This is the title of the web page
This is the title of the web page

Please assign a menu to the primary menu location under menu

State

ಕೆರೆಗಳ ಅಭಿವೃದ್ಧಿ ಜಲಮೂಲಗಳ ಸಂರಕ್ಷಣೆ, ಪುನಃಶ್ಚೇತನ : ಕಾನೂನು ಅರಿವು-ನೆರೆವು ಜಲಮೂಲಗಳ ಮತ್ತು ಪರಿಸರ ಸಂರಕ್ಷಣೆ ನಮೆಲ್ಲರ ಕರ್ತವ್ಯ : ನ್ಯಾ. ಬಿ.ಎಸ್ ರೇಖಾ


ಕೊಪ್ಪಳ, ಸೆ. ೨೭ : ಜಲಮೂಲಗಳ ಹಾಗೂ ಪರಿಸರ ಸಂರಕ್ಷಣೆ ನಮೆಲ್ಲರ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್ ರೇಖಾ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಪ್ರಾದೇಶಿಕ ಅರಣ್ಯ ವಿಭಾಗ, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ, ಬೆಂಗಳೂರು ಎನ್ವಿರಾನಮೆಂಟಲ್ ಸಪೋರ್ಟ್ ಗ್ರೂಪ್ (ಇಎಸ್‌ಜಿ) ಇವರುಗಳ ಸಂಯುಕ್ತಾಶ್ರಯದಲ್ಲಿ ಕೆರೆಗಳ ಅಭಿವೃದ್ಧಿ ಜಲಮೂಲಗಳ ಸಂರಕ್ಷಣೆ ಮತ್ತು ಪುನಃಶ್ಚೇತನ ಗೊಳಿಸುವ ಕುರಿತು ನಗರದ ಸಾಹಿತ್ಯ ಭವನದಲ್ಲಿ ಮಂಗಳವಾರದಂದು (ಸೆ.೨೭) ಆಯೋಜಿಸಲಾಗಿದ್ದ ಒಂದು ದಿನದ ಕಾನೂನು ಅರಿವು-ನೆರೆವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬ ಮನುಷ್ಯ ಬದುಕಲು ಹಣ, ಆಸ್ತಿ, ಅಂತಸ್ತು, ಅಧಿಕಾರ ಹಾಗೂ ಸಂಬಂಧಗಳಿಗಿಂತ ನೀರೆ ಮುಖ್ಯ. ಏಕೆಂದರೆ ನೀರು ಇಲ್ಲದೇ ಯಾವುದೇ ಮನುಷ್ಯ ಈ ಭೂಮಿ ಮೇಲೆ ಬದುಕಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಾವು ನೀರನ್ನು ಯಾವ ರೀತಿ ಸಂರಕ್ಷಣೆ ಮಾಡುತ್ತೇವೆ ಎಂಬುವುದು ಮುಖ್ಯ. ಸಮುದ್ರದಲ್ಲಿ ಸಾಕಷ್ಟು ನೀರು ಇರುತ್ತದೆ. ಆದರೆ, ಆ ನೀರನ್ನು ಬಳಸಲಿಕ್ಕೆ ನಮಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ನಾವುಗಳು ಸಿಹಿನೀರಿನ ಮೂಲಗಳಾದ ಕರೆ, ಬಾವಿ ಹಾಗೂ ಇತರೆ ಜಲಮೂಲಗಳ ಸಂರಕ್ಷಣೆಯನ್ನು ನಮ್ಮ ಕರ್ತವ್ಯವೆಂಬಂತೆ ಮಾಡಬೇಕು. ಹಿಂದಿನ ಕಾಲದಲ್ಲಿ ಒಂದು ಊರಿಗೆ ಅವಶ್ಯಕವಿರುವ ನೀರಿನ ಪ್ರಮಾಣವನ್ನು ಮನಕಂಡು ಹಿರಿಯರು ಕೆರೆಗಳ ನಿರ್ಮಾಣ ಹಾಗೂ ಸಂರಕ್ಷಣೆ ಮಾಡಿದ್ದಾರೆ. ಹಿಂದಿನ ಕಾಲದ ಹಿರಿಯರು ನಮಗೆ ನೀಡಿದ ಬೆಲೆಬಾಳುವ ಆಸ್ತಿ ಎಂದರೆ ಕೆರೆ ಹಾಗೂ ಇತರೆ ಜಲ ಮೂಲಗಳು ಆಗಿವೆ. ನಮ್ಮ-ನಮ್ಮ ಊರಿನ ಕೆರೆಗಳ ಮತ್ತು ಗ್ರಾಮದ ಸ್ವಚ್ಛತೆ ಹಾಗೂ ಸಂರಕ್ಷಣೆ ನಾವೇ ಮಾಡಿಕೊಳ್ಳಬೇಕು. ಅದಕ್ಕೆ ನಮಗಿರುವ ಸದೃಢ ಶಕ್ತಿ ಎಂದರೆ ಅದು ನಮ್ಮ ಯುವಜನತೆಯಾಗಿದೆ. ಈ ನಿಟ್ಟಿನಲ್ಲಿ ಯುವಜನತೆಯನ್ನು ಒಗ್ಗೂಡಿಸಿ ಕೆರೆಗಳ ಹೂಳು ಎತ್ತುವುದು ಮತ್ತು ಗ್ರಾಮಗಳ ಸ್ವಚ್ಛತೆ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ಇದರಿಂದ ನಮಗಷ್ಟೆ ಅಲ್ಲದೇ ಎಲ್ಲಾ ಪ್ರಾಣಿ ಹಾಗೂ ಪಕ್ಷಿಗಳಿಗೂ ನೀರು ಸಿಗುವುದರ ಜೊತೆಗೆ ಮುಂದಿನ ಪೀಳಿಗೆಗೂ ತುಂಬಾ ಅನುಕೂಲವಾಗುತ್ತದೆ ಎಂದರು.
ಅಲ್ಲದೇ ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಮನೆಗಳ ಸುತ್ತಮುತ್ತ ಗಿಡ-ಮರಗಳನ್ನು ಬೆಳೆಸುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ಇದ್ದರಿಂದ ಪರಿಸರ ಸಂರಕ್ಷಣೆಯಾಗುತ್ತದೆ. ಇಂದಿನ ಮಕ್ಕಳಿಗೆ ಪರಿಸರ ಮತ್ತು ನೀರಿನ ಜಲಮೂಲಗಳ ಬಗ್ಗೆ ತಿಳುವಳಿಕೆವಿರುವುದಿಲ್ಲ. ಆದ್ದರಿಂದ ಶಾಲಾ ಮಕ್ಕಳಿಗೆ ತಿಂಗಳಲ್ಲಿ ಒಂದು ದಿನ ಹಳ್ಳಿ ಪ್ರವಾಸ ಮಾಡಿಸಿ, ರೈತರು ಅನುಭವಿಸುವ ಕಷ್ಟಗಳ ಬಗ್ಗೆ, ಹಳ್ಳಿ ಜೀವನ ಬಗ್ಗೆ, ನೀರು ಹಾಗೂ ಆಹಾರದ ಪ್ರಾಮುಖ್ಯತೆಯ ಬಗ್ಗೆ ಸಂಪೂರ್ಣವಾಗಿ ಅರ್ಥ ಮಾಡಿಸಬೇಕು. ಇದರಿಂದ ಮಕ್ಕಳು ಪರಿಸರ, ನೀರು, ಮತ್ತು ಆಹಾರ ಮಹತ್ವವನ್ನು ತಿಳಿಯುತ್ತಾರೆ. ಎಲ್ಲಾ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಗೆ ಒಳಪಡುವ ಕ್ಷೇತ್ರಗಳಲ್ಲಿ ಪರಿಸರ ಮತ್ತು ಜಲಮೂಲಗಳ ಸಂರಕ್ಷಣೆಯನ್ನು ಮಾಡಬೇಕು ಮತ್ತು ಸಾರ್ವಜನಿಕರಿಗೆ ಅದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಅವರು ಮಾತನಾಡಿ, ಪರಿಸರ ಹಾಗೂ ಕೆರೆಗಳ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ನಾವು ಪರಿಸರ ರಕ್ಷಣೆ ಮಾಡಿದರೇ ಪರಿಸರ ನಮ್ಮ ರಕ್ಷಣೆ ಮಾಡುತ್ತದೆ. ಜಲಮೂಲಗಳ ಸಂರಕ್ಷಣೆ ಮಾಡದಿದ್ದರೆ, ಮುಂದಿನ ಪೀಳಿಗೆಯವರು ನೀರನ್ನು ಚಿನ್ನದ ಬೆಲೆಗೆ ಕೊಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ನಾವುಗಳು ಕೆರೆಗಳ ಸಂರಕ್ಷಣೆಗೆ ಬಹಳಷ್ಟು ಒತ್ತನ್ನು ನೀಡಬೇಕು. ನಮ್ಮ ಪರಂಪರೆಯನ್ನು ಬೆಳೆದುಬಂದಂತಹ ನೀರಿನ ಸಂಗ್ರಹಣೆಗಳನ್ನು ಕಾಪಾಡಿಕೊಳ್ಳಬೇಕು. ಮಳೆ ಬರುತ್ತದೆ, ಹೋಗುತ್ತದೆ ಮತ್ತು ಆ ನೀರು ಸಮುದ್ರ ಸೇರುತ್ತದೆ. ಮಳೆ ನೀರನ್ನು ಸಂಗ್ರಹಿಸಿಡಲು ನಮ್ಮ ಹಿರಿಯರು ಜನಪದರು ಕೆರೆಗಳ ನಿರ್ಮಾಣಕ್ಕೆ ಬಹಳಷ್ಟು ಆಸಕ್ತಿಯನ್ನು ನೀಡಿ, ವಿಜ್ಞಾನ ಅಭಿವೃದ್ಧಿ ಇಲ್ಲದಿದ್ದರೂ ಸಹ ನಮಗೆ ಮಾದರಿಯಾಗುವ ರೀತಿಯಲ್ಲಿ ಕೆರೆಗಳ ನಿರ್ಮಾಣ ಮಾಡಿದ್ದಾರೆ. ಅವರೆಲ್ಲರ ಸಾಮಾಜಿಕ ಕಳಕಳಿಗೆ ಉದಾಹರಣೆಯೇ ಪ್ರಸ್ತುತ ಕೆರೆಗಳು. ಆದ್ದರಿಂದ ನಾವೂ ಸಹ ಇಂತಹ ಕಾರ್ಯವನ್ನು ವೈಜ್ಞಾನಿಕವಾಗಿ ವಿಚಾರ ಮಾಡಿ, ಕೆರೆಗಳ ಹೂಳು ಎತ್ತುವುದು ಹಾಗೂ ಸಂರಕ್ಷಣೆ ಮಾಡಬೇಕು. ಇದರಿಂದ ನಮಗೆ, ಪ್ರಾಣಿ, ಪಕ್ಷಿಗಳಿಗೆ ಸಹಾಯವಾಗುತ್ತದೆ. ನಮ್ಮ ಜಿಲ್ಲೆಯಲ್ಲಿ ಒತ್ತುವರಿಯಾದ ಕೆರೆಗಳ ರಕ್ಷಣೆ, ಹೂಳು ಎತ್ತುವ ಕಾರ್ಯ, ಸೌಂಧರ್ಯಿಕರಣ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.
ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಅವರು ಮಾತನಾಡಿ, ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರು ಕೆರೆಗಳ ನಿರ್ಮಾಣ ಮಾಡಿದ್ದಾರೆ. ಪ್ರಸ್ತತ ಅನೇಕ ಕೆರೆಗಳ ಒತ್ತುವರಿಯಾಗಿವೆ. ಕೆರೆಗಳು ದೇಶದ ಜಲಮೂಲಗಳಾಗಿವೆ. ಪ್ರತಿ ಭೂಮಿಯನ್ನು ಎನ್‌ಎ ಮಾಡುವುದರಿಂದ ಮುಂದಿನ ದಿನಗಳಲ್ಲಿ ನೀರಿಗಾಗಿ ೩ನೇ ಪ್ರಪಂಚ ಯುದ್ಧ ಮಾಡಬೇಕಾಗುವ ಅವಶ್ಯಕತೆ ಬಂದರೂ ಬರಬಹುದು. ಸಂವಿಧಾನದಲ್ಲಿ ನಮಗೆ ಇರುವ ಹಕ್ಕುಗಳಂತೆ ನದಿಗಳ, ಸರೋವರಗಳ ಮತ್ತು ಸ್ಮಾರಕಗಳ ಸಂರಕ್ಷಣೆ ದೇಶದ ಎಲ್ಲಾ ನಾಗರಿಕರ ಕರ್ತವ್ಯವೆಂದು ಹೇಳುತ್ತದೆ. ಸುಪ್ರೀಂ ಕೋರ್ಟ್ ಪರಿಸರ ಸಂರಕ್ಷಣೆ ಬಗ್ಗೆ ಅನೇಕ ಕಾಯ್ದೆಗಳನ್ನು ಜಾರಿಗೆ ತಂದಿದೆ. ನರೇಗಾ ಅಡಿಯಲ್ಲಿ ಯಾವುದೇ ಮಿಷನ್‌ಗಳನ್ನು ಬಳಸದೇ ಮಾನವ ಸಂಪನ್ಮೂಲದಿಂದ ಕೆರೆಗಳ ಅಭಿವೃದ್ಧಿ ಕಾರ್ಯಮಾಡಿದರೇ ದೇಶದ ಮತ್ತು ಜನರ ಪ್ರಗತಿಯಾಗುತ್ತದೆ. ಆದ್ದರಿಂದ ಮುಂದಿನ ಜನಾಂಗಕ್ಕೆ ನೀರು ಮತ್ತು ಪರಿಸರ ಒದಗಿಸುವ ಜವಾಬ್ದಾರಿ ನಮ್ಮದು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಕೊಪ್ಪಳ ಕೌಟುಂಬಿಕ ನ್ಯಾಯಾಲಯದ ಪ್ರಧಾನ ಕೌಟುಂಬಿಕ ನ್ಯಾಯಾಧೀಶರಾದ ಎಸ್.ಎಮ್. ಜಾಲವಾದಿ, ತ್ವರಿತಗತಿ ವಿಶೇಷ ನ್ಯಾಯಾಲಯ-೧ (ಪೋಕ್ಸೋ ನ್ಯಾಯಾಲಯ) ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಕುಮಾರ ಡಿ.ಕೆ., ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ್, ಸಿಜೆಎಮ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಲ್.ಜೆ. ಭವಾನಿ, ಜೆಎಮ್‌ಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಹರೀಶ ಕುಮಾರ ಎಮ್., ಜೆಎಮ್‌ಎಫ್‌ಸಿ ನ್ಯಾಯಾಲಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಆದಿತ್ಯಾ ಕುಮಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಮೀರ್ ಎಮ್.ಮುಲ್ಲಾ, ಬೆಂಗಳೂರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಧಿಕಾರೇತರ ಸದಸ್ಯ ಡಾ. ಬಸವರಾಜ ಪೂಜಾರ, ಬೆಂಗಳೂರು ಟ್ರಸ್ಟಿ ಎನ್ವಿರಾನಮೆಂಟಲ್ ಸಪೋರ್ಟ್ ಗ್ರೂಪ್ (ಇಎಸ್‌ಜಿ) ಅಧಿಕಾರಿ ಭಾರ್ಗವಿ ಎಸ್.ರಾವ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಪ್ಪಳ ಪ್ರಾದೇಶಿಕ ವಿಭಾಗದ ಪರಿಸರ ಅಧಿಕಾರಿ ಎಸ್.ಸಿ ಸುರೇಶ, ಭೂ ದಾಖಲೆ ವಿಭಾಗದ ಉಪನಿರ್ದೇಶಕ ದೇವರಾಜ, ಸಣ್ಣ ನೀರಾವರಿ ಮತ್ತು ಅಂತರ್ಜಲ ವಿಭಾಗದ ಕಾರ್ಯಪಾಲಕರ ಅಭಿಯಂತರರಾದ ನಾಗನಗೌಡ, ಯೂನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ಸಂಯೋಜಕ ಹರೀಶ ಜೋಗಿ, ಪ್ರಾದೇಶಿಕ ಅರಣ್ಯ ವಿಭಾಗದ ಸಿಬ್ಬಂದಿ ಚೈತ್ರ ಆರ್.ಎಫ್ ಸೇರಿದಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ಪಿಡಿಓಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಇತರೆ ಇಲಾಖೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಕಾರ್ಯಾಗಾರದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ವೋಟರ್ ಐಡಿಗೆ ಆಧಾರ್ ಜೋಡಣೆ ಅಭಿಯಾನದಲ್ಲಿ ಉತ್ತಮ ಪ್ರಗತಿ ಸಾಧಿಸಿದ ಕೆಲವು ಬಿಎಲ್‌ಓಗಳಿಗೆ ಸನ್ಮಾನ ಮಾಡಲಾಯಿತು. ನಂತರ ಕಾನೂನು ಅರಿವು-ನೆರವು ಕಾರ್ಯಾಗಾರದ ಬಗ್ಗೆ ಬೆಂಗಳೂರು ಟ್ರಸ್ಟಿ, ಎನ್ವಿರಾನಮೆಂಟಲ್ ಸಪೋರ್ಟ್ ಗ್ರೂಪ್ ಸಂಯೋಜಕರಾದ ಲಿಯೋ ಎಫ್. ಸಲ್ದಾನ ಅವರು ಸವಿವಿಸ್ತಾರವಾಗಿ ವಿವರಣೆಯನ್ನು ನೀಡಿದರು.


Gadi Kannadiga

Leave a Reply