This is the title of the web page
This is the title of the web page

Please assign a menu to the primary menu location under menu

State

ಬೆಳಗಾವಿಯ ಹುಡುಗರ ಸಾಹಸ ” ಪರ್ಯಾಯ”


ಬೆಳಗಾವಿಯ ಹುಡುಗರ ಸಾಹಸ
” ಪರ್ಯಾಯ”

ಉತ್ತರ ಕರ್ನಾಟಕದಲ್ಲಿ ಚಲನಚಿತ್ರ ರಂಗ ಅಷ್ಟೊಂದು ಬೆಳೆದಿಲ್ಲ. ಆಗಾಗ ಒಂದೊಂದು ಪ್ರಯತ್ನ ನಡೆದಿರುವುದುಂಟು. ಚಿತ್ರನಿರ್ಮಾಣಕ್ಕೆ ಅಗತ್ಯವಾದ ಸ್ಟುಡಿಯೋ ಸೌಕರ್ಯ ಈ ಭಾಗದಲ್ಲಿ ಇಲ್ಲದಿರುವುದೂ ಒಂದು ಕಾರಣ. ಬಹಳ ಹಿಂದೆ ಮದ್ರಾಸ, ಬಿಟ್ಟರೆ ಕೊಲ್ಲಾಪುರ , ಪುಣೆ, ಮುಂಬಯಿಗಳಿಗೆ ಹೋಗಬೇಕಾಗುತ್ತಿತ್ತು. ಕನ್ನಡದ ಮೊದಲ ಚಿತ್ರ “ಸುಲೋಚನಾ” ಸಹ ೧೯೩೩-೩೪ ರಲ್ಲಿ ಕೊಲ್ಲಾಪುರದಲ್ಲಿ ಚಿತ್ರಣವಾಗಿತ್ತು. ೧೯೩೭ ರಲ್ಲಿ ಉತ್ತರ ಕರ್ನಾಟಕದ ಮೊದಲ ಚಿತ್ರ ” ಚಿರಂಜೀವಿ”( ಭಕ್ತ ಮಾರ್ಕಂಡೇಯ) ಹುಬ್ಬಳ್ಳಿ ವಿಜಾಪುರದವರೆಲ್ಲ ಸೇರಿ ಮಾಡಿದ್ದರು. ನಂತರ ೧೯೪೬ ರಲ್ಲಿ ಚಂದ್ರಹಾಸ ಸಿನೆಮಾ ತಯಾರಾಯಿತು. ೧೯೬೬ -೬೭ ರಲ್ಲಿ ಉತ್ತರ ಕರ್ನಾಟಕದವರು ನಿರ್ಮಿಸಿದ ” ಸಂಗೊಳ್ಳಿ ರಾಯಣ್ಣ ” ಬಹಳ ಪ್ರಸಿದ್ಧಿ ಪಡೆಯಿತು. ಅದರಲ್ಲಿ ಲತಾ ಮಂಗೇಶಕರ, ಆಶಾ ಭೋಸ್ಲೆ, ಮನ್ನಾಡೇ ಎಲ್ಲ ಹಾಡಿದ್ದರು. ” ಬೆಳ್ಳನೆ ಬೆಳಗಾಯಿತು ” ಎಂಬ ಹಾಡು ಬಹಳ ಜನಪ್ರಿಯವಾಯಿತು. ( ೨೦೧೨ ರಲ್ಲಿ ಮತ್ತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ” ಸಿನಿಮಾ ಬೆಳಗಾವಿಯ ಆನಂದ ಅಪ್ಪುಗೋಳರಿಂದ ತಯಾರಾಯಿತು). ಹುಬ್ಬಳ್ಳಿಯಲ್ಲೇ ಮತ್ತೆ ಕೆಲ ಪ್ರಯತ್ನಗಳು ನಡೆದವು.
ಈಚೆಗೆ ಕೆಲವು ಉತ್ಸಾಹಿ ಹೊಸ ಹುಡುಗರು ಕಿರು ಚಿತ್ರಗಳನ್ನು ತಯಾರಿಸುವ ಪ್ರಯತ್ನಕ್ಕೆ ತೊಡಗಿದ್ದು ಕಂಡುಬರುತ್ತದೆ. ಇದೀಗ ಮಮತಾ ಕ್ರಿಯೇಶನ್ ಹೆಸರಿನ ಚಿತ್ರ ಸಂಸ್ಥೆ ನಿರ್ಮಿಸಿರುವ ” ಪರ್ಯಾಯ” ಅಂತಹ ಒಂದು ಸಾಹಸ. ಬೆಳಗಾವಿಯ ರಾಜಕುಮಾರ ನಾಯಕ ಎಂಬವರು ಮತ್ತು, ಪತ್ರಕರ್ತ ಮುರುಗೇಶ ಶಿವಪೂಜಿ ಗೆಳೆಯರ ಬಳಗದವರು ನಿರ್ಮಿಸಿದ ಸುಮಾರು ಎರಡೂವರೆ ತಾಸುಗಳ ಈ ಪರ್ಯಾಯ ಈಗ ರಾಜ್ಯದ ಹಲವೆಡೆ ತೆರೆ ಕಂಡಿದೆ. ಬೆಳಗಾವಿಯ ನಿರ್ಮಲ ಟಾಕೀಸಿನಲ್ಲಿ ಅದು ಎರಡನೆಯ ವಾರಕ್ಕೆ ಕಾಲಿಟ್ಟಿದೆ.
ಗೋವಿಂದ( ಕಿವುಡ) , ಗೋಪಾಲ( ಅಂಧ) ಮತ್ತು ಪಾಂಡು ( ಮೂಕ) ಎಂಬ ಮೂವರು ಯುವಕರ ಸುತ್ತ ಹೆಣೆದ ಕತೆ ಇದು. ಹಳ್ಳಿಯೊಂದರಲ್ಲಿ ವಾಸಿಸುವ ಈ ಮೂವರಿಗೂ ಹೇಗಾದರೂ ಶ್ರೀಮಂತರಾಗಿ ಸುಖ ಜೀವನ ನಡೆಸುವ ಆಸೆ. ಹತ್ತು ಹಲವು ಕನಸು. ಕನಸು ಕಾಣುವುದೂ ತಪ್ಪಲ್ಲ, ಆಸೆಗಳಿರುವುದೂ ತಪ್ಪಲ್ಲ . ಆದರೆ ಅದಕ್ಕಾಗಿ ಸರಿಯಾದ ದಾರಿ ಹಿಡಿಯುವುದೂ ಅಷ್ಟೇ ಮುಖ್ಯ. ಈ ಯುವಕರು ” ಬಂಗಾರದ ಜಿಂಕೆ ” ಬೆನ್ನು ಹತ್ತಿ ಆಸೆಯಿಂದ ಮೋಸಗಾರರ ಬಲೆಗೆ ಬಿದ್ದು ಇದ್ದ ಮನೆ ಆಸ್ತಿಗಳನ್ನೂ ಕಳೆದುಕೊಳ್ಳುವಂತಾಗುತ್ತದೆ. ಇದು ಸಿನಿಮಾದ ಥೀಮ್.
ಒಳ್ಳೆಯ ಪ್ರಯತ್ನ ಎಂದು ನೋಡುಗರಿಂದ ಪ್ರಶಂಸೆ ಪಡೆದ ” ಪರ್ಯಾಯ” ದಲ್ಲಿ ಕೆಲವೊಂದು ಸಣ್ಣಪುಟ್ಟ ಲೋಪದೋಷಗಳಿದ್ದರೂ ಒಮ್ಮೆ ನೋಡಿ ಪ್ರೋತ್ಸಾಹಿಸಬೇಕಾದ ಚಿತ್ರ. ಯಾವ ಬ್ರಾಂಡೆಡ್ ನಟನಟಿಯರೂ ಇಲ್ಲದೇ ಎಲ್ಲ ಈ ಭಾಗದ ಹೊಸಬರನ್ನೇ ಒಳಗೊಂಡಿರುವ ಚಿತ್ರತಂಡದ ಉತ್ಸಾಹ ಮೆಚ್ಚತಕ್ಕದ್ದೇ. ಛಾಯಾಗ್ರಹಣ ಚೆನ್ನಾಗಿದೆ. ಸಂಗೀತ ಪರವಾಗಿಲ್ಲ. ಎಲ್ಲರೂ ಅವರವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಗೋಪಾಲನ ತಾಯಿಯ ಪಾತ್ರದಲ್ಲಿ ಜಯಂತಿ ರೇವಡಿ ಅವರ ಅಭಿನಯ ಉತ್ತಮ. ಹಿರಿಯ , ಅನುಭವಿ ನಿರ್ದೇಶಕರ ಸಲಹೆ, ಮಾರ್ಗದರ್ಶನ ಪಡೆದುಕೊಂಡಲ್ಲಿ ಈ ತಂಡ ಇನ್ನಷ್ಟು ಉತ್ತಮ ಚಿತ್ರಗಳನ್ನು ಕೊಡಬಲ್ಲುದೆಂಬ ಭರವಸೆಯಿಡಬಹುದು. ಉತ್ತರ ಕರ್ನಾಟಕದಲ್ಲಿ ಚಿತ್ರೋದ್ಯಮ ಬೆಳೆಯಬೇಕಾದ ಅಗತ್ಯವಿದೆ. ಇಂತಹ ಸಾಹಸಗಳಿಗೆ ಬಂಡವಾಳದಾರರ ನೆರವು ಮತ್ತು ಪ್ರೇಕ್ಷಕರ ಉತ್ತೇಜನ ಸಿಗಬೇಕಾಗಿದೆ. ತಪ್ಪದೇ ನೋಡಿ
– ಎಲ್. ಎಸ್. ಶಾಸ್ತ್ರಿ


Leave a Reply