This is the title of the web page
This is the title of the web page

Please assign a menu to the primary menu location under menu

State

ಬೆಳಗಾವಿ ಗಾಂಧೀ ಭವನ ಲೋಕಾರ್ಪಣೆ ಜೂ.27 ರಂದು


ಬೆಳಗಾವಿ, ಜೂ.: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪೀರನವಾಡಿಯಲ್ಲಿ ನಿರ್ಮಿಸಲಾಗಿರುವ ಅತ್ಯಂತ ಸುಂದರ ಹಾಗೂ ಭವ್ಯವಾದ ಗಾಂಧೀ ಭವನದ ಲೋಕಾರ್ಪಣೆ ಕಾರ್ಯಕ್ರಮ ಸೋಮವಾರ(ಜೂ.27) ಸಂಜೆ‌ 4 ಗಂಟೆಗೆ ನಡೆಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಭವನವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಭವ್ಯ ಗಾಂಧೀ ಭವನ:

ಪೀರನವಾಡಿಯ ಹಚ್ಚ ಹಸುರಿನ ಪ್ರದೇಶದಲ್ಲಿ ಎರಡು ಎಕರೆ ಜಾಗೆಯಲ್ಲಿ ಭವ್ಯವಾದ ಗಾಂಧೀ ಭವನವನ್ನು ನಿರ್ಮಿಸಲಾಗಿದೆ.
ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆಯನ್ನು ಹಾಗೂ ಬದುಕಿನ ಮೌಲ್ಯವನ್ನು ತಿಳಿಸಲು ಅನುಕೂಲವಾಂತಹ ಚಟುವಟಿಕೆಗಳನ್ನು ನಿರಂತರವಾಗಿ ‌ನಡೆಸುವ ಮಹತ್ತರ ಉದ್ಧೇಶದಿಂದ ಗಾಂಧೀ ಭವನವನ್ನು ನಿರ್ಮಿಸಲಾಗಿದೆ.

ಮೂರೂ‌ ಕೋಟಿ ರೂಪಾಯಿ ವೆಚ್ಚದಲ್ಲಿ ಬೆಳಗಾವಿಯ ನಿರ್ಮಿತಿ ಕೇಂದ್ರವು ನಿರ್ಮಿಸಿರುವ ಈ ಭವನದಲ್ಲಿ ಧ್ಯಾನ, ಪ್ರಾರ್ಥನೆಗೆ ಅನುಕೂಲವಾಗುವಂತೆ ಒಂದು ನೂರಕ್ಕೂ ಹೆಚ್ಚು ಜನರು ಕುಳಿತುಕೊಳ್ಳಬಹುದಾದ ಸಭಾಂಗಣವಿದೆ.

ಗಾಂಧೀಜಿಯವರ ಹೋರಾಟದ ಬದುಕು, ಸತ್ಯದ ಅನ್ವೇಷಣೆ, ಅಹಿಂಸಾ ಮಾರ್ಗದ ಜೀವನದ ವಿವಿಧ ಮಗ್ಗುಲುಗಳನ್ನು ಡಿಜಿಟಲ್ ಡಿಜಿಟಲ್ ಮಾಧ್ಯಮದ ಮೂಲಕ ಪರಿಚಯಿಸುವುದಕ್ಕಾಗಿ ಪ್ರದರ್ಶನ ಕೊಠಡಿಯನ್ನು ನಿರ್ಮಿಸಲಾಗಿದೆ.

ಇದಲ್ಲದೇ ಮಹಾತ್ಮಾ ಗಾಂಧೀಜಿಯವರ ಸಮಗ್ರ ಜೀವನದ ಮೇಲೆ ಬೆಳಕು ಚೆಲ್ಲುವಂತಹ ಪುಸ್ತಕಗಳು ಮತ್ತು ಸಂಶೋಧನಾ ಕೃತಿಗಳನ್ನು ಜನರಿಗೆ ಸುಲಭವಾಗಿ ಒಂದೇ ಕಡೆ ದೊರಕುವಂತಾಗಲು ನೂತನ ಗಾಂಧೀ ಭವನದಲ್ಲಿ ಕಿರು ಗ್ರಂಥಾಲಯವನ್ನು ಸ್ಥಾಪಿಸಲು ಸ್ಥಳಾವಕಾಶ ಕಲ್ಪಿಸಲಾಗಿದೆ.
ಭವನದ ಹೊರ ಆವರಣದಲ್ಲಿ ಮಹಾತ್ಮಾ ಗಾಂಧೀಜಿಯವರ ಧ್ಯಾನಸ್ಥ ಬೃಹತ್ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಪ್ರವೇಶ ದ್ವಾರದ ಎದುರಿನಲ್ಲಿ ಇನ್ನೊಂದು ಕಂಚಿನ ಪುತ್ಥಳಿಯನ್ನು ಸ್ಥಾಪಿಸಲಾಗಿದೆ.
ಆವರಣದ ಇನ್ನೊಂದು ಬದಿಯಲ್ಲಿ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ದಂಡಿ ಯಾತ್ರೆಯ ದೃಶ್ಯವನ್ನು ಪ್ರತಿಬಿಂಬಿಸುವ ಆಕರ್ಷಕ ಪುತ್ಥಳಿಗಳನ್ನು ನಿರ್ಮಿಸಲಾಗಿದೆ.

ಮುಂಬರುವ ದಿನಗಳಲ್ಲಿ ಡಿಜಿಟಲ್ ಪ್ರದರ್ಶನ ಕೊಠಡಿ ಹಾಗೂ ಗ್ರಂಥಾಲಯವನ್ನು ಆರಂಭಿಸುವ ಯೋಜನೆಯನ್ನು ಹೊಂದಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ತಿಳಿಸಿದ್ದಾರೆ.

ಪ್ರತಿಯೊಂದು ಜಿಲ್ಲೆಯಲ್ಲಿ ಗಾಂಧೀ ಭವನ ಸ್ಥಾಪಿಸುವ ಮೂಲಕ ಮಹಾತ್ಮ ಗಾಂಧೀಜಿಯವರ ಜೀವನಸಾಧನೆಗಳ ಕುರಿತು ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂಬ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರಾಜ್ಯದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಭವನಗಳನ್ನು ನಿರ್ಮಿಸುತ್ತಿದೆ..

ದಾವಣಗೆರೆ ಜಿಲ್ಲೆಯ‌ ಗಾಂಧೀ ಭವನವನ್ನು ಕೇಂದ್ರ ಗೃಹ ಇಲಾಖೆಯ ಸಚಿವರಾದ ಶ್ರೀ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಲೋಕಾರ್ಪಣೆಗೊಳಿಸಿರುತ್ತಾರೆ.
ಅದೇ ರೀತಿ ಬಳ್ಳಾರಿ, ಧಾರವಾಡ ಮತ್ತಿತರ ಜಿಲ್ಲೆಗಳಲ್ಲಿ ಗಾಂಧೀ ಭವನ ನಿರ್ಮಾಣ ಕಾರ್ಯ ನಡೆದಿದೆ.
ಅಭಿವೃದ್ಧಿಯ ಹರಿಕಾರ ಎಂದೇ ಕರೆಯಲ್ಪಡುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ ಅವರ ಮುತುವರ್ಜಿಯಿಂದ ಸುಂದರವಾದ ಗಾಂಧೀ ಭವನ ಕಟ್ಟಡದ ಕಾಮಗಾರಿಯು ಪೂರ್ಣಗೊಂಡು ಇದೀಗ ಉದ್ಘಾಟನೆಗೊಳ್ಳುತ್ತಿದೆ.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯ ಪೀರನವಾಡಿಯಲ್ಲಿನ ಪ್ರಶಾಂತವಾದ ಸ್ಥಳದಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಸುಂದರವಾದ ಗಾಂಧೀ ಭವನವನ್ನು ನಿರ್ಮಿಸಲಾಗಿದೆ. ಈ‌ ಭವನದಲ್ಲಿ ವರ್ಷವಿಡೀ ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ ಅವರ ಆಶಯವಾಗಿದೆ.

“ನನ್ನ ಜೀವನವೇ ನನ್ನ ಸಂದೇಶ” ಎಂದು‌ ಸಾರುವ ಮೂಲಕ ಸತ್ಯ, ಶಾಂತಿ ಹಾಗೂ ಅಹಿಂಸಾ ತತ್ವವನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡಿದ್ದ ಮಹಾತ್ಮಾ‌ ಗಾಂಧೀಜಿಯವರ ವಿಚಾರಧಾರೆಯನ್ನು ಪ್ರಚುರಪಡಿಸಲು ಗಾಂಧೀ ಭವನ ವೇದಿಕೆಯಾಗಲಿದೆ.

ಗಾಂಧೀ ಭವನ ಲೋಕಾರ್ಪಣೆ ಸಮಾರಂಭಕ್ಕೆ ಸ್ವಾತಂತ್ರ್ಯ ಹೋರಾಟಗಾರರು, ಹಿರಿಯ ನಾಗರಿಕರು ಮತ್ತು ಎಲ್ಲಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ ಪ್ರಕಟಣೆಯಲ್ಲಿ ಕೋರಿದ್ದಾರೆ.


Gadi Kannadiga

Leave a Reply