ಗದಗ ಫೆಬ್ರುವರಿ ೨೦: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಹರ್ತಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಕಂದಾಯ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲು ಶ್ರಮಿಸಲಾಗುವುದು. ಈ ಕಾರ್ಯಕ್ರಮದ ಸದುಪಯೋಗವನ್ನು ಹರ್ತಿ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಕರೆ ನೀಡಿದರು. ಗದಗ ತಾಲೂಕಿನ ಹರ್ತಿ ಗ್ರಾಮದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮದ ಉದ್ದೇಶ ಸಾರ್ವಜನಿಕರು ವಿನಾಕಾರಣ ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದಾಡುವುದುನ್ನು ತಪ್ಪಿಸಿ ಗ್ರಾಮದಲ್ಲೇ ವಾಸ್ತವ್ಯ ಮಾಡುವ ಮೂಲಕ ಸ್ಥಳದಲ್ಲೇ ಪರಿಹಾರ ನೀಡುವ ಸರ್ಕಾರದ ವಿನೂತನ ಕಾರ್ಯಕ್ರಮವಾಗಿದೆ. ಇಲ್ಲಿ ಕಂದಾಯ ವಿಷಯದ ಹಾಗೂ ವಿವಿಧ ಇಲಾಖೆಗಳ ಯೋಜನೆಗಳ ಕುರಿತಂತೆ ಸಮಸ್ಯೆಗಳಿದ್ದಲ್ಲಿ ಪರಿಹಾರ ಕಂಡುಕೊಳ್ಳಬಹುದು.ಸಾರ್ವಜನಿಕರು ವೈಯಕ್ತಿಕವಾಗಿ ಹಾಗೂ ಸಮುದಾಯದ ಸಮಸ್ಯೆಗಳಿದ್ದಲ್ಲಿ ಉದಾಹರಣೆಗೆ ಕಂದಾಯ ವಿಷಯಗಳಾದ ಸಾಮಾಜಿಕ ಭದ್ರತೆ ಯೋಜನೆಗಳು, ಪಿಂಚಣಿ ಸವಲತ್ತು ಪಡೆಯುವುದು, ಸರ್ವೆ, ಪಹಣಿ ತಿದ್ದುಪಡಿ , ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೂ ಸಹ ಈ ವೇದಿಕೆ ಸೂಕ್ತವಾಗಿದೆ. ಊರಿನ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಒಮ್ಮತದ ನಿರ್ಣಯದೊಂದಿಗೆ ಕ್ರಮ ವಹಿಸಲು ಇದೊಂದು ಉತ್ತಮ ಕಾರ್ಯಕ್ರಮ. ಗ್ರಾಮಸ್ಥರೆಲ್ಲರೂ ಸಹಾನುಭೂತಿಯಿಂದ ವರ್ತಿಸುವ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕೆಂದರು.
ತಹಶೀಲ್ದಾರ ಮಲ್ಲಿಕಾರ್ಜುನ ಮಾತನಾಡಿ ಕಾರ್ಯಕ್ರಮದ ರೂಪುರೇಷೆಗಳ ಕುರಿತು ವಿವರಿಸಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಹಲವಾರು ವಿಶಿಷ್ಟತೆಗಳನ್ನು ಹೊಂದಿದೆ. ಗ್ರಾಮದ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡುವಂತೆ ಕೋರಿದರು.ವೇದಿಕೆಯ ಕಾರ್ಯಕ್ರಮದ ನಂತರ ಜಿಲ್ಲಾಧಿಕಾರಿಗಳು ಬಸವಣ್ಣ ಸಮುದಾಯ ಭವನದಲ್ಲಿ ಏರ್ಪಡಿಸಿದ ಸಾರ್ವಜನಿಕರ ಆರೋಗ್ಯ ತಪಾಸಣೆ , ಕಾರ್ಮಿಕ ಇಲಾಖೆಯ ಯೋಜನೆಗಳ ಪ್ರಚಾರ ಮಳಿಗೆ, ಎನ್.ಆರ್.ಇ.ಜಿ., ತೋಟಗಾರಿಕೆ, ಕೃಷಿ , ಮಳಿಗೆಗಳನ್ನು ವೀಕ್ಷಿಸುವ ಮೂಲಕ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಸೇರಿದಂತೆ ಹರ್ತಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು , ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಮುಖ್ಯಸ್ಥರು, ಗ್ರಾಮಸ್ಥರು ಹಾಜರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಉಪವಿಭಾಗಾಧಿಕಾರಿ ಅನ್ನಪೂರ್ಣ , ತಹಶೀಲ್ದಾರ ಮಲ್ಲಿಕಾರ್ಜುನ, ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರನ್ನು ಗ್ರಾಮಸ್ಥರು ಬರಮಾಡಿಕೊಂಡು ಅಲಂಕೃತ ಚಕ್ಕಡಿಯಲ್ಲಿ ವೇದಿಕೆಗೆ ಕರೆತಂದರು.
Gadi Kannadiga > State > ಹರ್ತಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಸದುಪಯೋಗಕ್ಕೆ ಜಿಲ್ಲಾಧಿಕಾರಿ ಕರೆ
ಹರ್ತಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಸದುಪಯೋಗಕ್ಕೆ ಜಿಲ್ಲಾಧಿಕಾರಿ ಕರೆ
Suresh20/02/2023
posted on
