ಕೊಪ್ಪಳ ಫೆ.೧೮ : ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ತಮ್ಮದೇ ವಿಭಿನ್ನ ಶೈಲಿಯಲ್ಲಿ ಕಾರ್ಯಪ್ರವೃತ್ತರಾಗಿ ಕೊಪ್ಪಳ ಜಿಲ್ಲೆಯ ಜನಮನ ಗೆದ್ದಿದ್ದ ಐಎಎಸ್ ಅಧಿಕಾರಿ ಬಿ.ಫೌಜಿಯಾ ತರುನ್ನುಮ್ ಅವರಿಗೆ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಅಧಿಕಾರಿಗಳ ಮತ್ತು ನೌಕರರ ಸಂಘ ಜಿಲ್ಲಾ ಘಟಕದಿಂದ ಫೆ.೧೭ರಂದು ಆತ್ಮೀಯ ಬೀಳ್ಕೊಡುಗೆ ನಡೆಯಿತು.
ಕೊಪ್ಪಳ ಜಿಲ್ಲೆಯಿಂದ ಇತ್ತೀಚೆಗೆ ವರ್ಗಾವಣೆಯಾಗಿ ಬೆಂಗಳೂರಿಗೆ ತೆರಳಿದ್ದ ಬಿ.ಫೌಜಿಯಾ ತರುನ್ನುಮ್ ಅವರು, ತಮ್ಮ ತಂದೆ ತಾಯಿ ಕುಟುಂಬದವರೊಂದಿಗೆ ಮರಳಿ ಕೊಪ್ಪಳಕ್ಕೆ ಆಗಮಿಸುತ್ತಿದ್ದಂತೆ ಆತ್ಮೀಯ ಸ್ವಾಗತ ಕೋರಿದ ಅಧಿಕಾರಿಗಳು, ಜಿಲ್ಲಾಡಳಿತ ಭವನದಲ್ಲಿ ನಡೆದ ವೇದಿಕೆಯ ಸಮಾರಂಭದಲ್ಲಿ, ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಅವರಿಗೆ ಶಾಲುಹೊದಿಸಿ, ಹುಗೂಚ್ಛ ನೀಡಿ ಸನ್ಮಾನಿಸಿ ಗೌರವಿಸಿದರು. ಕೆಲವು ಅಧಿಕಾರಿಗಳು, ಬಿ.ಫೌಜಿಯಾ ಅವರ ತಂದೆ-ತಾಯಿಯನ್ನು ವೇದಿಕೆಗೆ ಕರೆದು ಅವರೊಂದಿಗೆ ಕೂಡಿಸಿ, ಪ್ರಸಿದ್ಧ ಕಿನ್ನಾಳ ಕಲೆಯಿಂದ ಅಲಂಕರಿಸಿದ ಬಿ.ಫೌಜಿಯಾ ಅವರ ಭಾವಚಿತ್ರವನ್ನು ಕಾಣಿಕೆಯಾಗಿ ನೀಡಿ ಅಭಿಮಾನ ತೋರಿದರು.
ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಗಂಗಾವತಿ, ಕಾರಟಗಿ, ಕನಕಗಿರಿ, ಕುಕನೂರ ತಾಲೂಕಿನ ಆಯಾ ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಸಹಾಯಕ ನಿರ್ದೇಶಕರು, ಪಿಡಿಓಗಳು, ಐಇಸಿ ಕೋಆರ್ಡಿನೇಟರ್‌ಗಳು ತಂಡವಾಗಿ ವೇದಿಕೆಗೆ ಬಂದು ಸನ್ಮಾನಿಸಿ, ಅವರೊಂದಿಗೆ ಗ್ರೂಪ್ ಫೋಟೊ ತೆಗೆಯಿಸಿಕೊಂಡರು. ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರಿಗೆ ಹೂಗುಚ್ಛ ನೀಡಿ ಬೀಳ್ಕೊಟ್ಟರು.
ಜಿಲ್ಲೆಯ ಪ್ರತಿ ಹಳ್ಳಿಹಳ್ಳಿಗೆ ಭೇಟಿ ನೀಡಿದ, ಪ್ರತಿಯೊಬ್ಬ ಪಿಡಿಓ ಅವರನ್ನು ಹೆಸರಿಡಿದು ಮಾತನಾಡಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿದ್ದ, ಪ್ರತಿಯೊಂದು ಹಳ್ಳಿಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಏಕೈಕ ಸಿಇಓ ಬಿ.ಫೌಜಿಯಾ ತರುನ್ನುಮ್ ಅವರು ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಿಇಓ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು.
ಪ್ರತಿ ದಿನ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಳ್ಳುವುದು, ಎಷ್ಟೇ ಒತ್ತಡವಿದ್ದರೂ ಏಕಚಿತ್ತರಾಗಿ ಕೆಲಸ ಮಾಡುವುದು, ಅಧಿಕಾರಿಗಳನ್ನು ತಂಡವಾಗಿಸಿ ಕೆಲಸ ಮಾಡಿಸುವುದು, ವಿಷಯ ವಿಶ್ಲೇಷಣೆ ಮಾಡುವ ರೀತಿ ಇನ್ನುಳಿದ ಅಧಿಕಾರಿಗಳಿಗೆ ಮಾದರಿಯಾಗಿದೆ ಎಂದು ಅಧಿಕಾರಿಗಳು ಭಿ.ಫೌಜಿಯಾ ತರುನ್ನುಮ್ ಅವರ ಕಾರ್ಯವೈಖರಿಯನ್ನು ಬಣ್ಣಿಸಿದರು.
ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಕೆಲಸ ಪಡೆಯುವ ಕಲೆಯು ಅವರಿಗೆ ಕರಗತವಾಗಿತ್ತು. ಅವರ ಕಾರ್ಯವು ಯಾವಾಗಲೂ ಪ್ರಾಯೋಗಿಕವಾಗಿರುತ್ತಿತ್ತು. ತಪ್ಪು ಮಾಡಿದಾಗ ಅಧಿಕಾರಿಗಳಿಗೆ ನೊಟೀಸ್ ನೀಡುತ್ತ, ಸಭೆಯಲ್ಲಿ ಸಿಂಹ ಘರ್ಜನೆ ಮಾಡುತ್ತಿದ್ದರೂ ಅವರು ಕರುಣಾಮಯಿ ಆಗಿದ್ದರು. ಅಧಿಕಾರಿಗಳಿಗೆ ಕಠೋರ ಎಂಬಂತೆ ಕಂಡರೂ ಅವರ ಹೃದಯ ವೈಶಾಲ್ಯತೆ ದೊಡ್ಡದಾಗಿತ್ತು. ಎಲ್ಲ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕೆಂಬುದಷ್ಟೇ ಅವರ ಉದ್ದೇಶವಾಗಿತ್ತು. ಬೆಂಗಳೂರಿನವರಾದರು ಸಹ ನಾನು ಕೊಪ್ಪಳದವಳೆಂದೇ ಸಮಾರಂಭಗಳಲ್ಲಿ ಮಾತನಾಡುವಾಗ ತುಂಬು ಮನಸಿನಿಂದ ಹೇಳುತ್ತಿದ್ದರು. ಜನ್ಮ ಭೂಮಿಗಿಂತ ಕರ್ಮ ಭೂಮಿಯನ್ನೇ ಹೆಚ್ಚಾಗಿ ಪ್ರೀತಿಸಿದರು ಎಂದು ಬಿ.ಫೌಜಿಯಾ ತರುನ್ನುಮ್ ಅವರ ಬಗ್ಗೆ ಹೇಳುತ್ತಲೇ ಕೆಲವು ಅಧಿಕಾರಿಗಳು ಭಾವುಕರಾದರು.
ಮಹಿಳಾ ನೌಕರರಿಗೆ ಪ್ರೇರಣೆ: ತಮ್ಮೀಡಿ ಸಮಯವನ್ನು ಕಚೇರಿಗೆ ಮೀಸಲಿರಿಸಿ ಕೆಲಸ ಮಾಡಿ ಕೊಪ್ಪಳ ಜಿಲ್ಲೆಗೆ ಸಾಲುಸಾಲು ಪುರಸ್ಕಾರ ಬರಲು ಕಾರಣರಾಗಿ ದುಡಿದಿರುವುದು ಮಹಿಳಾ ನೌಕರರಿಗಂತೂ ವಿಶೇಷ ಸ್ಪೂರ್ತಿಯಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಮಾತನಾಡಿ, ಗ್ರಾಪಂ, ತಾಪಂ ಮತ್ತು ಇನ್ನೀತರ ಇಲಾಖೆಗಳು ಒಳಗೊಂಡ ಜಿಲ್ಲಾ ಪಂಚಾಯತ್‌ನಲ್ಲಿ ಸಹ ಸಿಇಓ ಆಗಿ ಬದಲಾವಣೆ ಮಾಡಲು ಒಳ್ಳೆಯ ಆವಕಾಶವಿರುತ್ತದೆ. ಬಿ ಫೌಜಿಯಾ ಅವರು ಸಮರ್ಥವಾಗಿ ಕಾರ್ಯ ನಿರ್ವಹಿಸಿ ಯಶಸ್ಸು ಸಾಧಿಸಿದ್ದಾರೆ. ಅಧಿಕಾರಿಗಳಿಗೆ ಪ್ರೇರಣೆ ನೀಡಿ ಕೆಲಸ ಮಾಡಿಸುತ್ತಿದ್ದರು. ಕೊಪ್ಪಳ ಜಿಲ್ಲೆಯ ಜನರು ಮರೆಯದ ಹಾಗೆ ಜಿಲ್ಲೆಯಲ್ಲಿ ಹಲವಾರು ಕಾರ್ಯಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು ಮಾತನಾಡಿ, ತಮ್ಮದೇ ವಿಶೇಷ ಕಾರ್ಯಶೈಲಿಯಿಂದಾಗಿ ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಿರುವ ಫೌಜಿಯಾ ಅವರು ಕೊಪ್ಪಳ ಜಿಲ್ಲೆಯ ಜನಮನ ಗೆದ್ದಿದ್ದಾರೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲೆಯನ್ನು ಮರೆಯೋಲ್ಲ: ಸನ್ಮಾನ ಸ್ವೀಕರಿಸಿದ ಬಳಿಕ ಬಿ.ಫೌಜಿಯಾ ತರುನ್ನುಮ್ ಅವರು ಮಾತನಾಡಿ, ಸಾರ್ವಜನಿಕರು, ಸಮಾಜದ ಬಗ್ಗೆ ಕಾಳಜಿ ಇಟ್ಟುಕೊಂಡು ಇನ್ಮುಂದೆಯು ಸಹ ಕೊಪ್ಪಳ ಜಿಲ್ಲೆಯ ಅಭಿವೃದ್ದಿಗೆ ನಾವು ಶ್ರಮಿಸುತೇವೆ ಎಂಬುದಾಗಿ ಕೊಪ್ಪಳ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಸೇರಿದಂತೆ ಇನ್ನೀತರ ಇಲಾಖೆಯ ಅಧಿಕಾರಿಗಳಿಂದ ಪ್ರಾಮೀಸ್ (ವಚನ) ಪಡೆಯಲು ತಾವು ಈ ಬೀಳ್ಕೊಡುಗೆ ಸಮಾರಂಭಕ್ಕೆ ಬಂದಿರುವುದಾಗಿ ಹೇಳಿದರು. ಅಧಿಕಾರಿಗಳು ತಮ್ಮ ಕಾರ್ಯಸಾರ‍್ಥö್ಯ ಹೆಚ್ಚಿಸಿಕೊಂಡು ಪ್ರಾಮಾಣಿಕವಾಗಿ ಕಾರ್ಯ ಮಾಡಬೇಕು ಎಂದು ಸಲಹೆ ಮಾಡಿದ ಅವರು, ನನಗೆ ಕೊಪ್ಪಳ ಜಿಲ್ಲೆಯ ಜನರು ಮರೆಯಬಹುದು, ಆದರೆ ನಾನು ಕೊಪ್ಪಳವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳುತ್ತ ಭಾವುಕರಾದರು.
ನೂತನ ಸಿಇಓ ಅವರಿಗೆ ಸ್ವಾಗತ: ಕೊಪ್ಪಳ ಜಿಲ್ಲಾ ಪಂಚಾಯತ್‌ನ ನೂತನ ಸಿಇಓ ಆಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ರಾಹುಲ್ ರತ್ನಂ ಪಾಂಡೆಯ ಅವರಿಗೆ ಇದೆ ವೇಳೆ ಹಾರ್ದಿಕ ಸ್ವಾಗತ ಕೋರಲಾಯಿತು. ಈ ವೇಳೆ ಮಾತನಾಡಿದ ರಾಹುಲ್ ಪಾಂಡೆಯ ಅವರು, ಕೊಪ್ಪಳ ಜಿಲ್ಲೆಯಲ್ಲಿ ಸಮಾಜಮುಖಿಯಾಗಿ ಕಾರ್ಯ ಮಾಡಿದ ಬಿ.ಫೌಜಿಯಾ ತರುನ್ನುಮ್ ಅವರ ಆದರ್ಶ ಗುಣಗಳು, ಅವರ ಜೀವನ ಮೌಲ್ಯಗಳನ್ನು ಜಿಲ್ಲೆಯ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ತಮ್ಮ ಕಾರ್ಯದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ನಾವು ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಮೀರ್ ಮುಲ್ಲಾ ಅವರು ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕಾವ್ಯ ಚತುರ್ವೆದಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ, ಜಿಪಂನ ಯೋಜನಾ ನಿರ್ದೇಶಕರಾದ ಟಿ.ಕೃಷ್ಣಮೂರ್ತಿ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಅಮಿನ್ ಹಾಗೂ ಇತರರು ಇದ್ದರು. ನಾಗರಾಜ ಅವರು ನಿರೂಪಿಸಿದರು.
Gadi Kannadiga > State > ಸಿಇಓ ಕಾರ್ಯಸಾಧನೆ ಸ್ಮರಿಸಿ ಭಾವುಕರಾದ ಅಧಿಕಾರಿಗಳು ಕೊಪ್ಪಳ ಜಿಲ್ಲೆಯನ್ನು ಮರೆಯಲಾರೆ: ಬಿ.ಫೌಜಿಯಾ ತರುನ್ನುಮ್
ಸಿಇಓ ಕಾರ್ಯಸಾಧನೆ ಸ್ಮರಿಸಿ ಭಾವುಕರಾದ ಅಧಿಕಾರಿಗಳು ಕೊಪ್ಪಳ ಜಿಲ್ಲೆಯನ್ನು ಮರೆಯಲಾರೆ: ಬಿ.ಫೌಜಿಯಾ ತರುನ್ನುಮ್
Suresh18/02/2023
posted on

More important news
ವಿದ್ಯುತ್ ವ್ಯತ್ಯಯ
23/03/2023
ಚುನಾವಣೆಯಲ್ಲಿ ಮಕ್ಕಳ ಬಳಕೆ ಸಲ್ಲದು
23/03/2023
ಮಾರ್ಚ ೨೪ ರಂದು ನಗರಸಭೆಯಲ್ಲಿ ಸಾಮಾನ್ಯ ಸಭೆ
23/03/2023