This is the title of the web page
This is the title of the web page

Please assign a menu to the primary menu location under menu

State

ವಸ್ತುಗಳನ್ನು ಖರೀದಿಸುವಾಗ ಗ್ರಾಹಕರು ಮುಂಜಾಗ್ರತೆ ವಹಿಸಿ :ಬಸವರಾಜ


ಗದಗ ಮಾರ್ಚ ೧೫: ಗ್ರಾಹಕರು ಯಾವುದೇ ವಸ್ತುವನ್ನು ಖರೀದಿಸುವಾಗ ಅಥವಾ ಸೇವೆ ಪಡೆಯುವಾಗ ಪರಿಶೀಲನೆ ಮಾಡುವುದು ಅವಶ್ಯವಾಗಿದೆ. ಒಂದು ವೇಳೆ ವಸ್ತುವನ್ನು ಖರೀದಿಸಿದಾಗ ಮೋಸ ಹೋದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಬುಧವಾರದಂದು ಜಿಲ್ಲಾಡಳಿತ, ಜಿಲ್ಲಾಪಂಚಾಯತ್ , ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ವಾರ್ತಾ ಮತ್ತು ಸಾರ್ವಜನಕ ಸಂಪರ್ಕ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶುದ್ಧ ಶಕ್ತಿ ಪರಿವರ್ತನೆ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಳ್ಳಲಾದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಹಕರಿಗೆ ತಾವು ಖರೀದಿಸಿದ ವಸ್ತುವಿನ ಬೆಲೆ, ಗುಣಮಟ್ಟ ಹಾಗೂ ಪ್ರಮಾಣವನ್ನು ಪರಿಶೀಲನೆ ಮಾಡುವ ಹಕ್ಕು ಇರುತ್ತದೆ. ಗ್ರಾಹಕರು ತಮಗಿರುವ ಹಕ್ಕುಗಳ ಕುರಿತು ಮಾಹಿತಿ ಹೊಂದಿರಬೇಕು. ಖರೀದಿ ಮಾಡಿದ ವಸ್ತುವಿನ ರಸೀದಿಯನ್ನು ಕಾಯ್ದಿಟ್ಟುಕೊಳ್ಳುವುದು ಮುಖ್ಯವಾಗಿದೆ. ಕೇವಲ ಜಾಹೀರಾತುಗಳಿಗೆ ಮರುಳಾಗದೇ ವಸ್ತುವಿನ ಅಥವಾ ಸೇವೆಯ ಗುಣಮಟ್ಟವನ್ನು ಪೂರ್ವಾಪರ ವಿಚಾರ ಮಾಡಿ ವ್ಯವಹರಿಸಬೇಕಾಗುತ್ತದೆ. ಒಂದು ವೇಳೆ ಗ್ರಾಹಕರು ಸೇವೆಯಿಂದ ಅಥವಾ ಖರೀದಿಸಿದ ವಸ್ತುವಿನಿಂದ ವಂಚನೆಗೊಳಗಾದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮಾಪನ ಪ್ರಾತ್ಯಕ್ಷಿಕೆ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬರೂ ಒಂದಿಲ್ಲ ಒಂದು ರೀತಿಯಲ್ಲಿ ಗ್ರಾಹಕರೇ ಆಗಿರುತ್ತಾರೆ. ಖರೀದಿಸುವ ವಸ್ತುವಿನ ನಿಗದಿತ ಅವಧಿ, ಮುಗಿದ ಅವಧಿ ( exಠಿiಡಿಥಿ ಜಚಿಣe ) ಪರಿಶೀಲನೆ ಮಾಡುವುದು ಅವಶ್ಯವಾಗಿದೆ. ವಸ್ತುಗಳನ್ನು ಖರೀದಿಸುವಾಗ ಅಥವಾ ಸೇವೆಯನ್ನು ಪಡೆಯುವಾಗ ಮುಂಜಾಗ್ರತೆ ವಹಿಸಿದರೆ ಮೋಸ ಹೋಗುವುದನ್ನು ತಪ್ಪಿಸಬಹುದು. ಪ್ರತಿಯೊಬ್ಬ ಗ್ರಾಹಕರು ತಮಗಿರುವ ಹಕ್ಕುಗಳ ಕುರಿತು ಅರಿವು ಹೊಂದಿರಬೇಕು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಮಾತನಾಡಿ ಗ್ರಾಹಕರು ತಾವು ಖರೀದಿಸುವ ವಸ್ತುವಿನ ಗುಣಮಟ ್ಟ ಹಾಗೂ ಪ್ರಮಾಣ ಪರಿಶೀಲನೆ ಮಾಡಬೇಕು. ಒಂದು ವೇಳೆ ಮೋಸವಾದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಪರಿಹಾರ ಪಡೆಯಬಹುದು. ಗ್ರಾಹಕರು ಯಾವುದೇ ಕಾರಣಕ್ಕೂ ನಿಷ್ಕಾಳಜಿ ಮಾಡಬಾರದು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಡಿ.ವೈ. ಬಸಾಪುರ ಮಾತನಾಡಿ ಗ್ರಾಹಕರ ಹಿತರಕ್ಷಣೆಗಾಗಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರು ಯಾವ ರೀತಿಯಾಗಿ ತಾವು ಖರೀದಿಸಿದ ವಸ್ತುವಿನ ತೂಕ ಮತ್ತು ಅಳತೆಯಲ್ಲಿ, ರಿಯಲ್ ಎಸ್ಟೇಟ್ ವ್ಯವಹಾರ ಮಾಡುವಾಗ ಮೋಸ ಹೋಗುವ ಸಂಭವವಿರುತ್ತದೆ ಎನ್ನುವ ಕುರಿತು ಉದಾಹರಣೆ ಸಹಿತ ವಿವರಿಸಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ರಾಜು ನಾಮದೇವ ಮೇತ್ರಿ ಮಾತನಾಡಿ ಗ್ರಾಹಕರಷ್ಟೇ ಅಲ್ಲದೇ ಮಾರಾಟ ಮಾಡುವ ವ್ಯಕ್ತಿಗಳು ಕೂಡ ಎಚ್ಚರವಾಗಿರಬೆಕು. ತಾವು ಮಾರಾಟ ಮಾಡುವ ವಸ್ತುವಿನ ಕುರಿತು ಗ್ರಾಹಕರಿಗೆ ಸೂಕ್ತ ಮಾಹಿತಿ ಒದಗಿಸುವುದು ಮಾರಾಟ ಮಾಡುವವರ ಕರ್ತವ್ಯವಾಗಿದೆ. ಒಂದು ವೇಳೆ ಗ್ರಾಹಕರಿಗೆ ತಪ್ಪಾಗಿ ಮಾಹಿತಿ ಕೊಟ್ಟು ಗ್ರಾಹಕರಿಗೆ ವಂಚನೆ ಮಾಡಿದರೆ ಮಾರಾಟ ಮಾಡುವವರು ಶಿಕ್ಷೆಗೆ ಒಳಗಾಗುತ್ತಾರೆ. ಗ್ರಾಹಕರು ಆನ್‌ಲೈನ್ ಖರೀದಿ ಮಾಡುವ ಸಮಯದಲ್ಲಿಯೂ ಮಾರಾಟ ಮಾಡುವವರು ಸರಿಯಾದ ಮಾಹಿತಿ ಒದಗಿಸಿ ಗುಣಮಟ್ಟದ ಸೇವೆಯನ್ನು ಒದಗಿಸಬೇಕು ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಯಶೋಧಾ ಪಾಟೀಲ ಮಾತನಾಡಿ ಗ್ರಾಹಕರಿಲ್ಲದಿದ್ದರೆ ದೇಶದ ಆರ್ಥಿಕ ವ್ಯವಸ್ಥೆಯೇ ಕುಸಿಯುತ್ತದೆ. ಉತ್ಪಾದನೆ ಮಾಡುವವರು, ಮಾರಾಟ ಮಾಡುವವರು ಹಾಗೂ ವಸ್ತುವನ್ನು ಖರೀದಿ ಮಾಡುವವರು ಪರಸ್ಪರ ಒಬ್ಬರನೊಬ್ಬರು ಅವಲಂಬಿಸಿದ್ದಾರೆ. ಪ್ರತಿಯೊಬ್ಬ ಗ್ರಾಹಕರು ಸರಕು ಖರೀದಿಗೆ ಮುನ್ನ ಆ ಸರಕಿನ ಕುರಿತು ಮಾಹಿತಿ ಪಡೆಯಬೇಕು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಐ. ಹಿರೇಮನಿ ಪಾಟೀಲ ಮಾತನಾಡಿ ಗ್ರಾಹಕರ ಶೋಷಣೆ ಇಂದು ನಿನ್ನೆಯದಲ್ಲ. ಆದರೆ ಗ್ರಾಹಕರು ತಮಗೆ ಮೋಸವಾದಾಗ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ದಾಖಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಪರಿಸರ ಸಂರಕ್ಷಣೆ , ಸೋಲಾರ ಶಕ್ತಿ ಬಳಕೆ ಮಾಡುವುದರೊಂದಿಗೆ ಜಾಗತಿಕ ತಾಪಮಾನ ಕಡಿಮೆ ಮಾಡಬೇಕಾಗಿದೆ ಎಂದು ಸಲಹೆ ಮಾಡಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ವತಿಯಿಂದ ಆಹಾರ ಸುರಕ್ಷತಾ ಅಧಿಕಾರಿ ಆರ್.ಎಸ್. ಗಡಾದ ಅವರು ಆಹಾರ ಸುರಕ್ಷತೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಆರೋಗ್ಯ ಶಿಕ್ಷಣ ನೀಡಿದರು.
ಕಾರ್ಯಕ್ರಮದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಆರ್.ಕೆ.ಕೊಪ್ಪರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗದೀಶ ನುಚ್ಚಿನ ವಿವಿಧ ಇಲಾಖೆಯ ಅಧಿಕಾರಿಗಳು, ಹೆಚ್.ಸಿ.ಇ.ಎಸ್. ಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಗಂಗಪ್ಪ ಎಂ. ಸ್ವಾಗತಿಸಿ ವಂದಿಸಿದರು. ಶಿವಾನಂದ ಗಿಡ್ನಂದಿ ಕಾರ್ಯಕ್ರಮ ನಿರೂಪಿಸಿದರು.


Gadi Kannadiga

Leave a Reply