This is the title of the web page
This is the title of the web page

Please assign a menu to the primary menu location under menu

Local News

ನುಡಿನಮನ ಕಾರ್ಯಕ್ರಮದಲ್ಲಿ ನಿರ್ದೇಶಕ ಝಕೀರ ನದಾಫ ಮಾತು ಮಲ್ಲಿಕಾರ್ಜುನ ಮಠದ ಅವರದ್ದು ಪರಿಶುದ್ಧ ರಂಗಪ್ರೇಮ


ಬೆಳಗಾವಿ ೧೧- ಕಲಾಗಂಗಾಧರ ಸಂಘಟನೆಯವರು ರಂಗಕರ್ಮಿ ದಿ. ಮಲ್ಲಿಕಾರ್ಜುನ ಮಠದ ಅವರ “ನುಡಿನಮನ” ಕಾರ್ಯಕ್ರಮವನ್ನು ನಿನ್ನೆ ದಿ. ೧೦ ರವಿವಾರದಂದು ಮುಂಜಾನೆ ೧೦-೩೦ ಕ್ಕೆ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಖ್ಯಾತ ನಿರ್ದೇಶಕ ಝಕೀರ ನದಾಫ ಅವರು ಮಾತನಾಡಿ ರಂಗಭೂಮಿಯ ನಾಲ್ವತ್ತು ವರ್ಷಗಳ ನನ್ನ ಅನುಭವದಲ್ಲಿ ನಟ, ನಿರ್ದೇಶಕ, ನಾಟಕ ರಚನಾಕಾರ, ಸಂಗೀತ ನಿರ್ದೇಶಕ, ನೆಳಲು ಬೆಳಕು ಹೀಗೆ ನಾಟಕದ ಬೇರೆ ಬೇರೆ ವಿಭಾಗದಲ್ಲಿ ಕೆಲಸ ಮಾಡುವವರ ಸಂಪರ್ಕದಲ್ಲಿ ಬಂದಿದ್ದೇನೆ ಆದರೆ ಸಂಪೂರ್ಣ ನಿರ್ಮಾಣದ ಹೊರೆಯನ್ನು ಹೊತ್ತವರನ್ನು ಕಂಡ ಏಕೈಕ ವ್ಯಕ್ತಿಯೆಂದರೆ ದಿ. ಮಲ್ಲಿಕಾರ್ಜುನ ಮಠದ ಮಾತ್ರ. ಮಠದ ಅವರದ್ದು ಪರಿಶುದ್ಧ ರಂಗಪ್ರೇಮ ಎಂದು ಹೇಳಿದರು.
ಜೈನ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ. ಕೆ. ಎನ್. ದೊಡಮನಿಯವರು ಮಾತನಾಡುತ್ತ ನಾನು ಮಠದ ಅವರ ಕುಟುಂಬದ ಸದಸ್ಯರಲ್ಲಿ ಒಬ್ಬನಾಗಿದ್ದೆ. ಅವರನ್ನು ನಾನು ಕರೆಯುತ್ತಿದ್ದುದು ಮಾಮಾ ಎಂದು. ಮಾಮಾ ಸಂಗೀತ, ಸಾಹಿತ್ಯ, ನಾಟಕ ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿ ಉತ್ಸಾಹ ಹೊಂದಿದ್ದರು. ಇನ್ನೊಂದು ರೀತಿಯಿಂದ ನೋಡಿದಾಗ ಈ ಸಾಂಸ್ಕೃತಿಕ ಕಾರ್ಯಗಳೇ ಅವರಿಗೆ ಜೀವನೋತ್ಸಾಹವನ್ನು ತುಂಬಿದ್ದವು ಎಂದು ಹೇಳಿದರು.
ಗಂಗಾಧರ ಬೆನ್ನೂರ ಮಾತನಾಡಿ ಮಠದ ಅವರು ಕಷ್ಟ ಸುಖ ಎಲ್ಲ ವಿಷಯಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಸಾಹಿತ್ಯ, ಸಂಗೀತ, ನಾಟಕ ಎಲ್ಲ ಕ್ಷೇತ್ರಗಳಲ್ಲಿ ಅವರು ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದರೂ ಸಹ ಎಲೆ ಮರೆಯ ಕಾಯಿಯಂತಿದ್ದರು. ಎಂದೂ ಅವರು ಪ್ರಚಾರದ ಬೆನ್ನು ಹತ್ತಿದವರಲ್ಲ. ಅಪರೂಪ ವ್ಯಕ್ತಿತ್ವದ ಅಂತಃಕರಣ ಸ್ನೇಹಿತನನ್ನು ನಾನಿಂದು ಕಳೆದುಕೊಂಡು ಏಕಾಂಗಿಯಾಗಿದ್ದೇನೆ ಎಂದು ತುಂಬ ಭಾವುಕರಾಗಿ ಹೇಳಿ ಅವರ ಕುರಿತಾಗಿ ಬರೆದ ಕವನವನ್ನು ವಾಚಿಸಿದರು.
ಗುಂಡೇನಟ್ಟಿ ಮಧುಕರ ಮಾತನಾಡಿ, ಮಲ್ಲಿಕಾರ್ಜುನ ಮಠದ ಅವರ ಪರಿಚಯ ತುಂಬ ಆಕಸ್ಮಿಕ ಅದರಂತೆ ಅವರು ಅಗಲಿದ್ದೂ ಕೂಡ. ನನ್ನ ಜೀವನದಲ್ಲಿ ಅವರು ಮಿಂಚಿನಂತೆ ಬಂದು ಮಾಯವಾದರು. ನನ್ನ ಜೀವನದುದ್ದಕ್ಕೂ ಇರುವುದು ಅವರ ನೆನಪೊಂದೇ ಎಂದು ಹೇಳಿದರು.
ಡಾ. ರಾಜಶೇಖರ ಮಠಪತಿ(ರಾಗಂ), ಶರಣಗೌಡ ಪಾಟೀಲ, ನಾಗರಾಜ ಮಾಯಪ್ಪನವರ, ಡಾ. ಬಸವರಾಜ ಡೋಣೂರ, ಬಾಬಾಸಾಹೇಬ ಕಾಂಬಳೆ, ಮಲ್ಲಿಕಾರ್ಜುನ ಮಠಪತಿ, ಶಿವಮೊಗ್ಗದ ಮಧು ಹಾಗೂ ಅನಂತ ಮುಂತಾದವರು ಮಾತನಾಡಿ, ಮಠದ ಅವರು ಅನಾರೋಗ್ಯದಿಂದ ಅವರು ತುಂಬ ಬಳಲಿದರೂ ಕೊನೆಯುಸಿರಿರೊವರೆಗೂ ಆತ್ಮಧೈರ್ಯವನ್ನು ಕಳೆದುಕೊಳ್ಳಲಿಲ್ಲ. ಸಾಂಸ್ಕೃತಿಕ ಲೋಕಕ್ಕೆ ಅವರು ಕೊಟ್ಟ ಕೊಡುಗೆ ಅಪಾರ. ಅವರು ಇನ್ನೂ ಕೆಲಕಾಲ ನಮ್ಮೊಂದಿಗೆ ಇರಬೇಕಾಗಿತ್ತು. ಅವರನ್ನು ಕಳೆದುಕೊಂಡ ಸಾಂಸ್ಕೃತಿಕ ಲೋಕ ಬಡವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದಿ. ಮಲ್ಲಿಕಾರ್ಜುನ ಮಠದ ಅವರ ಮಠದಿ ವಿಜಯಲಕ್ಷ್ಮೀ ಮಕ್ಕಳಾದ ನಿವೇದಿತಾ, ನಂದಿತಾ, ಅಪಾರ ಬಂಧು ಬಳಗ ಅಲ್ಲದೇ ಲಕ್ಷ್ಮೀ ದೇವಸ್ಥಾನದ ಸದಸ್ಯರು, ಲಿಂಗೊಳ್ಳಿಮಠ, ಅಭಿಮಾನಿಗಳು ಉಪಸ್ಥಿತರಿದ್ದರು.


Leave a Reply