ಬೆಳಗಾವಿ: 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ತಾಲೂಕಾ ಮಟ್ಟದ ಉಚಿತ ಆರೋಗ್ಯ ಮೇಳ ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರನ್ವಯ ಶಕ್ರವಾರ(ಏ.29) ನಗರದ ವಡಗಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕಾ ಮಟ್ಟದ ಆರೋಗ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಶಶಿಕಾಂತ ಮುನ್ಯಾಳ ಹೇಳಿದರು.
ತಾಲೂಕಾ ಪಂಚಾಯಿತಿ ಸಭಾಭವನದಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ತಾಲೂಕಾ ಮಟ್ಟದ ಉಚಿತ ಆರೋಗ್ಯ ಮೇಳ ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳ ಜಾಗೃತಿ ಅಭಿಯಾನ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಒಂದು ಕ್ರಿಯಾ ಯೋಜನೆ ತಯಾರಿಸಿಕೊಂಡು ತಾಲೂಕಿನ ಎಲ್ಲ ವ್ಶೆದ್ಯಾಧಿಕಾರಿಗಳು, ಸಿಬ್ಬಂದಿಗಳು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕೆಂದರು.
ತಜ್ಞ ವೈದ್ಯರನ್ನು ಜಿಲ್ಲೆಯ ಹುಕ್ಕೇರಿ, ಚಿಕ್ಕೋಡಿ, ಬೈಲಹೊಂಗಲ ಹಾಗೂ ಖಾನಾಪೂರ ತಾಲೂಕುಗಳಿಂದ ನಿಯೋಜನೆ ಮಾಡಿಕೊಳ್ಳಬೇಕು. ಅದರಂತೆ ಬಿಮ್ಸ ಆಸ್ಪತ್ರೆ ಕೆ.ಎಲ್.ಇ., ಐ.ಎಂ.ಎ. ಯವರಿಂದ ಕೂಡ ತಜ್ಞವ್ಶೆದ್ಯರನ್ನು ನಿಯೋಜಿಸಿಕೊಳ್ಳುವಂತೆ ತಿಳಿಸಿದರು.
ಬೆಳಗಾವಿ ತಾಲೂಕಾ ವ್ಶೆದ್ಯಾಧಿಕಾರಿ ಡಾ.ಶಿವಾನಂದ ಮಾಸ್ತಿಹೊಳಿ ಅವರು ಆರೋಗ್ಯ ಮೇಳದಲ್ಲಿ ವಸ್ತು ಪ್ರದರ್ಶನ ಪೌಷ್ಠಿಕ ಆಹಾರದ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ ಡೋಸ್ ಲಸಿಕೆ ನೀಡಲಾಗುವದೆಂದು ತಿಳಿಸಿದರು.
ಮಹಾನಗರ ಪಾಲಿಕೆ ಆರೋಗ್ಯಧಿಕಾರಿ ಡಾ. ಸಂಜಯ ಡುಮ್ಮಗೋಳ ಅವರು ಪಾಲಿಕೆ ವಾಹನಗಳ ಮೂಲಕ ಆರೋಗ್ಯ ಮೇಳದ ಪ್ರಚಾರ ಮತ್ತು ಮೇಳಕ್ಕೆ ಔಷಧಿ, ಕುಡಿಯುವ ನೀರಿನ ವ್ಯವಸ್ಥೆ ಮಾಡುವದಾಗಿ ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ಬಿ.ಎನ್.ತುಕ್ಕಾರ ಅವರು ಈಗಿನಿಂದಲೇ ಕ್ರಿಯಾ ಯೋಜನೆ ಹಾಕಿಕೊಂಡು ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕು. ಮೇಳದಲ್ಲಿ ಯಾವುದೇ ಕೊರತೆ ಆಗದ ರೀತಿಯಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ವ್ಶೆದ್ಯರು, ತಜ್ಞ ವ್ಶೆದ್ಯರು, ಸಿಬ್ಬಂದಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ನಿಯೋಜಿಸಿಕೊಳ್ಳಬೇಕೆಂದರು.
ಜಿಲ್ಲಾ ಆಯುಷ ಅಧಿಕಾರಿಗಳಾದ ಡಾ. ಎಸ್.ಬಿ. ಸುಣಧೋಳಿ ಅವರು ಆಯುಷ ಇಲಾಖೆಯಿಂದ ಯೋಗ ಶಿಬಿರ, ವಸ್ತು ಪ್ರದರ್ಶನ ಏರ್ಪಡಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜೇಶ ದಾನವಾಡಕರ ಮೇಳದ ಬಗ್ಗೆ ಈಗಿನಿಂದಲೇ ವ್ಯಾಪಕ ಪ್ರಚಾರ ಕೈಗೊಳ್ಳಬೇಕು.ಅಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಇರುವದಿಲ್ಲಾ ಅಂಥವರನ್ನು ಗುರುತಿಸಿ ಕರೆತರಬೇಕು. ಅದರಂತೆ ನರೇಗಾ ಕಾರ್ಮಿಕರನ್ನು ಕರೆತರಲು ಗ್ರಾಮ ಪಂಚಾಯತಿ ಪಿ.ಡಿ.ಓ. ಅವರಿಗೆ ಸೂಚಿಸಲಾಗುವುದು.
ಎಲ್ಲ ವ್ಶೆದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿಗಳಲ್ಲಿ ಸಭೆ ಜರುಗಿಸಿ ಉಚಿತ ಆರೋಗ್ಯ ಮೇಳದ ಬಗ್ಗೆ ತಿಳಿಸಬೇಕು. ಮೇಳಕ್ಕೆ 7 ಸಾವಿರದಿಂದ 8 ಸಾವಿರ ಜನರನ್ನು ಕರೆತಂದು ತಪಾಸಣೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಓಗಳು, ಆರೋಗ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿರಿದ್ದರು.