ಬೆಳಗಾವಿ; ಇದೇ ಡಿಸೆಂಬರ್ ತಿಂಗಳ ಒಳಗಾಗಿ ಜಿಲ್ಲಾ ವಿಭಜನೆ ಕುರಿತು ಘೋಷಣೆ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡಿದ ಅವರಿಂದು ಮುಖ್ಯಮಂತ್ರಿಗಳು, ಕಂದಾಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಈ ಸಂಬಂಧ ಒತ್ತಾಯಿಸಿದರು. ಹಲವು ದಶಕಗಳ ಬೇಡಿಕೆ ಆಗಿರುವ ಬೆಳಗಾವಿ ಜಿಲ್ಲಾ ವಿಭಜನೆ ಇದೆ ವರ್ಷದ ಡಿಸೆಂಬರ್ ತಿಂಗಳ ಒಳಗಾಗಿ ಮುಗಿಸಬೇಕು ಇಲ್ಲದೆ ಹೋದಲ್ಲಿ ಮುಂದೆ 2028 ರ ಚುನಾವಣೆ ಮುಗಿಯುವವರೆಗೂ ಸಾಧ್ಯವಾಗುವುದಿಲ್ಲ ಎಂದರು.
2026 ಎಪ್ರಿಲ್ ತಿಂಗಳಿನಿಂದ ಜನಗಣತಿ ಆರಂಭಿಸುವುದಾಗಿ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ ಜನಗಣತಿ ಮುಗಿಯಲು ಎರಡು ವರ್ಷಗಳು ಬೇಕು ಅದಾದ ನಂತರ 2028 ಕ್ಕೆ ಮತ್ತೆ ಚುನಾವಣೆ ಬರುತ್ತದೆ ಹೀಗಾಗಿ ಈಗಲೇ ಜಿಲ್ಲಾ ವಿಭಜನೆ ಘೋಷಣೆ ಆಗದೆ ಹೋದಲ್ಲಿ ಮುಂದೆ ಮೂರು ವರ್ಷಗಳ ಕಾಲ ವಿಭಜನೆ ಸಾಧ್ಯವಿಲ್ಲ ಆದಕಾರಣ ಯಾವುದೇ ರಾಜಕಾರಣಿಗಳ ಅಥವಾ ವ್ಯಕ್ತಿಗಳ ಹಿತಾಸಕ್ತಿಯನ್ನು ಪರಿಗಣಿಸದೆ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ, ಆಡಳಿತಾತ್ಮಕ ಹಿತದ ದೃಷ್ಟಿಯಿಂದ ಜಿಲ್ಲೆ ವಿಭಜನೆ ಅವಶ್ಯವಾಗಿದೆ.
ಅತಿ ದೊಡ್ಡ ಜಿಲ್ಲೆ ಆಗಿರುವುದರಿಂದ ಆಡಳಿತ ನಡೆಸುವುದು ಕಷ್ಟವಾಗಿದೆ ಅಲ್ಲದೆ ಜಿಲ್ಲೆಗೆ ಬರಬಹುದಾದ ಅನುದಾನದಲ್ಲೂ ಹಾನಿಯಾಗಿದೆ. ಇಷ್ಟು ದೊಡ್ಡ ಜಿಲ್ಲೆಯನ್ನು ಕಂಟ್ರೋಲ್ ಮಾಡುವುದು ಡಿಸಿ, ಎಸ್ಪಿ , ಮತ್ತು ಜಿಲ್ಲಾ ಪಂಚಾಯತ್ ಸಿಇಓಗಳಿಗೆ ಕಷ್ಟವಾಗುತ್ತಿದೆ.
1973 ರಲ್ಲಿ ವಾಸುದೇವ ಆಯೋಗದ ವರದಿ ,ನಂತರ ಬಂದ ಹುಂಡೆಕಾರ ಆಯೋಗದ ವರದಿ, ಗದ್ದಿಗೌಡರ್ ಆಯೋಗದ ವರದಿ ಮತ್ತು ಎಂ.ಪಿ. ಪ್ರಕಾಶ್ ಆಯೋಗಗಳು ಜಿಲ್ಲಾ ವಿಭಜನೆ ಕುರಿತು ನೀಡಿದ ವರದಿಗಳನ್ನು ಸರಕಾರಗಳು ಕಸದ ಬುಟ್ಟಿಗೆ ಹಾಕಿವೆ. ಇತ್ತೀಚಿಗೆ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಸಚಿವರು ಜಿಲ್ಲಾ ವಿಭಜನೆ ಮತ್ತು ನೂತನ ಜಿಲ್ಲೆಗಳ ರಚನೆ ಕುರಿತು ಹೇಳಿಕೆ ನೀಡಿದ್ದಾರೆ ಇವರಿಗೆ ನಿಜವಾದ ಇಚ್ಛಾ ಶಕ್ತಿ ಇದ್ದಲ್ಲಿ ತಕ್ಷಣ ಹೊಸ ಜಿಲ್ಲೆಗಳ ರಚನೆ ಕುರಿತು ಘೋಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲಾ ವಿಭಜನೆಯಿಂದ ಗಡಿ ವಿವಾದಕ್ಕೆ ಯಾವುದೇ ರೀತಿಯ ಹಿನ್ನಡೆ ಆಗದು, ಗಡಿ ವಿವಾದ ಮುಗಿದ ಅಧ್ಯಾಯ ಈಗ ವಾತಾವರಣ ಸಂಪೂರ್ಣವಾಗಿ ಬದಲಾಗಿದೆ, ಭಾಷೆ ಹೆಸರಿನಲ್ಲಿ ರಾಜಕಾರಣ ಮಾಡುವ ಕೆಲವರು ಗಡಿ ವಿವಾದವನ್ನು ಜೀವಂತವಾಗಿ ಇಡಲು ಪ್ರಯತ್ನಿಸುತ್ತಿದ್ದಾರೆ ಅದು ಸಾಧ್ಯವಾಗದು. ತಕ್ಷಣ ಮುಖ್ಯಮಂತ್ರಿಗಳು ಬೆಳಗಾವಿ ಜಿಲ್ಲೆಯ ಸಚಿವರು ಮತ್ತು ಎಲ್ಲ ಜನಪ್ರತಿನಿಧಿಗಳನ್ನು ಕರೆದು ಸಭೆ ನಡೆಸಿ ತಕ್ಷಣ ಈ ಕುರಿತು ಘೋಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.