This is the title of the web page
This is the title of the web page

Please assign a menu to the primary menu location under menu

Local News

ಸತ್ತಿಗೇರಿಯಲ್ಲಿ ೨ನೇ ಕನ್ನಡ ಸಾಹಿತ್ಯ ಸಮ್ಮೇಳನ : ಅಕ್ಷರ ಜಾತ್ರೆಗೆ ಚಾಲನೆ ನೀಡಿದ ಬ್ರಿಗೇಡಿಯರ್ ಡಿ. ಎಂ. ಪೂರ್ವಿಮಠ


ಯರಗಟ್ಟಿ: ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಆಯೋಜಿಸಿದ್ದ ೨ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಷ್ಟ್ರಧ್ವಜಾರೋಹಣವನ್ನು ಬ್ರಿಗೇಡಿಯರ್ ಡಿ. ಎಂ. ಪೂರ್ವಿಮಠ ನಾಡ ಧ್ವಜ ಅಜೀತಕುಮಾರ ದೇಸಾಯಿ, ಪರಿಷತ್ ಧ್ವಜಾರೋಹಣ ಕಸಾಪ ಅಧ್ಯಕ್ಷ ತಮ್ಮಣ್ಣಾ ಕಾಮಣ್ಣವರ ನೇರವೇರಿಸುವ ಮೂಲಕ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಚಾಲನೆ ನೀಡಿದರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆನೆ ಅಂಬಾರಿ, ಕುಂಭ ಮೇಳ, ಕುದುರೆ ಸಾರೋಟು, ಗೊಂಬೆ ಕುಣಿತ, ಕರಡಿ ಮಜಲು, ಮಹಿಳಾ ಡೊಳ್ಳು ಕುಣಿತ, ಜಗ್ಗಲಗಿ ಮೇಳ, ವೀರಗಾಸೆ ಇನ್ನೂಳಿದ ಎಲ್ಲಾ ಕಲಾಮೇಳ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಖ್ಯವೇದಿಕೆಗೆ ಸಮ್ಮೇಳನಾಧ್ಯಕ್ಷರನ್ನು ಕರೆತರಲಾಯಿತು.
ಲಿಂ. ಷ. ಬ್ರ. ಶ್ರೀ. ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಮಹಾಮಂಟಪದಲ್ಲಿ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ ಸಿದ್ದಣ್ಣ ಜಕಬಾಳ ಸಮ್ಮೇಳನಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಮ್ಮೇಳನಾಧ್ಯಕ್ಷ ಸಿದ್ದಣ್ಣ ಜಕಬಾಳ ಜನಪದ ಸಾಹಿತ್ಯವೂ ಆಕಾಶದಷ್ಟು ವಿಶಾಲ, ಸಾಗರದಷ್ಟು ಆಳ. ಅದರಲ್ಲಿ ಹಲವು ಪ್ರಕಾರಗಳಿವೆ-ಗಾದೆ, ಒಗಟು, ಒಡಪು, ಕಥೆ, ಗೀತೆ, ಕಥನಗೀತೆ ಪ್ರಮುಖವಾಗಿವೆ. ಇಡೀ ಜಗತ್ತಿನ ಸಾಹಿತ್ಯದ ಮೂಲವನ್ನೇಲ್ಲ ಜನಪದಸಾಹಿತ್ಯದಲ್ಲಿ ಕಾಣಬಹುದು. ಅದಕ್ಕೆ ಬಿ.ಎಂ. ಶ್ರೀ ಅವರು ಜನಪದಸಾಹಿತ್ಯವನ್ನು ‘ಜನವಾಣಿ ಬೇರು; ಕವಿವಾಣಿ ಹೂವು’ ಎಂದು ಕರೆದಿದ್ದಾರೆ.
ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ (ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ಇತ್ಯಾದಿ), ನಾಟಕ (ಬಯಲಾಟ, ದೊಡ್ಡಾಟ, ಶ್ರೀ ಕೃಷ್ಣಪಾರಿಜಾತ, ಯಕ್ಷಗಾನ) ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಕನ್ನಡ ಜಾನಪದ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದರೆ ತಪ್ಪಲ್ಲ. ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜಾನಪದ ಗೀತೆಗಳು ತನ್ನ ಹಿಂದಿನ ವೈಭವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿವೆ ಎಂದೆನಿಸಿದರೂ ತನ್ನ ಮೂಲನೆಲೆಯಾದ ಹಳ್ಳಿಗಳಲ್ಲಿ ಇನ್ನೂ ತನ್ನ ನೆಲೆಯನ್ನು ಬದ್ರವಾಗಿ ಊಳಿಸಿಕೊಂಡಿರುವುದು ಸಮಾಧಾನ ತರುವ ಸಂಗತಿಯಾಗಿದೆ. ಕಂಸಾಳೆ ಪದ, ಗೀಗಿಪದ, ಕೋಲಾಟದ ಪದ, ರಾಗಿ ಬೀಸೋ ಪದ, ಸುಗ್ಗಿ ಹಾಡುಗಳು, ಹೀಗೆ ಇನ್ನೂ ಅನೇಕ ವಿವಿಧ ಬಗೆಯ ಜಾನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು, ದೇವರುಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಈ ಜಾನಪದ ಗೀತೆಗಳನ್ನು ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇವು ಹಳ್ಳಿಯು ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಿರಿನುಡಿ ಎನ್ನಬಹುದು.
ಹೂಮಾಲೆಯಂಥ ಮೇಲಿನ ಸಾಲುಗಳನ್ನು ಯಾರು ಯಾವಾಗ ಬರೆದರೋ ಗೊತ್ತಿಲ್ಲ,ಇವು ನೂರಾರು ವರ್ಷಗಳಿಂದ ಸಾವಿರಾರು ಜನಗಳ ಬಾಯಿಂದ ಹರಿದು ಬಂದ ನುಡಿಗಳು,ನಮ್ಮ ಹಳ್ಳಿಗಳಲ್ಲಿ ಕಲೋಪಾಸಕತ್ವವನ್ನು,ಸೃಜನಶೀಲತೆಯನ್ನು, ಮತ್ತು ಮಾಧುರ್ಯವನ್ನು ಹಳ್ಳಿಗರಿಗೆ ತಿಳಿಯದಂತೆ ಅವರ ಜೀವನ ವಿಧಾನವನ್ನಾಗಿ ಪರಿವರ್ತಿಸಿದ ಸಂಸ್ಕೃತಿಯೊಂದರ ಹೆಜ್ಜೆಗುರುತುಗಳು. ಪ್ರಾಯಶಃ ಸಹಸ್ರಾರು ವರ್ಷದ ಹಿಂದೆ ಜಗತ್ತಿನಲ್ಲೆಲ್ಲ ಇದ್ದುದ್ದು ಜಾನಪದವೊಂದೇ, ಮಾನವನು ತಾನು ಮಾಡುವ ಕೆಲಸಗಳಲ್ಲೆಲ್ಲಾ ತನ್ಮಯತೆಯನ್ನು ತುಂಬಲು ಮಾಡಿದ ಪ್ರಯತ್ನಗಳ ಸರಮಾಲೆಯೇ ಜಾನಪದವಾಗಿರಬಹುದು.ತನ್ನ ಸುತ್ತಲಿನ ಪರಿಸ್ಥಿತಿಗೆ ತಕ್ಕಂತೆ ತಂತ್ರಜ್ಞಾನಗಳನ್ನೂ,ಅರೋಗ್ಯ ರಕ್ಷಣೆಗೆ ವೈದ್ಯಕೀಯವನ್ನು, ಪ್ರಕೃತಿಯ ಬಿರುಸಿಗೆ ಉತ್ತರವಾಗಿ ಭಕ್ತಿಯನ್ನೂ ಬೆಳೆಸಿಕೊಂಡಿರಬಹುದು.
ಜನಪದ ಮತ್ತು ಜಾನಪದ ಎಂಬ ಶಬ್ದಗಳು ಒಂದು ಸಾಮಾಜಿಕ ವ್ಯವಸ್ಥೆಯನ್ನು ಸೂಚಿಸುತ್ತವೆ. ಪ್ರತಿಯೊಂದು ಸಾಮಾಜವೂ ತನ್ನ ಪುರಾತನರ ಸಾರವನ್ನು ಹೀರಿ ತನ್ನ ಸದ್ಯದ ಬದುಕಿಗೊಂದು ಅರ್ಥವನ್ನೂ,ತನ್ನ ಸದ್ಯದ ಸಮಸ್ಯೆಗಳಿಗೊಂದು ಪರಿಹಾರವನ್ನೂ,ತನ್ನ ಭಕ್ತಿಗೊಂದು ರೂಪವನ್ನೂ -ಕಲೆ,ತಂತ್ರಜ್ಞಾನ ಇತ್ಯಾದಿಗಳ ಬೆಳವಣಿಗೆಯನ್ನೂ ಸಾಮುದಾಯಿಕವಾಗಿ ನಿರ್ವಹಿಸುತ್ತದೆ. ಇದು ಯಾವುದೇ ಅಧಿಕಾರದ, ಸಂಪ್ರದಾಯದ ಪೋಷಣೆಯಿಲ್ಲದೇ ತನ್ನಿಂದ ತಾನೇ ಹರಿದು ಬಂದು ಮಣ್ಣಿನ ಸಂಸ್ಕೃತಿಯ ಸಾರವಾಗಿ ‘ಜಾನಪದ’ಎನ್ನಿಸಿಕೊಂಡಿದೆ.
ಕರ್ನಾಟಕದಲ್ಲಿ ಬಳಸಲಾಗುವ ಕನ್ನಡ ಭಾಷೆಯನ್ನು ದೇಶದ ಪ್ರಮುಖ ಭಾಷೆಗಳಲ್ಲಿ ಒಂದಾಗಿ ಭಾರತೀಯ ಸಂವಿಧಾನವು ಗುರುತಿಸಿದೆ. ಕರ್ನಾಟಕದ ಬಹುತೇಕ ಜನರಿಗೆ ಕನ್ನಡವು ಮಾತೃಭಾಷೆಯಾಗಿದೆ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗೋವಾ, ಹಾಗೂ ದಮನ್ ಹಾಗೂ ದಿಯುಗಳಲ್ಲಿ ಕನ್ನಡವನ್ನು ಮಾತೃ ಭಾಷೆಯಾಗಿ ಬಳಸುವ ಗಣನೀಯ ಸಂಖ್ಯೆಯ ಜನರಿದ್ದಾರೆ. ಈ ನೆಲದ ಮೇಲೆ ಪ್ರಭಾವ ಬೀರಿದ ಪ್ರಾದೇಶಿಕ ವ್ಯತ್ಯಾಸಗಳಿಗೆ ಅನುಗುಣವಾಗಿ ಭಾಷೆಯು ವಿವಿಧ ರೂಪ ಹಾಗೂ ಶೈಲಿಯ ಉಪಭಾಷೆ ಅಥವಾ ಪ್ರಾಂತೇಯ ಭಾಷೆಗಳನ್ನು ಪಡೆದುಕೊಂಡಿದೆ. ವಿವಿಧ ಪ್ರಾದೇಶಿಕ ಪ್ರಾಂತೀಯ ಭಾಷೆಗಳ ವ್ಯತ್ಯಾಸಗಳನ್ನು ಹೊಂದಿದ, ದ್ರಾವಿಡ ಗುಂಪಿನ ಭಾಷೆಗಳೆಂದು ಜನಪ್ರಿಯವಾಗಿರುವ ದಕ್ಷಿಣ ಭಾರತದ ಭಾಷೆಗಳ ಗುಂಪಿಗೆ ಕನ್ನಡವು ಸೇರಿದೆ. ಪ್ರಸ್ತುತದಲ್ಲಿ, ಕನಿಷ್ಠ ಮೂರು ಪ್ರಾದೇಶಿಕ ಉಪಭಾಷೆಗಳಾದ, ಮೈಸೂರು ಕನ್ನಡ, ಧಾರವಾಡ-ಕನ್ನಡ ಹಾಗೂ ಮಂಗಳೂರು-ಕನ್ನಡಗಳ ಜನಪ್ರಿಯವಾದ ಭಾಷಾ ಶೈಲಿಗಳನ್ನು, ಕ್ರಮವಾಗಿ ಮೂರು ಸಾಂಸ್ಕೃತಿಕ ಕೇಂದ್ರಗಳಾದ ಮೈಸೂರು, ಧಾರವಾಡ ಹಾಗೂ ಮಂಗಳೂರು ಪ್ರದೇಶಗಳಲ್ಲಿ ಮಾತನಾಡಲಾಗುತ್ತದೆ. ಈ ಮುಖ್ಯ ವಿಭಾಗಗಳೊಳಗೆ, ಇತರ ಹಲವಾರು ಪ್ರಾಂತೀಯ ಉಪ-ವಿಭಾಗಗಳಾದ ಹವ್ಯಕ, ಬಡಗ, ನಾಡವ, ಕೂಸ, ಮುಂತಾದವುಗಳಿದ್ದು, ಅವು ಇತರ ಭಾಷಾ ಸ್ವರೂಪಗಳೊಂದಿಗೆ ಬೆರೆತ ಸ್ಥಳೀಯ ಉಪವಿಭಾಗಗಳಾಗಿವೆ.
ಅಶೋಕನ ಶಿಲಾಶಾಸನಗಳ ಮೂಲಕ ಭಾರತದೆಲ್ಲೆಡೆ ಆರಂಭಿಕ ಲಿಪಿಯಾಗಿ ಜನಪ್ರಿಯಗೊಂಡು, ಎಲ್ಲ ಆಧುನಿಕ ಭಾರತೀಯ ಭಾಷೆಗಳಿಗೆ ಮೂಲ-ಲಿಪಿಯಾದ ಬ್ರಾಹ್ಮೀ ಲಿಪಿಯಿಂದ ಕನ್ನಡ ಭಾಷೆಯ ಲಿಖಿತ ಲಿಪಿರೂಪಗಳನ್ನೂ ಪಡೆದುಕೊಳ್ಳಲಾಗಿದೆ. ಕ್ರಿ.ಶ. ೪೫೦ಕ್ಕೆ ಸೇರಿದ ಹಲ್ಮಿಡಿ ಶಾಸನದಲ್ಲಿ ಕನ್ನಡ ಲಿಪಿಯ ಪ್ರಾರಂಭಿಕ ರೂಪವು ದೊರೆತಿದೆ. ಬಾದಾಮಿ ಚಾಲುಕ್ಯರ ಸಂಸ್ಕೃತದ ಅನೇಕ ಶಾಸನಗಳನ್ನು ಈ ಲಿಪಿಯಲ್ಲೆ ಬರೆಯಲಾಗಿದೆ. ಕನ್ನಡ ಲಿಪಿಯು ನಿರಂತರವಾಗಿ ಬದಲಾವಣೆ ಆಗುತ್ತಲೇ ಇದ್ದು ಇಂದಿನ ಕನ್ನಡ ಲಿಪಿಯು, ಸುಮಾರು ೨,೦೦೦ ವರ್ಷಗಳ ಕಾಲಾವಧಿಯಲ್ಲಿ ಇಂತಹ ವಿಕಸನೀಯ ಬದಲಾವಣೆಗಳಿಂದ ಉಂಟಾದುದು. ಬದಲಾಗದ ಏಕರೂಪ ದೊಂದಿಗೆ ಯಾಂತ್ರಿಕವಾಗಿ ನಕಲಾಗುವ ಅಕ್ಷರ ರೂಪಗಳನ್ನು ನೀಡುವ ಮುದ್ರಣವನ್ನು ಪರಿಚಯಿಸಿದ ಮೇಲೆ, ಪ್ರಸ್ತುತ ಲಿಪಿರೂಪವನ್ನು ಪ್ರಮಾಣೀಕೃತಗೊಳಿಸಲಾಯಿತು.
ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳು ದ್ರಾವಿಡಭಾಷಾ ಗುಂಪಿಗೆ ಸೇರಿರುವುದರಿಂದ, ಎಲ್ಲ ಮೂರು ಭಾಷೆಗಳೂ ಒಂದೇ ರೀತಿಯ ಬಾಹ್ಯ ರಚನೆಯನ್ನು ಹೊಂದಿವೆ. ದ್ರಾವಿಡ ಗುಂಪಿಗೆ ಸೇರಿದ ಉಪಭಾಷೆಯಾಗಿ ಆರಂಭವಾಗಿ, ತನ್ನದೇ ಆದ ಲಿಪಿಯನ್ನು ಹೊಂದಿದ ಸುಸಂಸ್ಕೃತ ಭಾಷೆಯ ಸ್ಥಾನಮಾನಗಳನ್ನು ಪಡೆಯುವ, ವಿವಿಧ ಹಂತಗಳ ಅಭಿವೃದ್ಧಿಯನ್ನು ಅವು ಹಾದು ಬಂದಿದ್ದರೂ, ತಾಂತ್ರಿಕ, ವೈಜ್ಞಾನಿಕ ಹಾಗೂ ತತ್ವಚಿಂತಕ ಶಬ್ದಸಂಪತ್ತು, ಸಂಸ್ಕೃತ ಭಾಷೆಯಿಂದ ಪೋಷಿತವಾಗಿದೆ. ಭಾಷೆಯ ಪ್ರಾರಂಭಿಕ ರೂಪವನ್ನು ಹಳೆಗನ್ನಡ ಹಾಗೂ ನಂತರದ ನಡುಗನ್ನಡ ಎಂದು ಕರೆಯಲಾಗಿದ್ದು, ಅದು ಹೊಸಗನ್ನಡಕ್ಕೆ ದಾರಿ ಮಾಡಿಕೊಟ್ಟಿತು. ಹಳೆಗನ್ನಡವು ಪ್ರಾಚೀನ ಸಾಹಿತ್ಯವನ್ನು ಪೋಷಿಸಿದ್ದರೆ, ಬಹುಪಾಲು ಜನಪ್ರಿಯ ಸಾಹಿತ್ಯವು ನಡುಗನ್ನಡ ಅಥವಾ ಹೊಸಗನ್ನಡಕ್ಕೆ ಸೇರಿವೆ.
ಆಡಳಿತ ಭಾಷೆಯಾಗಿ ಕನ್ನಡ
ಕ್ರಿ.ಶ. ಆರನೆಯ ಶತಮಾನದಿಂದ ಕನ್ನಡದಲ್ಲಿ ಹೊರಡಿಸಿದ ಅನೇಕ ರಾಜಾಜ್ಞೆಗಳನ್ನು ನೋಡಿದಾಗ, ಪ್ರಾಕೃತ ಹಾಗೂ ಕನ್ನಡ ಭಾಷೆಗಳನ್ನು ಪ್ರಾರಂಭಿಕ ಮತ್ತು ನಂತರದ ಕಾಲಗಳಲ್ಲಿ ಕ್ರಮವಾಗಿ ಬಳಸಿದರೂ, ನಂತರ ಬಂದ ಕರ್ನಾಟಕದ ಅರಸರು ಆಡಳಿತ ಉದ್ದೇಶಕ್ಕಾಗಿ ಕನ್ನಡವನ್ನೂ ಬಳಸುತ್ತಿದ್ದರು ಎಂದು ತಿಳಿದು ಬರುತ್ತದೆ. ಕದಂಬರ ಹಲ್ಮಿಡಿ ಶಿಲಾಶಾಸನ ಹಾಗೂ ಚಾಲುಕ್ಯರ ಬಾದಾಮಿ ಗುಹಾ ಶಾಸನೆಗಳು ರಾಜಾನುದಾನಗಳನ್ನು ಘೋಷಿಸುವ ಅತ್ಯಂತ ಪುರಾತನ ಕನ್ನಡ ದಾಖಲೆಗಳಾಗಿವೆ. ಕಲ್ಯಾಣದ ಚಾಳುಕ್ಯರ ಆಳ್ವಿಕೆಯಲ್ಲಿ ಹಾಗೂ ಆನಂತರದ ಹೊಯ್ಸಳ ಹಾಗೂ ಸೇವುಣರ ಆಡಳಿತಾವಧಿಯಲ್ಲೂ, ಆಡಳಿತ ಉದ್ದೇಶಗಳಿಗಾಗಿ ಕನ್ನಡ ಭಾಷೆಯನ್ನು ಬಳಸುವುದು ಹೆಚ್ಚಿತು ಈ ರಾಜಮನೆತನಗಳಿಗೆ ಸೇರಿದ ಬಹುತೇಕ ಶಾಸನಗಳು ಕನ್ನಡದ ಹಲವಾರು ಆಡಳಿತಾತ್ಮಕ ಪದಗಳನ್ನೂ ಕನ್ನಡ ಹಾಗೂ ಸಂಸ್ಕೃತ ವಾಕ್ಯಭಾಗಗಳನ್ನೂ ಹೊಂದಿವೆ. ಕೆಲವು ಸಂಸ್ಕೃತ ಆದೇಶಗಳಲ್ಲಿ, ಜನಸಾಮಾನ್ಯರು ಸುಲಭವಾಗಿ ಅರ್ಥ ಮಾಡಿಕೊಳ್ಳಲೆಂದು
ಕಾರ್ಯರೂಪಕ ಭಾಗವನ್ನು ಕನ್ನಡದಲ್ಲಿ ಬರೆಯಲಾಗಿದೆ. ವಿಜಯನಗರ ಅರಸರಿಗೆ ಸೇರಿದ ಅನೇಕ ದಾಖಲೆಗಳು ಕನ್ನಡದಲ್ಲಿವೆ. ವಿಜಯನಗರ ಸಾಮ್ರಾಜ್ಯದ ಉತ್ತರಾಧಿಕಾರಿಗಳಾದ ಕೆಳದಿಯ ನಾಯಕರು ಹಾಗೂ ಮೈಸೂರಿನ ಒಡೆಯರೂ ಕೂಡ, ರಾಜ್ಯದ ಏಕೈಕ ಆಡಳಿತ ಭಾಷೆಯಾಗಿ ಕನ್ನಡವನ್ನು ಬಳಸಿದರು. ಬಿಜಾಪುರದ ಅರಸರು, ಶಾಹಜಿ, ಏಕೋಜಿ ಹಾಗೂ ಶಿವಾಜಿಯ ಶಾಸನ ಹಾಗೂ ರಾಜಾಜ್ಞೆಗಳು ಕನ್ನಡದಲ್ಲಿವೆ. ಆಡಳಿತ ಹಾಗೂ ಸಾಮಾನ್ಯ ಉದ್ದೇಶಗಳೆರಡಕ್ಕೂ ಬ್ರಿಟಿಷರು ಕೊಡಗಿನ ಅರಸರು ಹಾಗೂ ಮೈಸೂರು ಒಡೆಯರು ಕನ್ನಡವನ್ನು ವಿಸ್ತೃತವಾಗಿ ಬಳಸಿದರು. ಪ್ರಸ್ತುತದಲ್ಲಿ, ಕರ್ನಾಟಕ ಸರ್ಕಾರವು ಕನ್ನಡವನ್ನು ಅಧಿಕೃತ ಆಡಳಿತ ಭಾಷೆಯಾಗಿ ಮಾಡಿದ್ದು ಭಾಷೆಯನ್ನು ಉತ್ತೇಜಿಸಲು ಹಾಗೂ ರಾಜ್ಯ ವ್ಯವಸ್ಥೆಯ ಎಲ್ಲ ಸ್ಥರಗಳಲ್ಲೂ ಅದರ ಬಳಕೆಯನ್ನು ಅನುಷ್ಠಾನಕ್ಕೆ ತರಲು ಹಾಗೂ ಭಾಷೆಯನ್ನು ಬಳಸಲು ಹಲವಾರು ಯೋಜನೆ ಹಾಗೂ ಕ್ರಮಗಳನ್ನು ಅನುಷ್ಠಾನ ಮಾಡಿದೆ. ಹಾಗಾಗಿ ಕನ್ನಡ ಭಾಷೆಗೆ ಸರ್ಕಾರ ಹಾಗೂ ಜನಸಾಮಾನ್ಯರಿಂದಲೂ ಒತ್ತಾಸೆ ದೊರಕಿದೆ ಎಂದು ಹೇಳಿದರು.
ನಂತರ ವೇದಿಕೆ ಮೇಲೆ ಕವಿ ಗೋಷ್ಠಿ, ಚಿಂತನ ಗೋಷ್ಠಿ, ಮಹಿಳಾ ಸಬಲೀಕರಣ-ಸಾಧ್ಯತೆ-ಸವಾಲುಗಳು, ಮಹಿಳೆ ಮತ್ತು ಸಮಾಜ, ಕೃಷಿ ಸಂಸ್ಕೃತಿಯ ಅಗತ್ಯತೆ, ಅನುವಾದಿತ ಕವನ ಸಂಕಲನ ಖೃತಿ, ಲೋಕಾರ್ಪಣೆ, ಯರಗಟ್ಟಿ ತಾಲೂಕಾ ನಕ್ಷ ಬಿಡುಗಡೆ, ಸಾಧಕರ ಸನ್ಮಾನ, ಸಮಾರೋಪ ಸಮಾರಂಭ ಕಾರ್ಯಕ್ರಮ ಮೂಲಕ ಸಮ್ಮೇಳನಕ್ಕೆ ವಿದಾಯ ಹೇಳಲಾಯಿತು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ಮ.ಘ.ಚ. ಡಾ. ಶಿವಲಿಂಗ ಮುರುಘರಾಜೇಂದ್ರ ಮಹಾಸ್ವಾಮಿಗಳು, ಸಾನಿಧ್ಯ ವಹಿಸಿದ ಷ. ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಕಸಾಪ ಧ್ವಜ ಹಸ್ತಾಂತರಿಸಿ ಶ್ರೀಮತಿ ರತ್ನಾ ಮಾಮನಿ, ಕಸಾಪ ಅಧ್ಯಕ್ಷ ತಮ್ಮಣ್ಣಾ ಕಾಮಣ್ಣವರ, ಯರಗಟ್ಟಿ ತಹಶೀಲ್ದಾರ ಮಹಾಂತೇಶ ಮಠದ, ಮುಂಡರಗಿ ತಹಶೀಲ್ದಾರ ಶ್ರೀಮತಿ ಶೃತಿ ಮುಳ್ಳಪ್ಪಗೌಡ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ಮಾಜಿ ಜಿ. ಪಂ. ಸದಸ್ಯರಾದ ಅಜೀತಕುಮಾರ ದೇಸಾಯಿ, ಈರಣ್ಣಾ ಚಂದರಗಿ, ಗೌಡಪ್ಪ ಸವದತ್ತಿ, ಮಹಾಂತೇಶ ಗೋಡಿ, ಶ್ರೀಮತಿ ರಾಜಶ್ರೀ ಮಾಕಾಳಿ, ಬಸವರಾಜ ಪಟ್ಟಣಶೆಟ್ಟಿ, ಸೌರಭ ಚೋಪ್ರಾ, ಅಜಯರಾವ ದೇಸಾಯಿ, ಪರ್ವತಗೌಡ ಪಾಟೀಲ, ಪ್ರೊ ಎಸ್. ಎಸ್. ನಂಜನ್ನವರ, ಮಾಜಿ ಕಸಾಪ ಅಧ್ಯಕ್ಷ ರಾಜೇಂದ್ರ ವಾಲಿ, ಮಹಾಂತೇಶ ಜಕಾತಿ, ಡಾ. ಬಾಳಪ್ಪ ಚಿನಗುಡಿ, ಮಹಾಂತೇಶ ಸರದಾರ, ಶ್ರೀಮತಿ ಆಶಾ ಟರೀಟ, ಡಾ. ರಾಜಶೇಖರ ಬಿರಾದಾರ, ಭಾಸ್ಕರ ಹಿರೇಮೆತ್ರಿ, ಎಸ್. ಎಸ್. ಕುರುಬಗಟ್ಟಿಮಠ, ಶಿವಲಿಂಗಪ್ಪ ನುಗ್ಗಾನಟ್ಟಿ, ಉಮೇಶ ಮಾಗುಂಡನವರ, ಕುಮಾರ ಜಕಾತಿ, ವಿಠ್ಠಲ ದಳವಾಯಿ, ಈರಣ್ಣಾ ಹೊಸಮನಿ, ಗುರು ವಾಲಿ, ವಿಜಯ ಮರಡಿ, ಶ್ರೀಮತಿ ವಿಜಯಲಕ್ಷ್ಮೀ ಲಿಂಗದಳ್ಳಿ, ಶ್ರೀಮತಿ ಶಂಕತಲಾ ಕರಾಳೆ, ಎಸ್. ಪಿ. ಕರಲಿಂಗಪ್ಪನ್ನವರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಕನ್ನಡಾಭಿಮಾನಿಗಳು , ಶಾಲಾ-ಕಾಲೇಜುಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಅನೇಕ ಉಪಸ್ಥಿತರಿದ್ದರು.


Gadi Kannadiga

Leave a Reply