ಬೆಳಗಾವಿ: ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕಂತಿ ಇಲಾಖೆ,ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಸಿರು ಕ್ರಾಂತಿಯ ಹರಿಕಾರ, ಡಾ ಬಾಬು ಜಗಜೀವನ ರಾವ್ ಅವರ 115 ನೆಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು
ಜಿಲ್ಲಾಧಿಕಾರಿ ಕಚೇರಿಯಿಂದ ವಿವಿಧ ಕಲಾ ತಂಡಗಳೊಂದಿಗೆ ಪ್ರಾರಂಭವಾದ ಜಗಜೀವನರಾಮ್ರ ಭಾವಚಿತ್ರ ರಾಣಿ ಚನ್ನಮ್ಮಾಜಿ ವೃತ್ತದ ಮಾರ್ಗವಾಗಿ ಸದಾಶಿವನಗರದ ಮೂಲಕ ಜಗಜೀವನರಾಮ್ ಗಾರ್ಡನ್ವರೆಗೆ ನಡೆಯಿತು.
ನಂತರ ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನರಾಮ್ರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅವರು ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು ಕ್ರೀಡೆ, ವಿದ್ಯಾಭ್ಯಾಸ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸುವ ಮೂಲಕ ಜಗಜೀವನರಾಮ್ರ ಜಯಂತಿಯನ್ನು ನಾವು ಬಹಳಷ್ಟು ಅರ್ಥಪೂರ್ಣವಾಗಿ ಆಚರಿಸಿದ್ದೇವೆ. ಇದರಿಂದ ಹೆಚ್ಚೆಚ್ಚು ವಿದ್ಯಾರ್ಥಿಗಳು ಉತ್ತೇಜನಗೊಂಡು ಸಮಾಜದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಸಮಾಜ ಸೇವೆಗೆ ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.
ನಂತರ ವಿಶೇಷ ಉಪನ್ಯಾಸಕ ಪ್ರಕಾಶ್ ಕಟ್ಟಿಮನಿ ಮಾತನಾಡಿ ಸಂವಿಧಾನ ಎಂದರೆ ಕೇವಲ ಮೀಸಲಾತಿ, ದಲಿತರು, ದಲಿತ ಚಳುವಳಿ ಎಂದು ತಿಳಿದುಕೊಳ್ಳುತ್ತೇವೆ. ಸಂವಿಧಾನ ಎಂದರೆ ಇದು ಅಲ್ಲ. ಈ ದೇಶದಲ್ಲಿ ಕೇವಲ ದಲಿತರು ಮಾತ್ರ ಮೀಸಲಾತಿ ಪಡೆದುಕೊಳ್ಳುತ್ತಿಲ್ಲ. ಈ ದೇಶದಲ್ಲಿ ಇರುವ ಎಲ್ಲರೂ ಮೀಸಲಾತಿ ಪಡೆದುಕೊಳ್ಳುತ್ತಾರೆ. ಮೀಸಲಾತಿ ಸಂವಿಧಾನದ ಒಂದು ಭಾಗ ಅಷ್ಟೇ ಎಂದರು. ಇನ್ನು ಡಾ.ಬಾಬು ಜಗಜೀವನ್ ರಾಮ್ ಅವರನ್ನು ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಸೇರಿದಂತೆ ಇನ್ನಿತರ ಹೆಸರುಗಳಿಂದ ಕರೆಯುತ್ತೇವೆ. ನಾನು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಬದಲಾವಣೆ ಹಾಗೂ ಅಭಿವೃದ್ಧಿ ಹರಿಕಾರ ಎಂದು ಕರೆಯುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ, ಡಿಸಿಪಿ ರವೀಂದ್ರ ಗಡಾದ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ, ಪಾಲಿಕೆ ಉಪ ಆಯುಕ್ತೆ ಭಾಗ್ಯಶ್ರೀ ಹುಗ್ಗಿ, ದಲಿತ ಮುಖಂಡರಾದ ಮಲೇಶ್ ಚೌಗಲೆ, ಬಾಬು ಪೂಜಾರಿ, ಯಲಪ್ಪ ಹುದಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.