This is the title of the web page
This is the title of the web page

Please assign a menu to the primary menu location under menu

Local News

ನಮಗಾಗಿ ವಿದ್ಯಾರ್ಥಿಗಳು, ವಿದ್ಯಾರ್ಥಿಗಳಿಗಾಗಿ ನಾವಲ್ಲ: ಕುಲಪತಿ ರಾಮಚಂದ್ರಗೌಡ


ಬೆಳಗಾವಿ: ಶಿಕ್ಷಕರ ಭವಿಷ್ಯ ಇರುವುದು ವಿದ್ಯಾರ್ಥಿಗಳ ಭವಿಷ್ಯದಲ್ಲಿ. ನಮಗಾಗಿ ವಿದ್ಯಾರ್ಥಿಗಳು ವಿನಃ ವಿದ್ಯಾರ್ಥಿಗಳಿಗಾಗಿ ನಾವಲ್ಲ. ನಮ್ಮ ಅಸ್ತಿತ್ವ ಇರುವುದು ವಿದ್ಯಾರ್ಥಿಗಳಿಂದ ಎಂದು ಕುಲಪತಿಗಳಾದ ರಾಮಚಂದ್ರಗೌಡ ಅವರು ಅಭಿಪ್ರಾಯಪಟ್ಟರು
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಆಯ್ ಕ್ಯೂ ಎ ಸಿ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಯ್ ಕ್ಯೂ ಎ ಸಿ ಸಂಯುಕ್ತಾಶ್ರಯದಲ್ಲಿ ನ್ಯಾಕ್ ಮಾನ್ಯತಾ ಪ್ರಕ್ರಿಯೆಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಸಿಬ್ಬಂದಿಗಾಗಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಯಾದ ಪ್ರೊ. ರಾಮಚಂದ್ರಗೌಡ ಅವರು ಮಾತನಾಡುತ್ತಾ, ಜಗತ್ತು ಅತೀ ವೇಗವಾಗಿ ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಅವಶ್ಯಕತೆಯೂ ಇದೆ. ನಮ್ಮ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಸುಧಾರಣೆಯಾಗದ ಹೊರತು ಉತ್ತಮ ಶಿಕ್ಷಣ ನಿರೀಕ್ಷೆ ಸಾಧ್ಯವಿಲ್ಲ. ಉನ್ನತ ಶಿಕ್ಷಣ ಸುಧಾರಣೆ ಮತ್ತು ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ನ್ಯಾಕ್ ಮಾನ್ಯತೆ ಪಡೆದು ಕೊಳ್ಳುವ ಅವಶ್ಯಕತೆ ಇದೆ. ನಮ್ಮ ಮಹಾವಿದ್ಯಾಲಯವು ನ್ಯಾಕ್ ಪಡೆದುಕೊಳ್ಳುವುದರ ಮೂಲಕ ಭೌತಿಕ ಮತ್ತು ಬೌದ್ಧಿಕವಾಗಿ ಒಂದು ಮಾದರಿ ಮಹಾವಿದ್ಯಾಲಯವಾಗಲಿದೆ. ಆ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದಾಗಿದೆ ಎಂದರು. ಈಗಿನ ಹೊಸ ಶಿಕ್ಷಣ ನೀತಿಯ ಪ್ರಕಾರ ವಿಶ್ವವಿದ್ಯಾಲಯಗಳಲ್ಲಿ ಕೂಡ ಯುಜಿ ಕೋರ್ಸ್ಗಳನ್ನು ತೆರೆಯಬೇಕು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮುಂದಿನ ದಿನಗಳಲ್ಲಿ ಯುಜಿ ಕೋರ್ಸ್ಗಳನ್ನು ಆರಂಭಿಸಲಾಗುವುದು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಪರಿಷತ್ತಿನ ವಿಶೇಷ ಅಧಿಕಾರಿಗಳಾದ ಡಾ. ಎಂ. ಜಯಪ್ಪ ಅವರು, ಉನ್ನತ ಶಿಕ್ಷಣ ಸಂಸ್ಥೆಯ ಸಮಗ್ರ ಅಭಿವೃದ್ಧಿಗೆ ನ್ಯಾಕ್ ಮಾನ್ಯತೆಯನ್ನು ಪಡೆದುಕೊಳ್ಳಬೇಕು. ನಮ್ಮ ದೇಶದಲ್ಲಿ ಇರುವ ವಿಶ್ವವಿದ್ಯಾಲಯಗಳಲ್ಲಿ ಶೇ.೩೫ರಷ್ಟು ಮತ್ತು ಮಹಾವಿದ್ಯಾಲಯಗಳಲ್ಲಿ ಶೇ. ೧೯.೫ ರಷ್ಟು ಮಾತ್ರ ನ್ಯಾಕ್ ಮಾನ್ಯತೆಯನ್ನು ಪಡೆದುಕೊಂಡಿವೆ. ಇದು ನಮ್ಮ ಶಿಕ್ಷಣ ಸಂಸ್ಥೆಗಳ ಸ್ಥಿತಿ-ಗತಿಯನ್ನು ಸೂಚಿಸುತ್ತದೆ. ಸರಕಾರ ಮತ್ತು ಯುಜಿಸಿಯ ಧನಸಹಾಯ ಪಡೆದು ಕೊಳ್ಳಲು ಸಂಸ್ಥೆಯು ನ್ಯಾಕ್ ಮಾನ್ಯತೆಯನ್ನು ಪಡೆದುಕೊಳ್ಳಲೇ ಬೇಕು. ನ್ಯಾಕ್ ಮಾನ್ಯತೆಯನ್ನು ಪಡೆದುಕೊಳ್ಳುವುದು ಈಗ ಮೊದಲಿನಷ್ಟು ಸುಲಭವಲ್ಲ ಎಂದರು.
ವೇದಿಕೆಯಲ್ಲಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವರಾದ ಪ್ರೊ. ಶಿವಾನಂದ ಎಸ್. ಗೋರನಾಳೆ ಮತ್ತು ವಿಶ್ವವಿದ್ಯಾಲಯದ ಅಪರಾಧ ಮತ್ತು ನ್ಯಾಯಿಕ ಅಪರಾಧ ಶಾಸ್ತ್ರದ ನಿರ್ದೇಶಕರಾದ ಪ್ರೊ. ಆರ್. ಎನ್. ಮನಗೂಳಿ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶಂಕರ ಎಸ್. ತೇರದಾಳ ಸ್ವಾಗತಿಸಿದರು. ಮಹಾವಿದ್ಯಾಲಯದ ಆಯ್ ಕ್ಯೂ ಎ ಸಿ ಸಂಯೋಜಕರಾದ ಬಾಲಾಜಿ ಆಳಂದೆ ವಂದಿಸಿದರು. ಡಾ. ಮಲ್ಲೇಶ್ ದೊಡ್ಡಲಕ್ಕಣ್ಣವರ್ ಮತ್ತು ಡಾ. ಜ್ಯೋತಿ ಪಾಟೀಲ್ ನಿರೂಪಿಸಿದರು, ವಿದ್ಯಾರ್ಥಿ ಲಕ್ಷö್ಮಣ ನಾಯ್ಕ ಪ್ರಾರ್ಥಿಸಿದರು. ಕಾರ್ಯಾಗಾರದಲ್ಲಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.


Gadi Kannadiga

Leave a Reply