This is the title of the web page
This is the title of the web page

Please assign a menu to the primary menu location under menu

State

ಜಾರಕಿಹೊಳಿಗೆ ಡಿಸಿಎಂ, ಪ್ರಸಾದ ಅಬ್ಬಯ್ಯಗೆ ಸಚಿವ ಸ್ಥಾನ ನೀಡಲು ಒತ್ತಾಯ


ಹುಕ್ಕೇರಿ : ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಪ್ರಭಾವಿ ನಾಯಕ ಸತೀಶ ಜಾರಕಿಹೊಳಿ, ಪ್ರಸಾದ ಅಬ್ಬಯ್ಯ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕು ಎಂದು ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜಮಾಯಿಸಿದ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು, ಕಾಂಗ್ರೆಸ್‌ಗೆ ಐತಿಹಾಸಿಕ, ಅಭೂತಪೂರ್ವ ಸ್ಪಷ್ಟ ಬಹುಮತ ಸಿಕ್ಕಿದೆ. ಇದರಲ್ಲಿ ಉತ್ತರ ಕರ್ನಾಟಕದ ಕೊಡುಗೆಯೂ ಇದೆ. ಹಾಗಾಗಿ ಅಧಿಕಾರ ಹಂಚಿಕೆಯಲ್ಲಿ ಪ್ರಾದೇಶಿಕ, ಸಾಮಾಜಿಕ ನ್ಯಾಯ ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.
ಯಮಕನಮರಡಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಿರುವ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಜೊತೆಗೆ ಮಹತ್ವದ ಖಾತೆ ನೀಡಬೇಕು. ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಳಗಾವಿ, ಹುಬ್ಬಳ್ಳಿ ರಾಜ್ಯ ಇನ್ನೂ ಹಲವು ಕಡೆಗಳಲ್ಲಿ ತಮ್ಮದೇ ಛಾಪು ಮೂಡಿಸಿ ಕಾಂಗ್ರೆಸ್ ಪಕ್ಷ ಕಟ್ಟಿ, ಅಧಿಕಾರ ಚುಕ್ಕಾಣಿ ಹಿಡಿಯಲು ಪ್ರಮುಖ ಪಾತ್ರ ವಹಿಸಿದ್ದನ್ನು ಪರಿಗಣಿಸಿ ಜಾರಕಿಹೊಳಿಗೆ ಉನ್ನತ ಸ್ಥಾನ ನೀಡಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.
ಧಾರವಾಡ ದಕ್ಷಿಣ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ ಪ್ರಸಾದ ಅಬ್ಬಯ್ಯ ಅವರಿಗೆ ಉತ್ತರ ಕರ್ನಾಟಕ ಹಾಗೂ ದಲಿತ ಕೋಟಾದಲ್ಲಿ ಸಚಿವ ಸ್ಥಾನ ನೀಡಬೇಕು. ಈ ಮೂಲಕ ಪರಿಶಿಷ್ಟ ಸಮುದಾಯದ ಆಶಾಕಿರಣವಾಗಿ ಹೊರಹೊಮ್ಮಿರುವ ಪ್ರಸಾದಗೆ ಸಚಿವ ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯ ಪಾಲಿಸಬೇಕು ಎಂದು ದಲಿತರು ಆಗ್ರಹಿಸಿದರು.
ಪಂಚಮಸಾಲಿ ಲಿಂಗಾಯತ ಕೋಟಾ ಮತ್ತು ಹಿರಿತನ ಆಧಾರದ ಮೇಲೆ ಬೆಳಗಾವಿ ಜಿಲ್ಲೆಯ ಪಕ್ಷದ ಹಿರಿಯ ಮುಖಂಡ, ಮಾಜಿ ಸಚಿವ ಎ.ಬಿ.ಪಾಟೀಲ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಬೇಕು. ಇದರಿಂದ ಹುಕ್ಕೇರಿ ಸೇರಿದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಅನುಕೂಲವಾಗಲಿದೆ. ಜತೆಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ನಿಗಮ ಮಂಡಳಿಗಳಿಗೆ ನೇಮಕ ಮಾಡಬೇಕು. ಈ ಎಲ್ಲ ವಿಚಾರಗಳನ್ನು ಪಕ್ಷದ ಹೈಕಮಾಂಡ್ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ದಲಿತ ಮುಖಂಡರು ಮನವಿ ಮಾಡಿದರು.
ಮುಖಂಡರಾದ ಕೆಂಪಣ್ಣಾ ಶಿರಹಟ್ಟಿ, ಲಕ್ಷö್ಮಣ ಹೂಲಿ, ಕೆ.ವೆಂಕಟೇಶ, ರಾಜು ಮೂಥಾ, ಶಿವು ಮಾಳಗೆ, ಅರುಣ ಬೆಳವಿ, ವಿಶ್ವಜೀತ ದೇವರುಷಿ, ಮಹೇಶ ಮಾಳಗೆ, ಶಿವಶಾಂತ ತೇರದಾಳ, ಸತೀಶ ಮಾಡಲಗಿ, ಮಂಜು ಪಡದಾರ, ಆನಂದ ಖಾತೇದಾರ, ಬಸವರಾಜ ದೇವುಗೋಳ ಮತ್ತಿತರರು ಉಪಸ್ಥಿತರಿದ್ದರು.


Leave a Reply