ಡಿ.5 ರಿಂದ 8 ರವರೆಗೆ ಡಾ. ಶಿವಬಸವ ಸ್ವಾಮೀಜಿಯವರ 135 ನೇ ಜಯಂತಿ ಮಹೋತ್ಸವ

Murugesh Shivapuji
ಡಿ.5 ರಿಂದ 8 ರವರೆಗೆ ಡಾ. ಶಿವಬಸವ ಸ್ವಾಮೀಜಿಯವರ 135 ನೇ ಜಯಂತಿ ಮಹೋತ್ಸವ
WhatsApp Group Join Now

ಬೆಳಗಾವಿ; ಇದೇ ತಿಂಗಳ ಐದರಿಂದ ಎಂಟರವರೆಗೆ ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ ಶಿವಬಸವ ಮಹಾಸ್ವಾಮಿಗಳವರ 135ನೇ ಜಯಂತಿ ಮಹೋತ್ಸವವು ಆರ್. ಎನ್. ಶೆಟ್ಟಿ ಪೊಲಿಟೆಕ್ನಿಕ್ ಆವರಣದಲ್ಲಿ ಜರುಗಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಗದುಗಿನ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಜರುಗಲಿರುವ ನಾಲ್ಕು ದಿನಗಳ ಕಾರ್ಯಕ್ರಮದ ನೇತೃತ್ವವನ್ನು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಲಿದ್ದಾರೆ.
ಜಯಂತಿ ಮಹೋತ್ಸವದ ಅಂಗವಾಗಿ ಕಳೆದ 26 ರಿಂದ ಮಣಕವಾಡ ದೇವ ಮಂದಿರ ಮಹಾಮಠದ ಶ್ರೀ.ಅಭಿನವ ಮೃತ್ಯುಂಜಯ ಸ್ವಾಮಿಗಳವರಿಂದ ನಡೆಯುತ್ತಿರುವ “ಶರಣರ ಅನುಭವಾಮೃತ ಪ್ರವಚನ” ಕಾರ್ಯಕ್ರಮವು ದಿನಾಂಕ 4 ರಂದು ಸಂಜೆ ಮಂಗಲಗೊಳ್ಳಲಿದೆ.
ಗುರುವಾರ ದಿನಾಂಕ ಐದರಂದು ಬೆಳಗಿನ 9:30 ಗಂಟೆಗೆ ಅರಭಾವಿ- ಕಡೋಲಿಯ ದುರದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ಶ್ರೀ. ಗುರುಬಸವಲಿಂಗ ಸ್ವಾಮೀಜಿಯವರಿಂದ “ಷಟಸ್ಥಲ ದ್ವಜಾರೋಹಣ” ನೆರವೇರಲಿದೆ. ಅಂದು ಸಂಜೆ ಆರು ಗಂಟೆಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು ಅಧ್ಯಕ್ಷತೆಯನ್ನು ಕಟಕೋಳ ಚೌಕಿಮಠದ ಶ್ರೀ. ನಾಗಭೂಷಣ ಮಹಾಸ್ವಾಮಿಗಳು ವಹಿಸಲಿದ್ದು , ನೇತೃತ್ವವನ್ನು ಶೇಗುಣಸಿ ವಿರಕ್ತಮಠದ ಡಾ.ಮಹಾಂತ ಪ್ರಭು ಮಹಾಸ್ವಾಮಿಗಳು ವಹಿಸಲಿದ್ದಾರೆ. ಸಮ್ಮುಖದಲ್ಲಿ ಜಮಖಂಡಿ ಓಲೆಮಠದ ಉತ್ತರಾಧಿಕಾರಿ ಶ್ರೀ. ಆನಂದ ದೇವರು ಉಪಸ್ಥಿತರಿರಲಿದ್ದಾರೆ. ಇದೇ ಸಂದರ್ಭದಲ್ಲಿ ಅಮೃತ ಮಹೋತ್ಸವ ವರ್ಷದಲ್ಲಿರುವ ಬೆಳಗಾವಿ ಕಾರಂಜಿ ಮಠದ ಶ್ರೀ.ಗುರುಸಿದ್ಧ ಮಹಾಸ್ವಾಮಿಗಳಿಗೆ ಅಮೃತ ಗೌರವ ಅಭಿನಂದನೆ ಸಲ್ಲಿಸಲಾಗುವುದು. ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀ. ಮಹೇಶ ಜೋಶಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರಿನ ಎಚ್.ಬಿ. ನಾಗೇಂದ್ರ ಪ್ರಸಾದ್ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿರಹಟ್ಟಿಯ ಬಾಳಸಾಹೇಬ ಲೋಕಾಪುರ್ ಅವರನ್ನು ಸತ್ಕರಿಸಲಾಗುವುದು. ಶ್ರೀಮಠದಿಂದ ಕೊಡ ಮಾಡಲಾಗುವ “ಕನ್ನಡ ನುಡಿಶ್ರೀ” ಪ್ರಶಸ್ತಿಯನ್ನು ಬೆಂಗಳೂರಿನ ಜನಶಕ್ತಿ ಸಂಘದ ಅಧ್ಯಕ್ಷ ಸಿ. ಕೆ. ರಾಮೇಗೌಡ, ಬೆಳಗಾವಿಯ ಮಲ್ಲಪ್ಪ ಅಕ್ಷರದ ಮತ್ತು ಪತ್ರಕರ್ತ ಮಹೇಶ ವಿಜಾಪುರ ಅವರುಗಳಿಗೆ ಪ್ರದಾನ ಮಾಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ನಾಗನೂರಿನ ಶ್ರೀಮತಿ. ಜಾನಕಿದೇವಿ ಭದ್ರಣ್ಣವರ್ ವಿರಚಿತ “ಜೋಳಿಗೆ ಧರಿಸಿದ” ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಲಾಗುವುದು.
ಶುಕ್ರವಾರ ದಿನಾಂಕ ಆರರಂದು “ಆತ್ಮ ಸ್ವಾಸ್ಥ್ಯ ಶ್ರೀ” ಪ್ರಶಸ್ತಿ ಪ್ರಧಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ. ಹಂದಿಗುಂದ ವಿರಕ್ತಮಠದ ಶ್ರೀ. ಶಿವಾನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ. ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ವಹಿಸಲಿದ್ದು ಸಮ್ಮುಖದಲ್ಲಿ ಮಲ್ಲಾಪುರ- ನೇಸರಗಿ ಗಾಳೇಶ್ವರ ಮಠದ ಶ್ರೀ. ಚಿದಾನಂದ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ. ನೇತೃತ್ವವನ್ನು ಯಮುಕನ ಮರಡಿ ಹುಣಸಿಕೊಳ್ಳ ಮಠದ ಶ್ರೀ.ಸಿದ್ದಬಸವ ದೇವರು ವಹಿಸಿಕೊಳ್ಳಲಿದ್ದಾರೆ. “ಆತ್ಮ ಸ್ವಾಸ್ಥ್ಯ ಶ್ರೀ”ಪ್ರಶಸ್ತಿಯನ್ನು ಗುಜರಾತ್ ರಾಜ್ಯ ಪಾಟನದ ಅಂಗರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ.ಕೆ.ಡಾ. ಅನಿಲ ಬಥಿಜಾ ಅವರಿಗೆ ಪ್ರದಾನ ಮಾಡಿ ಗೌರವಿಸಲಾಗುವುದು. ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿಯ ನಿವೃತ್ತ ಆದಾಯ ತೆರಿಗೆ ಇಲಾಖೆ ಅಧಿಕಾರಿ ಶ್ರೀ. ಗೋವಿಂದಪ್ಪ ಗೌಡಪ್ಪಗೋಳ ಆಗಮಿಸಲಿದ್ದಾರೆ. ಪ್ರಕಾಶ್ ಗಿರಿಮಲ್ಲಿನವರ್ ವಿರಚಿತ ಗ್ರಂಥ ” ಎ ಬ್ರೀಫ್ ಬಯೋಗ್ರಾಫಿ ಆಫ್ ಡಾ. ಸಿದ್ದರಾಮ ಸ್ವಾಮೀಜಿ ” ಲೋಕಾರ್ಪಣೆ ಗೊಳ್ಳಲಿದೆ.
ಶನಿವಾರ ದಿನಾಂಕ 7 ರಂದು ಸಂಜೆ 6 ಗಂಟೆಗೆ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳ ವಿದ್ಯಾರ್ಥಿ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಮಾವೇಶ ಜರುಗಲಿದೆ. ಅಥಣಿಯ ಮೋಟಗಿಮಠದ ಶ್ರೀ. ಚನ್ನಬಸವ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಜರುಗಲಿರುವ ಈ ಕಾರ್ಯಕ್ರಮದ ನೇತೃತ್ವವನ್ನು ತಾಂಬಾಳ- ಕಾಸರಶಿರಸಿ ಷಣ್ಮುಖ ಶಿವಯೋಗಿಗಳ ಮಠದ ಶ್ರೀ.ವಿಜಯಕುಮಾರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಸಮ್ಮುಖದಲ್ಲಿ ಅರಳಿಕಟ್ಟಿ ತೋಂಟದಾರ್ಯ ವಿರಕ್ತ ಮಠದ ಶ್ರೀ.ಶಿವಮೂರ್ತಿ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸವರಾಜ ರೊಟ್ಟಿ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ. ಮಠದಿಂದ ಕೊಡ ಮಾಡಲಾಗುವ “ಪ್ರಸಾದ ಶ್ರೀ ಗೌರವ ” ಪ್ರಶಸ್ತಿಯನ್ನು ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳಾದ ಕೊಪ್ಪಳದ ಹಿರಿಯ ದಿವಾನಿ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಶ್ರೀ. ಮಲ್ಕಾರಿ ರಾಮಪ್ಪ ಒಡೆಯರ , ಬೆಳಗಾವಿಯ ಪತ್ರಕರ್ತ ಶ್ರೀ.ಮುರುಗೇಶ ಶಿವಪೂಜಿ , ಸಂಕೇಶ್ವರದ ಉಪನ್ಯಾಸಕ ಶ್ರೀ. ಬಿ.ಆರ್. ಮಜಗಿ ಮತ್ತು ಬೆಳಗಾವಿಯ ಗುತ್ತಿಗೆದಾರ ಶ್ರೀ. ನಾನಾಗೌಡಾ ಬಿರಾದಾರ್ ಅವರುಗಳಿಗೆ ಪ್ರದಾನ ಮಾಡಿ ಗೌರವಿಸಲಾಗುವುದು.
ಇದೇ ಸಂದರ್ಭದಲ್ಲಿ ಬೆಳಗಾವಿಯ ಡಾ.ಹೇಮಾವತಿ ಸೊನೋಳ್ಳಿ ವಿರಚಿತ ಆತ್ಮ ಚರಿತ್ರೆ “ಹೇಮಸಿರಿ” ಮತ್ತು ಬೆಳಗಾವಿಯ ಶ್ರೀಮತಿ. ಜ್ಯೋತಿ ಬದಾಮಿ ವೀರಚಿತ ” ಋಣಿ ” ಕವನ ಸಂಕಲನ ಗ್ರಂಥಗಳು ಲೋಕಾರ್ಪಣೆಗೊಳ್ಳಲಿವೆ.
ಜಯಂತಿ ಮಹೋತ್ಸವದ ಕೊನೆಯ ದಿನವಾದ ರವಿವಾರ ದಿನಾಂಕ 8 ರಂದು ಮುಂಜಾನೆ 10:30 ಗಂಟೆಗೆ ಶ್ರೀ. ಹಾನಗಲ್ಲ ಕುಮಾರ ಮಹಾಶಿವಯೋಗಿಗಳವರ ಕಂಚಿನ ಪುತ್ಥಳಿ ಅನಾವರಣ ಮತ್ತು ಶ್ರೀ. ಮಠದಿಂದ ಕೊಡಲಾಗುವ ” ಸೇವಾರತ್ನ ಪ್ರಶಸ್ತಿ” ಪ್ರದಾನ ಸಮಾರಂಭ ನೆರವೇರಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾ ಸ್ವಾಮಿಗಳು ಮತ್ತು ಆನಂದಪುರ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು ಅಧ್ಯಕ್ಷತೆಯನ್ನು ಬೆಟ್ಟದಪುರ ಸಲೀಲಾಖ್ಯ ವಿರಕ್ತಮಠದ ಶ್ರೀ. ಚನ್ನಬಸವ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ.
ನೇತೃತ್ವವನ್ನು ಕಟಕೋಳ ಕುಮಾರೇಶ್ವರ ಮಠದ ಶ್ರೀ. ಸಚ್ಚಿದಾನಂದ ಮಹಾಸ್ವಾಮಿಗಳು ವಹಿಸಲಿದ್ದು ಮಣಕವಾಡ ದೇವಮಂದಿರ ಮಹಾಮಠದ ಶ್ರೀ. ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳಿಗೆ ಶ್ರೀಮಠದಿಂದ ಗೌರವ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ.ವಿ. ಸೋಮಣ್ಣ ಅವರು ಉದ್ಘಾಟಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಮಾಜಿ ಮುಖ್ಯಮಂತ್ರಿ ಸಂಸದ ಶ್ರೀ. ಜಗದೀಶ್ ಶೆಟ್ಟರ್ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ ಅವರುಗಳು ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಎಸ್. ಜಿ. ಬಿ .ಐ. ಟಿ. ಮಹಾವಿದ್ಯಾಲಯದ ಹವಾನಿಯಂತ್ರಿತ ಸಭಾಭವನವನ್ನು ನೈಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ.ಅಶೋಕ ಖೇಣಿ ಅವರು ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಮಠದಿಂದ ಕೊಡ ಮಾಡಲಾಗುವ “ಸೇವಾ ರತ್ನ ಪ್ರಶಸ್ತಿ ” ಯನ್ನು ವಿಧಾನಪರಿಷತ್ತಿನ ಮಾಜಿ ಸದಸ್ಯ ಶ್ರೀ. ಮಹಾಂತೇಶ್ ಕವಟಗಿಮಠ, ಮುಂಡರಗಿಯ ಮಾಜಿ ಸಚಿವ ಶ್ರೀ. ಎಸ್. ಎಸ್. ಪಾಟೀಲ್, ಬೆಂಗಳೂರಿನ ಶ್ರೀ.ಪಾಲನೆತ್ರ, ಬೆಳಗಾವಿಯ ಶ್ರೀಮತಿ. ಶೈಲಜಾ ಭಿಂಗೆ ಹಾಗೂ ಬೆಳಗಾವಿಯ ಶ್ರೀ. ಕೆಂಪಣ್ಣಾ ರಾಮಾಪುರಿ ಮತ್ತು ಬೆಳಗಾವಿಯ ತಬಲಾ ವಾದಕ ಶ್ರೀ. ಸತೀಶ್ ಗಚ್ಚಿ ಅವರುಗಳಿಗೆ ಪ್ರದಾನ ಮಾಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಮುಳವಾಡದ ಹಿರಿಯ ಸಾಹಿತಿ ಶ್ರೀ. ಫ.ಗು. ಸಿದ್ದಾಪುರ ವಿರಚಿತ ” ಮಹಾದಾಸೋಹಿ ಶಿವಬಸವ ” ಚೌಪದಿ ಮಹಾಕಾವ್ಯವನ್ನು ಮತ್ತು ಚಂದ್ರಶೇಖರ ಕಗ್ಗಲ್ಲುಗೌಡ್ರು ವಿರಚಿತ ” ಸ್ಪಿರಿಚುಯಾಲಿಟಿ ಇನ್ ಸಿಂಗಾಪುರ್ ” (ಲೈಫ್ ಸ್ಟೋರಿ ಆಫ್ ಎಂ.ಎಂ. ಸಾಖರೆ ) ಗ್ರಂಥಗಳು ಲೋಕಾರ್ಪಣೆಗೊಳ್ಳಲಿವೆ. ನಾಲ್ಕೂ ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ “ಶ್ರೀಮಠದ” ಪ್ರಕಟಣೆಯಲ್ಲಿ ವಿನಂತಿಸಿಕೊಳ್ಳಲಾಗಿದೆ.

WhatsApp Group Join Now
Telegram Group Join Now
Share This Article
error: Content is protected !!