ಕೊಪ್ಪಳ ಮೇ,6:- ಮತದಾನ ಜಾಗೃತಿಗಾಗಿ ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಗಂಗಾವತಿ ತಾಲೂಕು ಸ್ವೀಪ್ ಸಮಿತಿಯ ಸಹಯೋಗದಲ್ಲಿ ಮೇ 05ರಂದು ವಾಕಥಾನ್ ಕಾರ್ಯಕ್ರಮ ನಡೆಯಿತು.
ಗಂಗಾವತಿ ನಗರದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೃಹತ್ ಕಾಲ್ನಡಿಗೆ ಜಾಥಾಕ್ಕೆ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿ, ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಪ್ರತಿಯೊಬ್ಬರು ವಿವೇಚನೆಯಿಂದ ಮತಚಲಾಯಿಸಬೇಕು. ಮತದಾನ ಪ್ರಕ್ರಿಯೆಯಿಂದ ಯಾರು ಸಹ ದೂರ ಉಳಿಯಬಾರದು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆಗಿರುವ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಯಾರೇ ಇರಲಿ ಎಲ್ಲರ ಮತಕ್ಕೂ ಒಂದೇ ಮೌಲ್ಯ ಇರುತ್ತದೆ. ಮತದಾನ ಮಾಡಲು ಯಾರು ಕೂಡ ಅಸಡ್ಡೆತನ ತೋರಬಾರದು ಎಂದರು.
*ಅಕ್ಷರ ಮಾಲೆ, ಜಾಗೃತಿ ಜಾಥಾ:* ವಾಕಥಾನ್ ಕಾರ್ಯಕ್ರಮ ನಿಮಿತ್ತ ಕಾಲೇಜು ಮೈದಾನದಲ್ಲಿ ಬರೆದಿದ್ದ ʼಪ್ರಜಾಪ್ರಭುತ್ವ ಹಬ್ಬ 2023, ನನ್ನ ಮತ, ನನ್ನ ಹಕ್ಕು ಎಂಬ ಅಕ್ಷರ ಮಾಲೆ ಸುತ್ತ ಎಲ್ಲರೂ ನಿಂತು ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದರು. ವಿವಿಧ ಇಲಾಖೆ ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು ಸೇರಿ ಒಟ್ಟು1500 ಜನರು ವಾಕಥಾನ್ ದಲ್ಲಿ ಭಾಗವಹಿಸಿ ಮತದಾನ ಜಾಗೃತಿ ಮೂಡಿಸಿದರು. ನಗರದ ವಿವಿಧ ವೃತ್ತಗಳಲ್ಲಿ ನಡೆದ ಜಾಥಾದಲ್ಲಿ ಮತದಾನ ಜಾಗೃತಿ ಗೀತೆಗಳು, ಘೋಷಣೆಗಳ ಮೂಲಕ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಚುನಾವಣಾ ವೆಚ್ಚ ವೀಕ್ಷಕರಾದ ವೆಂಕಟೇಶ ಬಾಬು, ಗಂಗಾವತಿ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಗಳಾದ ಬಸವಣೆಪ್ಪ ಕಲಶಟ್ಟಿ, ತಹಸೀಲ್ದಾರರಾದ ಮಂಜುನಾಥ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್, ಬಿಇಓ ಸೋಮಶೇಖರಗೌಡ ಸೇರಿದಂತೆ ತೋಟಗಾರಿಕೆ ಸಹಾಯಕ ನಿರ್ದೇಶಕರು, ನಗರಸಭೆ ಪೌರಾಯುಕ್ತರು, ಸಿಡಿಪಿಓ, ನಗರ ಪೊಲೀಸ್ ಠಾಣೆಯ ಪಿಐ, ಪಿಎಸ್ಐ, ತಾಪಂ ಸಹಾಯಕ ನಿರ್ದೇಶಕರು, ತಾಪಂ ಅಧಿಕಾರಿಗಳು, ನಗರಸಭೆ ಸಿಬ್ಬಂದಿಗಳು, ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ, ಕಂದಾಯ ಇಲಾಖೆ ಸಿಬ್ಬಂದಿ, ನರೇಗಾ ಸಿಬ್ಬಂದಿ, ಟಿಎಂಎಇ ಬಿಎಇಡಿ ಕಾಲೇಜು, ಸ್ಪೂರ್ತಿ ಕಾಲೇಜು ಆಫ್ ನರ್ಸಿಂಗ್ , ಗಂಗಾವತಿ ಇನ್ ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಅಂಗನವಾಡಿ, ಆಶಾ ಕಾರ್ಯಕರ್ತರು, ಎನ್.ಆರ್.ಎಲ್.ಎಂ ಯೋಜನೆ ಸಿಬ್ಬಂದಿ ಇದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ