ಬೆಳಗಾವಿ: ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ರಸದೌತಣ ನೀಡುವ ಇಂಡಿಯನ್ ಪ್ರೀಮಿಯರ್ ಲೀಗ್ ಕೆಲ ದಿನಗಳ ಹಿಂದೆಯಷ್ಟೇ ಆರಂಭವಾಗಿದೆ. ಐಪಿಎಲ್ ಪಂದ್ಯಾವಳಿ ಮೇಲೆ ಬೆಟ್ಟಿಂಗ್ ಬೆಳಗಾವಿಯಲ್ಲಿ ಜೋರಾಗಿಯೇ ನಡೆಯುತ್ತಿದೆ.
ಇದೀಗ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಓರ್ವ ಬುಕ್ಕಿಯನ್ನು ಬೆಳಗಾವಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಬೆಳಗಾವಿ ತಾಲೂಕಿನ ಮಜಗಾವಿ ಗ್ರಾಮದ ಪವನ್ ಕಾಕತ್ಕರ್ (32) ಬಂಧಿತ ಬುಕ್ಕಿ. ಭಾನುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸಲಾಗುತ್ತಿತ್ತು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಇನ್ಸ್ಪೆಕ್ಟರ್ ನಿಂಗನಗೌಡ ಪಾಟೀಲ ನೇತೃತ್ವದ ತಂಡ, ಬುಕ್ಕಿ ಪವನ್ ಕಾಕತ್ಕರ್ನನ್ನು ಬಂಧಿಸಿದೆ. ಬಂಧಿತನಿಂದ 15,500 ನಗದು, ಬೆಟ್ಟಿಂಗ್ ವಿವರ ಬರೆದ ಕಾಗದ ಹಾಗೂ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ಕಳೆದ ಎರಡು – ಮೂರು ವರ್ಷಗಳಿಂದ ಬೆಟ್ಟಿಂಗ್ ನಿಯಂತ್ರಣದಲ್ಲಿತ್ತು. ಇದೀಗ ಬುಕ್ಕಿಗಳು ಬೆಟ್ಟಿಂಗ್ ದಂಧೆ ಆರಂಭಿಸಿದ್ದಾರೆ. ಇಲ್ಲಿನ ಬುಕ್ಕಿಗಳು ಹುಬ್ಬಳ್ಳಿ, ಮುಂಬೈ, ಪುಣೆಯ ದೊಡ್ಡ ಬುಕ್ಕಿಗಳ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.