ಬಳ್ಳಾರಿ,ಜು.15: ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತಪರ ಯೋಜನೆಗಳಿಗೆ ಎಳ್ಳು ನೀರು ಬಿಟ್ಟಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ರೈತ ಮೋರ್ಚಾದಿಂದ ಹೋರಾಟಕ್ಕೆ ಅಣಿಯಾಗುತ್ತಿರುವುದಾಗಿ ಬಿಜೆಪಿ ರೈತ
ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಗುರುಲಿಂಗನಗೌಡ ಹೇಳಿದರು.
ನಗರದ ಸಂಗನಕಲ್ಲು ರಸ್ತೆಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಸಂಪೂರ್ಣ ರೈತ ವಿರೋಧಿಯಾಗಿದೆ. ರೈತರು, ಜನಸಾಮಾನ್ಯರು, ಕೂಲಿ ಕಾರ್ಮಿಕರು, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಭಾರೀ ಹೊಡೆತ ನೀಡಿದೆ. ಹತ್ತಿ,
ಬೆಲ್ಲ, ಅಕ್ಕಿ, ಸಕ್ಕರೆ ಗಿರಣಿಗಳ ವಿದ್ಯುತ್ ಬಿಲ್ ಏರಿಕೆ ಮಾಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚುವಂತಹ ಸ್ಥಿತಿ ತಲೆದೋರಿದೆ.
ಹೀಗಾಗಿ ರಾಜ್ಯದ ಕೃಷಿಯಾಧಾರಿತ ಎಲ್ಲ ವರ್ಗದ ಜನರ ಪರವಾಗಿ ಹೊರಾಟಕ್ಕೆ ಅಣಿಯಾಗುತ್ತಿರುವುದಾಗಿ ಹೇಳಿದರು. ರೈತರು ಎಲ್ಲಿ ಬೇಕಾದರೂ ತಮ್ಮ ಬೆಳೆಯನ್ನು ಮಾರಾಟ ಮಾಡುವ ಸಲುಗೆಯನ್ನು ಬಿಜೆಪಿ ಸರ್ಕಾರ ನೀಡಿತ್ತು. ಕಾಂಗ್ರೆಸ್ ಸರ್ಕಾರ ಇದೀಗ ರೈತರು ಬೆಳೆದ ಬೆಳಗಳನ್ನು ಎಪಿಎಂಸಿಗೆ ಮಾರಾಟ ಮಾಡುವಂತೆ ಕಟ್ಟು ನಿಟ್ಟಾಗಿ ಫರ್ಮಾನು ವಿಧಿಸಿದೆ. ಇದರಿಂದ ರೈತರಿಗೆ ಸರಕು ಸಾಗಣೆ, ಹಮಾಲಿ, ತೆರಿಗೆ ಇತ್ಯಾದಿ ಹೊರೆಯಾಗುತ್ತಿದೆ. ಬೆವರು ಸುರಿಸಿ, ಸಾಲ ಮಾಡಿ ಬೆಳೆ ಬೆಳೆದ ರೈತ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಗೃಹ ಬಳಕೆ ಮತ್ತು ಉದ್ಯಮಗಳ ಬಳಕೆಗೆ ವಿದ್ಯುತ್ ಬಿಲ್ ಏಕಾಏಕಿ ಹೆಚ್ಚಳ ಮಾಡಿದೆ. ರೈತ ವಿದ್ಯಾನಿಧಿ ಯೋಜನೆ ರದ್ದುಪಡಿಸಿದ್ದು ಇದರಿಂದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಕುಂಠಿತವಾಗುತ್ತಿದೆ. ಜಿಲ್ಲೆಗೊಂದು ಗೋಶಾಲೆ ತೆರೆದು ಬಿಜೆಪಿ ಸರ್ಕಾರ ಗೋವುಗಳನ್ನು ರಕ್ಷಿಸಿತ್ತು. ಇದೀಗ ಗೋಮಾಳ ತೆಗೆದು ಹಾಕಿದೆ. ಗೋವುಗಳ ರಕ್ಷಣೆ ಇಲ್ಲದೇ ಹಾಲು, ಮೊಸರು, ತುಪ್ಪಕ್ಕೆ ಪರದಾಡುವ ಸ್ಥಿತಿ ಇದೆ. ಭೂ ಸಿರಿ ಯೋಜನೆ ರದ್ದು ಮಾಡುವ ಮೂಲಕ ಸಹಾಯ ಧನ ನಿಲ್ಲಿಸಿದೆ. ಕಿಸಾನ್ ಸಮ್ಮಾನ್ ನಿಧಿ ರದ್ದು ಮಾಡಲೂ ಕೂಡ ಯೋಚಿಸುತ್ತಿರುವ ಸರ್ಕಾರ ಸಂಪೂರ್ಣವಾಗಿ ರೈತರನ್ನು ದಿವಾಳಿ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದು ಮಾಡಿದ್ದು ಜಮೀನಿಗೆ ಯೋಗ್ಯ ದರ ಸಿಗದಂತೆ ಮಾಡಿದ್ದಾರೆ. ಡೀಸೆಲ್ ಸಹಾಯ ಧನ ರದ್ದುಪಡಿಸಿ ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಿದೆ. ತುಂಗಭದ್ರಾ ನದಿಗೆ ಸಮಾನಾಂತರ ಜಲಾಶಯ ನಿರ್ಮಾಣದ ಕುರಿತು ನಗಣ್ಯ ಭಾವ ಅನುಸರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ರೈತರನ್ನು ಒಕ್ಕಲೆಬ್ಬಿಸಲು ಎಲ್ಲ ರೀತಿಯ ತಂತ್ರ ರೂಪಿಸಿದೆ. ಬಿಜೆಪಿ ರೈತ ಮೋರ್ಚಾ ಇದನ್ನು ನೋಡಿ ಸುಮ್ಮನಿರುವುದಿಲ್ಲ. ರಾಜ್ಯದ ಎಲ್ಲ ಶಾಸಕರಿಗೆ, ಮಂತ್ರಿಗಳಿಗೆ, ಸಂಸದರಿಗೆ, ವಿಧಾನಪರಿಷತ್ತು ಸದಸ್ಯರಿಗೆ, ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ರಾಜ್ಯದ ಜನರ ಮುಂದೆ ಇಡುತ್ತೇವೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಗ್ರವಾದ ಹೋರಾಟಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಹಿರಿಯ ಧುರೀಣರಾದ ಕೆಎ ರಾಮಲಿಂಗಪ್ಪ, ಹಿರಿಯ ಮುತ್ಸದ್ದಿಗಳಾದ ರ‍್ರಂಗಳಿ ತಿಮ್ಮಾರೆಡ್ಡಿ, ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಪ್ರಕಾಶ್ ಗೌಡ, ಪ್ರಧಾನಕಾರ್ಯದರ್ಶಿ ಶಿವಶಂಕರ್ ರೆಡ್ಡಿ, ಮದಿರೆ ಕುಮಾರಸ್ವಾಮಿ, ಪುರುಷೋತ್ತಮ ಮತ್ತು
ಮುಖಂಡರಾದ ಪ್ರಕಾಶ್ ಕಕ್ಕಬೇವಿನಹಳ್ಳಿ, ಮಾಧ್ಯಮ ವಕ್ತಾರ ರಾಜೀವ್ ತೊಗರಿ, ಕಚೇರಿ ಮುಖಂಡರಾದ ರಾಮಕೃಷ್ಣ, ಓಂಕಾರ್ ಇನ್ನಿತರರು ಇದ್ದರು.