This is the title of the web page
This is the title of the web page

Please assign a menu to the primary menu location under menu

Local News

ಆರ್.ವಿ. ದೇಶಪಾಂಡೆ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ


ಬೆಳಗಾವಿ ಸುವರ್ಣಸೌಧ ಡಿ.೨೮. : ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಶಾಸಕ, ಮಾಜಿ ಸಚಿವ ರಘುನಾಥರಾವ ವಿಶ್ವನಾಥರಾವ್ ದೇಶಪಾಂಡೆ ಅವರಿಗೆ ೨೦೨೨ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.
ಇಂದು ಬೆಳಿಗ್ಗೆ ವಿಧಾನಸಭೆಯ ಕಲಾಪ ಪ್ರಾರಂಭವಾಗುತ್ತಿದ್ದಂತೆಯೇ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಶಸ್ತಿ ಪ್ರಕಟಿಸಿ, ಆರ್.ವಿ. ದೇಶಪಾಂಡೆ ಅವರ ಸಾಧನೆಗಳನ್ನು ವಿವರಿಸಿದರು.
೧೯೪೭ರಲ್ಲಿ ಜನಿಸಿದ ಆರ್.ವಿ. ದೇಶಪಾಂಡೆ ಅವರು ಬಿ.ಎ., ಎಲ್.ಎಲ್.ಬಿ. ಪದವೀಧರರಾಗಿದ್ದಾರೆ. ಹಳಿಯಾಳದ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ರಾಜಕಾರಣ ಆರಂಭಿಸಿದ ಆರ್.ವಿ. ದೇಶಪಾಂಡೆ ಅವರು ೧೯೮೩ ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಚುನಾಯಿತರಾದರು. ಈವರೆಗೆ ೮ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಈ ಸದನದಲ್ಲಿ ಹೆಚ್ಚು ಬಾರಿ ಚುನಾಯಿತರಾಗಿರುವ ಹಿರಿಮೆ ಅವರದಾಗಿದೆ. ಸಣ್ಣ ಕೈಗಾರಿಕೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಕೃಷಿ, ತೋಟಗಾರಿಕೆ, ಕಂದಾಯ, ಕೌಶಲ್ಯಾಭಿವೃದ್ಧಿ ಸೇರಿದಂತೆ ಅನೇಕ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮಾರ್ಗದರ್ಶನದಲ್ಲಿ ಬೆಳೆದ ಆರ್.ವಿ. ದೇಶಪಾಂಡೆ ಅವರು ಕನಿಷ್ಠ ಸುಮಾರು ೧೦ ಜನ ಮುಖ್ಯಮಂತ್ರಿಗಳ ಜೊತೆ ಕಾರ್ಯನಿರ್ವಹಿಸಿದ್ದಾರೆ. ಪ್ರತಿಪಕ್ಷದ ನಾಯಕರಾಗಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ, ೨೦೦೪ ರಲ್ಲಿ ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷರಾಗಿ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಸದನದ ಚೌಕಟ್ಟು ಮೀರದಂತೆ ಮಾತನಾಡುವ ಅನುಭವ, ಜ್ಞಾನ ಅವರಿಗೆ ಇದೆ. ಅವರು ಅತ್ಯುತ್ತಮ ಸಂಸದೀಯ ಪಟು ಮಾತ್ರವಲ್ಲ ತಿರುಪತಿ ತಿರುಮಲ ದೇವಸ್ಥಾನದ ಟ್ರಸ್ಟಿಯಾಗಿ ಹಾಗೂ ಹಳಿಯಾಳದಲ್ಲಿ ತುಳಜಾ ಭವಾನಿ ದೇವಸ್ಥಾನ ನಿರ್ಮಿಸುವ ಮೂಲಕ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ಸೇವೆಗೈಯುತ್ತಿದ್ದಾರೆ. ಕೆನರಾ ಮೆಡಿಕಲ್ ಸೆಂಟರ್ ಮೂಲಕ ಶಿಕ್ಷಣ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ಹಳಿಯಾಳದ ರುಡ್‌ಸೆಟ್ ಸಂಸ್ಥೆಯ ಮೂಲಕ ಯುವಕರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನೀಡಿರುವುದು ಇವರ ಸಮಾಜಮುಖಿ ಕಾರ್ಯಗಳಿಗೆ ಉತ್ತಮ ಉದಾಹರಣೆಯಾಗಿದೆ ಎಂದು ಶುಭ ಹಾರೈಸಿದರು.
ಪ್ರಶಸ್ತಿಯ ಗೌರವ ಹೆಚ್ಚಿಸಿದ ಆರ್.ವಿ. ದೇಶಪಾಂಡೆ ಆಯ್ಕೆ: ಹಿರಿಯರು ಹಾಗೂ ಮಾರ್ಗದರ್ಶಕರಾಗಿರುವ ಆರ್.ವಿ. ದೇಶಪಾಂಡೆ ಅವರನ್ನು ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆಮಾಡಿರುವುದು ಪ್ರಶಸ್ತಿಯ ಗೌರವ ಹಾಗೂ ಮೌಲ್ಯ ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದಿಸಿ ಮಾತನಾಡಿದ ಮುಖ್ಯಮಂತ್ರಿಗಳು, ವಿಧಾನಸಭೆಯಲ್ಲಿ ಉನ್ನತ ಮಟ್ಟದ ನಡುವಳಿಕೆಗೆ ಆರ್.ವಿ. ದೇಶಪಾಂಡೆ ಮಾದರಿಯಾಗಿದ್ದಾರೆ. ೧೯೮೦ ರಲ್ಲಿ ಹಳಿಯಾಳ ಎ.ಪಿ.ಎಂ.ಸಿ. ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ನನ್ನ ತಂದೆ ದಿ. ಎಸ್.ಆರ್.ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು. ನಂತರ ಎ.ಪಿ.ಎಂ.ಸಿ. ಅಧ್ಯಕ್ಷರಾದರು. ಅಲ್ಲಿಂದ ದೇಶಪಾಂಡೆ ಅವರು ಸಕ್ರಿಯ ರಾಜಕಾರಣದಲ್ಲಿ ಮುನ್ನಡೆ ಸಾಧಿಸುತ್ತ ಸಾಗಿದರು. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ತಮ್ಮ ಸ್ವಕ್ಷೇತ್ರ ಹಳಿಯಾಳದ ಸಮಗ್ರ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಜನಪರ ಕಾಳಜಿಯಿಂದ ಕೆಲಸ ಮಾಡುವ ರಾಜ್ಯ ಮತ್ತು ದೇಶದ ಹಿತಕಾಯುವ ಮನೋಭಾವ ಹೊಂದಿದ್ದಾರೆ. ೧೯೮೩ರಲ್ಲಿ ಕ್ರಿಯಾಶೀಲ ಯುವ ಪಡೆಯನ್ನು ಹೊಂದಿದ್ದ ಬಹಳಷ್ಟು ಕ್ರಿಯಾಶೀಲ ಹೊಸ ಶಾಸಕರು ವಿಧಾನಸಭೆ ಪ್ರವೇಶಿಸಿದರು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಸಂಪುಟಕ್ಕೆ ಆರ್.ವಿ. ದೇಶಪಾಂಡೆ, ಬಸವರಾಜ ಪಾಟೀಲ ಅನ್ವರಿ, ಇನಾಮದಾರ್ ಸೇರಿದಂತೆ ಹಲವರನ್ನು ಸೇರಿಸಲು ತಮ್ಮ ತಂದೆ ಎಸ್.ಆರ್. ಬೊಮ್ಮಾಯಿ ಶ್ರಮಿಸಿದ್ದನ್ನು ಮುಖ್ಯಮಂತ್ರಿಯವರು ಸ್ಮರಿಸಿದರು. ಸುಮಾರು ೧೦ ವರ್ಷಗಳಿಗೂ ಹೆಚ್ಚು ಕಾಲ ಕೈಗಾರಿಕಾ ಮಂತ್ರಿಯಾಗಿ ಕೈಗಾರಿಕಾ ನೀತಿ ಹಾಗೂ ಬೆಳೆವಣಿಗೆಗೆ ಶ್ರಮಿಸಿದ್ದಾರೆ. ಜಾಗತೀಕರಣ, ಉದಾರೀಕರಣ ನೀತಿಗಳ ಪ್ರಯೋಜನವು ರಾಜ್ಯಕ್ಕೆ ದೊರೆಯಲು ಪ್ರಯತ್ನಿಸಿದ್ದಾರೆ. ಪಕ್ಷಾತೀತವಾಗಿ ಸ್ನೇಹ, ಆತ್ಮೀಯತೆ ಬೆಳೆಸಿಕೊಂಡಿದ್ದಾರೆ. ಇಂದಿನ ಕೇಂದ್ರ ಮಂತ್ರಿಮಂಡಲದಲ್ಲಿಯೂ ಅನೇಕ ಸ್ನೇಹಿತರನ್ನು ಹೊಂದಿದ್ದಾರೆ. ಹೊಸದಾಗಿ ಚುನಾಯಿತರಾಗಿ ಬರುವ ಶಾಸಕರಿಗೆ ಆರ್.ವಿ. ದೇಶಪಾಂಡೆ ಅವರ ನಡೆ ಅನುಕರಣೀಯವಾಗಿದೆ ಎಂದರು.
ವಿಧಾನಸಭೆಯ ಚರ್ಚೆಗಳ ಗುಣಮಟ್ಟ ಹೆಚ್ಚಾಗಬೇಕು: ಅತ್ಯುತ್ತಮ ಸಂಸದೀಯ ನಡೆ ಹೊಂದಿರುವ ಶಾಸಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಕಾರ್ಯವು ಇತರೆ ಶಾಸಕರಿಗೆ ಸ್ಫೂರ್ತಿ ಹಾಗೂ ಪ್ರೇರಣಾದಾಯಕವಾಗಿದೆ. ವಿಧಾನಸಭೆಯ ಚರ್ಚೆಗಳ ಗುಣಮಟ್ಟ ಹೆಚ್ಚಾಗುತ್ತ ಸಾಗಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆಗೆ ಹೊಸ ಶಾಸಕರು ಬರಬಹುದು, ಹಳೆಯ ಶಾಸಕರು ಪುನ: ಚುನಾಯಿತರಾಗಬಹುದು. ಆದರೆ ಸದನದ ಚರ್ಚೆಗಳು ಗುಣಮಟ್ಟ ಎತ್ತರಕ್ಕೆ ಸಾಗಬೇಕು. ಅತ್ಯುತ್ತಮ ಚರ್ಚೆ ಪಟುವಾಗಿರುವ ಆರ್.ವಿ. ದೇಶಪಾಂಡೆ ಅವರು ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸದ ವಿಷಯ. ೧೯೮೩ರಿಂದ ಅವರೊಂದಿಗೆ ಪರಿಚಯ, ಒಡನಾಟ ಪ್ರಾರಂಭವಾಯಿತು. ದೇಶಪಾಂಡೆ ಅವರು ಯಾವುದೇ ಖಾತೆ ವಹಿಸಿದರೂ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿ ನ್ಯಾಯ ಒದಗಿಸಿದ್ದಾರೆ. ವಿಧಾನಸಭೆಯ ಅಧಿವೇಶನಕ್ಕೆ ಸಕ್ರಿಯವಾಗಿ ಹಾಜರಾಗಿ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಅವರ ನಡೆ ಇತರರಿಗೆ ಅನುಕರಣೀಯವಾಗಿದೆ. ಜನಸೇವೆಯ ಪ್ರಾಮಾಣಿಕ ಚಿಂತನೆಯೊಂದಿಗೆ ಅಜಾತಶತ್ರು ಎಂದು ಜನಾನುರಾಗಿಯಾಗಿದ್ದಾರೆ. ದಣಿವಿಲ್ಲದೇ ಕೆಲಸ ಮಾಡುವ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಶುಭ ಹಾರೈಸಿದರು.
ರಾಜಕಾರಣಿಗಳ ಬಗ್ಗೆ ಜನಾಭಿಪ್ರಾಯ ಬದಲಾಗಿರುವುದು ಕಳವಳಕಾರಿ: ರಾಜಕಾರಣಿಗಳ ಬಗ್ಗೆ ಜನಾಭಿಪ್ರಾಯ ಬದಲಾಗಿರುವುದು ಕಳವಳದ ಸಂಗತಿಯಾಗಿದೆ. ಸಾರ್ವಜನಿಕ ಜೀವನದಲ್ಲಿ ರಾಜಕಾರಣಿ ಎಂದು ಪರಿಚಯಿಸಿಕೊಳ್ಳಲು ಹಿಂದೇಟು ಹಾಕುವಂತಾಗಿದೆ ಎಂದು ಆರ್.ವಿ. ದೇಶಪಾಂಡೆ ಹೇಳಿದರು.
ವಿಧಾನಸಭೆಯಲ್ಲಿಂದು ಅತ್ಯುತ್ತಮ ಶಾಸಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ರಾಜಕಾರಣಿಗಳ ಕುರಿತು ಜನಾಭಿಪ್ರಾಯ ಬದಲಾಗಿದೆ ಇದರಲ್ಲಿ ನಮ್ಮ ತಪ್ಪೂ ಇದೆ. ಕೆಲವು ಜನರ ತಪ್ಪುಗಳೂ ಇವೆ. ಜನರಿಂದ ಚುನಾಯಿತರಾಗಿ ಬಂದ ನಂತರ ಮಾಡುವ ಕಾರ್ಯಗಳು ಯಾವುದೇ ಸಹಾಯ ಎಂದು ನಾವು ತಿಳಿಯಬಾರದು. ಜನರಿಗೆ ಕೆಲಸ ಮಾಡುವ ಜವಾಬ್ದಾರಿ ಮತ್ತು ಕರ್ತವ್ಯ ನಮ್ಮದಾಗಿದೆ. ಶಾಸಕರಾದವರು ಎಲ್ಲಾ ವಿಷಯಗಳ ಮಾಹಿತಿ ಹಾಗೂ ಜ್ಞಾನ ಸಂಪಾದಿಸಿಕೊಳ್ಳಬೇಕು. ಶಾಸನ ಸಭೆಯ ಗೌರವ, ಶಿಸ್ತು ಕಾಪಾಡಿಕೊಳ್ಳಬೇಕು. ತಾವು ಈ ಮಟ್ಟಕ್ಕೆ ಬರಲು ದೇವರು, ತಂದೆ-ತಾಯಿ, ಹಿರಿಯರು ಹಾಗೂ ಕ್ಷೇತ್ರದ ಜನರ ಆಶೀರ್ವಾದ ಕಾರಣವಾಗಿದೆ. ಕುಟುಂಬದ ಸಹಕಾರವು ದೊಡ್ಡದು ಎಂದು ಕೃತಜ್ಞತೆ ಸಲ್ಲಿಸಿದರು.


Gadi Kannadiga

Leave a Reply