ಬೆಳಗಾವಿಯಲ್ಲಿ ಬಣಗಾರ ಸಮಾಜದ ವಧು– ವರರ ಸಮಾವೇಶ

Murugesh Shivapuji
ಬೆಳಗಾವಿಯಲ್ಲಿ ಬಣಗಾರ ಸಮಾಜದ ವಧು– ವರರ ಸಮಾವೇಶ
WhatsApp Group Join Now

ಬೆಳಗಾವಿ: ‘ಬೆಳಗಾವಿಯ ಬಣಗಾರ ಸಮಾಜದ ವತಿಯಿಂದ 8ನೇ ಅಖಿಲ ಭಾರತ ಮಟ್ಟದ ವಧು– ವರರ ಹಾಗೂ ಪಾಲಕರ ಸಮಾವೇಶವನ್ನು ಜ.12ರಂದು ಜೆಎನ್ಎಂಸಿ ಕ್ಯಾಂಪಸ್ಸಿನಲ್ಲಿರುವ ಡಾ.ಬಿ.ಎಸ್‌.ಜೀರಗೆ ಸಭಾಂಗಣದಲ್ಲಿ ಆಯೋಜಿಸಲಾಗಿದೆ’ ಎಂದು ಸಮಾಜದ ಅಧ್ಯಕ್ಷ ಅರುಣಕುಮಾರ ಈ. ಜೋತಾವರ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾನುವಾರ ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ನಂತರ ವಧು– ವರರ ಹಾಗೂ ಪಾಲಕರ ಸಮಾವೇಶದ ಚಟುವಟಿಕೆಗಳು ಆರಂಭವಾಗಲಿವೆ. ಅದೇ ದಿನ ಸಂಜೆ 4ಕ್ಕೆ ಸಮಾಜದ ಗಣ್ಯರ, ಸಾಧಕರ ಸನ್ಮಾನ ಸಮಾರಂಭವೂ ನಡೆಯಲಿದೆ’ ಎಂದರು.

‘ನಮ್ಮ ಸಂಘಟನೆ ವತಿಯಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಈ ಸಮಾವೇಶ ಆಯೋಜಿಸಲಾಗುತ್ತಿದೆ. ಕಳೆದ ಏಳೂ ಸಮಾವೇಶಗಳು ಅತ್ಯಂತ ಯಶಸ್ವಿಯಾಗಿವೆ. 8ನೇ ಸಮಾವೇಶದಲ್ಲಿ ಪಾಲ್ಗೊಳ್ಳಲು ಈಗಾಗಲೇ 600ಕ್ಕೂ ಹೆಚ್ಚು ವಧು– ವರರು ನೋಂದಣಿ ಮಾಡಿಸಿದ್ದಾರೆ’ ಎಂದು ತಿಳಿಸಿದರು.

‘ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಕೀಲ ರಮೇಶ ಮಣೂರೆ, ಬಣಗಾರ ಸಮಾಜದ ಶಿವಮೊಗ್ಗ ಜಿಲ್ಲೆಯ ಮುಖಂಡ ವಿರೂಪಾಕ್ಷಪ್ಪ ಜವಳಿ, ಉದ್ಯಮಿಗಳಾದ ರಾಚಪ್ಪ ಮ. ಸರಡಗಿ, ಸಂಗಮನಾಥ ಮು. ಕರಡೆಗುದ್ದಿ, ಶಿವಶಂಕರ ಶಿ. ಚೊಣ್ಣದ, ಪಂಚಾಕ್ಷರಿ ಶಿ. ಚೊಣ್ಣದ ಆಗಮಿಸಲಿದ್ದಾರೆ’ ಎಂದರು.

‘ಬಣಗಾರ ಸಮಾಜ ಕೂಡ ಲಿಂಗಾಯತ ಸಮಾಜದ ಇನ್ನೊಂದು ಉಪಜಾತಿಯೇ ಆಗಿದೆ. ನೂಲಿಗೆ ಬಣ್ಣ ಹಾಕುತ್ತಿದ್ದ ಕಾರಣ ಈ ಸಮಾಜಕ್ಕೆ ಬಣಗಾರ (ಬಣ್ಣಗಾರ) ಎಂಬ ಹೆಸರು ಬಂದಿದೆ. ಶಿವಶರಣ ಶಂಕರ ದಾಸೀಮಯ್ಯ ಅವರೇ ನಮ್ಮ ಸಮಾಜದ ಕುಲದೈವ. ಕೆಲವು ಕಡೆ ಸಿಂಪಿ ಸಮಾಜ, ದರ್ಜಿ ಸಮಾಜ ಎಂದೂ ಕರೆಯುತ್ತಾರೆ. ಆಂಧ್ರ, ತೆಲಂಗಾಣದಲ್ಲಿ ಚಿಪ್ಪಿಗ, ಮಹಾರಾಷ್ಟ್ರದಲ್ಲಿ ಅಂಗಾರಿ ಎಂಬ ಹೆಸರುಗಳೂ ಇವೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಹರಡಿರುವ ಈ ಸಮಾಜಕ್ಕೆ ಬೇರೆಬೇರೆ ಹೆಸರುಗಳಿವೆ. ಕರ್ನಾಟಕ ರಾಜ್ಯದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಣ್ಣ ಹಾಕುವ ಕಸುಬು ಇಲ್ಲವಾದ ಮೇಲೆ ಈ ಸಮಾಜದ ಜನ ಬೇರೆಬೇರೆ ಉದ್ಯೋಗ ಹಾಗೂ ವ್ಯಾಪಾರದಲ್ಲಿ ತೊಡಗಿದ್ದಾರೆ’ ಎಂದೂ ಅವರು ವಿವರಿಸಿದರು.

ಸಮಾಜದ ಕಾರ್ಯದರ್ಶಿ ಸೋಮನಾಥ ಸೂ. ಕೊಳಕಿ, ಸಮಾವೇಶದ ಅಧ್ಯಕ್ಷ ಹೇಮಂತ ರಾ. ಕಿತ್ತೂರ, ಕಾರ್ಯದರ್ಶಿ ಮಹಾಂತೇಶ ಮ. ಊರೊಳಗಿನ, ಸ್ಮರಣ ಸಂಚಿಕೆ ಸಂಪಾದಕ ಬಾಲಚಂದ್ರ ಶಿ. ಉಮದಿ, ಪ್ರಚಾರ ಸಮಿತಿ ಕಾರ್ಯದರ್ಶಿ ‍ಪ್ರವೀಣಕುಮಾರ ಚಿಕಲಿ ಇತರರು ಇದ್ದರು.

WhatsApp Group Join Now
Telegram Group Join Now
Share This Article
error: Content is protected !!