This is the title of the web page
This is the title of the web page

Please assign a menu to the primary menu location under menu

Local News

ಎಲ್ಲ ಗ್ರಾಮಗಳಿಗೆ ಸ್ಮಶಾನಭೂಮಿ ಒದಗಿಸಲು ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ


ಬೆಳಗಾವಿ :, ಮುಂಬರುವ ಮೂರು ತಿಂಗಳಿನಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಒದಗಿಸಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಜೂ.29) ನಡೆದ ಅನುಸೂಚಿತ ಜಾತಿ/ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ಮಶಾನ ಭೂಮಿ ಇಲ್ಲದ ಕಡೆ ಖಾಸಗಿ ಜಮೀನು ಖರೀದಿಸಲು ಸರಕಾರ ಅನುಮತಿ ನೀಡಿದೆ. ಉಪ ನೋಂದಣಾಧಿಕಾರಿಗಳ ಕಚೇರಿ ವತಿಯಿಂದ ನಿಗದಿಪಡಿಸಿದ ದರಕ್ಕಿಂತ ಮೂರು ಪಟ್ಟು ಹೆಚ್ಚಿನ ದರ ನೀಡಿ ಖರೀದಿಸಲು ನಿರ್ಧರಿಸಲಾಗಿದೆ.

ಸರಕಾರಿ ಜಮೀನು ಇದ್ದ ಕಡೆಗಳಲ್ಲಿ ‌ಎರಡು‌ ದಿನಗಳಲ್ಲಿ ಆದೇಶ ಹೊರಡಿಸಲಾಗುವುದು. ಖಾಸಗಿ ಜಮೀನು ಖರೀದಿಸಬೇಕಾದ ಕಡೆಗಳಲ್ಲಿ ಆಯಾ ಗ್ರಾಮದ ಮುಖಂಡರು ಕೂಡ ಮಧ್ಯಸ್ಥಿಕೆ ವಹಿಸಿ ಜಮೀನು ಖರೀದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಸ್ಮಶಾನ ಭೂಮಿ ಇಲ್ಲದಿರುವ ಗ್ರಾಮಗಳನ್ನು ಗುರುತಿಸಿ ಮುಂದಿನ ಮೂರು ತಿಂಗಳಿನಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಸ್ಮಶಾನ ಭೂಮಿಯನ್ನು ಒದಗಿಸಲು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಇದಲ್ಲದೇ ಈಗಾಗಲೇ ಇರುವ ಸ್ಮಶಾನಭೂಮಿಗಳಿಗೆ ಕಂಪೌಂಡ್ ಗೋಡೆ, ಶೆಡ್ ಮತ್ತಿತರ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ಕೋರಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಸ್ಮಶಾನಭೂಮಿಗಳಿಗೆ ಕಂಪೌಂಡ್ ಗೋಡೆ ಇದ್ದಾಗ ಮಾತ್ರ ಉಳಿದ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಕಾಂಪೌಂಡ್ ಇರುವ ಕಡೆಗಳಲ್ಲಿ ಈಗಾಗಲೇ ಕೆಲವು ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ ಎಂದು ವಿವರಿಸಿದರು.

ಸಮಿತಿಯ ಸದಸ್ಯರಾದ ಸುರೇಶ್ ತಳವಾರ ಅವರು ಮಾತನಾಡಿ ಸ್ಮಶಾನ ಭೂಮಿ ಅತಿಕ್ರಮಣ ಕಂಡುಬರುತ್ತಿರುವುದರಿಂದ ತುರ್ತಾಗಿ ಕಂಪೌಂಡ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕೆರೆ ಹಾಗೂ ಸ್ಮಶಾನಭೂಮಿ ಅತಿಕ್ರಮಣ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.

ವೀರ ಮದಕರಿ ನಾಯಕ ವೃತ್ತ ನಾಮಕರಣ:

ನಗರದ ಆರ್.ಪಿ.ಡಿ. ವೃತ್ತಕ್ಕೆ ವೀರ ಮದಕರಿ ನಾಯಕ ವೃತ್ತ ಎಂದು ನಾಮಕರಣ ಮಾಡಲು ಮಹಾನಗರ ಪಾಲಿಕೆ ವತಿಯಿಂದ ಈಗಾಗಲೇ ಸಾರ್ವಜನಿಕ ಆಕ್ಷೇಪಣೆ ಆಹ್ವಾನಿಸಿರುವುದರಿಂದ ಹದಿನೈದು ದಿನಗಳಲ್ಲಿ ಬರುವ ಆಕ್ಷೇಪಣೆ ಪರಿಶೀಲಿಸಿ ಸರಕಾರಕ್ಕೆ ವರದಿ ಕಳಿಸಲಾಗುವುದು. ನಂತರ ಸರಕಾರದ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಲೋಕೋಪಯೋಗಿ ಇಲಾಖೆಯ ವತಿಯಿಂದ ಪರಿಶೀಲಿಸಬಹುದು. ಈಗಾಗಲೇ ಸಾರ್ವಜನಿಕ ಪ್ರಕಟಣೆ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತರಾದ ಡಾ.ರುದ್ರೇಶ್ ಘಾಳಿ ತಿಳಿಸಿದರು..

ಪ್ರತಿಷ್ಠಿತ ಶಾಲೆಗಳಲ್ಲಿ ಪರಿಶಿಷ್ಟ ಜಾತಿ/ವರ್ಗದ ಮಕ್ಕಳಿಗೆ ಪ್ರವೇಶ; ಪರಿಶೀಲನೆಗೆ ನಿರ್ದೇಶನ:

ಬೆಳಗಾವಿ ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಕ್ಕಳಿಗೆ ಆರ್.ಟಿ.ಇ. ಹಾಗೂ ಸರಕಾರದ ಇತರೆ ಮಾರ್ಗಸೂಚಿಗಳ ಪ್ರಕಾರ ಪ್ರವೇಶ ಕಲ್ಪಿಸುತ್ತಿರುವ ಬಗ್ಗೆ ನಿಗಾ ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಪ್ರವೇಶ ಒದಗಿಸುತ್ತಿರುವ ಬಗ್ಗೆ ಸೂಕ್ತ ಪರಿಶೀಲನೆ ನಡೆಸಲು ಸಮಿತಿಯ ವತಿಯಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸಮಿತಿ ಸದಸ್ಯರಾದ ವಿಜಯಕುಮಾರ್ ತಳವಾರ ಮಾತನಾಡಿ ಕೆಲ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ನೀಡುವಲ್ಲಿ ಸೂಕ್ತ ಅವಕಾಶಗಳನ್ನು ಕಲ್ಪಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ದೌರ್ಜನ್ಯ ಪ್ರಕರಣ;

ನಿಗದಿತ ಅವಧಿಯಲ್ಲಿ ಚಾರ್ಜ್ ಷೀಟ್ ಸಲ್ಲಿಸಬೇಕು:

ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾದ 60 ದಿನಗಳ ಒಳಗಾಗಿ ದೋಷಾರೋಪಣೆ(ಚಾರ್ಜ್ ಷೀಟ್) ಸಲ್ಲಿಸಬೇಕಾಗುತ್ತದೆ. ಆದ್ದರಿಂದ ನಿಗದಿತ ಅವಧಿಯಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಜಿಲ್ಲೆಯಲ್ಲಿ ದಾಖಲಾದ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ಮೂರು ತಿಂಗಳಲ್ಲಿ 46 ಲಕ್ಷ ರೂಪಾಯಿ ಪರಿಹಾರಧನವನ್ನು ನೀಡಲಾಗಿದೆ. ಯಾವುದೇ ಪ್ರಕರಣದ ಪರಿಹಾರಧನ ಬಾಕಿಯಿಲ್ಲ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ‌ ನಿರ್ದೇಶಕರಾದ ಡಾ.ಉಮಾ ಸಾಲಿಗೌಡರ ಸಭೆಯನ್ನು ನಿರ್ವಹಿಸಿದರು. ಬೆಳಗಾವಿ ನಗರದ ಉಪ ಪೊಲೀಸ್ ಆಯುಕ್ತರಾದ ರವೀಂದ್ರ ಗಡಾದಿ, ನಾಗರಿಕ‌ ಹಕ್ಕುಗಳ ಜಾರಿ‌ ನಿರ್ದೇಶನಾಲಯದ ಎಸ್.ಪಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಫ್.ಎಂ.ನಂದಗಾವಿ ಉಪಸ್ಥಿತರಿದ್ದರು.

ಕಂದಾಯ, ಪೊಲೀಸ್, ಪಾಲಿಕೆ, ನಗರ, ಜಿಲ್ಲಾ ನಗರಾಭಿವೃದ್ಧಿ ಕೋಶ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.


Gadi Kannadiga

Leave a Reply