This is the title of the web page
This is the title of the web page

Please assign a menu to the primary menu location under menu

Local News

ಕನ್ನಡ ಸಾಹಿತ್ಯದ ಇತ್ತೀಚಿನ ವಾಗ್ವಾದಗಳ ಕುರಿತು ಸಂವಾದ


ಬೆಳಗಾವಿ:- ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ದಿನಾಂಕ : ೦೯-೦೬-೨೦೨೨ರಂದು ನಡೆದ ಸಂವಾದದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಸೋಮಣ್ಣ ಹೊಂಗಳ್ಳಿ ಅವರು ಕನ್ನಡ ಸಾಹಿತ್ಯದ ಇತ್ತೀಚಿನ ವಾಗ್ವಾದಗಳು ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಥೆಗಾರರಾದ ಪ್ರೊ. ಸೋಮಣ್ಣ ಅವರು ತಾನು ಕಥಾಸಾಹಿತ್ಯವನ್ನು ಆಯ್ಕೆ ಮಾಡಿಕೊಂಡ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾ ಯಾವ ಪ್ರಕಾರದ ಮೂಲಕ ನಮ್ಮ ಅನುಭವ ಮತ್ತು ಸಂವೇದನೆಗಳನ್ನು ಅಭಿವ್ಯಕ್ತಿಪಡಿಸಲು ಸಾಧ್ಯವೆನಿಸುತ್ತದೆಯೋ ಆ ಪ್ರಕಾರವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳಾದ ನೀವು ಲೇಖಕರಾಗಿ ರೂಪುಗೊಳ್ಳಬೇಕು ಎಂದರು. ಇಂದು ಜಿಲ್ಲೆಗೊಂದು ವಿಶ್ವವಿದ್ಯಾಲಯಗಳು ಅಸ್ಥಿತ್ವಕ್ಕೆ ಬಂದು ಉನ್ನತ ಶಿಕ್ಷಣವು ಕೈಗೆಟುಕುವ ಸ್ಥಿತಿಯಲ್ಲಿರುವುದರಿಂದ ಅದರ ಲಾಭವನ್ನು ನೀವು ಪಡೆದುಕೊಳ್ಳಬೇಕು ಮತ್ತು ಆ ಮೂಲಕ ನಿಮ್ಮ ಓದಿನ ಅಭಿರುಚಿಯನ್ನು ಬೆಳೆಸಿಕೊಂಡು ಉದ್ಯೋಗ ಪಡೆದುಕೊಳ್ಳಬೇಕೆಂದರು.
ಪ್ರಸ್ತುತ ಸಂದರ್ಭದಲ್ಲಿ ಯುವಜನತೆ ಸಾಹಿತ್ಯ ಪಠ್ಯಗಳ ಜೊತೆಗೆ ಮುಖಾಮುಖಿಯಾಗುವ ಮೂಲಕ ಬದುಕನ್ನು ನಿರೂಪಿಸಿಕೊಳ್ಳಲು ಶ್ರಮಿಸಬೇಕು ಹಾಗೇಯೇ ಸಾಮಾಜಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಉಂಟಾಗುವ ಬೇರೆ ಬೇರೆ ವಾಗ್ವಾದಗಳನ್ನು ಸೂಕ್ಷö್ಮವಾಗಿ ಗಮನಿಸುತ್ತಾ ತಟಸ್ಥವಾಗಿರುವ ಜೊತೆಯಲ್ಲಿ ಸದಾ ದೇಶದ ಪರವಾಗಿ ಇರಬೇಕು ಆಗ ಮಾತ್ರ ನೀವು ಈ ದೇಶದ ನಿಜವಾದ ಪ್ರಜೆಗಳಾಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ಸಂವಾದಕ್ಕೆ ಪೂರ್ವಪೀಠಿಕೆಯಾಗಿ ಮಾತನಾಡುತ್ತಾ ಸಾಹಿತ್ಯದ ವಿವಿಧ ವಾದಗಳು, ಪಠ್ಯಪುಸ್ತಕದ ಕುರಿತು ಉಂಟಾದ ಚರ್ಚೆಗಳು, ವಿದ್ಯಾರ್ಥಿಗಳ ಉದ್ಯೋಗದ ಸಾಧ್ಯತೆಗಳು ಹಾಗೂ ನಮ್ಮ ಅಭಿಪ್ರಾಯಗಳು ತತ್ವಸಿದ್ಧಾಂತಗಳ ಹಿನ್ನೆಲೆಯಲ್ಲಿರಬೇಕೆ ವಿನಃ ವೈಯಕ್ತಿಕ ಹಿತಾಸಕ್ತಿಗಳಾಗಬಾರದು ಎಂದರು. ಸಂವಾದ ಕಾರ್ಯಕ್ರಮದಲ್ಲಿ ವಿಭಾಗದ ಅಧ್ಯಾಪಕರುಗಳಾದ ಡಾ. ಪಿ. ನಾಗರಾಜ, ಡಾ. ಶೋಭಾ ನಾಯಕ, ಡಾ. ಗಜಾನನ ನಾಯ್ಕ ವಿವಿಧ ಪ್ರಶ್ನೆಗಳನ್ನು ಕೇಳುವ ಮೂಲಕ ವಿದ್ಯಾರ್ಥಿಗಳು ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು. ಕೆಲವು ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಚರ್ಚೆಯಲ್ಲಿ ಪಾಲ್ಗೊಂಡು ಸಂವಾದವನ್ನು ಅರ್ಥಪೂರ್ಣಗೊಳಿಸಿದರು. ಸಂವಾದದಲ್ಲಿ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.


Gadi Kannadiga

Leave a Reply