ಕೊಪ್ಪಳ ಆಗಸ್ಟ್ ೨೫ : ಕೊಪ್ಪಳ ಜಿಲ್ಲೆಯಾದ್ಯಂತ ಅಂದಾಜು ಬೆಳೆನಷ್ಟ ಸಮೀಕ್ಷೆಯು ಕರಾರುವಕ್ಕಾಗಿ ನಡೆಯಬೇಕು. ಈ ಹಿನ್ನೆಲೆಯಲ್ಲಿ ಕ್ಷೇತ್ರ ಪರಿಶೀಲನೆ ಹಾಗೂ ದೃಢೀಕರಣ ಪ್ರಕ್ರಿಯೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.
೨೦೨೩-೨೪ನೇ ಸಾಲಿನಲ್ಲಿ ಬರ ನಿರ್ವಹಣೆ ಕುರಿತಂತೆ ನಿಗದಿತ ತಾಲೂಕುಗಳಲ್ಲಿ ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ (ಗ್ರೌಂಡ್ ಟ್ರೂಥಿಂಗ್) ಸಂಬಂಧ ಬೆಳೆ ಸಮೀಕ್ಷೆ ಕೈಗೊಳ್ಳುವ ಬಗ್ಗೆ ಹಾಗೂ ಈ ಆಡಳಿತ ಇಲಾಖೆಯಿಂದ ತಯಾರಿಸಲಾಗಿರುವ ಮೊಬೈಲ್ ಆ್ಯಪ್ ಮತ್ತು ವೆಬ್ ಅಪ್ಲಿಕೇಶನ್ ನಿರ್ವಹಣೆ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು ಆಗಸ್ಟ್ ೨೫ರಂದು ನಡೆಸಿದ ವಿಡಿಯೋ ಸಂವಾದ ಸಭೆಯ ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ನೀಡಿದ ಸೂಚನೆಯಂತೆ ಜಿಲ್ಲೆಯಾದ್ಯಂತ ಎಲ್ಲಾ ಕಡೆಗಳಲ್ಲಿ ಅಂದಾಜು ಬೆಳೆಹಾನಿ ಸಮೀಕ್ಷೆಯನ್ನು ನಿಖರವಾಗಿ ನಡೆಸಲು ಮುತುವರ್ಜಿ ವಹಿಸಬೇಕು ಎಂದು ಅವರು ಕಂದಾಯ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಿದರು.
ಕಂದಾಯ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿ ತಿಳಿಸಿದ ಹಾಗೆ ಬರ ಪರಿಸ್ಥಿತಿ ಉದ್ಭವಿಸುವ ತಾಲೂಕುಗಳಲ್ಲಿ ಶೇ.೧೦ರಷ್ಟು ಗ್ರಾಮಗಳನ್ನು ನಿಯಮಾನುಸಾರ ಗುರುತಿಸಬೇಕು. ಈ ಗ್ರಾಮಗಳಲ್ಲಿ ಬೆಳೆಯುವ ಪ್ರಮುಖ ಬೆಳೆಗಳನ್ನು ಹಾಗೂ ಪ್ರತಿ ಬೆಳೆಯ ೫ ಸೈಟ್ಸನ್ನು ಗುರುತಿಸಬೇಕು. ಈ ಕ್ಷೇತ್ರ ಪರಿಶೀಲನೆ ºಗೂ ದೃಢೀಕರಣ (ಗ್ರೌಂಡ್ ಟ್ರೂಥಿಂಗ್)ವನ್ನು ಸ್ಮಾರ್ಟ್ಪೋನ್ ಆಧಾರಿತ ಅಪ್ಲಿಕೇಶನ್ ಬಳಸಿ ನಡೆಸಬೇಕು ಎನ್ನುವ ನಿಯಮ ಪಾಲನೆ ಮಾಡಬೇಕು. ಕೊಪ್ಪಳ ಜಿಲ್ಲೆಯಾದ್ಯಂತ ಕ್ಷೇತ್ರ ಪರಿಶೀಲನೆ ಹಾಗೂ ದೃಢೀಕರಣ ಪ್ರಕ್ರಿಯೆಯು ಅಚ್ಚುಕಟ್ಟಾಗಿ ನಡೆಸಲು ಆಯಾ ಇಲಾಖೆಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಮೇಲ್ವಿಚಾರಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಈ ಆಡಳಿತ ಇಲಾಖೆಯಿಂದ ತರಬೇತಿ ಪಡೆದ ಮಾಸ್ಟರ್ ಟ್ರೇನರಗಳು ಈ ಪ್ರಕ್ರಿಯೆಯ ಬಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸರಿಯಾಗಿ ಮಾಹಿತಿ ನೀಡಬೇಕು. ಮಾಸ್ಟರ್ ಟ್ರೇನರಗಳಿಂದ ತರಬೇತಿ ಪಡೆದ ಸಮೀಕ್ಷಾ ತಂಡದವರು ಆಗಸ್ಟ್ ೨೮ರಿಂದ ಆಗಸ್ಟ್ ೩೧ರವರೆಗೆ ಕಾರ್ಯಕ್ಷೇತ್ರಕ್ಕೆ ತೆರಳಿ ಸಮೀಕ್ಷೆ ನಡೆಸಿದ ಬಗ್ಗೆ ವರದಿ ಮಾಡಬೇಕು. ಸಂಬಂಧಿಸಿದ ಇಲಾಖೆಗಳಿಂದ ದೃಢೀಕರಿಸಲ್ಪಟ್ಟ ಮಾಹಿತಿಯನ್ನು ಪಡೆದು ಕ್ರೋಡಿಕರಿಸಿ ದೃಢೀಕೃತ ದಾಖಲಾತಿಗಳನ್ನು ಕಂದಾಯ ಇಲಾಖೆಗೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ತಹಸೀಲ್ದಾರಗಳಿಗೆ ಸೂಚನೆ: ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ (ಗ್ರೌಂಡ್ ಟ್ರೂಥಿಂಗ್) ಪ್ರಕ್ರಿಯೆಯು ಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಅಚ್ಚುಕಟ್ಟಾಗಿ ನಡೆಯುವಂತಾಗಬೇಕು. ಈ ಹಿನ್ನೆಲೆಯಲ್ಲಿ ತಾಲೂಕುವಾರು ಸಮೀಕ್ಷಾ ತಂಡಗಳನ್ನು ರಚಿಸಿ ತಂಡದ ಕಾರ್ಯವೈಖರಿಯ ಅವರಿಗೆ ಮನವರಿಕೆ ಮಾಡಲು ತಹಸೀಲ್ದಾರಗಳ ಹಂತದಲ್ಲಿ ಸಭೆಗಳನ್ನು ನಡೆಸಬೇಕು. ಮೊಬೈಲ್ ಆ್ಯಪ್ ಮತ್ತು ವೆಬ್ ಅಪ್ಲಿಕೇಶನ್ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಜೂನ್ ೧ರಿಂದ ಆಗಸ್ಟ್ ೨೪ರವರೆಗೆ ಗಂಗಾವತಿ ತಾಲೂಕಿನಲ್ಲಿ ವಾಡಿಕೆ ಮಳೆಯು ೨೧೫ ಮಿಮಿ ಇದ್ದು ವಾಸ್ತವವಾಗಿ ೧೭೨ ಮಿಮಿ ಸುರಿದು ಶೇ.೨೦ರಷ್ಟು, ಕೊಪ್ಪಳ ತಾಲೂಕಿನಲ್ಲಿ ವಾಡಿಕೆ ಮಳೆ ೨೩೮ ಮಿಮಿ ಇದ್ದು ವಾಸ್ತವವಾಗಿ ೨೨೪ ಮಿಮಿ ಸುರಿದು ಶೇ.೬ರಷ್ಟು, ಕುಷ್ಟಗಿ ತಾಲೂಕಿನಲ್ಲಿ ವಾಡಿಕೆ ಮಳೆ ೧೯೫ ಮಿಮಿ ಇದ್ದು ವಾಸ್ತವವಾಗಿ ೧೦೬ ಮಿಮಿ ಸುರಿದು ಶೇ.೪೬ ರಷ್ಟು, ಯಲಬುರ್ಗಾ ತಾಲೂಕಿನಲ್ಲಿ ವಾಡಿಕೆ ಮಳೆ ೨೧೦ ಮಿಮಿ ಇದ್ದು ವಾಸ್ತವವಾಗಿ ೧೬೯ ಮಿಮಿ ಸುರಿದು ಶೇ.೨೦ರಷ್ಟು, ಕಾರಟಗಿ ತಾಲೂಕಿನಲ್ಲಿ ವಾಡಿಕೆ ಮಳೆ ೧೯೭ ಮಿಮಿ ಇದ್ದು ವಾಸ್ತವವಾಗಿ ೧೩೮ ಮಿಮಿ ಸುರಿದು ಶೇ.೩೦ರಷ್ಟು, ಕುಕನೂರ ತಾಲೂಕಿನಲ್ಲಿ ವಾಡಿಕೆ ಮಳೆ ೨೨೩ ಮಿಮಿ ಇದ್ದು ವಾಸ್ತವವಾಗಿ ೧೯೨ ಮಿಮಿ ಸುರಿದು ಶೇ.೧೪ರಷ್ಟು, ಕನಕಗಿರಿ ತಾಲೂಕಿನಲ್ಲಿ ವಾಡಿಕೆ ಮಳೆ ೧೭೮ ಮಿಮಿ ಇದ್ದು ವಾಸ್ತವವಾಗಿ ೧೩೬ ಮಿಮಿ ಸುರಿದು ಶೇ.೨೩ರಷ್ಟು ಅದೇ ರೀತಿ ಜಿಲ್ಲಾದ್ಯಂತ ವಾಡಿಕೆ ಮಳೆ ೨೧೨ ಮಿಮಿ ಇದ್ದು ವಾಸ್ತವವಾಗಿ ೧೬೫ ಮಿಮಿ ಸುರಿದು ಶೇ.೨೨ರಷ್ಟು ಮಳೆ ಕೊರತೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್.ಅವರು ಸಭೆಗೆ ತಿಳಿಸಿದರು.
೨೦೨೩-೨೪ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕುಕನೂರ, ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕುಗಳಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ೩,೦೮,೦೦೦ ಹೆಕ್ಟೇರ್ ಕ್ಷೇತ್ರದ ಪೈಕಿ ೨,೮೩,೨೮೭ ಹೆಕ್ಟೇರ್ ಕ್ಷೇತ್ರದ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆಗಸ್ಟ್ ೧೮ರವರೆಗೆ ೫೦,೩೬೪ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ೧,೧೫,೩೧೫ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, ೫೬,೧೪೮ ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ, ೧೯,೯೦೫ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ೮೬೩೫ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, ೧೩,೧೨೦ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಇದೆ ರೀತಿ ಇನ್ನೀತರ ಬೆಳೆಗಳನ್ನು ಸಹ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾಡಳಿತ ಭವನದ ಕೇಶ್ವಾನ್ ಹಾಲ್‌ನಲ್ಲಿ ನಡೆದ ಈ ಸಭೆಯಲ್ಲಿ ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ, ಕೊಪ್ಪಳ ತಹಸೀಲ್ದಾರ ವಿಠ್ಠಲ್ ಚೌಗಲಾ ಸೇರಿದಂತೆ ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.