ಕೊಪ್ಪಳ, ಅ.೧೪ : ಭಾರಿ ವಾಹನಗಳ ಸಂಚಾರದ ಮೇಲೆ ನಿಗಾವಹಿಸುವಂತೆ ಕೊಪ್ಪಳ ಸಂಸದರು ಹಾಗೂ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಕರಡಿ ಸಂಗಣ್ಣ ಅವರು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಶುಕ್ರವಾರದಂದು (ಅ.೧೪) ಆಯೋಜಿಸಲಾಗಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ (ದಿಶಾ) ೨೦೨೨-೨೩ನೇ ಸಾಲಿನ ೧ನೇ ಮತ್ತು ೨ನೇ ತ್ರೆöÊಮಾಸಿಕ ಕೇಂದ್ರ ಪುರಸ್ಕೃತ ಯೋಜನೆಗಳ ಸೆಪ್ಟೆಂಬರ್-೨೦೨೨ರ ಅಂತ್ಯದವರೆಗೆನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯ ರಸ್ತೆಗಳು ಹೆಚ್ಚಾಗಿ ಸಣ್ಣ ಗಾತ್ರದಲ್ಲಿದ್ದು, ಭಾರಿ ವಾಹನಗಳ ಹೆಚ್ಚಿನ ಓಡಾಟದಿಂದ ಈ ರಸ್ತೆಗಳು ಹಾಳಾಗಿ ಹೋಗುತ್ತವೆ. ನಿಗದಿತ ರಸ್ತೆಗಳಲ್ಲಿ ಮಾತ್ರ ಭಾರಿ ವಾಹನಗಳು ಸಂಚರಿಸುವ ವ್ಯವಸ್ಥೆಯಾಗಬೇಕು. ಈ ನಿಟ್ಟಿನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಈ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಗ್ರಾಮೀಣ ರಸ್ತೆಗಳ ಕಾಳಜಿ ವಹಿಸುವುದರ ಜೊತೆಗೆ ದುರಸ್ತಿ ಬಗ್ಗೆಯೂ ಸಹ ತ್ವರಿತವಾಗಿ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಇತ್ತಿಚೀಗೆ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಸರ್ಕಾರದಿಂದ ಪರಿಹಾರ ಕ್ರಮ ಒದಗಿಸುವ ಕುರಿತಂತೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಂಬಂಧಿಸಿದ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸೇರಿ ಬೆಳೆ ಹಾನಿ ಮಹಿತಿಯನ್ನು ತಂತ್ರಾಂಶದಲ್ಲಿ ನಮೂದಿಸಿ, ರೈತರಿಗೆ ತ್ವರಿತವಾಗಿ ಫರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಜಲ ಜೀವನ್ ಮಷಿನ್ (ಜೆಜೆಎಂ) ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಸಾರ್ವಜನಿಕರಿಂದ ಯಾವುದೇ ರೀತಿಯ ದೂರುಗಳು ಬರದಂತೆ ನೋಡಿಕೊಂಡು ಶೀಘ್ರ ಯೋಜನೆ ಲಾಭವನ್ನು ಸಾರ್ವಜನಿಕರಿಗೆ ತಲುಪಿಸಬೇಕು ಎಂದರು.
ಕುರಿ, ಮೇಕೆ ಹಾಗೂ ದನಕರುಗಳು ರೈತರ ಆಸ್ತಿಯಾಗಿದ್ದು, ಅವುಗಳನ್ನು ಸಂರಕ್ಷಿಸಬೇಕಿದೆ. ಪ್ರಸ್ತುತ ದನಕರುಗಳಲ್ಲಿ ಚರ್ಮಗಂಟು ರೋಗ ವ್ಯಾಪಕವಾಗಿ ಹರಡುತ್ತಿದ್ದು, ಈ ರೋಗದ ನಿಯಂತ್ರಣಕ್ಕಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ರೈತರಿಗೆ ಜಾಗೃತಿ ಮೂಡಿಸಬೇಕು. “ಜಿಲ್ಲೆಗೆ ಒಂದು ಸರ್ಕಾರಿ ಗೋಶಾಲೆ” ಯೋಜನೆಯಡಿ ರಾಜ್ಯ ಸರ್ಕಾರದಿಂದ ಕೊಪ್ಪಳ ಜಿಲ್ಲೆಗೂ ಒಂದು ಗೋಶಾಲೆ ಮಂಜೂರಾಗಿದ್ದು, ಗೋಶಾಲೆಯನ್ನು ತ್ವರಿತವಾಗಿ ಉದ್ಘಾಟಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಅಲ್ಲದೆ ಕೊಪ್ಪಳ ನಗರ ಸೇರಿದಂತೆ ವಿವಿಧ ನಗರ ಪ್ರದೇಶಗಳಲ್ಲಿ ಬಿಡಾಡಿ ದನಗಳ ಸಂಖ್ಯೆ ಹೆಚ್ಚಾಗಿ, ಜನರ ಓಡಾಟ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು, ಪಶು ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಯವರು ಸೇರಿ ಬಿಡಾಡಿ ದನಗಳನ್ನು ಗೋಶಾಲೆಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಅಧಿಕಾರಿಗಳಿಗೆ ಸೂಚಿಸಿದರು. ಇದೆ ವೆಳೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರಾದ ಡಾ. ಹೆಚ್.ನಾಗರಾಜ ಅವರು ಮಾತನಾಡಿ, ಚರ್ಮಗಂಟು ರೋಗವು ಸಾಂಕ್ರಾಮಿಕ ಖಾಯಿಲೆಯಾಗಿದ್ದು, “ಕ್ಯಾಪ್ರಿ ಫಾಕ್ಸ್” ಎಂಬ ವೈರಾಣುವಿನಿಂದ ದನ ಮತ್ತು ಎಮ್ಮೆಗಳಲ್ಲಿ ಕಂಡುಬರುತ್ತದೆ. ಈ ರೋಗವು ಕಚ್ಚುವ ಕೀಟಗಳಾದ ಸೊಳ್ಳೆ, ಉಣ್ಣೆ, ನೊಣ ಇತ್ಯಾದಿಗಳಿಂದ ತೀವ್ರತರವಾಗಿ ಹರಡುತ್ತದೆ. ರಾಜ್ಯಾದ್ಯಂತ ಹರಡಿದ ಚರ್ಮಗಂಟು ರೋಗಕ್ಕೆ ನಿರ್ದಿಷ್ಟವಾದ ಔಷಧ ಇಲ್ಲದಿದ್ದರೂ ಸಹ ಕುರಿ, ಮೇಕೆಗಳಿಗೆ ನೀಡಲಾಗುವ ಮೇಕೆ ಸಿಡುಬು ಲಸಿಕೆಯನ್ನೆ ಹಸು, ಎಮ್ಮೆ, ಕರು, ಕೊಣ, ಎತ್ತುಗಳಿಗೆ ನೀಡಲಾಗುತ್ತಿದೆ. ಜಿಲ್ಲೆಯ ಒಟ್ಟು ೨೯೭೬ ಜಾನುವಾರುಗಳಲ್ಲಿ ಈ ರೋಗ ಕಂಡುಬಂದಿದ್ದು, ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು ೫೫ ಜಾನುವಾರುಗಳು ಮೃತಪಟ್ಟಿವೆ. ರೋಗಗ್ರಸ್ಥ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆಗಳನ್ನು ನೀಡಲಾಗುತ್ತಿದ್ದು, ಚರ್ಮಗಂಟುರೋಗವು ಹತೋಟಿಗೆ ಬರುವ ಹಂತದಲ್ಲಿದೆ. ಸರ್ಕಾರಿ ಗೋಶಾಲೆಯ ಕಾಮಗಾರಿ ಪೂರ್ಣಗೊಂಡಿದ್ದು, ಸಂಪರ್ಕ ರಸ್ತೆ ಮಾತ್ರ ಅಭಿವೃದ್ಧಿಯಾಗಬೇಕಿದೆ. ಅತಿ ಶೀಘ್ರದಲ್ಲೇ ಗೋಶಾಲೆ ಉದ್ಘಾಟಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಫೌಜಿಯಾ ತರನ್ನುಮ್, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ, ಜಿ.ಪಂ ಉಪಕಾರ್ಯದರ್ಶಿಗಳಾದ ಸಮೀರ್ ಮುಲ್ಲಾ, ಯೋಜನಾ ನಿರ್ದೇಶಕರಾದ ಟಿ.ಕೃಷ್ಣಮೂರ್ತಿ ಹಾಗೂ ದಿಶಾ ಸಮಿತಿಯ ಸದಸ್ಯರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Gadi Kannadiga > State > ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ಭಾರಿ ವಾಹನಗಳ ಸಂಚಾರದ ಮೇಲೆ ನಿಗಾವಹಿಸಿ : ಕರಡಿ ಸಂಗಣ್ಣ
ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ಭಾರಿ ವಾಹನಗಳ ಸಂಚಾರದ ಮೇಲೆ ನಿಗಾವಹಿಸಿ : ಕರಡಿ ಸಂಗಣ್ಣ
Suresh14/10/2022
posted on
