This is the title of the web page
This is the title of the web page

Please assign a menu to the primary menu location under menu

State

ಬಾಲ್ಯವಿವಾಹ ನಿಷೇಧ, ಸಮನ್ವಯ ಸಮಿತಿ ಸಭೆ


ಕೊಪ್ಪಳ ಜುಲೈ ೧೯ : ಕನಕಗಿರಿ ತಾಲೂಕು ಮಟ್ಟದ ಬಾಲ್ಯವಿವಾಹ ನಿಷೇಧ ಮತ್ತು ಸಮನ್ವಯ ಸಮಿತಿ, ತಾಲೂಕು ಮಟ್ಟದ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆ ಸಮಿತಿ ಹಾಗೂ ತಾಲೂಕು ಮಟ್ಟದ ಮಕ್ಕಳ ರಕ್ಷಣಾ ಸಮಿತಿಯ ಸಭೆಯು ಕನಕಗಿರಿ ತಹಶೀಲ್ದಾರರಾದ ಸಂಜಯ ಕಾಂಬ್ಳೆ ಅವರ ಅಧ್ಯಕ್ಷತೆಯಲ್ಲಿ ಜುಲೈ ೧೯ರಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.
ಈ ವೇಳೆ ಕನಕಗಿರಿ ತಹಶೀಲ್ದಾರರಾದ ಸಂಜಯ ಕಾಂಬ್ಳೆ ಅವರು ಮಾತನಾಡಿ, ಬಾಲ್ಯವಿವಾಹ ಮುಕ್ತ ತಾಲೂಕನ್ನಾಗಿಸಲು ತಾಲೂಕಿನ ಎಲ್ಲಾ ಬಾಲ್ಯವಿವಾಹ ನಿಷೇದಾಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ತಾಲೂಕಿನ ಎಲ್ಲಾ ದೇವಾಲಯಗಳಲ್ಲಿ ಮುಖ್ಯವಾಗಿ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ದೇವಸ್ಥಾನಗಳಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ “ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ” ಎಂಬ ಶಾಶ್ವತ ಗೋಡೆ ಬರಹವನ್ನು ಬರೆಯಿಸಲು ದೇವಸ್ಥಾನಗಳ ಮುಖ್ಯಸ್ಥರುಗಳಿಗೆ ಸೂಚಿಸಬೇಕು. ಪಂಚಾಯತ್‌ಗಳ ಅವರಣಗಳಲ್ಲಿಯೂ ಈ ಕುರಿತು ಶಾಶ್ವತ ಗೋಡೆಬರಹವನ್ನು ಬರೆಯಿಸಲು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಮೂಹಿಕ ವಿವಾಹ ಆಯೋಜಕರು ಕಡ್ಡಾಯವಾಗಿ ತಹಶೀಲ್ದಾರರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಅನುಮತಿ ಪಡೆದುಕೊಂಡ ನಂತರವೇ ಸಾಮೂಹಿಕ ವಿವಾಹಗಳನ್ನು ಆಯೋಜಿಸಬೇಕು. ತಪ್ಪಿದಲ್ಲಿ, ಬಾಲ್ಯವಿವಾಹ ಜರುಗಿದ್ದು ಕಂಡುಬಂದಲ್ಲಿ, ಸಾಮೂಹಿಕ ವಿವಾಹ ಆಯೋಜಕರನ್ನು ಸೇರಿದಂತೆ ಸಂಬಂಧಿಸಿದ ಎಲ್ಲರ ವಿರುದ್ಧ ಪ್ರಕರಣವನ್ನು ದಾಖಲಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು. ವಿವಾಹದ ಸಲುವಾಗಿ ಯಾರಾದರು ನಕಲಿ ಶಾಲಾ ದೃಡೀಕರಣ ಪತ್ರವನ್ನು ನೀಡಿದಲ್ಲಿ ಅಂತಹ ಶಾಲೆ ಹಾಗೂ ಮುಖ್ಯಾಧ್ಯಾಪಕರ ವಿರುದ್ಧ ಕಾನೂನು ರೀತ್ಯಾ ಸೂಕ್ತ ಕ್ರಮಗಳನ್ನು ಜರುಗಿಸಲು ಶಿಕ್ಷಣ ಇಲಾಖೆಯು ಕ್ರಮ ಕೈಗೊಳ್ಳಬೇಕು ಎಂದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಕ್ಕಳ ಸ್ನೇಹಿ ವಾತಾವರಣ ಮತ್ತು ಮಕ್ಕಳಪರ ಪಂಚಾಯತ್‌ಗಳನ್ನಾಗಿಸಲು ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಕನಿಷ್ಠ ಮೂರು ತಿಂಗಳಿಗೊಮ್ಮೆ “ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ”ಗಳ ಸಭೆಯನ್ನು ಕಡ್ಡಾಯವಾಗಿ ಆಯೋಜಿಸಿ ವರದಿಯನ್ನು ತಾಲೂಕು ಪಂಚಾಯತ್ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಕನಕಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ವಿರುಪಾಕ್ಷಿ ಅವರು ಮಾತನಾಡಿ, ಕೇಂದ್ರ ಸರಕಾರವು ಮಕ್ಕಳ ಸಂರಕ್ಷಣೆಗಾಗಿ ಮೀಷನ್ ವಾತ್ಸಲ್ಯ ಯೋಜನೆಯನ್ನು ಏಪ್ರೀಲ್-೨೦೨೨ರಿಂದ ಅನುಷ್ಠಾನಗೊಳಿಸಿದೆ. ಅದರನ್ವಯ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳ ಪೋಷಣೆಗಾಗಿ ಸರಕಾರಿ ಬಾಲಕರ ಬಾಲಮಂದಿರ ಮತ್ತು ಬಾಲಕಿಯರ ಬಾಲಮಂದಿರವನ್ನು ಹಾಗೂ ವಿಶೇಷ ದತ್ತು ಸೇವಾ ಕೇಂದ್ರವನ್ನು ಸಾಂಸ್ಥಿಕ ಸೇವೆಯಡಿಯಲ್ಲಿ ಸ್ಥಾಪಿಸಿದೆ. ಅಸಾಂಸ್ಥಿಕ ಸೇವೆಯಡಿಯಲ್ಲಿ ದತ್ತು ಕಾರ್ಯಕ್ರಮ, ಪೋಸ್ಟರ್ ಕೇರ್, ಪ್ರಾಯೋಜಕತ್ವ ಮತ್ತು ನಂತರದ ಸೇವೆಗಳು (ಉಪಕಾರ ಯೋಜನೆ)ಯನ್ನು ಅನುಷ್ಠಾನಗೊಳಿಸಿದ್ದು, ಈ ಮೀಷನ್ ವಾತ್ಸಲ್ಯ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ರಚನೆಯಾಗಿರುವ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಗಳ ಸಕ್ರೀಯ ಭಾಗವಹಿಸುವಿಕೆ ಅತೀ ಮುಖ್ಯವಾಗಿದ್ದು, ಕಡ್ಡಾಯವಾಗಿ ಸಭೆಗಳನ್ನು ಅಯೋಜಿಸಿ, ವರದಿಯನ್ನು ಪಡೆದು, ಮೇಲಧಿಕಾರಿಗಳಿಗೆ ಸಲ್ಲಿಸುವಂತೆ ತಿಳಿಸಿದರು.
ಸಭೆಯಲ್ಲಿ ಕನಕಗಿರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಕಂದಕೂರ, ಗಂಗಾವತಿ ತಾಲೂಕು ವೈದ್ಯಾಧಿಕಾರಿಗಳಾದ ಶರಣಪ್ಪ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಾಲಪ್ಪ ಡಿ ಕಂದಳ್ಳಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ಪವಾರ ಸೇರಿದಂತೆ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸ್ತ್ರೀ ಶಕ್ತಿ ಒಕ್ಕೂಟದ ಪ್ರತಿನಿಧಿಗಳು ಉಪಸ್ಥಿತರಿದ್ದರು.


Leave a Reply