ಬೆಳಗಾವಿ: ಡಿಸೆಂಬರ-೧೨: ಎರಡು ಸಾವಿರ ವರ್ಷಗಳಷ್ಟು ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂಗ್ಲಿಷ್ ಮಾಧ್ಯಮದ ವ್ಯಾಮೋಹದಿಂದ ಇಂದಿನ ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಿರುವುದು ವಿಷಾದನೀಯ ಸಂಗತಿ. ಇದು ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಕನ್ನಡ ತನ್ನ ಅಸ್ಮಿತೆ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಕನ್ನಡ ಮಾಧ್ಯಮದತ್ತ ನಮ್ಮ ಮಕ್ಕಳನ್ನು ಆಕರ್ಷಸಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳಿಗೆ ಉದ್ಯೋಗವಕಾಶದಲ್ಲಿ ಆದ್ಯತೆ ನೀಡಲು ಸಂವಿಧಾನಾತ್ಮಕವಾಗಿ ಕಾನೂನು ರಚಿಸಬೇಕು” ಎಂದು ಬೆಳಗಾವಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಹಿರಿಯ ಸಾಹಿತಿ ಆಶಾ ಕಡಪಟ್ಟಿ ಕರೆ ನೀಡಿದರು.
ಬೆಳಗಾವಿ ತಾಲೂಕಿನ ಅರಳಿಕಟ್ಟಿ ಗ್ರಾಮದ ತೋಂಟದಾರ್ಯ ವಿರಕ್ತಮಠದಲ್ಲಿ ಜರುಗಿದ ಬೆಳಗಾವಿ ತಾಲೂಕಾ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ” ಕನ್ನಡ ಸಾಹಿತ್ಯದ ಮೂಲ ಬೇರು ಜಾನಪದ ಸಾಹಿತ್ಯದಲ್ಲಿದೆ. ಅಕ್ಷರ ಕಲಿಯದ ಜನಪದರು ಕಟ್ಟಿ ಹಾಡಿದ ಹಾಡುಗಳಲ್ಲಿ ಕನ್ನಡ ನಾಡು, ನುಡಿ, ಇತಿಹಾಸದ ಹೆಜ್ಜೆಗುರುತುಗಳು ಕಾಣಸಿಗುತ್ತವೆ. ಹೀಗಾಗಿ ಸಾಹಿತ್ಯದ ಎಲ್ಲ ಪ್ರಕಾರಗಳು ಬೆಳೆದಂತೆ ಜಾನಪದವೂ ಬೆಳೆಯಬೇಕು. ತನ್ಮೂಲಕ ಇಂದಿನ, ಮುಂದಿನ ಪೀಳಿಗೆಯನ್ನು ತಲುಪಬೇಕು. ದಾಸರು, ಶರಣರು, ಕವಿ, ಸಾಹಿತಿಗಳಿಂದ ಮೂಡಿ ಬಂದ ಕನ್ನಡದ ಕಂಪು ಎಲ್ಲೆಡೆ ಪಸರಿಸುವಂತಗಬೇಕು. ಕನ್ನಡ ನುಡಿ, ಗಡಿ, ಜಲ ವಿಷಯಗಳ ಸಮಸ್ಯೆ ಬಂದಾಗ ಕನ್ನಡ ಹೋರಾಟಗಾರರೊಂದಿಗೆ ಸಾಹಿತಿಗಳು, ಮಠ ಮಾನ್ಯಗಳು ಹಾಗೂ ಸರ್ಕಾರಗಳು ಸ್ಪಂದಿಸಬೇಕು” ಎಂದು ಹೇಳಿದರು.
ಬೆಳಿಗ್ಗೆ ೮-೩೦ ಕ್ಕೆ ಬಸವರಾಜ ವಣ್ಣೂರ ರಾಷ್ಟ್ರಧ್ವಜಾರೋಹಣವನ್ನು, ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಹಾಗೂ ನಾಡಧ್ವಜವನ್ನು ತಾಲೂಕಾಧ್ಯಕ್ಷ ಸುರೇಶ ಹಂಜಿ ನೆರವೇರಿಸಿದರು. ನಂತರ ಗ್ರಾಮದ ವಿವಿಧ ಬೀದಿಗಳ ಮೂಲಕ ತಾಯಿ ಭುವನೇಶ್ವರಿಯ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು ಗಮನ ಸೆಳೆದವು. ಮೆರವಣಿಗೆಯುದ್ದಕ್ಕೂ ಊರಿನ ಜನರು, ವಿದ್ಯಾರ್ಥಿಗಳು, ಮಕ್ಕಳು ಹಾಗೂ ಕನ್ನಡಾಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದರು. ಎಲ್ಲೆಲ್ಲೂ ಕನ್ನಡ ಬಾವುಟಗಳು ಬಾನೆತ್ತರಕ್ಕೆ ಹಾರಾಡಿದವು.
೧೧-೦೦ ಗಂಟೆಗೆ ಉದ್ಘಾಟನೆಯಾದ ಕಾರ್ಯಕ್ರಮದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶಿವಶಂಕರ ಹಿರೇಮಠ ಧ್ವಜ ಹಸ್ತಾಂತರಿಸಿದರು. ಗಿರಿಯಾಲದ ಸಾಹಿತಿ ಡಾ. ಅಡಿವೆಪ್ಪ ಇಟಗಿ ಅವರ ಚಂದ್ರಬಿಂದು ಕವನ ಸಂಕಲನ ಬಿಡುಗಡೆಯಾಯಿತು.
ಗೋಷ್ಠಿ-೧ ರಲ್ಲಿ ಕನ್ನಡ ಸಾಹಿತ್ಯಕ್ಕೆ ಬೆಳಗಾವಿ ತಾಲೂಕಿನ ಕೊಡುಗೆ ಕುರಿತು ಹಿರಿಯ ಸಾಹಿತಿ ಡಾ. ಪಿ. ಜಿ. ಕೆಂಪಣ್ಣವರ ಉಪನ್ಯಾಸ ನೀಡಿದರು. ಡಾ. ಗುರುದೇವಿ ಹುಲೆಪ್ಪನವರಮಠ ಅವರ ಅಧ್ಯಕ್ಷತೆಯಲ್ಲಿ ಹಾಸ್ಯ ಗೋಷ್ಠಿ ಜರುಗಿತು. ಸುಮಾ ಕಿತ್ತೂರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಅಶೋಕ ಮಳಗಲಿ ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ಜರುಗಿದವು. ತಾಲೂಕಿನ ವಿವಿಧ ಕ್ಷೇತ್ರದ ಸಾಧಕರಿಗೆ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನ ಮಾಡಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಬೆಳಗಾವಿ ರಾಣಿ ಪಾರ್ವತಿದೇವಿ ಪದವಿ ಕಾಲೇಜಿನ ಪ್ರಧ್ಯಾಪಕ, ಹಿರಿಯ ಸಾಹಿತಿ ಡಾ. ಹೆಚ್. ಬಿ. ಕೋಲ್ಕಾರ ಅವರು ಮಾತನಾಡಿ, ” ಸ್ವಾತಂತ್ರ‍್ಯ ಚಳುವಳಿಯ ಕಿಚ್ಚು ಹಚ್ಚಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಹುಟ್ಟಿದ ತಾಲೂಕು ಬೆಳಗಾವಿ. ಕನ್ನಡದ ಮೊದಲ ರಾಜಮನೆತನ ಕದಂಬರಿಂದ ಹಿಡಿದ ಅನೇಕ ಕನ್ನಡ ರಾಜಮನೆತನಗಳು ಆಳಿದ ಭೂಮಿ ಬೆಳಗಾವಿ ನೆಲ. ಬೆಳಗಾವಿ ಕರ್ನಾಟಕದ ಮುಕುಟವಿದ್ದಂತೆ. ಹೀಗಾಗಿ ಸರ್ಕಾರ ಬೆಳಗಾವಿ ಗಡಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮಹಾಜನ ವರದಿ ಜಾರಿಗೆ ಅಥವಾ ಯಥಾ ಸ್ಥಿತಿ ಕಾಪಾಡುವಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು” ಎಂದು ಹೇಳಿದರು.
ಅರಳಿಕಟ್ಟಿ ವಿರಕ್ತ ಮಠದ ಶಿವಮೂರ್ತಿ ಮಹಾಸ್ವಾಮಿಗಳು ಸಾನಿಧ್ಯ ಹಾಗೂ ಮುತ್ನಾಳ ಮಠದ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಿದ ಸ್ವಾಗತ ಸಮಿತಿ ಅಧ್ಯಕ್ಷ ಶಿವಾನಂದ ಹಲಕರ್ಣಿಮಠ, ಆಶಾ ಯಮಕನಮರಡಿ, ಡಾ. ಜಯಾನಂದ ಧನವಂತ, ಮೆಣಸಿನಕಾಯಿ, ಶಿವಾನಂದ ತಲ್ಲೂರ ಮುಂತಾದವರು ಪಾಲ್ಗೊಂಡಿದ್ದರು.
Gadi Kannadiga > Local News > ಬೆಳಗಾವಿ ತಾಲೂಕಾ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳಿಗೆ ಉದ್ಯೋಗವಕಾಶದಲ್ಲಿ ಆದ್ಯತೆ: ಕಡಪಟ್ಟಿ
ಬೆಳಗಾವಿ ತಾಲೂಕಾ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳಿಗೆ ಉದ್ಯೋಗವಕಾಶದಲ್ಲಿ ಆದ್ಯತೆ: ಕಡಪಟ್ಟಿ
Suresh12/12/2022
posted on
