕೆಂದನ್ನುತಾವೂ ಬದುಕಿ,ನಾವು ಹೇಗೆ ಬದುಕ ಬೇಕೆಂಬುದನ್ನು ಕಲಿಸಿದವರು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮಲ್ಲಸಂದ್ರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಹ ಶಿಕ್ಷರಾದ ಡಾ. ಜಗದೀಶ ಮುಗಳಿ ಹೇಳಿದರು.
ಪ್ರತಿಕೂಲ ಪರಿಸ್ಥಿತಿಯ ವಿರುದ್ಧ ಹೋರಾಟ ಮಾಡಿದ ಬಸವಣ್ಣನವರ ಬದುಕಿನ ವಿಕಾಸ ಶೀಲ ವಿಚಾರ ಧಾರೆಯನ್ನು ಪ್ರಭುತ್ವದ ಅಂಕುಶದ ಆಚೆಯಿರುವ ಅವರ ನಿಲುವು ಅವರ್ಣನೀಯ ಅವರು ಇಲ್ಲಿ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜರುಗಿದ ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕ ಆಯೋಜಿಸಿದ ಮಾಸಿಕ ಅನುಭಾವ ಗೋಷ್ಠಿಯಲ್ಲಿ “ಆಧುನಿಕ ಮಹಾಕಾವ್ಯ ಗಳಲ್ಲಿ ಬಸವಣ್ಣ” ಎಂಬ ವಿಷಯದ ಕುರಿತ ಉಪನ್ಯಾಸದಲ್ಲಿ ಹೇಳಿದರು.
ಕನ್ನಡ ಸಾಹಿತ್ಯದಲ್ಲಿ ಬಸವಣ್ಣನವರ ಕುರಿತು ಆರು ಮಹಾ ಕಾವ್ಯಗಳು ರಚಿಸಲ್ಪಟ್ಟಿದೆ.ಆಧುನಿಕ ಸಂದರ್ಭದಲ್ಲಿ ಶರಣರ ಕುರಿತು ಹುಟ್ಟಿದ ಕಥೆ,ಕಾವ್ಯ,ನಾಟಕ ಮಹಾಕಾವ್ಯಗಳಿಗೆ ಮೂಲ ಆಧಾರ ವಚನ ಸಾಹಿತ್ಯವೇ.ಅನುಭವ ಮಂಟಪದಲ್ಲಿ ಶರಣರು ತಮ್ಮ ಅನುಭಾವದ ಮೇಲೆ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿ,ಚರ್ಚಿಸಿ,ವಿಚಾರಗಳ ಚಿಂತನ ಮಂಥನ ಮಾಡಿದ ಮೇಲೆ ಸ್ವತಂತ್ರವಾಗಿ ರಚನೆಯಾದುವು ವಚನಗಳು.ವಚನಗಳ ರಚನೆಗೆ ಶರಣರ ಅನುಭಾವವೇ ಮೂಲ, ವಿನಹಃ ಯಾವುದೇ ವೇದ ಉಪನಿಷತ್ತುಗಳ ಪ್ರಭಾವ ಇಲ್ಲಾ ಅಂತಾ ಖಂಡಿತವಾಗಿಯೂ ಹೇಳಬಹುದು.
ಬಸವೇಶ್ವರ ತುಪ್ಪದ ಅವರು ” ಬಸವ ದರ್ಶನಮ್” ಅನ್ನವ ಮಹಾಕಾವ್ಯವನ್ನು ರಚನೆ ಮಾಡಿದ್ದಾರೆ.ಕಂಬಾಳು ಸಿದ್ದಗಂಗಯ್ಯನವರು “ಬಸವ ವಚನ ದರ್ಶನ” ಎಂಬ ಮಹಾಕಾವ್ಯ ರಚಿಸಿದ್ದಾರೆ.ಡಾ.ಆರ್.ಸಿ.ಮುದ್ದೇಬಿಹಾಳ ಅವರು ” ಬಸವ ಬೆಳಗು” ಎಂಬ ಮಹಾಕಾವ್ಯ ರಚನೆ ಮಾಡಿದ್ದಾರೆ.ಪೂಜ್ಯ ನಿರುಪಾದೀಶ್ವರ ಸ್ವಾಮಿಗಳು ” ಮಹಾ ಮಾನವತಾವಾದಿ ಸಂಗನಬಸವ ವಿಜಯ” ಎಂಬ ಮಹಾಕಾವ್ಯ ರಚಿಸಿದ್ದಾರೆ. ಅದರಂತೆ ಡಾ. ಪ್ರದೀಪಕುಮಾರ ಹೆಬ್ರಿ ಅವರು ” ಯುಗಾವತಾರಿ ಬಸವಣ್ಣ ” ಎಂಬ ಮಹಾಕಾವ್ಯ ರಚನೆ ಮಾಡಿದ್ದಾರೆಂದು ಹೇಳಿದರು.ಮಹಾಕಾವ್ಯಗಳ ಆಶಯ ಬಸವಣ್ಣನವರ ಕರ್ತೃತ್ವ ಶಕ್ತಿ, ವ್ಯಕ್ತಿತ್ವ, ಸಾಧನೆ,ಸಿದ್ದಿ, ಆದ್ಯಾತ್ಮಿಕ ಸಾಧನೆ, ಸ್ತ್ರೀ ಸ್ವಾತಂತ್ರ್ಯ, ವರ್ಣಬೇದ,ವರ್ಗಭೇದಗಳ ತಾರತಮ್ಯದ ಅವರ ಹೋರಾಟಗಳ ಕುರಿತು ಮಹಾಕಾವ್ಯಗಳು ರಚಿಸಲ್ಪಟ್ಟಿವೆ.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅದ್ಯಕ್ಷರಾದ ಶರಣ ಬಸವರಾಜ ರೊಟ್ಟಿ ನ್ಯಾಯವಾದಿಗಳು ಇತ್ತೀಚಿನ ದಿನಗಳಲ್ಲಿ ಕೆಲವು ವ್ಯಕ್ತಿ ಮತ್ತು ಸಂಘಟನೆಗಳು ಬಸವಾದಿ ಶರಣರ ವಚನಗಳ ಮೂಲ ಆಶಯಗಳ ವಿರುದ್ಧವಾಗಿ ಇಲ್ಲಸಲ್ಲದ ವಿಚಾರಗಳನ್ನು ಹೇಳುತಿದ್ದು ,
ಜಾಗತಿಕ ಲಿಂಗಾಯತ ಮಹಾಸಭಾ ಇದನ್ನು ಉಗ್ರವಾಗಿ ಖಂಡಿಸುತ್ತದೆ.ಅಲ್ಲದೇ ಯಾವುದೇ ಹೋರಾಟಕ್ಕೂ ಸಿದ್ಧ, ಅಲ್ಲದೆ ಬಸವ ಅನುಯಾಯಿಗಳು ಇಂತಹ ದುಷ್ಟ ಶಕ್ತಿಗಳ ವಿರುದ್ಧ ಜಾಗೃತರಾಗಿರಲು ಕರೆಕೊಟ್ಟರು.ಲಿಂಗಾಯತ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆ ಸಿಗುವ ವರೆಗೂ ನಿರಂತರ ಹೋರಾಟ ಮುಂದುವರೆಯುತ್ತದೆ, ಅಂತಾ ಹೇಳಿದರು.
ಇದೇ ಸಂದರ್ಭದಲ್ಲಿ ” ಚೆನ್ನ ಬಸವಣ್ಣನವರ ವಚನಗಳ ಶಾಸ್ತ್ರೀಯ ಅದ್ಯಯನ ” ಕುರಿತು ಮಹಾ ಪ್ರಬಂಧವನ್ನು ಮಂಡಿಸಿ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ದಿಂದ ಪಿ.ಎಚ್.ಡಿ. ಪದವಿಯನ್ನು ಪಡೆದ ಡಾ.ಮಹಾಂತೇಶ ಬ ನರಸನ್ನವರ ಅವರನ್ನು ಸನ್ಮಾನಿಸಲಾಯಿತು.
ಇಂದಿನ ಪ್ರಸಾದ ದಾಸೋಹಿಗಳಾದ ಶರಣೆ ಶೋಭಾ ಮತ್ತು ಶರಣ ಶಿವರಾಯಿ ಹುಲಕುಂದ ದಂಪತಿ ಷಟ್ ಸ್ಥಲ ಧ್ವಜಾರೋಹಣ ನೆರವೇರಿಸಿದರು. ಶರಣೆ ಮಹಾದೇವಿ ಚಂದ್ರಪ್ಪ ಬೂದಿಹಾಳ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.
ಶರಣೆ ರತ್ನಕ್ಕ ಬೆಣಚಮರ್ಡಿ ಶರಣು ಸಮರ್ಪಿಸಿದರು. ಶರಣೆ ಸುಧಾ ರೊಟ್ಟಿ ಕಾರ್ಯಕ್ರಮ ನಿರೂಪಿಸಿದರು.ಜಾಗತಿಕ ಲಿಂಗಾಯತ ಮಹಾಸಭಾದ ಶರಣೆಯರು ಮೊದಲಿಗೆ ವಚನ ಪ್ರಾರ್ಥನೆ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಬಾಗೇವಾಡಿಯ ಬಿ.ಜಿ.ವಾಲಿಇಟಗಿ, ಆನಂದ ಕೊಂಡಗುಳಿ,ಎಸ್.ಜಿ.ಸಿದ್ನಾಳ,ಅರವಿಂದ ಪರುಶೆಟ್ಟಿ,ಮಹಾನಂದಾ ಪರುಶೆಟ್ಟಿ,ಶಂಕರ ಗುಡಗನಟ್ಟಿ,ಬಿ.ಡಿ.ಪಾಟೀಲ, ಅನುಸೂಯಾ ಬಶೆಟ್ಟಿ,ಸದಾನಂದ ಬಶೆಟ್ಟಿ,ಸುಜಾತಾ ಮತ್ತಿಕಟ್ಟಿ,ಚಂದ್ರಪ್ಪ ಬೂದಿಹಾಳ, ಈರಣ್ಣ ಚಿನಗುಡಿ,ಮೋಹನ ಗುಂಡ್ಲೂರ,ಮುರಿಗೆಪ್ಪ ಬಾಳಿ,ವಾಣಿ ಪಾಟೀಲ, ಕಮಲಾ ಗಣಾಚಾರಿ,ಪ್ರೇಮಾ ಕೊಂಗಿ,ಕಟ್ಟೀಮನಿ,ವಿವಿಧ ಬಡಾವಣೆಯ ಬವಸವಾನುಯಾಯಿಗಳು ಉಪಸ್ಥಿತರಿದ್ದರು.