This is the title of the web page
This is the title of the web page

Please assign a menu to the primary menu location under menu

Local News

ಸ್ವಚ್ಛತಾ ಹೀ ಸೇವಾ ಆಂದೋಲನಕ್ಕೆ ಸಿಇಒ ಚಾಲನೆ ಆತ್ಮ ಸಾಕ್ಷಿಯಿಂದ ಗ್ರಾಮದ ಸ್ವಚ್ಛತೆ ಕಾಪಾಡಿಕೊಳ್ಳಿ : ಬಿ.ಫೌಜಿಯಾ ತರನ್ನುಮ್


ಕೊಪ್ಪಳ, ಸೆ. ೧೬ : ಸಾರ್ವಜನಿಕ ಪ್ರದೇಶದಲ್ಲಿ ಎಲ್ಲೆಂದರಲ್ಲೆ ಕಸ ಬಿಸಾಕದೇ ಆತ್ಮ ಸಾಕ್ಷಿಯಿಂದ ನಿಮ್ಮ ಗ್ರಾಮದ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಹೇಳಿದರು.
ಕೊಪ್ಪಳ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಹುಲಿಗಿ ಗ್ರಾಮ ಪಂಚಾಯತಿಯ ಸಹಯೋಗದಲ್ಲಿ ಸ್ವಚ್ಛ ಭಾರತ ಮಿಷನ್(ಗ್ರಾ) ಕಾರ್ಯಕ್ರಮದಡಿ ಹುಲಿಗಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಸ್ವಚ್ಛತಾ ಹೀ ಸೇವಾ ಆಂದಲೋನ’’, ವಿಶೇಷ ಸ್ವಚ್ಛತಾ ಅಭಿಯಾನ ಮತ್ತು ವಿವಿಧ ಜನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹುಲಿಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸಿ ಸ್ವಚ್ಛತೆಗೆ ಆದ್ಯತೆ ನೀಡುವ ಈ ಗ್ರಾಮದ ಸಾರ್ವಜನಿಕರು, ಪ್ರತಿನಿಧಿಗಳ ನಡೆಗೆ ಶ್ಲಾಘನೆ ಮಾಡಬೇಕು. ಈಗ ವಿತರಿಸಿದ ಕಸ ಸಂಗ್ರಹಣ ಬುಟ್ಟಿಗಳಲ್ಲಿ ಒಣ ಕಸ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ಹಾಕಲು ನೀವು ಮೊದಲಿನಿಂದಲೆ ಪ್ರಾರಂಭಿಸಿ ಹಾಗೂ ಗ್ರಾಮವನ್ನು ರಾಜ್ಯಮಟ್ಟದಲ್ಲಿ ಮಾದರಿಯಾಗಲು ನೀವೆಲ್ಲರೂ ನಮ್ಮೊಂದಿಗೆ ಕೈ ಜೋಡಿಸಿ ಸ್ವಚ್ಛ ಹುಲಿಗಿ, ಸ್ವಚ್ಛ ತಾಲೂಕು, ಸ್ವಚ್ಛ ಕೊಪ್ಪಳ ಜಿಲ್ಲೆಯನ್ನಾಗಿ ಮಾಡಲು ಶ್ರಮೀಸಬೇಕು ಎಂದರು.
ಈ ಕಾರ್ಯಕ್ರಮವು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗದೇ ಪ್ಲಾಸ್ಟಿಕ್ ಬಳಕೆ ಕನಿಷ್ಠ ಮಟ್ಟಕ್ಕೆ ಇಳಿಸುವುದು ಸೇರಿದಂತೆ ಸ್ಯಾನಿಟರಿ ಪ್ಯಾಡ್, ಇಂಜಕ್ಷನ್ ಸೂಜಿ ಹಾಗೂ ಅಪಾಯಕಾರಿ ತ್ಯಾಜ್ಯಗಳನ್ನು ಪ್ರಾಥಮಿಕ ಹಂತದಲ್ಲಿಯೇ ಬೇರ್ಪಡಿಸಬೇಕು ಹಾಗೂ ಮಕ್ಕಳೆಲ್ಲರೂ ನಿಮ್ಮ ಮನೆಗಳಲ್ಲಿ ಇವತ್ತಿನಿಂದಲೇ ಕಸ ಬೇರ್ಪಡಿಸಬೇಕು ಮತ್ತು ಕಸಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಎಲ್ಲರೂ ಸಹಕರಿಸಬೇಕು. ಈ ಬಗ್ಗೆ ಗ್ರಾಮ ಪಂಚಾಯತಿ ಸದಸ್ಯರು ತಮ್ಮ ವ್ಯಾಪ್ತಿಯ ಜನರಲ್ಲಿ ತಿಳಿ ಹೇಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷ ಟಿ.ಜನಾರ್ಧನ ಹುಲಿಗಿ ಅವರು ಮಾತನಾಡಿ, ಕಲಬುರಗಿ ವಿಭಾಗದಲ್ಲೆ ಪ್ರಥಮ ಬಾರಿಗೆ ಯಶಸ್ವಿಯಾದ ತಾಜ್ಯ ಸಂಗ್ರಹ ಮತ್ತು ನಿರ್ವಹಣಾ ಘಟಕ ಇದಾಗಿದೆ. ಈ ಕಸವಿಲೇವಾರಿ ಘಟಕವು ಮಾದರಿಯಾಗಿದ್ದು, ಹುಲಿಗಿ ಗ್ರಾಮ ಹಾಗೂ ನಮ್ಮ ಜಿಲ್ಲೆಗೆ ಕೀರ್ತಿ ತಂದಿದೆ. ಸಾರ್ವಜನಿಕರು ಕಸವನ್ನು ಎಲ್ಲೆಂದರೆಲ್ಲಿ ಹಾಕಬಾರದು ಒಂದು ವೇಳೆ ಕಸ ಎಲ್ಲೆಂದರೆಲ್ಲಿ ಹಾಕಿದರೆ ಕಾನೂನು ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದ್ದು, ಗ್ರಾಮಸ್ಥರು ಕಸದ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಈ ಸ್ವಚ್ಛ ಗ್ರಾಮದ ಕಾರ್ಯ ಯಶಸ್ವಿಯಾಗಲು ಸಿಇಒ ಅವರ ಆಲೋಚನೆಯ ಮೈಕ್ರೋ ಪ್ಲಾನ್ ಕಾರಣವಾಗಿದ್ದು, ಇದಕ್ಕೆ ಸಹಕಾರ ನೀಡಿದ ಎಲ್ಲಾ ಸಾರ್ವಜನಿಕರಿಗೆ ಅಭಿನಂದನೆಗಳು ಎಂದು ಹೇಳಿದರು.
ಕೊಪ್ಪಳ ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಮಾತನಾಡಿ, ಜಿಲ್ಲಾ ಪಂಚಾಯತ ವತಿಯಿಂದ ಅಕ್ಟೋಬರ್ ೦೨ರವರೆಗೆ ಸ್ವಚ್ಛತಾ ಹೀ ಸೇವಾ ಆಂದಲೋನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹುಲಿಗಿ ಗ್ರಾಮವನ್ನು ಕಸಮುಕ್ತ ಗ್ರಾಮವನ್ನಾಗಿ ನಿರ್ಮಿಸಲು ಗ್ರಾಮಸ್ಥರ ಸಹಕಾರದಿಂದ ಮಾತ್ರ ಸಾಧ್ಯ. ಈ ಯೋಜನೆಯ ಯಶಸ್ವಿಗೆ ಸಾರ್ವಜನಿಕರ ಸಹಕಾರ ಪ್ರಮುಖವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಂಜುನಾಥ, ತಾಲೂಕ ಪಂಚಾಯತ್ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಸೇರಿದಂತೆ ಸುತ್ತಲಿನ ಗ್ರಾಮ ಪಂಚಾಯತಿ ಸದಸ್ಯರು ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲ್ಲಿ ಗ್ರಾಮದ ಸಾರ್ವಜನಿಕರಿಗೆ ಒಣ ಕಸ ಮತ್ತು ಹಸಿ ಕಸ ಸಂಗ್ರಹಣಾ ಬುಟ್ಟಿ ಮತ್ತು ಚೀಲಗಳನ್ನು ವಿತರಿಸಲಾಯಿತು.
ಸ್ವಚ್ಛತಾ ಟ್ರಾಕ್ಟರ್‌ಗಳಿಗೆ ಚಾಲನೆ ಹಾಗೂ ಅಂಗಡಿಗಳಿಗೆ ಸಿಇಒ ಭೇಟಿ ;
ಕಾರ್ಯಕ್ರಮದ ನಂತರ ಸಿಇಒ ಹಾಗೂ ಜನಪ್ರತಿನಿಧಿಗಳು ಹುಲಿಗಿ ಗ್ರಾಮ ಪಂಚಾಯತಿಯ ಕಸ ಸಂಗ್ರಹಣೆಯ ಟ್ರಾಕ್ಟರ್ ಗಳಿಗೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ಮತ್ತು ಗ್ರಾಮದ ಅಂಗಡಿಗಳಿಗೆ ಮತ್ತು ಮನೆಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಳಕೆಯಿಂದಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿ, ಪ್ಲಾಸ್ಟಿಕ್ ಬಳಸದಂತೆ ಮನವರಿಕೆ ಮಾಡಿದರು. ಅಲ್ಲದೇ ಕಸವನ್ನು ಬೇರ್ಪಡಿಸುವಿಕೆ ಕುರಿತು ಭಿತ್ತಿ ಪತ್ರಗಳನ್ನು ಹಂಚುವುದರ ಮೂಲಕ ಮಹಿಳೆಯರಿಗೆ ತಿಳಿಸಿದರು.


Gadi Kannadiga

Leave a Reply