This is the title of the web page
This is the title of the web page

Please assign a menu to the primary menu location under menu

State

ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಸಕಲ ಸಿದ್ಧತೆ : ಜಿಲ್ಲಾಧಿಕಾರಿ


ಗದಗ ಮಾ ೩೦ : ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿ ಜರುಗಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಯು ಆಗಿರುವ ವೈಶಾಲಿ ಎಂ.ಎಲ್. ಅವರು ತಿಳಿಸಿದರು.
ಜಿಲ್ಲಾದಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ತಂಡಗಳನ್ನು ರಚಿಸಲಾಗಿದೆ ಎಂದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಅಧಿಸೂಚನೆ ಎಪ್ರಿಲ್ ೧೩ ರಂದು ಪ್ರಕಟಿಸಲಾಗುವುದು. ಎಪ್ರಿಲ್ ೨೦ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಎಪ್ರಿಲ್ ೨೧ ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂದೆ ಪಡೆಯಲು ಎಪ್ರಿಲ್ ೨೪ ಕೊನೆಯ ದಿನವಾಗಿದೆ. ಮತದಾನವು ಮೇ ೧೦ ರಂದು ಜರುಗಲಿದ್ದು, ಮತ ಎಣಿಕೆಯು ಮೇ ೧೩ ರಂದು ಜರುಗಲಿದೆ. ಚುನಾವಣಾ ಪ್ರಕ್ರಿಯೆಯು ಮೇ ೧೫ ಕ್ಕೆ ಪೂರ್ಣಗೊಳ್ಳಲಿದೆ ಎಂದರು.
ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆಗೆ ಸಂಬಂಧಿಸಿದಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೯ ತಂಡಗಳಂತೆ ಒಟ್ಟು ೩೬ ಸಂಚಾರಿ ದಳ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೩ ರಂತೆ ಒಟ್ಟು ೧೨ ವೀಡಿಯೋ ಕಣ್ಗಾವಲು ತಂಡ ಹಾಗೂ ೪ ವೀಡಿಯೋ ವಿಚಕ್ಷಣಾ ತಂಡಗಳನ್ನು ರಚಿಸಲಾಗಿದೆ. ಪ್ರತಿ ಅಭ್ಯರ್ಥಿಗಳ ಖರ್ಚು ವೆಚ್ಚಗಳ ಬಗ್ಗೆ ನಿಗಾ ಇಡಲು ಒಟ್ಟು ೮ ಲೆಕ್ಕ ತಂಡಗಳನ್ನು ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೧ ರಂತೆ ೪ ಜನ ಸಹಾಯಕ ವೆಚ್ಚ ಅಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ ಎಂದರು.
ಅಂತಿಮ ಮತದಾರ ಪಟ್ಟಿಗಳನ್ನು ಜನೆವರಿ ೫ ರಂದು ಪ್ರಕಟಿಸಲಾಗಿದ್ದು, ಸದರಿ ಮತದಾರ ಪಟ್ಟಿಯಲ್ಲಿ ೪,೨೭,೬೨೪ ಪುರುಷ ಮತದಾರರು, ೪,೨೪,೮೧೭ ಮಹಿಳಾ ಮತದಾರರು , ೫೭ ಇತರೆ ಮತದಾರರು ಹೀಗೆ ಒಟ್ಟು ೮,೫೨,೪೯೮ ಮತದಾರರು ಸೇರ್ಪಡೆಯಾಗಿರುತ್ತಾರೆ. ಪ್ರಸ್ತುತ ೪,೩೧,೬೬೪ ಪುರುಷ ಮತದಾರರು, ೪,೨೯,೨೮೦ ಮಹಿಳಾ ಮತದಾರರು, ೫೮ ಇತರೆ ಮತದಾರರ ಹೀಗೆ ಒಟ್ಟು ೮,೬೧,೦೦೨ ಮತದಾರರು ಇರುತ್ತಾರೆ.
ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿದ್ದು ೬೫- ಶಿರಹಟ್ಟಿ ವಿಧಾನಸಭಾ ಕ್ಷೇತ್ರಕ್ಕೆ ಯೋಜನಾ ನಿರ್ದೆಶಕರು, ಗ್ರಾಮೀಣಾಭಿವೃದ್ಧಿ ಕೋಶ, ಜಿ.ಪಂ. ಗದಗ ಇವರನ್ನು ೬೬- ಗದಗ ವಿಧಾನಸಭಾ ಕ್ಷೇತ್ರಕ್ಕೆ ಉಪವಿಭಾಗಾದಿಕಾರಿಗಳು ಗದಗ ಇವರನ್ನು ೬೭- ರೋಣ ವಿಧಾನಸಭಾ ಕ್ಷೇತ್ರಕ್ಕೆ ಉಪನಿರ್ದೆಶಕರು, ಸಮಾಜ ಕಲ್ಯಾಣ ಇಲಾಖೆ ಗದಗ ಇವರನ್ನು ಹಾಗೂ ೬೮- ನರಗುಂದ ವಿದಾನಸಭಾ ಕ್ಷೇತ್ರಕ್ಕೆ ಉಪನಿರ್ದೆಶಕರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಗದಗ ಇವರನ್ನು ರಿಟರ್ನಿಂಗ್ ಅಧಿಕಾರಿಗಳಾಗಿ ಭಾರತ ಚುನವಣಾ ಆಯೋಗವು ಅಧಿಸೂಚಿಸಿರುತ್ತದೆ. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಆಯಾ ತಹಶೀಲ್ದಾರರನ್ನು ಸಹಾಯಕ ರಿಟರ್ನಿಂಗ್ ಅಧಿಕಾರಿಗಳಾಗಿ ಭಾರತ ಚುನಾವಣಾ ಆಯೋಗವು ಅಧಿಸೂಚಿಸಿದೆ.
ಜಿಲ್ಲೆಯಲ್ಲಿ ಯಾವುದೇ ರೀತಿ ದೂರುಗಳ ನಿರ್ವಹಣೆಗಾಗಿ ಅಮಿತ ಬಿದರಿ, ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಗದಗ ಇವರನ್ನು ನೋಡಲ್ ಅಧಿಕಾರಿಗಳೆಂದು ನೇಮಕ ಮಾಡಲಾಗಿದೆ. ಇವರ ಅಧೀನದಲ್ಲಿ ಕಂಪ್ಲೇಂಟ್ ಮಾನಿಟರಿಂಗ್ ಟೀಂ , ಸಿವಿಜಿಲ್ ತಂಡ , ೧೯೫೦ ಕಾಲ್ ಸೆಂಟರ್ ಹಾಗೂ ಜಿಲ್ಲಾ ಕಂಟ್ರೋಲ್ ರೂಂ ಕಾರ್ಯನಿರ್ವಹಿಸುವುದು.
ಜಿಲ್ಲೆಯಾದ್ಯಂತ ಈವರೆಗೆ ಸಾರ್ವಜನಿಕ ಆಸ್ತಿಗೆ ಸಂಬಂಧಿಸಿದಂತೆ ೯೯೧ ಗೋಡೆ ಬರಹ, ೨೩೧೩ ಪೋಸ್ಟರ್ಸ,೧೩೨೨ ಬ್ಯಾನರ್ ಹಾಗೂ ೬೪೫ ಇತರೆ ಸೇರಿ ಒಟ್ಟು ೫೨೭೧ ಪೋಸ್ಟರ್ , ಬ್ಯಾನರ್ ತೆರವುಗೊಳಿಸಲಾಗಿದೆ. ೭೧ ಪ್ರಕರಣಗಳನ್ನು ದಾಖಲಿಸಲಾಗಿದೆ. ಖಾಸಗಿ ಆಸ್ತಿಗೆ ಸಂಬಂಧಿಸಿದಂತೆ ೧೦೫೯ ಗೋಡೆ ಬರಹ, ೩೧೩ ಪೋಸ್ಟರ್ಸ, ೪೧೪ ಬ್ಯಾನರ್ ಹಾಗೂ ೧೧೯೯ ಇತರೆ ಪ್ರಚಾರ ಸಾಮಗ್ರಿ ಸೇರಿದಂತೆ ಒಟ್ಟು ೨೯೮೫ ಪೋಸ್ಟರ್ ಬ್ಯಾನರ್ ಗಳನ್ನು ತೆರವುಗೊಳಿಸಲಾಗಿದೆ ಎಂದರು. ಆಯೋಗದ ನಿರ್ದೇಶನದಂತೆ ಮೋಟಾರು ವಾಹನ ಕಾಯ್ದೆ ಉಲ್ಲಂಘನೆಯಡಿ ೫೨೧ ಪ್ರಕರಣಗಳನ್ನು ದಾಖಲಿಸಿ ೮ ವಾಹನಗಳನ್ನು ಸೀಜ್ ಮಾಡಲಾಗಿದೆ ಎಂದರು.
ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಾಬಾಸಾಬ ನೇಮಗೌಡ ಮಾತನಾಡಿ ಜಿಲ್ಲೆಯಲ್ಲಿ ಈವರೆಗೆ ೭೩,೭೯,೨೦೦ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ೪೯೨.೦೨ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಸದರಿ ಮದ್ಯದ ಮೌಲ್ಯ ರು. ೨,೧೫,೬೦೮.೮೧ ಆಗಿದೆ. ೨.೮೩ ಕೆ.ಜಿ. ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಸದರಿ ಡ್ರಗ್ಸ್ನ ಮೌಲ್ಯ ರೂ. ೨,೦೨,೪೫೦ ಆಗಿದೆ. ೪.೦೪೬ ಕೆ.ಜಿ. ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ. ಸದರಿ ಬಂಗಾರದ ಮೌಲ್ಯ ರೂ. ೧,೭೧,೬೫,೧೦೦ ಆಗುತ್ತದೆ. ಇತರೆ ಸಾಮಗ್ರಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಸದರಿ ಸಾಮಗ್ರಿಗಳ ಮೌಲ್ಯ ರೂ ೧೭,೧೯,೭೨೫ ಆಗುತ್ತದೆ. ಒಟ್ಟಾರೆಯಾಗಿ ೨,೬೬,೮೨,೦೮೩.೧೯ ರೂ. ಆಗಿರುತ್ತದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ ಹಾಗೂ ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Leave a Reply