ಬೆಳಗಾವಿ : 40 % ಕಮಿಷನ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಬೆಳಗಾವಿ ತಾಲೂಕಿನ ಬಡಸ್ ಗ್ರಾಮದ ನಿವಾಸಕ್ಕೆ ಮಂಗಳವಾರ ಭೇಟಿ ಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಸಂತೋಷ್ ಪಾಟೀಲ್ ಅವರ ಪತ್ನಿಗೆ ಕೆಪಿಸಿಸಿ ವತಿಯಿಂದ 11 ಲಕ್ಷ ರೂಪಾಯಿ ಪರಿಹಾರ ಚೆಕ್ ವಿತರಿಸಿದರು.
ಸಂತೋಷ್ ಪಾಟೀಲ್ ಅವರು ಸಾವನ್ನಪ್ಪಿದಾಗ ಅವರ ನಿವಾಸಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಿಯೋಗದಲ್ಲಿದ್ದ ಡಿ. ಕೆ. ಶಿವಕುಮಾರ್ ಅವರು 11 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಇಂದು ಬೆಳಗಾವಿಗೆ ಆಗಮಿಸಿ ಪರಿಹಾರ ನೀಡಿದ್ದಾರೆ.
ಇದಲ್ಲದೆ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಅವರ ಪರವಾಗಿ 5 ಲಕ್ಷ ರು. ಪರಿಹಾರ ಚೆಕ್ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ, ಸಂತೋಷ ಪಾಟೀಲ ಕೆಲಸ ಮಾಡಿರುವುದಕ್ಕೆ ಎಲ್ಲ ದಾಖಲೆ ಇದೆ. ರಮೇಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವದಿಯಲ್ಲೇ ಕೆಲಸ ಮಾಡಿದ್ದಾರೆ.
ಈ ಕುರಿತು ಕೇಂದ್ರ ಸಚಿವರಿಗೂ ಪತ್ರ ಬರೆದಿದ್ದರು. ಅದಕ್ಕೂ ಸ್ವೀಕೃತಿ ಪತ್ರ ಇದೆ. ಕುಟುಂಬಕ್ಕೆ ನ್ಯಾಯಾ ಸಿಗೋವರೆಗೂ ನಾವು ಸುಮ್ಮನಿರುವುದಿಲ್ಲ ಎಂದು ಹೇಳಿದರು.
ರಮೇಶ ಜಾರಕಿಹೊಳಿ ದಾಖಲೆಗಳನ್ನು ಬಿಚ್ಚಿಡುವುದಾಗಿ ಹೇಳಿದ್ದರ ಕುರಿತು ಪ್ರತಿಕ್ರಿಯಿಸಿ, ಅವರು ಬಿಚ್ಚಿಟ್ಟಿದ್ದನ್ನು ಇಡೀ ರಾಜ್ಯದ ಜನತೆ ನೋಡಿದ್ದಾರೆ. ಇದನ್ನೂ ಬಿಚ್ಚಿಡಲಿ. ಕೆಲವರಿಗೆ ನನ್ನ ಹೆಸರನ್ನು ಹೇಳಿದರೆ ಶಕ್ತಿ, ಉತ್ಸಾಹ ಬರುತ್ತದೆ. ಹಾಗಾಗಿ ಎಲ್ಲದರಲ್ಲೂ ನನ್ನ ಹೆಸರನ್ನು ತರುತ್ತಾರೆ. ತರಲಿ ಬಿಡಿ ಎಂದರು.
ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ, ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಫಿರೋಜ್ ಸೇಠ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ್ ನವಲಗಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.